Homeಮುಖಪುಟಪರಸ್ಪರ ಸಂಧಿಸದ ಮಾನವೀಯ ಸಂಬಂಧಗಳ ಕಥನ ’ದ ಎಡ್ಜ್ ಆಫ್ ಹೆವೆನ್'

ಪರಸ್ಪರ ಸಂಧಿಸದ ಮಾನವೀಯ ಸಂಬಂಧಗಳ ಕಥನ ’ದ ಎಡ್ಜ್ ಆಫ್ ಹೆವೆನ್’

- Advertisement -
- Advertisement -

ಜರ್ಮನ್ ಮತ್ತು ಟರ್ಕಿ ದೇಶಗಳ ಸಂಬಂಧ ಶತಮಾನಗಳ ಹಿಂದಿನದು (ಅಟೊಮನ್ ಎಂಪೈರ್ ಕಾಲದಿಂದಲೂ). ಈ ರೀತಿಯ ಸಂಬಂಧದಿಂದ ಎರಡೂ ದೇಶಗಳು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಪರಸ್ಪರ ಶ್ರೀಮಂತವಾಗಿವೆ. ಮೊದಲ ಮಹಾಯುದ್ಧದ ಹೊತ್ತಿಗೆ ಈ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂತು. ಎರಡನೇ ಮಹಾಯುದ್ಧದ ಪ್ರಾರಂಭದಲ್ಲಿ ಕೇವಲ ರಾಜತಾಂತ್ರಿಕವಾದ ಸಂಬಂಧವನ್ನ ಮಾತ್ರ ಉಳಿಸಿಕೊಂಡಿದ್ದ ಇವು, ಯುದ್ಧ ಕೊನೆಯಾಗುವಷ್ಟರಲ್ಲಿ ಆ ಸಂಬಂಧವೂ ಕಡಿತಗೊಂಡಿತ್ತು. 1961ರಲ್ಲಿ ಜರ್ಮನಿ, ಪೂರ್ವ ಮತ್ತು ಪಶ್ಚಿಮ ಎಂದು ಇಬ್ಭಾಗವಾದಾಗ, ಜರ್ಮನ್ ರಾಜಧಾನಿ ಬರ್ಲಿನ್‌ನಲ್ಲಿ ಈ ಎರಡು ಭಾಗಗಳ ನಡುವೆ ಗೋಡೆಯನ್ನು ನಿರ್ಮಿಸಲಾಯಿತು. ಗೋಡೆ ನಿರ್ಮಾಣ ಹಂತದಲ್ಲಿ ಕೆಲಸಗಾರರ ಕೊರತೆ ಶುರುವಾಯಿತು. ಪಶ್ಚಿಮ ಜರ್ಮನಿ ಅತಿಥಿ ಕಾರ್ಮಿಕರಿಗಾಗಿ ತನ್ನ ಗಡಿಯನ್ನು ತೆರೆಯಿತು. ಈ ಸಂದರ್ಭದಲ್ಲಿ ಟರ್ಕಿಯಿಂದ ಅಸಂಖ್ಯಾತ ಜನ ಜರ್ಮನಿಗೆ ವಲಸೆ ಬಂದರು. ಪ.ಜರ್ಮನಿ ಟರ್ಕಿಯೊಂದಿಗೆ ಕಾರ್ಮಿಕ ನೇಮಕಾತಿ ಒಪ್ಪಂದವೊಂದನ್ನು ಕೂಡ ಮಾಡಿಕೊಂಡಿತು. 1989ರಲ್ಲಿ ಬರ್ಲಿನ್ ಗೋಡೆ ಕೆಡವಿ ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾಗ ಪರಿಸ್ಥಿತಿ ಬದಲಾಯಿತು. ಉಗ್ರ ರಾಷ್ಟ್ರೀಯತೆ, ಪೌರತ್ವ ವಿಚಾರಗಳು ಮುನ್ನಲೆಗೆ ಬಂದು, ವಲಸೆ ವಿರುದ್ಧದ ಭಾವನೆಗಳು ಹೆಚ್ಚಾದವು. ಅಲ್ಪಸಂಖ್ಯಾತರಾದ ಟರ್ಕಿಯನ್ನರ ಮೇಲೆ ಅಸಮಾಧಾನ ಉಲ್ಬಣಗೊಂಡಿತು. ಸಾಂಸ್ಕೃತಿಕ ಸಂಘರ್ಷಗಳು ಪ್ರಾರಂಭವಾದವು. ನಿಯೊ ನಾಝಿ ಎಂಬ ರಾಜಕೀಯ ಸಂಘಟನೆ ಹುಟ್ಟಿಕೊಂಡು ಅದು ಟರ್ಕಿಯನ್ನರ ವಿರುದ್ಧ ದ್ವೇಷ ಬಿತ್ತುವ ಕೆಲಸ ಶುರುಮಾಡಿತು.

