ಪಾಕಿಸ್ತಾನದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಇದರ ಪರಿಣಾಮವಾಗಿ 30 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪಾಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. “ಪಾಕಿಸ್ತಾನದ ಇತಿಹಾಸದಲ್ಲೆ ಅತ್ಯಂತ ತೀವ್ರವಾದ ಪ್ರವಾಹ ಉಂಟಾಗಿರುವುದರಿಂದ ಜಲಮೂಲ ರೋಗಗಳು ಮತ್ತು ಅಪೌಷ್ಟಿಕತೆಯ ಅಪಾಯ ಹೆಚ್ಚಾಗಿದೆ. ಮೂವತ್ತು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಾನವೀಯ ನೆರವಿನ ಅವಶ್ಯಕತೆಯಿದೆ” ಎಂದು ಯುನಿವೆಫ್ ಪ್ರಕಟಣೆ ತಿಳಿಸಿದೆ.
ಜುಲೈ ತಿಂಗಳ ಮಧ್ಯದಲ್ಲಿ ಪ್ರಾರಂಭವಾದ ಭಾರೀ ಮಳೆಯ ಪರಿಣಾಮ ದೇಶದಲ್ಲಿ ನೆರೆ ಉಂಟಾಗಿದೆ. ಇದರಿಂದಾಗಿ ದೇಶದಾದ್ಯಂತ 116 ಜಿಲ್ಲೆಗಳಲ್ಲಿ 3.3 ಕೋಟಿ ಜನರ ಮೇಲೆ ಪರಿಣಾಮ ಬೀರಿದೆ. ದೇಶದ 66 ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಗೊಳಗಾಗಿವೆ. “ನೆರೆ ಪೀಡಿತ ಪ್ರದೇಶಗಳಲ್ಲಿನ ಮಕ್ಕಳು ಮತ್ತು ಕುಟುಂಬಗಳ ತುರ್ತು ಅಗತ್ಯಗಳಿಗೆ ಸ್ಪಂದಿಸಲು ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳೊಂದಿಗೆ ಯುನಿಸೆಫ್ ಕೆಲಸ ಮಾಡುತ್ತಿದೆ” ಎಂದು ಹೇಳಿಕೆ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಭಾರಿ ನೆರೆಯ ಹಿನ್ನೆಲೆಯಲ್ಲಿ ಪಾಕಿಸ್ತಾನವು ಕಳೆದ ವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ನೆರವು ನೀಡಲು ಇತರ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಕರೆ ನೀಡಿದೆ.
ಇದನ್ನೂ ಓದಿ: 1,200 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯ ಜೀರ್ಣೋದ್ಧಾರ ಮಾಡಲಿರುವ ಪಾಕಿಸ್ತಾನ!
ಯುನಿಸೆಫ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಸರಿಸುಮಾರು 1.6 ಕೋಟಿ ಮಕ್ಕಳು ಸೇರಿದಂತೆ 3.3 ಕೋಟಿ ಜನರು ಪಾಕಿಸ್ತಾನದಲ್ಲಿ ಈ ವರ್ಷದ ಭಾರೀ ಮಾನ್ಸೂನ್ ಮಳೆಯಿಂದ ಪ್ರಭಾವಿತರಾಗಿದ್ದಾರೆ. ಮಳೆಯು ವಿನಾಶಕಾರಿಯಾಗಿದ್ದು, ಇದರಿಂದಾಗಿ ಪ್ರವಾಹ ಮತ್ತು ಭೂಕುಸಿತಗಳು ಉಂಟಾಗಿದೆ” ಎಂದು ತಿಳಿಸಿದೆ.
“ನೆರೆಯಿಂದಾಗಿ 350 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 1,100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, 1,600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 2.87 ಲಕ್ಷಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಮತ್ತು 6.62 ಮನೆಗಳು ಭಾಗಶಃ ನಾಶವಾಗಿವೆ” ಎಂದು ಯುನಿಸೆಫ್ ಹೇಳಿದೆ.
“ಕೆಲವು ಪ್ರಮುಖ ನದಿಗಳು ತಮ್ಮ ದಡಗಳನ್ನು ಮೀರಿ ಹರಿಯುತ್ತಿದ್ದು, ಅಣೆಕಟ್ಟುಗಳು ಉಕ್ಕಿ ಹರಿದಿವೆ. ಮನೆಗಳು, ತೋಟಗಳು, ರಸ್ತೆಗಳು, ಸೇತುವೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಸೇರಿದಂತೆ ನಿರ್ಣಾಯಕ ಮೂಲಸೌಕರ್ಯಗಳು ನಾಶವಾಗಿದೆ” ಎಂದು ಯುನಿಸೆಫ್ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: ವಿಡಿಯೊ ನೋಡಿ: ಭಾರತದ ರಾಷ್ಟ್ರಗೀತೆ ನುಡಿಸಿ ಶುಭಕೋರಿದ ಪಾಕಿಸ್ತಾನಿ ಸಂಗೀತಗಾರ
ಪ್ರವಾಹದ ಪ್ರಭಾವಕ್ಕೆ ಒಳಪಟ್ಟ ಪ್ರದೇಶಗಳಲ್ಲಿ 30% ದಷ್ಟು ನೀರಿನ ವ್ಯವಸ್ಥೆಗಳು ಹಾನಿಗೊಳಗಾಗಿವೆ ಎಂದು ಅಂದಾಜಿಸಲಾಗಿದೆ. ಅತಿಸಾರ ಮತ್ತು ನೀರಿನಿಂದ ಹರಡುವ ರೋಗಗಳು, ಉಸಿರಾಟದ ಸೋಂಕು ಮತ್ತು ಚರ್ಮ ರೋಗಗಳ ಪ್ರಕರಣಗಳು ಈಗಾಗಲೇ ವರದಿಯಾಗಿವೆ ಎಂದು ಯುನಿಸೆಫ್ ಹೇಳಿದೆ.
ಈಗಾಗಲೇ ನೆರೆ ಉಂಟಾಗಿರುವ ಪ್ರದೇಶಗಳಲ್ಲಿ ಭಾರೀ ಮಳೆಯು ಮುಂದುವರಿದಿರುವುದರಿಂದ ಅಪಾಯಕಾರಿ ಮಾನವೀಯ ಪರಿಸ್ಥಿತಿಯು ಮುಂದಿನ ದಿನಗಳು ಮತ್ತು ವಾರಗಳಲ್ಲಿ ಇನ್ನಷ್ಟು ಹದಗೆಡುತ್ತದೆ ಎಂದು ನಿರೀಕ್ಷಿಸಲಾಗಿದೆ.


