Homeಕರ್ನಾಟಕನಮ್ಮ ಸಚಿವರಿವರು; ಬುದ್ಧ-ಬಸವ-ಅಂಬೇಡ್ಕರ್ "ಮಂತ್ರವಾದಿ" ಸತೀಶ್ ಜಾರಕಿಹೊಳಿ!

ನಮ್ಮ ಸಚಿವರಿವರು; ಬುದ್ಧ-ಬಸವ-ಅಂಬೇಡ್ಕರ್ “ಮಂತ್ರವಾದಿ” ಸತೀಶ್ ಜಾರಕಿಹೊಳಿ!

- Advertisement -
- Advertisement -

ಸಮಾಜಮುಖಿ-ಮೂರ್ತಿ ಭಂಜಕ ನೀತಿ-ನಿಲುವು ಮತ್ತು ನಿರ್ಧಾರಗಳಿಂದ ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಬಹುಚರ್ಚಿತ ರಾಜಕಾರಣಿ ಎನಿಸಿರುವ ಸತೀಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗಿದ್ದಾರೆ; ತನಗೆ ಪ್ರಾಪ್ತವಾಗುವ ಸಂಪತ್ತು ಮತ್ತು ಅಧಿಕಾರವನ್ನು ಶೋಷಿತ-ಅಸಹಾಯಕ-ಬಡ ಸಮುದಾಯದ ಮಂದಿ ಸ್ವಾವಲಂಬಿಗಳಾಗಿ ಬದುಕಲು ಸಹಕಾರವಾಗುವಂತೆ ಬಳಸುವ ಅಪರೂಪದ ರಾಜಕಾರಣಿ ಸತೀಶ್ ಜಾರಕಿಹೊಳಿ. ಹರಿತ ವೈಚಾರಿಕ ನಡೆ-ನುಡಿಯಿಂದ ಸತೀಶ್ ಜಾರಕಿಹೊಳಿಯವರ ಹಲವು ನಡೆನುಡಿಗಳು ಸನಾತನ ಲೋಕದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದೂ ಇದೆ! ಪರಿಶಿಷ್ಟ ಪಂಗಡದ ಪ್ರಭಾವಿ ಬೇಡ (ವಾಲ್ಮೀಕಿ) ಜನಾಂಗದ ಸತೀಶ್ ಜಾರಕಿಹೊಳಿ ಬುದ್ಧ-ಬಸವ-ಅಂಬೇಡ್ಕರ್ ತತ್ವ-ಸಿದ್ಧಾಂತ ಜಪಿಸುತ್ತಲೆ ಕರ್ನಾಟಕದ ರಾಜಕೀಯ ರಂಗದ ಮುಂಚೂಣಿಗೆ ಬಂದು ತಲುಪಿರುವುದು ಆಸಕ್ತಿದಾಯಕವಾಗಿದೆ.