ಫತ್ಹಿ ಅಕಿನ್

ಫತ್ಹಿ ಅಕಿನ್ ಜರ್ಮನ್ ದೇಶದ ಖ್ಯಾತ ಸಿನಿಮಾ ನಿರ್ದೇಶಕ. 1960ರ ದಶಕದಲ್ಲಿ ಟರ್ಕಿಯಿಂದ ಜರ್ಮನಿಗೆ ಕಾರ್ಮಿಕರಾಗಿ ವಲಸೆ ಬಂದ ದಂಪತಿಗಳಿಗೆ ಜನಿಸಿದವರು. ಅಕಿನ್ ತನ್ನನ್ನು ಯಾವಕಾಲಕ್ಕೂ ಜರ್ಮನಿಗನೆಂದೆ ಗುರುತಿಸಿಕೊಳ್ಳಲು ಇಚ್ಛಿಸುತ್ತಾರೆ. ತನ್ನ ದೇಶ, ಭಾಷೆ ಎಲ್ಲವೂ ಜರ್ಮನ್ ಎಂದೇ ಅವರು ಹೇಳಿಕೊಳ್ಳುವುದು. ಇಷ್ಟಾದರೂ ಅವರಿಗೆ ಜರ್ಮನಿಯಲ್ಲಿ ತಾನು ಹೊರಗಿನವನು ಎಂಬ ಭಾವನೆ ಇದ್ದೆ ಇದೆ. ’ನೀವು ಟರ್ಕಿ ಮಗುವಾಗಿ ಜರ್ಮನಿಯಲ್ಲಿ ಜನಿಸಿದಾಗ ನೀವು ಹೊರಗಿನವರಾಗಿ ಮತ್ತು ಅಲ್ಪಸಂಖ್ಯಾತರಾಗಿಯೇ ಹುಟ್ಟುತ್ತೀರಿ. ಜಗತ್ತಿನ ಯಾವ ಮೂಲೆಯಲ್ಲಾದರೂ ಅಲ್ಪಸಂಖ್ಯಾತರಾಗಿ ಜನಿಸಿದ ಪ್ರತಿಯೊಬ್ಬರೂ ಒಂದು ಭಿನ್ನವಾದ ಅನುಭವವನ್ನ ಜೀವಿಸುತ್ತಿರುತ್ತಾರೆ. ಜಗತ್ತಿನ ಎಲ್ಲಾ ಬಗೆಯ ಅಲ್ಪಸಂಖ್ಯಾತರು ಮತ್ತು ಅವರ ಮೇಲಿನ ಶೋಷಣೆ ಬಗ್ಗೆ ನನಗೆ ಮರುಕ ಇದೆ’ ಎಂಬುದು ಅಕಿನ್‌ರ ಮನದಾಳದ ಮಾತು.

