Homeಅಂಕಣಗಳುಪುಸ್ತಕ ಪರಿಚಯ; 'ನೀಲವ್ವ': ಆಗುವಿಕೆಯನ್ನು ತೋರುವ ಕತೆಗಳು

ಪುಸ್ತಕ ಪರಿಚಯ; ‘ನೀಲವ್ವ’: ಆಗುವಿಕೆಯನ್ನು ತೋರುವ ಕತೆಗಳು

- Advertisement -
- Advertisement -

’ನೀಲವ್ವ’ ಸಂಕಲನದ ಕತೆಗಳು ಒಂದು ಸಹಜ ಮಾನವ ಸಂಬಂಧ, ಜೀವಸಂಬಂಧಕ್ಕೂ ಎಡೆಯಿಲ್ಲದಿರುವ ಬದುಕಿನ ವಿಕಾರವನ್ನು ಚಿತ್ರಿಸುತ್ತಲೇ, ಇದಕ್ಕೆ ಮದ್ದರೆಯುವ ಜೀವಸೆಲೆಯನ್ನು ಹುಡುಕುತ್ತಾ ಹೋಗುತ್ತದೆ. ’ನೀಲಿ’ ಎನ್ನುವುದು ಅರಿವು ಮತ್ತು ಎಚ್ಚರ ಸಂಕೇತದಂತೆ ಕಾಣುತ್ತದೆ. ಇಲ್ಲಿನ ಕತೆಗಳಿಗೆ, ನೇರ ಪ್ರತಿರೋಧಕ್ಕಿಂತ ಹೆಚ್ಚಾಗಿ ಆತ್ಮಸಾಕ್ಷಿಯನ್ನು ಕಲಕುವ ಗುಣವಿದೆ. ಬದಲಾವಣೆ, ಕ್ರಾಂತಿಯ ದಾರಿಯ ಹಾಗೆಯೇ ನಿರಂತರ ಎಚ್ಚರದ, ಸಾವಧಾನದ ಹಾದಿಯಿದೆ. ಈ ಹಾದಿಯಲ್ಲಿ ನೋವಿದೆ, ಆಕ್ರೋಶ ಇದೆ, ಎಚ್ಚರ ಇದೆ, ವಿವೇಕ ಇದೆ, ಬದಲಾಗಬಲ್ಲದೆಂಬ ಭರವಸೆ ಇದೆ. ‘ನೀಲವ್ವ’ ಸಂಕಲನದ ಕತೆಗಳು ನಮ್ಮನ್ನು ಆವರಿಸಿಬಿಡುವುದು ಹೀಗೇ.