ಪಿಯುಸಿವರೆಗೆ ಅಕಾಡೆಮಿಕ್ ಶಿಕ್ಷಣ ಮುಗಿಸಿರುವ ಸತೀಶ್ ಜಾರಕಿಹೊಳಿ ಪ್ರಖರ ವೈಚಾರಿಕತೆ ಮತ್ತು ದೂರದರ್ಶಿತ್ವವುಳ್ಳ ಜನಸಾಮಾನ್ಯರ ನಂಬಿಕಸ್ಥ ನಾಯಕ ಎಂಬುದನ್ನು ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಗೋಕಾಕ್‌ನ ಬೇಡ ಸಮುದಾಯದ ತಳಮಟ್ಟದ ಒಕ್ಕಲುತನ ಕುಟುಂಬದ ಲಕ್ಷ್ಮಣರಾವ್ ಜಾರಕಿಹೊಳಿಯ ಎರಡನೆ ಮಗ ಸತೀಶ್. ಸಾಂಪ್ರದಾಯಿಕ ಶಿಕ್ಷಣದ ಗಂಧವಿಲ್ಲದಿದ್ದರೂ ಲಕ್ಷ್ಮಣರಾವ್ ಜಾರಕಿಹೊಳಿ ವ್ಯಾವಹಾರಿಕವಾಗಿ ಚಾಕಚಕ್ಯತೆಯ ಧಾಡಸಿಯಾಗಿದ್ದರು. ಸೇಂಧಿ ಇಳಿಸುವ ಕಸಬು-ಮಾರಾಟ ಮತ್ತು ಸರಕಾರಿ ಸಾರಾಯಿ ಗುತ್ತಿಗೆಯಿಂದ ಅಪಾರ ಹಣ ಗಳಿಸಿದ್ದ ಲಕ್ಷ್ಮಣರಾವ್‌ರ ಐವರು ಮಕ್ಕಳು ಸಕ್ಕರೆ, ಸಿನೆಮಾ ಉದ್ಯಮದಲ್ಲಿ ಆ ಹಣ ತೊಡಗಿಸಿ ಪ್ರವರ್ಧಮಾನಕ್ಕೆ ಬಂದರೆನ್ನಲಾಗುತ್ತಿದೆ; ಕ್ರಮೇಣ ಗೋಕಾವಿಯ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಹಾರ ನಿಯಂತ್ರಿಸುವ ಮಟ್ಟಕ್ಕೂ ಬಂದರು.

ಲಕ್ಷ್ಮಣರಾವ್ ಜಾರಕಿಹೊಳಿ

ಸಾವಿರಾರು ಕಾರ್ಮಿಕರು ಕೆಲಸ ಮಾಡುವ ಗೋಕಾಕ್‌ನ ನೂಲಿನ ಗಿರಣಿಯ ಕಾರ್ಮಿಕ ಸಂಘಟನೆ ಮೇಲೆ ಹಿಡಿತ ಸಾಧಿಸುವಾತ ಸ್ಥಳೀಯ ಎಮ್ಮೆಲ್ಲೆಯಾಗುತ್ತಾನೆಂಬ ರಾಜಕೀಯ ವಾತಾವರಣ 1990ರ ದಶಕದ ಆಸುಪಾಸಿನಲ್ಲಿತ್ತು. ಆ ಸಂದರ್ಭದಲ್ಲಿ ಶಾಸಕನಾಗಿದ್ದ ಶಂಕರ್ ಕರಿನಿಂಗ್ ತಂಡ ಮತ್ತು ಲಕ್ಷ್ಮಣರಾವ್ ಜಾರಕಿಹೊಳಿ ಮಕ್ಕಳ ಬಳಗದ ಮಧ್ಯೆ ಗೋಕಾವಿ ಮಿಲ್ ಸಾಮ್ರಾಜ್ಯ ವಶಪಡಿಸಿಕೊಳ್ಳುವ ಘನಘೋರ ಯುದ್ಧ ನಡೆಯಿತು. ಭೀಭತ್ಸ ರಕ್ತಪಾತ-ಕೊಲೆಯಾಗಿ ಹೋಯಿತು. ಕಾನೂನು ಓದಲೆಂದು ಧಾರವಾಡ ಸೇರಿಕೊಂಡಿದ್ದ ಸತೀಶ್ ಮೇಲೆ ಕ್ರಿಮಿನಲ್ ಕೇಸು ದಾಖಲಾಯಿತು. ಈ ವ್ಯಾಜ್ಯದಿಂದಾಗಿ ಶಿಕ್ಷಣ ಮೊಟಕುಗೊಳಿಸಿದ ಸತೀಶ್ ಗೋಕಾಕ್‌ನಲ್ಲಿ ಸಕ್ಕರೆ ಕಾರ್ಖಾನೆ ವ್ಯವಹಾರ ಮತ್ತು ರಾಜಕಾರಣದಲ್ಲಿ ತೊಡಗಿಕೊಂಡರು.