ಫತ್ಹಿ ಅಕಿನ್

ಫತ್ಹಿ ಅಕಿನ್ ಜಾಗತಿಕವಾಗಿ ಗುರುತಿಸಿಕೊಂಡಿದ್ದು ಅವನ ನಾಲ್ಕನೇ ಸಿನಿಮಾ Head-On (2004) ಮುಖಾಂತರ. ಇದು ಅವರ ’ಪ್ರೀತಿ-ಸಾವು-ಕೇಡು’ ತ್ರಿವಳಿಯಲ್ಲಿ ಮೊದಲನೆಯದು. ಈ ಸಿನಿಮಾ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅತ್ಯುನ್ನತ ಪ್ರಶಸ್ತಿ Golden Bear ಪಡೆದುಕೊಂಡಿತು. ಜರ್ಮನ್‌ಯಲ್ಲಿ ಜನಿಸಿದ ಟರ್ಕಿ ಮೂಲದ ಎರಡನೇ ತಲೆಮಾರಿನ ಜನರ ಮನೋ ತುಮುಲಗಳನ್ನು ಪ್ರತಿನಿಧಿಸುವ ಇದು ವಿಮರ್ಶಕರಿಂದ ಬಹಳ ಮೆಚ್ಚುಗೆಯನ್ನು ಪಡೆಯಿತು. ಆ ನಂತರದ The edge of Heaven (2007), The Cut (2014), Good By Berlin (2016), In The Fade (2017) ಸಿನಿಮಾಗಳು ಅಕಿನ್‌ಗೆ ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ಖ್ಯಾತಿಯನ್ನು ತಂದುಕೊಟ್ಟವು.

ದ ಎಡ್ಜ್ ಆಫ್ ಹೆವೆನ್

ದ ಎಡ್ಜ್ ಆಫ್ ಹೆವೆನ್, ಅಕಿನ್‌ರ ’ಪ್ರೀತಿ-ಸಾವು-ಕೇಡು’ ತ್ರಿವಳಿಯ ಎರಡನೇ ಸಿನಿಮಾ. ಮೂರು ಭಾಗಗಳಲ್ಲಿರುವ ಇದು, ಫಾರ್ಮ್‌ನಲ್ಲಿ ನೋಡುವುದಾದರೆ ಒಂದು ರೀತಿ ಅಂತರ್ ಹೆಣಿಗೆ ಇರುವಂತದ್ದು; ಕಥೆಯಲ್ಲಿ ನೋಡುವುದಾದರೆ ಆಕಸ್ಮಿಕಗಳ ಸರಣಿ. ಇಲ್ಲಿನ ಪಾತ್ರಗಳು ಯಾರನ್ನೋ ಹುಡುಕಲು ಹೊರಡುತ್ತವೆ, ಆದರೆ ಅವರನ್ನು ಸಂಧಿಸುವುದೇ ಇಲ್ಲ. ಕಥೆ ಹಿಂದೆ ಮುಂದೆ ಚಲಿಸುವ ರೀತಿಯ ದೃಶ್ಯ ಕಟ್ಟುವಿಕೆ ಮೆಕ್ಸಿಕನ್ ಖ್ಯಾತ ನಿರ್ದೇಶಕ ಅಲೆಝಾಂಡ್ರೊ ಇನರ್ರಿಟುವಿನ 21 Grams ಸಿನಿಮಾವನ್ನು ನೆನಪಿಸಿದರೆ, ಕಥನದ ಕೆಲವು ಘಟನೆಗಳು ಅವನದೇ ಮತ್ತೊಂದು ಸಿನಿಮಾ Babelಅನ್ನು ನೆನಪಿಸುತ್ತದೆ. ಈ ಎರಡು ಇನರ್ರಿಟುವಿನ ಡೆತ್ ಟ್ರಯಾಲಜಿಯ ಸರಣಿ ಸಿನಿಮಾಗಳು. ಕಥೆಯ ಪಾತ್ರಗಳು ಇದೇ ಜರ್ಮನಿಯ ಪ್ರಸಿದ್ಧ ಸಿನಿಮಾ ನಿರ್ಮಾತೃ ರೈನರ್ ಫಾಸಬೈಂಡರ್‌ನ Ali: Fear Eats The Soul ಸಿನಿಮಾವನ್ನು ನೆನಪಿಸುತ್ತವೆ.