ಇಲ್ಲಿ ಜಡೆಪ್ಪ, ಹುಲುಗ, ಸುಂಕ, ಭರಮಪ್ಪನ ಮಗ, ಉಮಾಶಂಕರ್ ಮುಂತಾದ ಪಾತ್ರಗಳು ತಾವು ಅನುಭವಿಸುತ್ತಿರುವ ಅಪಮಾನ, ಹಸಿವು, ನೋವುಗಳಿಂದ ಅನೇಕ ಸವಾಲುಗಳಿಗೆ ಎದುರಾಗುತ್ತಾ ಹೊಸಬದುಕಿನತ್ತ ಮುಖಮಾಡುತ್ತವೆ. ಇದು ಅವರ ವೈಯಕ್ತಿಕ ಬಿಡುಗಡೆಯ ಹಾದಿಯಷ್ಟೇ ಅಲ್ಲ ಅಥವಾ ಕೇವಲ ಅವರ ಸಮುದಾಯದ ಬಿಡುಗಡೆಯ ದಾರಿಯಷ್ಟೇ ಅಲ್ಲ; ಬದಲಿಗೆ ಒಟ್ಟು ಸಮಾಜವೇ ತನಗಂಟಿದ ಕ್ರೌರ್ಯದಿಂದ ಮುಕ್ತಗೊಳ್ಳುವ ದಾರಿಯೂ ಆಗಿದೆ. ‘ಒಂದು ಹೆಜ್ಜೆ’ ಕತೆಯಲ್ಲಿ ಬರುವ ಈಶ್ವರ್ ಸರ್, ‘ತೆರೆಮರೆಯ ಯೋಧ’ದ ದಿನೇಶ್, ‘ದೇವರಬಾವಿ’ಯ ವೈದ್ಯ ಇವರೆಲ್ಲ ತಮ್ಮನ್ನು ಕವಿದುಕೊಂಡಿದ್ದ ಮೌಢ್ಯದ ಪೊರೆ ಹರಿದು ಮಿಡಿಯುವುದು ಇದನ್ನು ಸಾಬೀತುಪಡಿಸುತ್ತದೆ. ‘ನೀಲವ್ವ’ಳ ಪ್ರಖರ ನ್ಯಾಯಪ್ರಜ್ಞೆ, ದೌರ್ಜನ್ಯವನ್ನು ಎದುರಾಗಬೇಕಾದ ಬಗೆಯನ್ನು ಕಾಣಿಸುವ ರೀತಿ ವಿಶಿಷ್ಟವಾಗಿದೆ. ಹೀಗಾಗಿ ಇಲ್ಲಿನ ಕತೆಗಳು ಚಲನೆಯನ್ನು, ಆಗುತ್ತಿರುವ ಬಗೆಯನ್ನು ಹಿಡಿದಿಡುವ ಕತೆಗಳಾಗಿ ನಮ್ಮೊಳಗನ್ನೂ ಕಲಕಿ ಪ್ರಶ್ನಿಸಿ ಜೊತೆಗೆ ಒಯ್ಯುತ್ತವೆ.

ಬದಲಾಗುತ್ತಿರುವ ಪರಿಸರದಲ್ಲಿ ಶೋಷಣೆಯ ಆಯಾಮಗಳೂ ಬದಲಾಗಿರುವುದನ್ನು ಇಲ್ಲಿನ ಕೆಲವು ಕತೆಗಳು ಸೂಕ್ಷ್ಮವಾಗಿ ಹಿಡಿದಿಟ್ಟಿವೆ. ’ಒಂದು ಹೆಜ್ಜೆ’ ಕತೆಯ ಉಮಾಶಂಕರ್, ವಿದ್ಯೆ, ಉದ್ಯೋಗ ಗಳಿಸುವ ಮೂಲಕ ಹಿಂದಿನ ತಲೆಮಾರಿಗಿಂತ ಭಿನ್ನವಾಗಿದ್ದಾನೆ. ಜೊತೆಗೆ ಅದೇ ತಾರತಮ್ಯ ಹೊಸ ರೂಪದಲ್ಲಿ ಅವನನ್ನು ಹಿಂಡುತ್ತಿದೆ. ಇದನ್ನು ತನ್ನದೇ ಆದ ರೀತಿಯಲ್ಲಿ ಎದುರಿಸುವ ಉಮಾಶಂಕರ್ ಹಾಗೂ ಅವನ ತಾಯಿಯ ನಡೆ ನಾವು ಈಗ ತಾರತಮ್ಯದ ನೆಲೆಗಳನ್ನು ಹೊಸ ಬಗೆಯಲ್ಲಿ ಎದುರಾಗಬೇಕು ಎನ್ನುವುದನ್ನು ಸೂಚಿಸುವಂತಿದೆ. ಶೋಷಕರ ಹೊಸ ಮುಖವಾಡಗಳಂತೆಯೇ ಶೋಷಣೆಯನ್ನು ರಮ್ಯಗೊಳಿಸುವ ಪರಿಭಾಷೆಯೂ ನಮ್ಮ ನಡುವೆ ಇದೆ. ‘ತೆರೆಮರೆಯ ಯೋಧ’ ಕತೆಯ ಕೊನೆಯಲ್ಲಿ ಯೋಧ ದಿನೇಶ್ ಪೌರಕಾರ್ಮಿಕನಾದ ಭರಮಪ್ಪನನ್ನು ‘ಕಾಣದ ಶತ್ರುಗಳನ್ನು ನಿವಾರಿಸುವ ತೆರೆಮರೆಯ ಯೋಧ’ ಎಂದು ಅಭಿನಂದಿಸಿದ ಸಂದರ್ಭಲ್ಲಿ ಭರಮಪ್ಪ ಮೈಕ್ ತೆಗೆದುಕೊಂಡು ‘ನನ್ನ ಮಗನಿಗೆ ಕೆಲಸ ಸಿಕ್ಕೈತೆ. ನಾಳೆಯಿಂದ ಈ ಕೆಲ್ಸ ಮಾಡಕ್ಕಿಲ್ಲ’ ಎನ್ನುವುದು ನಮ್ಮೆಲ್ಲರ ಒಳಗನ್ನೂ ಚುಚ್ಚುತ್ತದೆ.