ಬೆಳಗಾವಿ ಜಿಲ್ಲೆಯ ವಿವಿಧ ಸಂಘ-ಸಂಸ್ಥೆ, ವಿದ್ಯಾರ್ಥಿ ಸಂಘಟನೆ, ಸಹಕಾರಿ-ಸಕ್ಕರೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಸತೀಶ್ ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯರ ನಿಷ್ಠಾನುಯಾಯಿಯಾಗಿ ಜನತಾ ಪರಿವಾರದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಸಿದ್ದು ಅವರ ಬೆಂಬಲದಿಂದ 1998ರಲ್ಲಿ ವಿಧಾನ ಪರಿಷತ್ ಸದಸ್ಯರಾದ ಸತೀಶ್ ಜಾರಕಿಹೊಳಿ 2004ರಲ್ಲಿ ಮತ್ತೊಂದು ಅವಧಿಗೂ ಚುನಾಯಿತರಾದರು. ಜಿಲ್ಲೆಯ ಸಕ್ಕರೆ ಉದ್ಯಮ ಲಾಬಿಯ ಆಯಕಟ್ಟಿನ ನಾಯಕಾಗ್ರೇಸರಾದ ಸತೀಶ್, ಅಣ್ಣ ರಮೇಶ್ ಮತ್ತು ತಮ್ಮ ಬಾಲಚಂದ್ರ ಜಾರಕಿಹೊಳಿಗೂ ರಾಜಕೀಯ ನೆಲೆಯನ್ನು ಕಲ್ಪಿಸಿದರು ಎಂದು ಜಿಲ್ಲೆಯ ರಾಜಕಾರಣದ ಇತಿಹಾಸ ಬಲ್ಲವರು ಹೇಳುತ್ತಾರೆ. 2008, 2013 ಮತ್ತು 2018ರಲ್ಲಿ ಸತತ ಮೂರು ಬಾರಿ ಯಮಕನಮರಡಿ ಅಸೆಂಬ್ಲಿ ಕ್ಷೇತ್ರದಿಂದ ಶಾಸಕನಾಗಿ ಚುನಾಯಿತರಾದ ಸತೀಶ್ ಮೂರು ಬಾರಿಯೂ ಮೂರು ಸರಕಾರಗಳಲ್ಲಿ ಸಚಿವರಾಗಿದ್ದರು. ಈ ನಡುವೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವಾದರ್ಶಗಳನ್ನು ಅತಿಯಾಗಿ ಎದೆಗೊತ್ತಿಕೊಂಡಿದ್ದ ಸತೀಶ್ ಪ್ರಗತಿಪರರು ಮತ್ತು ವೈಚಾರಿಕ ಸಂಘಟನೆಗಳ ನಿಕಟಸಂಪರ್ಕ ಸಾಧಿಸಿದ್ದರು.

ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊದಲ ಸ್ಪೀಕರ್ ಯು.ಟಿ. ಖಾದರ್

ಈ ಹೊತ್ತಿಗೆ ಸತೀಶ್ ಜಾರಕಿಹೊಳಿಯವರಿಗೆ ತನ್ನ ಬೇಡ (ನಾಯಕ) ಸಮುದಾಯವೂ ಸೇರಿದಂತೆ ತಳ ಸಮುದಾಯಗಳ ಜನರು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿಯಲು ಮೂಢನಂಬಿಕೆ ಮತ್ತು ಗೊಡ್ಡು ಸನಾತನ ಸಂಪ್ರದಾಯ ಪಾಲನೆಯೇ ಪ್ರಮುಖ ಕಾರಣವೆಂಬುದು ಮನದಟ್ಟಾಗಿತ್ತು. ಅಹಿಂದ ವರ್ಗವನ್ನು ಮೌಢ್ಯದಿಂದ ಹೊರತರುವ ವಿಸ್ತೃತ ಕಾರ್ಯಯೋಜನೆಯನ್ನು ಹಮ್ಮಿಕೊಂಡರು; ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತ ಪ್ರಸಾರ ಮಾಡುವ ಟೀಮುಗಳನ್ನು ತಯಾರು ಮಾಡಿಸಿದರು. ವಿವಿಧ ಸಂಘಟನೆಗಳಿಗೆ ಉಚಿತ ವಸತಿ, ಊಟೋಪಚಾರ ಒದಗಿಸಿ ಪ್ರಗತಿಪರ ಚಿಂತನೆಯ ವಿಚಾರಸಂಕಿರಣ ನಡೆಸಿದರು; ತರಬೇತಿ ಕೊಡಿಸಿದರು. ನಿರುದ್ಯೋಗಿ ಯುವಕರಿಗೆ ಬದುಕಲು ಬೇಕಾದ ಜೀವನ ಕಸುಬಿನ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡಿದರು. ದೇವರ ಭಯದಲ್ಲಿ ಅಸಹಾಯಕ ಮಂದಿ ದಿಕ್ಕೆಡುವುದನ್ನು ತಪ್ಪಿಸುವ ಪ್ರಯತ್ನ ಮಾಡಿದರು. ಪೊಲೀಸ್, ಸೈನಿಕ, ಐಎಎಸ್, ಕೆಎಎಸ್ ಮುಂತಾದ ಸರಕಾರಿ ನೌಕರಿ ಪಡೆಯಲು ಬೇಕಾದ ಆರೆಂಟು ಕೋಚಿಂಗ್ ಸೆಂಟರ್ ತೆರೆದರು.

ವಿಚಾರವಾದಿ ರಾಜಕಾರಣಿ ಎಂದು ಪರಿಚಿತರಾಗಿರವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರಚಿತವಾಗಿರುವ “ಮಾನವ ಬಂಧುತ್ವ ವೇದಿಕೆ” ಬೆಳಗಾವಿ ಜಿಲ್ಲೆಯ ಗಡಿ ದಾಟಿ ಇತರ ಕೆಲವು ಜಿಲ್ಲೆಗಳಲ್ಲೂ ನೆಲೆಕಂಡಿದೆ. ಬಂಧುತ್ವ ಬೆಳೆಸುವ ಈ ವೇದಿಕೆಯ ಮೂಢನಂಬಿಕೆ ವಿರೋಧಿ ಅಭಿಯಾನ, ಸಹಿಷ್ಣುತೆ, ಸೌಹಾರ್ದತೆ, ಸಹಬಾಳ್ವೆ ಕುದುರಿಸುವ ಕಾರ್ಯಕ್ರಮಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಒಂದೆಡೆ ಮಾನವ ಬಂಧುತ್ವ ವೇದಿಕೆ ಅಸಮಾನತೆ, ಮೌಢ್ಯ, ಧರ್ಮ ದ್ವೇಷ, ದೇವರ ಭಯದ ಶೋಷಣೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೆ, ಸತೀಶ್ ಜಾರಕಿಹೊಳಿ ಖುದ್ದು ಸಾರ್ವಜನಿಕವಾಗಿ ಕಂದಾಚಾರಗಳನ್ನು ಧಿಕ್ಕರಿಸಿ ಮಾದರಿ ಆಗುತ್ತಿದ್ದಾರೆ. ವೈದಿಕ ಪಂಚಾಂಗ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನಿಷ್ಟ-ಅಶುಭವೆಂದು ಪರಿಗಣಿತವಾದ “ರಾಹುಕಾಲ”ದಲ್ಲಿಯೇ ತಮ್ಮ ಪ್ರಮುಖ ಮತ್ತು ಸವಾಲಿನ ಕೆಲಸ-ಕಾರ್ಯಕ್ಕೆ ಕೈಹಾಕುವ ಸತೀಶ್ ಜಾರಕಿಹೊಳಿ, ತನ್ನ ಮಗ ಮತ್ತು ಮಗಳನ್ನು ಕಟ್ಟಿಕೊಂಡು ಜತೆಗಾರರೊಂದಿಗೆ ಸ್ಮಶಾನದಲ್ಲಿ ರಾತ್ರಿ ವಾಸ್ತವ್ಯ ಮಾಡುವ ಕ್ರಾಂತಿಕಾರಕ ನಡೆಗೂ ಹೆಸರಾಗಿದ್ದಾರೆ.