ಭಾಗ-1: ಯೆಟರ್‌ಳ ಸಾವು

ಮೊದಲ ತಲೆಮಾರಿನ ಟರ್ಕಿ ವಲಸಿಗ ಮತ್ತು ಜರ್ಮನ್ ನಿವಾಸಿ ಆಲಿ ಒಬ್ಬ ನಿವೃತ್ತ ಕಾರ್ಮಿಕ ಮತ್ತು ವಿಧುರ. ಒಮ್ಮೆ ವೇಶ್ಯೆವಾಟಿಕೆ ಸ್ಥಳದಲ್ಲಿ ಟರ್ಕಿ ಮೂಲದ ಯೆಟೆರ್‌ಳನ್ನು ಸಂಧಿಸುತ್ತಾನೆ. ಹಲವು ಭೇಟಿಗಳ ನಂತರ ಯೆಟೆರ್‌ಗೆ ತನ್ನ ಜೊತೆ ಬಂದು ಇರುವುದಾದರೆ ಸಂಬಳ ನೀಡುವುದಾಗಿ ಆಫರ್ ಮಾಡುತ್ತಾನೆ. ಇದೇ ವೇಳೆಗೆ ಯೆಟೆರ್‌ಗೆ ಜರ್ಮನಿಯಲ್ಲಿರುವ ಟರ್ಕಿ ಧಾರ್ಮಿಕ ಮೂಲಭೂತವಾದಿಗಳಿಂದ ತನ್ನ ವೃತ್ತಿ ಬಗ್ಗೆ ಬೆದರಿಕೆ ಇರುತ್ತದೆ. ಆ ಕಾರಣಕ್ಕೆ, ಆಲಿಯ ಈ ಪ್ರಸ್ತಾವನೆಯನ್ನ ಒಪ್ಪುತ್ತಾಳೆ. ಆಲಿಯ ಮಗ ನೆಜತ್ ಜರ್ಮನಿಯ ವಿಶ್ವವಿದ್ಯಾನಿಲಯವೊಂದರಲ್ಲಿ ಜರ್ಮನ್ ಭಾಷೆಯ ಪ್ರಾಧ್ಯಾಪಕ. ಅವನಿಗೆ ಅಪ್ಪನ ಈ ನಡೆ ಕಸಿವಿಸಿ ಉಂಟುಮಾಡುತ್ತದೆ. ಆದರೆ, ಯೆಟರ್ ಟರ್ಕಿಯಲ್ಲಿರುವ ತನ್ನ ಮಗಳ ವಿದ್ಯಾಭ್ಯಾಸದ ಸಲುವಾಗಿ ತಾನು ಈ ವೃತ್ತಿ ಮಾಡುತ್ತಿರುವುದಾಗಿ, ಈ ವಿಷಯ ತನ್ನ ಮಗಳಿಗೆ ತಿಳಿದಿಲ್ಲ ಎಂಬುದು ಗೊತ್ತಾದಾಗ ಯೆಟೆರ್ ಬಗ್ಗೆ ಮರುಗುತ್ತಾನೆ. ಒಮ್ಮೆ ಆಲಿ ಕುಡಿದ ಮತ್ತಿನಲ್ಲಿ ಯೆಟೆರ್‌ಗೆ ಹೊಡೆದಾಗ ಆಕೆ ಸಾಯುತ್ತಾಳೆ. ನಂತರ ಆಲಿ ಜೈಲುಪಾಲಾಗುತ್ತಾನೆ. ನೆಜೆತ್‌ಗೆ ತಂದೆ ಮೇಲೆ ಜಿಗುಪ್ಸೆ ಬಂದು ಆತನನ್ನು ಮತ್ತೆಂದಿಗೂ ನೋಡದಿರಲು ನಿರ್ಧರಿಸಿ, ಯೆಟರ್ ಮಗಳಿಗೆ ಸಹಾಯ ಮಾಡುವ ಸಂಬಂಧ ಅವಳನ್ನ ಹುಡುಕಿಕೊಂಡು ಟರ್ಕಿಗೆ ಪ್ರಯಾಣಿಸುತ್ತಾನೆ.