ವಿಕಾಸ್‌ ಆರ್‌.ಮೌರ್ಯ

ಸಂಕಲನದಲ್ಲಿ ನಮ್ಮನ್ನು ಹಿಡಿದಿಡುವ ಇನ್ನೊಂದು ಕತೆ ‘ಚಿನ್ನದ ಕನ್ನಡಕ’. ಅಂಬೇಡ್ಕರ್ ಜಯಂತಿಯಂದು ಅವರ ಮೂರ್ತಿಗೆ ಚಿನ್ನದ ಕನ್ನಡಕ ತೊಡಿಸುವ ಸಂಭ್ರಮ, ಮೆರವಣಿಗೆಯ ಹಿನ್ನೆಲೆಯಲ್ಲಿ ಈ ಸಂಭ್ರಮದ ಅಸಂಗತತೆ, ಬದಲಾಗದ ಬದುಕುಗಳನ್ನು ಕಾಣಿಸುತ್ತಾ ಹೋಗುತ್ತದೆ. ಆಶಯ ಮತ್ತು ವಸ್ತುಸ್ಥಿತಿಗಳ ನಡುವಣ ಬಿರುಕನ್ನು ಕತೆಗಾರ ವಿಕಾಸ್ ಶಕ್ತವಾಗಿ ಹಿಡಿದಿಡುತ್ತಾ ಹೋಗುತ್ತಾರೆ. ಅಂಬೇಡ್ಕರ್ ಜಯಂತಿಗೆ ಶುಭಕೋರುವ ಬ್ಯಾನರ್‌ನಲ್ಲಿ ಮುಂಡವಿಲ್ಲದ ರುಂಡಗಳಂತೆ ಕಾಣುವ ಶುಭಕೋರುವವರ ಚಿತ್ರಗಳು, ಸ್ವಾಧೀನ ಕಳೆದುಕೊಂಡ ನೀಲವ್ವ, ಭಾರ ಕಳೆದುಕೊಳ್ಳದ ಊಟದ ಬುತ್ತಿ, ಜನರ ಮುಗಿಯದ ನೋವಿನ ನಡುವೆಯೇ ಅಂಬೇಡ್ಕರ್‌ಗೆ ಹಾಕಿದ ಚಿನ್ನದ ಕನ್ನಡಕ ಮುಂತಾದ ಪ್ರತಿಮೆಗಳು ವರ್ತಮಾನದ ವ್ಯಂಗ್ಯವನ್ನು ಸಮರ್ಥವಾಗಿ ಹಿಡಿದಿಟ್ಟಿವೆ. ‘ತಲೆ ತಲಾಂತರ’ ಕತೆ ಬೇರುಗಳನ್ನು ಕಳೆದುಕೊಂಡ ಸಮುದಾಯ, ತನ್ನ ಅಧೀನತೆಯನ್ನು ತೊರೆದು ಮೂಲಸಂಸ್ಕೃತಿಗೆ ಮರಳುವ ಮೂಲಕ ನೀಗಿಕೊಳ್ಳುವ ಹಾದಿ ತೋರುತ್ತದೆ.