2018ರ ಚುನಾವಣೆ ಹೊತ್ತಲ್ಲಿ ಸತೀಶ್ ಜಾರಕಿಹೊಳಿ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸಿ ಸ್ಮಶಾನದಿಂದ ಪ್ರಚಾರ ಶುರುಮಾಡಿದ್ದರು. ಅಷ್ಟೇ ಅಲ್ಲ ಕ್ಯಾಂಡಿಡೇಟ್ ಕ್ಷೇತ್ರದಲ್ಲಿ ಇಲ್ಲದಿದ್ದರೂ ಗೆಲ್ಲಬಹುದು ಎಂದು ತೋರಿಸುವ ಪ್ರಯತ್ನ ಮಾಡಿದ್ದರು. ಸತೀಶ್ ನಾಮಪತ್ರ ಸಲ್ಲಿಸಿದ ಮರುಕ್ಷಣವೆ ಸಿದ್ದರಾಮಯ್ಯನವರು ಸ್ಪರ್ಧಿಸಿದ್ದ ಬಾದಾಮಿಗೆ ಹೋಗಿ ಉಳಿದಿದ್ದರು; ಮತದಾನದ ದಿನ ಬಂದಿದ್ದ ಸತೀಶ್ ಆ ಚುನಾವಣೆಯಲ್ಲಿ 2,850 ಮತಗಳ ಕೂದಲೆಳೆ ಅಂತರದಲ್ಲಿ ಆಯ್ಕೆಯಾಗಿದ್ದರು. ಇದು ರಾಹುಕಾಲದ ಮಹಿಮೆ ಎಂದು ಸಂಪ್ರದಾಯವಾದಿ ಕರ್ಮಠರು ಜಾಗಟೆ ಬಾರಿಸಿದ್ದರೂ ಕೂಡ, ತಾನು ಕ್ಷೇತ್ರದಲ್ಲಿ ಇಲ್ಲದಿದ್ದರಿಂದ ಗೆಲುವಿನ ಅಂತರ ಕಡಿಮೆಯಾಗಿದೆ; ಮುಂದಿನ ಚುನಾವಣೆಯಲ್ಲಿ 50 ಸಾವಿರಕ್ಕಿಂತ ಹೆಚ್ಚು ಲೀಡ್‌ನಲ್ಲಿ ಗೆದ್ದುತೋರಿಸುತ್ತೇನೆ ಎಂದಿದ್ದರು.

ಕಳೆದ ವಾರ ಪ್ರಕಟವಾದ ಚುನಾವಣೆಯ ಫಲಿತಾಂಶದಲ್ಲಿ ಸತೀಶ್ ಜಾರಕಿಹೊಳಿ ತಮ್ಮ ಸಮೀಪದ ಬಿಜೆಪಿ ಪ್ರತಿಸ್ಪರ್ಧಿಯನ್ನು 57,211 ಮತದಿಂದ ಮಣಿಸಿ ಮೂಢನಂಬಿಕೆ “ಮಾಟಗಾರರ” ಬಂಡವಾಳ ಬಯಲುಗೊಳಿಸಿದ್ದಾರೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಈ ಸಲವೂ ಸತೀಶ್ ಚುನಾವಣಾ ನಾಮಪತ್ರವನ್ನು ರಾಹುಕಾಲದಲ್ಲಿಯೇ ಸಲ್ಲಿಸಿದ್ದರಷ್ಟೇ ಅಲ್ಲ, ಸ್ಮಶಾನದಿಂದಲೇ ಮತಯಾಚನೆಯ “ಶುಭ”ಕಾರ್ಯ ಆರಂಭಿಸಿದ್ದರು! ಕೆಲವು ತಿಂಗಳ ಹಿಂದೆ ನಿಪ್ಪಾಣಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸತೀಶ್ ಜಾರಕಿಹೊಳಿ “ಹಿಂದು” ಎಂಬ ಪದ ಪರ್ಶಿಯನ್ ಮೂಲದ್ದು; ಅದಕ್ಕೆ ಅಲ್ಲಿ ಅಶ್ಲೀಲ ಎಂಬರ್ಥವಿದೆ ಎಂದು ಹೇಳಿದ್ದು ಹಿಂದುತ್ವವಾದಿಗಳ ಕಣ್ಣು ಕೆಂಪಾಗಿಸಿತ್ತು. ಸಂಘ ಪರಿವಾರ ಸತೀಶ್‌ರನ್ನು ಸೋಲಿಸಲು ಸ್ಕೆಚ್ ಹಾಕಿತ್ತು. ಆದರೆ ಪ್ರವಾಹದ ವಿರುದ್ಧ ಈಜುವ ಕಲೆ ಕರಗತ ಮಾಡಿಕೊಂಡಿರುವ ಸತೀಶ್ ಭರ್ಜರಿ ಅಂತರದಲ್ಲಿಯೇ ಗೆದ್ದಿದ್ದಾರೆ.

