ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಜಲಾಶಯವನ್ನು ನಿರ್ಮಿಸುವ ಉದ್ದೇಶವಿರುವ ಕರ್ನಾಟಕ ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ. ಅದಕ್ಕೆ ಯಾವುದೇ ಮಹತ್ವವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಮೇಕೆದಾಟು ಯೋಜನೆಯಲ್ಲಿ ಮುಂದುವರಿಯಲು ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವರು ತಮಿಳುನಾಡಿಗೆ ಭರವಸೆ ನೀಡಿದ್ದಾರೆ ಎಂದು ಸ್ಟಾಲಿನ್ ಮಾಹಿತಿ ನೀಡಿದ್ದಾರೆ.
“ಕರ್ನಾಟಕದೊಂದಿಗೆ ಯೋಜನೆ ಕುರಿತ ಮಾತುಕತೆಗೆ ಮಹತ್ವವಿಲ್ಲ. ನಮ್ಮ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ” ಎಂದು ಸ್ಟಾಲಿನ್ ದೆಹಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಡ್ಯಾಂ ಕಟ್ಟುವ ಹಕ್ಕು ಕರ್ನಾಟಕಕ್ಕಿದ್ದರೆ, ಅದನ್ನು ನಿಲ್ಲಿಸುವ ಹಕ್ಕು ನಮಗೂ ಇದೆ: ತಮಿಳುನಾಡು
ಕರ್ನಾಟಕ ಪ್ರಾರಂಭಿಸಿರುವ ಮೇಕೆದಾಟು ಯೋಜನೆ ಕುರಿತು ಯಾವುದೇ ಅನುಮಾನಗಳನ್ನು ನಿವಾರಿಸಲು ಸಭೆ ನಡೆಸುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮಿಳುನಾಡು ಮುಕ್ಯಮಂತ್ರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆ ಮಾತುಕತೆಯಲ್ಲಿ ತಮಿಳುನಾಡು ಭಾಗವಹಿಸುತ್ತದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ತಮಿಳುನಾಡು ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್, “ಕಾವೇರಿ ನ್ಯಾಯಮಂಡಳಿ ಮತ್ತು ಸುಪ್ರೀಂ ತೀರ್ಪಿನ ವಿರುದ್ಧ ಅಣೆಕಟ್ಟು ನಿರ್ಮಿಸುವುದಾಗಿ ಹೇಳುವ ಹಕ್ಕು ಕರ್ನಾಟಕಕ್ಕೆ ಇದ್ದರೆ, ಕಾನೂನು ಮಾರ್ಗದ ಮೂಲಕ ಯೋಜನೆಯನ್ನು ಸ್ಥಗಿತಗೊಳಿಸುವ ಹಕ್ಕು ನಮಗೂ ಇದೆ” ಎಂದು ಹೇಳಿದ್ದರು. ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ಸರ್ವಪಕ್ಷ ಸಭೆ ನಡೆಸಿ, ಯೋಜನೆ ವಿರೋಧಿಸುವ ನಿರ್ಣಯ ತೆಗೆದುಕೊಂಡಿತ್ತು.
ಇತ್ತ “ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಈಗಾಗಲೇ ಸಿದ್ದವಾಗಿರುವ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಇದು ಹೆಚ್ಚುವರಿ ಕಾವೇರಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡುವ ಯೋಜನೆ. ಈ ಯೋಜನೆಯನ್ನು ಜಾರಿಗೊಳಿಸುವ ಎಲ್ಲಾ ಹಕ್ಕುಗಳು ಕರ್ನಾಟಕಕ್ಕೆ ಇವೆ” ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಪಾಸಿದ್ದರು.
ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಕರ್ನಾಟಕ ಸರ್ಕಾರ ಆರಂಭಿಸಿರುವ ಮೇಕೆದಾಟು ಯೋಜನೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ‘ಮೇಕೆದಾಟು’ ಯೋಜನೆ ರಾಜ್ಯದ ಹಕ್ಕು, ಅದನ್ನು ನಿಲ್ಲಿಸುವುದಿಲ್ಲ: ಗೃಹ ಸಚಿವ