ಭಾಗ-2: ಲೊಟ್ಟೆಯ ಸಾವು

ಮೇಲಿನ ಘಟನೆಗಳು ಜರುಗುತ್ತಿದ್ದ ಸಂದರ್ಭದಲ್ಲಿಯೇ, ಇಸ್ತಾಂಬುಲ್‌ನಲ್ಲಿ ಯೆಟರ್ ಮಗಳು ಆಯಟೆನ್, ಟರ್ಕಿ ಯುರೋಪಿಯನ್ ಯೂನಿಯನ್ ಜೊತೆ ಸೇರಿಕೊಳ್ಳುವುದರ ವಿರುದ್ಧ ಮತ್ತು ಸರ್ಕಾರದ ಕೆಲವು ಪಾಲಿಸಿಗಳ ವಿರುದ್ಧದ ಚಳವಳಿಗಳಲ್ಲಿ ಸಕ್ರಿಯವಾಗಿದ್ದುದರಿಂದ, ಪೊಲೀಸ್ ಪ್ರಕರಣವೊಂದರಲ್ಲಿ ತಪ್ಪಿಸಿಕೊಳ್ಳಲು ಹಾಗು ತನ್ನ ತಾಯಿ ಯೆಟರ್‌ಳನ್ನು ಹುಡುಕಿಕೊಂಡು ಜರ್ಮನಿಗೆ ಪ್ರಯಾಣಿಸುತ್ತಾಳೆ. ಯೆಟೆರ್ ತನ್ನ ಮಗಳಿಗೆ ತಾನು ಷೂ ಮಾರಾಟದ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿರುತ್ತಾಳೆ. ಎಷ್ಟು ಹುಡುಕಿದರು ಆಯಟೆನ್‌ಗೆ ತನ್ನ ತಾಯಿ ಸಿಗುವುದಿಲ್ಲ. ಕೈಯಲ್ಲಿ ಕಾಸಿಲ್ಲ. ಈ ಸಂದರ್ಭದಲ್ಲಿ ಆಯಟೆನ್‌ಗೆ ಪರಿಚಿತವಾಗಿ ಸಹಾಯ ಮಾಡುವುದು ಜರ್ಮನಿಯವಳಾದ ಲೊಟ್ಟೆ. ಆಯಟಿನ್‌ಗೆ ಲೊಟ್ಟೆ ತನ್ನ ಮನೆಯಲ್ಲೇ ಆಶ್ರಯ ನೀಡುತ್ತಾಳೆ. ಇದು ಲೊಟ್ಟೆ ತಾಯಿ ಸುಸಾನೆಗೆ ಇಷ್ಟ ಇರುವುದಿಲ್ಲ. ಆಯಟಿನ್ ಮತ್ತು ಲೊಟ್ಟೆ ಇಬ್ಬರೂ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಆಕರ್ಷಿತರಾಗುತ್ತಾರೆ. ಫೇಕ್ ಪಾಸಪೋರ್ಟ್ ಮೂಲಕ ಜರ್ಮನಿಗೆ ಬಂದಿದ್ದ ಆಯಟನ್ ಒಮ್ಮೆ ಜರ್ಮನ್ ಪೊಲೀಸರಿಗೆ ಸಿಕ್ಕಿಬೀಳುತ್ತಾಳೆ. ಮತ್ತೆ ಅವಳನ್ನ ಟರ್ಕಿಗೆ ವಾಪಸ್ ಕಳುಹಿಸಲಾಗುತ್ತದೆ. ಲೊಟ್ಟೆ ಆಯಟೆನ್‌ಳನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಹಾಯ ಮಾಡುವ ಸಂಬಂಧ ತನ್ನ ತಾಯಿಯ ವಿರೋಧದ ನಡುವೆಯೂ ಹಾಗೂ ತನ್ನ ಶಿಕ್ಷಣವನ್ನು ಲೆಕ್ಕಿಸದೆ ಟರ್ಕಿಗೆ ಬರುತ್ತಾಳೆ. ಟರ್ಕಿ ಜೈಲಿನಲ್ಲಿ ಆಯಟೆನ್ ಭೇಟಿಯಾಗುವ ಲೊಟ್ಟೆ ನಂತರ ಜರುಗುವ ಆಕಸ್ಮಿಕ ಘಟನೆಯೊಂದರಲ್ಲಿ ಸಾವನ್ನಪ್ಪುತ್ತಾಳೆ.

