ಕೇರಳದಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ ಉಚಿತವಾಗಿ ಲಭ್ಯವಾಗಲಿದೆ ಎಂಬ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆಯ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ಭಾನುವಾರ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿವೆ. ನಾಲ್ಕು ಉತ್ತರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಡಿಸೆಂಬರ್ 14 ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಚುನಾವಣಾ ಆಯೋಗದ ಮೆಟ್ಟಿಲೇರಿವೆ.
‘ಕೇರಳದ ಎಲ್ಲ ಜನರಿಗೂ ಕೊರೊನಾ ಲಸಿಕೆ ಉಚಿತವಾಗಿ ಲಭ್ಯವಾಗಲಿದೆ. ಲಸಿಕೆಗಾಗಿ ಹಣ ಪಡೆಯುವುದಿಲ್ಲ. ಇದು ಸರ್ಕಾರದ ನಿಲುವು’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಘೋಷಿಸಿದ್ದರು. ನಂತರದ ವಿರೋಧ ಪಕ್ಷಗಳ ಆರೋಪವನ್ನು ಆಡಳಿತಾರೂಡ ಸಿಪಿಐ (ಎಂ) ‘ಬಾಲಿಶ’ ಎಂದು ತಳ್ಳಿಹಾಕಿದೆ.
ಇದನ್ನೂ ಓದಿ: 60 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲು ಸಿದ್ದವಾಗಿರುವ ಭಾರತ
ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಕನ್ವೀನರ್ (UDF) ಎಂ.ಎಂ.ಹಸನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಮುಖ್ಯಮಂತ್ರಿಯವರ ಘೋಷಣೆ ಮಾದರಿ ಸಂಹಿತೆಯ ಉಲ್ಲಂಘನೆಯಾಗಿದೆ, ಡಿಸೆಂಬರ್ 14 ರಂದು ನಾಲ್ಕು ಉತ್ತರದ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ನಡೆಯಲಿದೆ. ಈ ಸಮಯದಲ್ಲಿ ಅಂತಹ ಘೋಷಣೆ ಮಾಡುವ ತುರ್ತು ಇರಲಿಲ್ಲ” ಎಂದು ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ.ಜೋಸೆಫ್ ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಆನ್‌ಲೈನ್ ದೂರು ದಾಖಲಿಸಿದ್ದಾರೆ.
ಬಿಜೆಪಿ ರಾಜ್ಯ ಮುಖ್ಯಸ್ಥ ಕೆ.ಸುರೇಂದ್ರನ್ ಕೂಡ ದೂರು ದಾಖಲಿಸಿದ್ದು, ತಮ್ಮ ದೂರಿನಲ್ಲಿ ಮುಖ್ಯಮಂತ್ರಿ ಇಂತಹ ಪ್ರಕಟಣೆಗಳ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇದು ಮಾದರಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಲಸಿಕೆ ಬಳಕೆಗೆ ಅನುಮತಿ ಕೋರಿದ ’ಸೀರಮ್ ಇನ್ಸ್ಟಿಟ್ಯೂಟ್’
ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಎ.ವಿಜಯರಾಘವನ್ ತ್ರಿಶೂರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಆರೋಪಗಳನ್ನು ‘ಬಾಲಿಶ’ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆ ರಾಜ್ಯದಲ್ಲಿ ನಡೆಯುತ್ತಿರುವ ಕೋವಿಡ್ -19 ಚಿಕಿತ್ಸಾ ವಿಧಾನದ ಮುಂದುವರೆದ ಭಾಗವಾಗಿದೆ ಎಂದು ಹೇಳಿದ್ದಾರೆ.
ಉಚಿತ ಲಸಿಕೆ ಘೋಷಣೆ ಮಾಡಿದ್ದ ಸಿಎಂ ಪಿಣರಾಯಿ ವಿಜಯನ್, ಕೇಂದ್ರದಿಂದ ರಾಜ್ಯಕ್ಕೆ ನೀಡಲಾಗುವ ಲಸಿಕೆಯ ಪ್ರಮಾಣವನ್ನು ಇನ್ನೂ ತಿಳಿದುಬಂದಿಲ್ಲ ಎಂದು ನಿನ್ನೆ ಹೇಳಿದ್ದರು.
ಭಾರತ್ ಬಯೋಟೆಕ್, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಫಿಜರ್ ಅಭಿವೃದ್ಧಿಪಡಿಸಿದ ಮೂರು ಕೋವಿಡ್ -19 ಲಸಿಕೆಗಳು ಭಾರತದ ಔಷಧ ನಿಯಂತ್ರಕದ ಸಕ್ರಿಯ ಪರಿಗಣನೆಯಲ್ಲಿದೆ. ಈಗಾಗಲೇ ಮಧ್ಯಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳು ತಮ್ಮ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಘೋಷಣೆಯನ್ನು ಮಾಡಿವೆ.


