ಕೊರೊನಾ ಸೋಂಕಿತ ರೋಗಿಗಳಿಗೆ ಆಮ್ಲಜನಕ ನೀಡಲು ಸಾಧ್ಯವಾಗದೆ ದೇಶದ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಆಕ್ಸಿಜನ್‌ಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತಿದ್ದಾರೆ. ಆದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನಮ್ಮಲ್ಲಿ ಯಾವುದೇ ಕೊರೊನಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಕೊರೊನಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಲ್ಲ. ರಾಜ್ಯ ಸರ್ಕಾರವು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಆಕ್ಸಿಜನ್ ಬಗ್ಗೆ ಚರ್ಚೆ ನಡೆಸಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕನ್ನು ಸಾಮಾನ್ಯ ವೈರಲ್ ಜ್ವರ ಎಂದು ತೆಗೆದುಕೊಳ್ಳುವುದು ದೊಡ್ಡ ತಪ್ಪು, ಕೊರೊನಾ ನಿಯಮಾವಳಿಗಳನ್ನು ನಿರ್ಲಕ್ಷಿಸಬೇಡಿ ಎಂದು ಜನರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ತಲ್ಲಣ: #ModiOxygenDo, भाषणबाज_मोदी, #oxygenbedslekkakodi ಟ್ವಿಟರ್ ಟ್ರೆಂಡ್
“ರಾಜ್ಯದಲ್ಲಿ ಯಾವುದೇ ಕೊರೊನಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಲ್ಲ, ಅದು ಖಾಸಗಿಯಾಗಿರಲಿ ಅಥವಾ ಸರ್ಕಾರವಾಗಿರಲಿ. ಸಮಸ್ಯೆ ಇರುವುದು ಬ್ಲ್ಯಾಕ್ ಮಾರ್ಕೆಟಿಂಗ್‌ನದ್ದು, ಇದನ್ನು ಸರ್ಕಾರ ಸರಿಯಾದ ಕ್ರಮದಲ್ಲಿ ನಿಭಾಯಿಸಲಿದೆ” ಎಂದಿದ್ದಾರೆ.
’ಐಐಟಿ ಕಾನ್ಪುರ್, ಐಐಎಂ ಲಕ್ನೋ ಮತ್ತು ಐಐಟಿ ಬಿಎಚ್‌ಯು ಸಹಯೋಗದೊಂದಿಗೆ ಆಮ್ಲಜನಕದ ಸರಿಯಾದ ಮೇಲ್ವಿಚಾರಣೆಗಾಗಿ ನಾವು ಆಮ್ಲಜನಕ ಲೆಕ್ಕಪರಿಶೋಧನೆಯನ್ನು ನಡೆಸಲಿದ್ದೇವೆ. ಆಮ್ಲಜನಕದ ಬೇಡಿಕೆ, ಪೂರೈಕೆ ಮತ್ತು ವಿತರಣೆಯ ನೇರ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ”ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
“ಪ್ರತಿ ಕೊರೊನಾ ಸೋಂಕಿತ ರೋಗಿಗೆ ಆಮ್ಲಜನಕದ ಅಗತ್ಯವಿಲ್ಲ, ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳಿಂದ ಸಹಕಾರವನ್ನು ನೀರಿಕ್ಷಿಸುತ್ತೇವೆ. ರಾಜ್ಯದಲ್ಲಿ ಆಸ್ಪತ್ರೆ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಕೆಲವು ಆರಂಭಿಕ ಸಮಸ್ಯೆಗಳಿವೆ. ಆದರೆ ಅವುಗಳನ್ನು ಶೀಘ್ರವಾಗಿ ನಿವಾರಿಸಲಾಗುವುದು” ಎಂದಿದ್ದಾರೆ.
ಇದನ್ನೂ ಓದಿ: ಗೌರವಯುತ ಅಂತ್ಯ ಸಂಸ್ಕಾರಕ್ಕಾದರೂ ಕನಿಷ್ಠ ವ್ಯವಸ್ಥೆ ಮಾಡಿ-ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ
“ಕೊರೊನಾವನ್ನು ಸಾಮಾನ್ಯ ವೈರಲ್ ಜ್ವರವಾಗಿ ತೆಗೆದುಕೊಳ್ಳುವುದು ದೊಡ್ಡ ತಪ್ಪು. ನಾನು ಕೂಡ ಅದರ ಸೋಂಕಿಗೆ ಒಳಗಾಗಿದ್ದೇನೆ. ಏಪ್ರಿಲ್ 13 ರಿಂದ ನಾನು ಕ್ವಾರಂಟೈನ್‌ನಲ್ಲಿದ್ದು ಎಲ್ಲಾ ಕೊರೊನಾ ನಿಯಮಗಳನ್ನು ಅನುಸರಿಸುತ್ತಿದ್ದೇನೆ. ಉತ್ತರ ಪ್ರದೇಶದ ಪರಿಸ್ಥಿತಿಯನ್ನು ಪರಿಶೀಲಿಸುವಾಗ, ಅದರ ಜನಸಂಖ್ಯೆ ಪ್ರಮಾಣ ಮತ್ತು ಜನಸಂಖ್ಯಾ ವೈವಿಧ್ಯತೆಯನ್ನು ಗಮನದಲ್ಲಿರಿಸಿಕೊಳ್ಳಬೇಕು” ಎಂದಿದ್ದಾರೆ.
ಕೊರೊನಾ ಎರಡನೇ ಅಲೆಯಲ್ಲಿ ಈ ಬಾರಿ ಸೋಂಕುಗಳ ಸಂಖ್ಯೆ ಕಳೆದ ಬಾರಿಗಿಂತ 30 ಪಟ್ಟು ಹೆಚ್ಚಾಗಿದೆ. ನಾವು ಸರ್ಕಾರಿ ಸಂಸ್ಥೆಗಳಲ್ಲಿ ಆಮ್ಲಜನಕ ಸ್ಥಾವರಗಳಿಗೆ ವ್ಯವಸ್ಥೆ ಮಾಡಿದ್ದೇವೆ. ಖಾಸಗಿ ಸಂಸ್ಥೆಗಳಲ್ಲಿ ಈ ವ್ಯವಸ್ಥೆಯ ಕೊರತೆ ಇತ್ತು. ಡಿಆರ್‌ಡಿಒನ ಇತ್ತೀಚಿನ ತಂತ್ರಜ್ಞಾನದ ಆಧಾರದ ಮೇಲೆ 18 ಸ್ಥಾವರಗಳು ಸೇರಿದಂತೆ 31 ಹೊಸ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು, ಉತ್ತರಪ್ರದೇಶದಲ್ಲಿ ರೆಮ್‌ಡೆಸಿವಿರ್ ನಂತಹ ಔಷಧಿಗಳ ಕೊರತೆಯಿಲ್ಲ. ಎಲ್ಲರಿಗೂ ಉಚಿತ ವ್ಯಾಕ್ಸಿನೇಷನ್ ನೀಡಲಾಗುತ್ತದೆ. ಇದಕ್ಕಾಗಿ ಸುಮಾರು 8,000 ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಅಲ್ಲಿ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಪಿಎಂ-ಸಿಎಂ ಸಭೆ ಟಿವಿಯಲ್ಲಿ ಪ್ರಸಾರ: ಆಕ್ಷೇಪಿಸಿದ ಮೋದಿ, ವಿಷಾದಿಸಿದ ಕೇಜ್ರಿವಾಲ್!