ಭಾಗ-3: ದ ಎಡ್ಜ್ ಆಫ್ ಹೆವೆನ್

ಆಲಿ ಜೈಲಿನಿಂದ ಬಿಡುಗಡೆಯಾದ ನಂತರ ಅವನನ್ನು ಟರ್ಕಿಗೆ ಗಡಿಪಾರು ಮಾಡಲಾಗುತ್ತದೆ. ಮತ್ತೊಂದು ಕಡೆ ಮಗಳ ಸಾವು ಸುಸಾನೆಯನ್ನು ಅಗಾಧವಾಗಿ ಬಾಧಿಸುತ್ತದೆ. ತನ್ನ ಮಗಳ ಉದ್ದೇಶವನ್ನು ಈಡೇರಿಸುವುದು ಅವಳ ಧ್ಯೇಯವಾಗತ್ತದೆ. ಆ ಕಾರಣವಾಗಿ ಅವಳು ಟರ್ಕಿಗೆ ಬರುತ್ತಾಳೆ. ಜೈಲಿನಲ್ಲಿ ಆಯಟೆನ್‌ಳನ್ನು ಭೇಟಿಯಾಗುತ್ತಾಳೆ. ಸುಸಾನೆಯನ್ನು ನೋಡಿದ ತಕ್ಷಣದಲ್ಲೆ ಆಯಟೆನ್ ಲೊಟ್ಟೆ ಸಾವಿಗೆ ತಾನೇ ಕಾರಣ ಎಂದು ಪಶ್ಚಾತ್ತಾಪದಿಂದ ಕುಗ್ಗಿಹೋಗುತ್ತಾಳೆ. ಸಿನಿಮಾದಲ್ಲಿನ ಈ ದೃಶ್ಯ ಅತಿ ಭಾವುಕವಾದುದ್ದು. ಕೊನೆಗೆ ಆಯಟಿನ್‌ಳನ್ನು ಜೈಲಿನಿಂದ ಬಿಡುಗಡೆಗೊಳಿಸುವಲ್ಲಿ ಸುಸಾನೆ ಯಶಸ್ವಿಯಾಗುತ್ತಾಳೆ. ನೆಜೆತ್‌ಗೆ ತನ್ನ ತಂದೆಯ ಮೇಲಿನ ಸಿಟ್ಟು ಕಡಿಮೆಯಾಗಿ ಅವನನ್ನು ಭೇಟಿಯಾಗಲು ಅವನಿರುವ ಜಾಗಕ್ಕೆ ಬರುತ್ತಾನೆ.

ನೆಜತ್, ಲೊಟ್ಟೆ ಮತ್ತು ಸುಸಾನೆ ಈ ಮೂವರು ಜರ್ಮನಿಯಿಂದ ಟರ್ಕಿಗೆ ಪ್ರಯಾಣಿಸುವ ಉದ್ದೇಶ ಒಂದೇ. ಅದು ಆಯಟೆನ್‌ಳಿಗೆ ಸಹಾಯ ಮಾಡುವುದು. ನೆಜತ್‌ನನ್ನು ಸಂಧಿಸುವ ಲೊಟ್ಟೆ ಅವನ ಮನೆಯನ್ನೆ ಕೆಲ ಸಮಯ ಹಂಚಿಕೊಳ್ಳುತ್ತಾಳೆ ಆದರೆ ಇಬ್ಬರ ಉದ್ದೇಶ ಒಬ್ಬರಿಗೊಬ್ಬರಿಗೆ ತಿಳಿಯುವುದಿಲ್ಲ. ನಂತರ ಬರುವ ಸುಸಾನೆ ಕೂಡ ತನ್ನ ಮಗಳು ಉಳಿದುಕೊಂಡಿದ್ದ ಮನೆಯಲ್ಲೆ ಉಳಿಯಬೇಕು ಎಂಬ ಆಸೆಯಿಂದ ನೆಜತ್‌ನನ್ನು ಭೇಟಿಯಾಗಿ ಅದೇ ಮನೆಯಲ್ಲಿ ಉಳಿಯುತ್ತಾಳೆ. ಆದರೆ ನೆಜತ್ ಟರ್ಕಿಗೆ ಬಂದ ಉದ್ದೇಶ ಸುಸಾನೆಗೆ ತಿಳಿಯುವುದಿಲ್ಲ.

