ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಬಿಹಾರದ ಕಿಶನ್‌ಗಂಜ್ ಜಿಲ್ಲೆಗೆ ಪ್ರವೇಶಿಸಿದೆ. ಬಿಹಾರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ಪಕ್ಷದ ಇತರ ಹಿರಿಯ ನಾಯಕರು ಬಿಹಾರದಲ್ಲಿ ರಾಹುಲ್ ಗಾಂಧಿಯನ್ನು ಸ್ವಾಗತಿಸಿದ್ದಾರೆ.
ಕಿಶನ್‌ಗಂಜ್ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿದ್ದಾರೆ ಮತ್ತು ದೇಶಾದ್ಯಂತ ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿದ್ದಾರೆ. ಬಿಹಾರವನ್ನು”ಸಾಮಾಜಿಕ ನ್ಯಾಯದ ನಾಡು” ಎಂದು ಕರೆದಿದ್ದಾರೆ ಮತ್ತು ದೇಶವು ಬಿಹಾರದ ಜನರನ್ನು ನೋಡುತ್ತಿದೆ ಏಕೆಂದರೆ ರಾಜ್ಯದ ಜನರಿಗಿಂತ ಸಾಮಾಜಿಕ ನ್ಯಾಯವನ್ನು ಯಾರೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ದ್ವೇಷವನ್ನು ಹರಡುವುದರ ಜೊತೆಗೆ ಜಾತಿ ಮತ್ತು ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುವ ಬಗ್ಗೆ ಮಾತನಾಡುತ್ತಿದೆ. ಕಾಂಗ್ರೆಸ್ ಪಕ್ಷವು ಪ್ರೀತಿ, ಗೌರವ ಮತ್ತು ಸಹೋದರತ್ವದ ಪ್ರಚಾರದ ಬಗ್ಗೆ ಗಮನಹರಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ದೇಶದ ಬಡ ಜನರು ಆರ್ಥಿಕ ಮತ್ತು ಸಾಮಾಜಿಕ ನ್ಯಾಯವನ್ನು ಪಡೆಯಲು ಸಾಧ್ಯವಾಗದ ಕಾರಣ ತಮ್ಮ ಯಾತ್ರೆಯ ಹೆಸರಿಗೆ ನ್ಯಾಯ ಪದವನ್ನು ಸೇರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಆರ್ಥಿಕತೆಯನ್ನು ಕೆಲವು ಬಿಲಿಯನೇರ್‌ಗಳಿಗೆ ಹಸ್ತಾಂತರಿಸಲಾಗಿದೆ. ವಿಮಾನ ನಿಲ್ದಾಣಗಳು, ಬಂದರುಗಳು, ಆಸ್ಪತ್ರೆಗಳು ಮತ್ತು ವಿಶ್ವವಿದ್ಯಾನಿಲಯಗಳು ಎಲ್ಲವನ್ನೂ ಎರಡರಿಂದ ಮೂರು ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರವು ಬಡವರಿಗೆ, ಕಾರ್ಮಿಕರಿಗೆ ಅಥವಾ ರೈತರಿಗೆ ಸಹಾಯ ಮಾಡುವುದಿಲ್ಲ ಮತ್ತು ಬಡವರಿಗೆ ಬ್ಯಾಂಕ್‌ಗಳ ಬಾಗಿಲು ಯಾವಾಗಲು ಮುಚ್ಚಲ್ಪಟ್ಟಿದೆ. ಆದರೆ ಪ್ರಧಾನಿ ಕಚೇರಿಯ ಆದೇಶದ ಮೇರೆಗೆ ಕೈಗಾರಿಕೋದ್ಯಮಿಗಳಿಗೆ ಬ್ಯಾಂಕ್‌ಗಳು ಯಾವಾಗಲೂ ತೆರೆದಿರುತ್ತದೆ. ಸಾಮಾಜಿಕ ಮತ್ತು ಆರ್ಥಿಕ ನ್ಯಾಯವಿಲ್ಲದೆ ದೇಶವು ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಬಿಜೆಪಿಯವರು ಮಾತನಾಡುವುದು ಸುಳ್ಳು ಎಂದು ಹೇಳಿದ್ದಾರೆ.
ಒಬಿಸಿಗಳು, ಅಲ್ಪಸಂಖ್ಯಾತ ಸಮುದಾಯಗಳು, ಬುಡಕಟ್ಟು ಮತ್ತು ಸಾಮಾನ್ಯ ವರ್ಗಗಳ ನಿಖರವಾದ ಜನಸಂಖ್ಯೆಯನ್ನು ತಿಳಿಯಲು ಪ್ರತಿಯೊಬ್ಬರಿಗೂ ಹಕ್ಕಿದೆ ಮತ್ತು ಅದಕ್ಕಾಗಿ ಜಾತಿ ಆಧಾರಿತ ಜನಗಣತಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಎಷ್ಟು ಮುಖ್ಯ ಎಂಬುದನ್ನು ಜನರಿಗೆ ತಿಳಿಸಲು ನಾನು ಬಿಹಾರಕ್ಕೆ ಬಂದಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಹಾರದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಮುಂದುವರಿದಿದ್ದು, INDIA ಮೈತ್ರಿ ಕೂಟದಿಂದ ನಿತೀಶ್ ಕುಮಾರ್ ಅವರ ನಿರ್ಗಮನದ ಬಳಿಕ ಮೊದಲ ಬಾರಿಗೆ ಅವರು ಪೂರ್ಣಿಯಾ ಜಿಲ್ಲೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಿಹಾರದ ಕಾಂಗ್ರೆಸ್ ಪಕ್ಷದ ನಾಯಕರ ಪ್ರಕಾರ ರ್ಯಾಲಿಯನ್ನುದ್ದೇಶಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಮಾತನಾಡಲಿದ್ದಾರೆ ಮತ್ತು ಅವರು ವೇದಿಕೆಯನ್ನು ಹಂಚಿಕೊಳ್ಳಲು ವಿರೋಧ ಪಕ್ಷದ INDIA ಬಣದ ಇತರ ನಾಯಕರನ್ನು ಆಹ್ವಾನಿಸಿದ್ದಾರೆ. ಸಭೆಯಲ್ಲಿ ಯುವ ನಾಯಕ ಕನ್ಹಯ್ಯ ಕುಮಾರ್ ಕೂಡ ಭಾಗವಹಿಸುವ ಸಾಧ್ಯತೆ ಇದೆ.
#WATCH | Kishanganj: Congress' Bharat Jodo Nyay Yatra enters Bihar. pic.twitter.com/9nfYCfNDro
— ANI (@ANI) January 29, 2024
ಇದನ್ನು ಓದಿ: ‘ದಲಿತರು’ ದೇವಾಲಯ ಪ್ರವೇಶಿಸಿದ್ದಕ್ಕೆ ಪ್ರತ್ಯೇಕ ಸ್ಥಳದಲ್ಲಿ ‘ಹೊಸ ವಿಗ್ರಹ’ ಪ್ರತಿಷ್ಠಾಪನೆ!


