ಬಿಹಾರದ ಬಕ್ಸಾರ್ನ್ ಪ್ರದೇಶದಲ್ಲಿರುವ ಗಂಗಾ ನದಿ ತೀರದಲ್ಲಿ ಸೋಮವಾರ 100 ಕ್ಕೂ ಹೆಚ್ಚು ಉಬ್ಬಿರುವ, ಕೊಳೆಯುವ ಸ್ಥಿತಿಯಲ್ಲಿರುವ ಮೃತ ದೇಹಗಳು ತೇಲಿ ಬಂದಿದ್ದು, ಸ್ಥಳೀಯರಲ್ಲಿ ಕೊರೊನಾ ಹರಡುವ ಆತಂಕ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಉತ್ತರ ಪ್ರದೇಶದ ಮತ್ತು ಬಿಹಾರದ ಗಡಿಯಲ್ಲಿರುವ ಚೌಸಾ ಪಟ್ಟಣದಲ್ಲಿ 100 ಕ್ಕೂ ಹೆಚ್ಚು ಮೃತ ದೇಹಗಳು ಗಂಗಾ ನದಿಯಲ್ಲಿ ತೇಲುತ್ತಾ ನದಿ ದಡಗಳಲ್ಲಿ ರಾಶಿ ರಾಶಿಯಾಗಿ ಬಿದ್ದಿವೆ. ಈ ದೃಶ್ಯಗಳನ್ನು ಕಂಡ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.
ಈ ಮೃತದೇಹಗಳು ಉತ್ತರ ಪ್ರದೇಶದ ಕಡೆಯಿಂದ ತೇಲಿ ಬಂದಿದ್ದು, ಕೊರೊನಾ ಸೋಂಕಿತ ರೋಗಿಗಳಿಗೆ ಸೇರಿದವು ಎಂದು ಸ್ಥಳೀಯ ಆಡಳಿತ ಅನುಮಾನ ಪಟ್ಟಿದೆ. ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ಶವಸಂಸ್ಕಾರ ಮಾಡಲು ಅಥವಾ ಹೂಳಲು ಸ್ಥಳ ಸಿಗದೆ ನದಿಯಲ್ಲಿ ತೇಲಿ ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ: ಮೇ 17 ರವರೆಗೆ ಲಾಕ್‌ಡೌನ್, ಬಿಪಿಎಲ್ ಕುಟುಂಗಳಿಗೆ 5 ಸಾವಿರ ರೂ. ಪ್ಯಾಕೇಜ್
ಹೆಣಗಳು ತೇಲುತ್ತಿರುವ ಚೌಸಾದ ಮಹಾದೇವ ಘಾಟ್ ಬಳಿ ನಿಂತಿದ್ದ ಅಧಿಕಾರಿ ಅಶೋಕ್ ಕುಮಾರ್, “ಸುಮಾರು 40 ರಿಂದ 45 ಶವಗಳು ತೇಲುತ್ತಿರುವುದು ಕಂಡುಬಂದಿದೆ. ಶವಗಳನ್ನು ನದಿಗೆ ಎಸೆಯಲಾಗಿದೆ ಎಂದು ತೋರುತ್ತದೆ. ಕೆಲವು ಮಾಹಿತಿ ಪ್ರಕಾರ, 100 ಮೃತ ದೇಹಗಳಿರಬಹುದು” ಎಂದಿದ್ದಾರೆ.
“ಮೃತ ದೇಹಗಳು ನೀರಿನಲ್ಲಿ ಉಬ್ಬಿಕೊಳ್ಳುತ್ತವೆ. ಕನಿಷ್ಠ ಐದರಿಂದ ಏಳು ದಿನಗಳವರೆಗೆ ನೀರಿನಲ್ಲಿ ಇರುತ್ತವೆ. ಉತ್ತರ ಪ್ರದೇಶದ ಯಾವ ನಗರದಿಂದ ಇಲ್ಲಿಗೆ ಬಂದಿವೆ ಎಂದು ನಾವು ತನಿಖೆ ಮಾಡಬೇಕಾಗಿದೆ” ಎಂದು ಮತ್ತೊಬ್ಬ ಅಧಿಕಾರಿ ಕೆ.ಕೆ. ಉಪಾಧ್ಯಾಯ ಹೇಳಿದ್ದಾರೆ.
ಗಂಗಾ ನದಿಯಲ್ಲಿ ತೇಲುತ್ತಿರುವ ಮೃತ ದೇಹಗಳಿಂದ ಮತ್ತು ನದಿಯ ನೀರಿನ ಸೋಂಕಿನ ಬಗ್ಗೆ ಸ್ಥಳೀಯರಲ್ಲಿ ಮತ್ತು ಸುತ್ತಮುತ್ತಲಿನ ಇತರರಲ್ಲಿ ಕೊರೊನಾ ಆತಂಕದ ಭೀತಿ ಎದುರಾಗಿದೆ.
“ಜನರು ಕೊರೊನಾ ಹರಡುವ ಬಗ್ಗೆ ಭಯಭೀತರಾಗಿದ್ದಾರೆ. ನಾವು ಬೇಗ ಶವಗಳನ್ನು ಹೂಳಬೇಕು” ಎಂದು ಗ್ರಾಮಸ್ಥ ನರೇಂದ್ರ ಕುಮಾರ್ ಹೇಳಿದರು. “ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಬಂದು ಶವಗಳನ್ನು ನದಿಯಿಂದ ಸ್ವಚ್ಛಗೊಳಿಸಲು 500 ರೂಪಾಯಿಗಳನ್ನು ಪಾವತಿಸುವುದಾಗಿ ಹೇಳಿದ್ದಾರೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಂಗಾ ನದಿ ದಂಡೆಯಲ್ಲಿ ತೇಲುತ್ತಿರುವ ಈ ಮೃತ ದೇಹಗಳು ಉತ್ತರ ಪ್ರದೇಶ ಮತ್ತು ಬಿಹಾರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿವೆ.
ಇದನ್ನೂ ಓದಿ: ಸರ್ಕಾರ ಜನರ ಮೇಲೆ ದರ್ಪ ಪ್ರದರ್ಶಿಸುವುದು ಬಿಟ್ಟು ಪರಿಹಾರ ನೀಡಲಿ- ಎಚ್.ಡಿ.ಕುಮಾರಸ್ವಾಮಿ