ಸಿನಿಮಾವನ್ನು ಒಂದು ಬೌದ್ಧಿಕ ಕಲೆ ಎಂದು ಪರಿಗಣಿಸಿ ಗಂಭೀರವಾಗಿ ಚರ್ಚಿಸುವ ಮತ್ತು ವಿಮರ್ಶಿಸುವವರನ್ನು ದಾಟಿ ಅಸಂಖ್ಯಾತ ಸಾಮಾನ್ಯ ಸಿನಿಮಾ ಪ್ರೇಕ್ಷಕರನ್ನು ಸೆಳೆದ ಹೆಗ್ಗಳಿಕೆ ’ದ ಎಡ್ಜ್ ಆಫ್ ಹೆವೆನ್‌’ದು. ಸ್ವಂತ ಅನುಭವದಲ್ಲೇ ಹೇಳುವುದಾದರೆ, ಸಿನಿಮಾ ಒಂದು ಜನಪ್ರಿಯ ಮನರಂಜನೆಯ ಕಲಾಪ್ರಕಾರ ಎಂದು ತಿಳಿದು ಅದೇ ಮಾದರಿಯ ಸಿನಿಮಾಗಳನ್ನಷ್ಟೆ ನೋಡುತ್ತಿದ್ದ ನನಗೆ ಪ್ರಪಂಚದ ಬೇರೆಬೇರೆ ಭಾಗದ ಸಿನಿಮಾಗಳನ್ನು ನೋಡುವ ಕುತೂಹಲ ಉಂಟುಮಾಡಿದ ಪ್ರಾರಂಭದ ಸಿನಿಮಾಗಳಲ್ಲಿ ಇದೂ ಒಂದು.

ಅಕಿನ್ ತನ್ನ Head-On (2004) ಸಿನಿಮಾದಲ್ಲಿ ಟರ್ಕಿ ಮೂಲದ ಜರ್ಮನ್ ನಿವಾಸಿಗಳ ಮನೋತುಮುಲ, ಅವರ ಗುರುತಿನ ಬಿಕ್ಕಟ್ಟು, ಧಾರ್ಮಿಕ ಮೂಲಭೂತವಾದದ ಒತ್ತಡ, ಸ್ವತಂತ್ರವಾಗಿ ಬದುಕುವ ಕನಸು ಈ ಎಲ್ಲಾ ಸಂಗತಿಗಳನ್ನು ಚರ್ಚಿಸಿದ್ದಾರೆ. ಈ ಎಲ್ಲಾ ಸಂಗತಿಗಳನ್ನು The edge of Heavenನಲ್ಲಿ ಇನ್ನೂ ಹಲವು ಆಯಾಮಗಳೊಂದಿಗೆ ವಿಶಾಲವಾದ ಮನೋಭಾವದಿಂದ ಚರ್ಚಿಸುತ್ತಾರೆನಿಸುತ್ತದೆ. ಟರ್ಕಿ ಮತ್ತು ಜರ್ಮನ್ ನಡುವಿನ ಸದ್ಯದ ಬಿಕ್ಕಟ್ಟು, ಸಾಂಸ್ಕೃತಿಕ ಸಂಘರ್ಷ, ಟರ್ಕಿ ಯುರೋಪಿಯನ್ ಯೂನಿಯನ್ ಸೇರಿಕೊಳ್ಳುವ ಚರ್ಚೆ, ಯುರೋಪಿಯನ್ ಯೂನಿಯನ್‌ನಲ್ಲಿ ಬಲಾಢ್ಯ ರಾಷ್ಟ್ರಗಳ ಯಜಮಾನಿಕೆ, ಅಮೆರಿಕದ 9/11 ಘಟನೆ ನಂತರ ಮುಸ್ಲಿಂ ರಾಷ್ಟ್ರಗಳ ಮೇಲೆ ಯುರೋಪ್ ದೇಶಗಳ ಅಭಿಪ್ರಾಯ ಇವೆಲ್ಲವುಗಳ ಜೊತೆಗೆ ಟರ್ಕಿಯಲ್ಲಿ ಅಲ್ಪಸಂಖ್ಯಾತ ಕುರ್ಡಿಷ್ ಸಮುದಾಯದ ಬಗ್ಗೆ ಕೂಡ ಸೂಚ್ಯವಾಗಿ ಚರ್ಚಿಸುತ್ತಾರೆ.