ಹೊಸಪಟ್ಟುಗಳ ಮೂಲಕ ಶೋಷಣೆಯ ಹಿಡಿತವನ್ನು ಬಿಗಿಮಾಡುತ್ತಿರುವ ವ್ಯವಸ್ಥೆ, ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವುದಕ್ಕೆ ಸುಂಕ ಬಾವಿಗೆ ಹಾರಿ ಶಾರದೆಯ ಮಗುವನ್ನು ಕಾಪಾಡಲು ಅನುವು ಮಾಡಿಕೊಟ್ಟು ಅದಕ್ಕೆ ಪ್ರಾಯಶ್ಚಿತ್ತವನ್ನೂ ಮಾಡುತ್ತದೆ. ಅದೇ ಸುಂಕನನ್ನು ಮನುಷ್ಯನೆಂದು ನೋಡಲು ನಿರಾಕರಿಸುತ್ತದೆ. ಎಲ್ಲವನ್ನೂ ಸಂಕೇತಗಳನ್ನಾಗಿಸಿಕೊಂಡು ಅವುಗಳ ವಿಜೃಂಭಣೆಯಲ್ಲೇ ಆಶಯಗಳನ್ನು ಮರೆತ ಜನಸಮೂಹವೂ ಇದೆ. ಈ ಎಲ್ಲದರ ನಡುವೆ ಸುಂಕ, ಗಂಟಪ್ಪ, ನೀಲವ್ವ ಎಲ್ಲ ನೋವುಗಳನ್ನು ನುಂಗಿಯೂ ಎಲ್ಲೂ ಎಚ್ಚರ ಕಳೆದುಕೊಳ್ಳುವುದಿಲ್ಲ. ‘ತೆರೆಮರೆಯ ಯೋಧ’ ಕತೆಯಲ್ಲಿ ಭರಮಪ್ಪನ ಮಗ ಓದಿ ಕೆಲಸ ತೆಗೆದುಕೊಳ್ಳುವುದು, ‘ಒಂದು ಹೆಜ್ಜೆ’ ಕತೆಯಲ್ಲಿ ಪೂರ್ಣಿಮಾ ಮೇಡಂಗೆ ಉಮಾಶಂಕರ್ ಹೋಳಿಗೆಯ ಬಾಕ್ಸ್ ಕೊಡುವುದು, ‘ದೇವರ ಬಾವಿ’ ಕತೆಯಲ್ಲಿ ಶಾರದೆ ಸುಂಕರಿಗೆ ನೆರವಾಗುವ ವೈದ್ಯರು ಎಲ್ಲದರ ಮಧ್ಯೆ ಭರವಸೆಯಂತೆ ಕಾಣುತ್ತಾರೆ.

ಬೆಳಗಿನ ವಾಕ್‌ಗೆ ಉಳ್ಳವರು ನಡೆದು ಬರುವ ಬಗೆಯನ್ನು ‘ದಢೂತಿ ದೇಹಗಳು ನೀರು ತುಂಬಿದ ಪ್ಲಾಸ್ಟಿಕ್ ಕವರುಗಳಂತೆ ತುಳುಕುತ್ತಾ ನಡೆದು ಬರುತ್ತಿದ್ದವು’ ಎಂದು ವಿಕಾಸ್ ಬರೆಯುತ್ತಾರೆ. ಜಡೆಪ್ಪ ಪಾಟಿಚೀಲ ಹೊತ್ತು ಬರುತ್ತಿರುವುದನ್ನು ನೋಡಿದ ರಮ್ಯ ಮತ್ತು ಲಚುಮಿಯ ಮೊಗಗಳು ‘ಬಾಡು ಕಂಡಂತಾದವು’ ಎಂಬ ಸೊಗಸಾದ ಹೋಲಿಕೆ ನೀಡುತ್ತಾರೆ. ಕತೆಗಳ ಹೆಣಿಗೆ ಅಲ್ಲಲ್ಲಿ ಸಡಿಲವಾದಂತೆನಿಸಿದರೂ ಸುತ್ತಲಿನ ಪರಿವೇಶವನ್ನು ಕತೆಗೆ ಪೂರಕವಾಗಿ ಕಟ್ಟಿಕೊಡುವ ಪ್ರಯತ್ನದಿಂದ ಇವರು ಇದನ್ನು ಮೀರುವ ಯತ್ನದಲ್ಲಿದ್ದಾರೆ.