ಸೈದ್ಧಾಂತಿಕ ಬದ್ಧತೆಯ ರಾಜಕಾರಣ ಮಾಡುತ್ತಿರುವ ಸತೀಶ್ 2013ರಲ್ಲಿ, ತಮ್ಮ “ಗುರು” ಸಿದ್ದು ಅಬಕಾರಿ ಖಾತೆ ವಹಿಸಿದಾಗ-ಇದು ತನಗೆ ಹೊಂದಿಕೆಯಾಗದ ಇಲಾಖೆ; ಜನರಿಗೆ ಸಾರಾಯಿ ಕುಡಿಸುವ ಕೆಲಸ ಮಾಡಲಾರೆ; ಬೇರೆ ಖಾತೆ ಕೊಡಿ ಎಂದು ತಗಾದೆ ತೆಗೆದು ಸಣ್ಣ ಕೈಗಾರಿಕಾ ಖಾತೆ ಪಡೆದುಕೊಂಡಿದ್ದರು. ಈಗ ಸತೀಶ್ ಯಾವ ಖಾತೆ ಪಡೆಯುತ್ತಾರೆ, ಸಿಕ್ಕ ಖಾತೆಯನ್ನು ಅಹಿಂದ ಹಿತಕ್ಕೆ ಹೇಗೆ ಬಳಸುತ್ತಾರೆಂಬ ಕುತೂಹಲ ಅವರು ಪ್ರತಿನಿಧಿಸುವ ಯಮಕನಮರಡಿ, ಬೆಳಗಾವಿ ಜಿಲ್ಲೆಗಳಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಮೂಡಿದೆ. ರಾಜಕೀಯ ಸ್ಥಾನಮಾನಕ್ಕಾಗಿ ಹೋರಾಡುವ “ಸಮನ್ವಯ” ಸಿದ್ಧಾಂತಿಗಳ ಹಾವಳಿಯ ಈ ಕಾಲಘಟ್ಟದಲ್ಲಿ ಪ್ರಖರ ವೈಚಾರಿಕತೆಯ ಸತೀಶ್ ಜಾರಕಿಹೊಳಿ ಶೋಷಿತ ಸಮದಾಯದ ಗಟ್ಟಿ ಧ್ವನಿಯ ಅಪರೂಪದ ರಾಜಕೀಯ ನಾಯಕನಾಗಿ ಕಾಣಿಸುತ್ತಿದ್ದಾರೆ.

ಇದನ್ನೂ ಓದಿ: ಬಿಕ್ಕಟ್ಟಿನಲ್ಲೂ ಸೆಕ್ಯುಲರ್ ಮೌಲ್ಯಗಳನ್ನು ಬಿಡದ ಎತ್ತರದ ನಾಯಕ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...