ಈ ಸಿನಿಮಾದಲ್ಲಿ ಕಥೆಗಿಂತ ಕಥಾಪಾತ್ರಗಳು ಹೆಚ್ಚು ಕಾಡುತ್ತವೆ. ಅದರಲ್ಲಿಯೂ ಲೊಟ್ಟೆ ಮತ್ತು ಅವಳ ತಾಯಿ ಸುಸಾನೆಯ ಪಾತ್ರ ವಿಶಿಷ್ಟವಾದದ್ದು; ಒಂದು ದೇಶದ ಬಹುಸಂಖ್ಯಾತ ಮತ್ತು ಪ್ರಿವಿಲೆಜ್ ಸಮುದಾಯದವರು ಅಲ್ಪಸಂಖ್ಯಾತರ ಮತ್ತು ಶೋಷಿತರ ಬಗ್ಗೆ ಯಾವ ರೀತಿಯ ಕಾಳಜಿಯನ್ನು ಹೊಂದಿರಬೇಕು ಎಂಬುದಕ್ಕೆ ಲೊಟ್ಟೆ ಪಾತ್ರ ಮಾದರಿಯಾದರೆ, ತಾಯಿ ಸುಸಾನೆಯದು ಲೊಟ್ಟೆಯ ಕಾಳಜಿಯ ಮಾದರಿ ಕಡೆ ಚಲಿಸಲು ಪ್ರಯತ್ನಿಸುವ ಪಾತ್ರ. ರೈನರ್ ಫಾಸಬೈಂಡರ್‌ನ Ali: Fear Eats The Soul ಸಿನಿಮಾದಲ್ಲಿ ಬರುವ ಎಮ್ಮಿ ಕೂಡ ಇದೇ ಮಾದರಿಯ ವಿಶಾಲ ಮನೋಭಾವವುಳ್ಳ ಕಾಳಜಿಯ ಪಾತ್ರ. ಅಕಿನ್ ತನ್ನ ಪಾತ್ರಗಳನ್ನ ಹೃದಯವಂತಿಕೆಯಿಂದ ಕಟ್ಟಿಕೊಡುತ್ತಾರೆ. ಆಲಿ ಒಬ್ಬ ಕೊಲೆಗಡುಕ ಎಂದು ದೂರವಾಗುವ ಮಗ ನೆಜತ್ ಸಿನಿಮಾ ಕೊನೆಯಲ್ಲಿ ತನ್ನ ತಂದೆಯನ್ನು ನೋಡಲು ಹಂಬಲಿಸುತ್ತಾನೆ. ಲೊಟ್ಟೆಗೆ ನೀನು ನನ್ನ ಮಗಳೆ ಅಲ್ಲ ಎಂದು ದೂರುವ ಸುಸಾನೆ ಲೊಟ್ಟೆ ಸಾವಿನ ನಂತರ ಅವಳ ಉದ್ದೇಶವನ್ನು ಈಡೇರಿಸಲು ಮುಂದಾಗುತ್ತಾಳೆ. The edge of Heavenನಲ್ಲಿ ಬರುವ ಕಥಾಪಾತ್ರಗಳ ಮನಸ್ಥಿತಿ ಮತ್ತು ಆದ್ಯತೆ ಸಿನಿಮಾ ಕೊನೆಯಷ್ಟರಲ್ಲಿ ಬದಲಾಗಿರುತ್ತದೆ. ಈ ಬದಲಾವಣೆಯೆ ಮಾನವೀಯ ಸಂಬಂಧಗಳ ಕಡೆಗಿನ ತುಡಿತ ಮತ್ತು ಚಲನೆ. ಈ ಕಾರಣಕ್ಕಾಗಿ ಫತ್ಹೆ ಅಕಿನ್‌ನ The edge of Heaven ಸದಾಕಾಲ ನೆನಪಿನಲ್ಲುಳಿಯುವ ಸಿನಿಮಾ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ಸಮಕಾಲೀನ ಸಮಾಜದ ಪ್ರಮುಖ ಸಿನಿಮಾ ನಿರ್ಮಾತೃ Andrey Zvyagintsev

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...