ವಿಕಾಸ್ ಮೌರ್ಯ ಅವರದು ಒಬ್ಬ ಹೋರಾಟಗಾರನ ಮನಸ್ಸು. ಅವರು ಸುತ್ತಲಿನ ಪರಿಸರವನ್ನು ನೋಡುವ ಬಗೆ, ದಾಖಲಿಸುವ ಬಗೆ ಒಂದು ಸೃಜನಶೀಲ ಅಭಿವ್ಯಕ್ತಿಯಾಗಿರುವಂತೆಯೇ, ಇದು ಯಾಕೆ ಇನ್ನೂ ಹೀಗಿದೆ, ಬದಲಾಗುವ ಬಗೆಯೆಂತು ಎಂಬ ವ್ಯಗ್ರತೆಯನ್ನು ಎಳೆಯಾಗಿ ಹೊಂದಿದೆ. ಹೀಗಾಗಿ ಇವರ ಕತೆಗಳ ಆಶಯ ನಿಚ್ಚಳವಾಗಿದೆ. ವಿಕಾಸ್ ಅವರೊಳಗಿನ ತಲ್ಲಣ, ವ್ಯಗ್ರತೆ ಬರಹಕ್ಕೆ ಒಂದು ಶಕ್ತಿ ಕೊಟ್ಟಹಾಗೆಯೇ, ಹೇಳುವ ಧಾವಂತ ಮೂಡಿಸುತ್ತವೆ. ಕತೆಯ ಮೂಲಕ ಕಾಣಿಸುವುದಕ್ಕಿಂತ ಒಳಗೇ ಕುದಿಯುತ್ತಿರುವ ವಿಚಾರವನ್ನು ಹೊರಹಾಕಬೇಕು ಎಂಬ ತುಡಿತದಲ್ಲಿ ಇಲ್ಲಿನ ಕತೆಗಳು ಮೂಡಿವೆ. ಹೀಗಾಗಿ ಇಲ್ಲಿನ ಪಾತ್ರಗಳ ರೂಪುರೇಷೆ ಸ್ಪಷ್ಟ. ಬದುಕಿನ ಸಂಕೀರ್ಣತೆ, ಅನಿರೀಕ್ಷಿತತೆ ಇಲ್ಲಿ ಕಾಣುವುದಿಲ್ಲ. ಆದರೆ ಇಷ್ಟೆಲ್ಲ ಹೋರಾಟಗಳ ನಡುವೆಯೂ ಅವೇ ವಿಕಾರಗಳು ಎಲ್ಲೆಡೆಯಲ್ಲಿಯೂ ಮತ್ತೆ ಮತ್ತೆ ಢಾಳಾಗಿ ಕಾಣುತ್ತಿರುವ ಸಂದರ್ಭದಲ್ಲಿ ಅದು ಒಳಗೇ ಚುಚ್ಚಿದ ಮುಳ್ಳಿನಂತೆ ಬಾಧಿಸುವುದರಿಂದ ಬಿಡುಗಡೆಯಿಲ್ಲ. ಬದುಕಿನಲ್ಲಿ, ಸಮಾಜದಲ್ಲಿ ಮಾಯದ ಗಾಯಗಳಿರುವವರೆಗೂ ಬರೆಯುತ್ತಲೇ ಇರಬೇಕಾಗುತ್ತದೆ.

ಡಾ. ಭಾರತೀದೇವಿ.ಪಿ

ಡಾ. ಭಾರತೀದೇವಿ.ಪಿ
ಭಾರತೀದೇವಿ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿದ್ದು ಈ ಸದ್ಯ ಹಾಸನದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ನಡೆ-ನುಡಿಗಳಲ್ಲಿ ಪ್ರಖರ ಬದ್ಧತೆ ತೋರಿದ ಹೋರಾಟಗಾರನ ಸಾಂಸ್ಕೃತಿಕ ಕಥನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...