ಕೊರೊನಾ ಪರಿಹಾರ ನಿಧಿ ಸಂಗ್ರಹಿಸಲೆಂದು ಸರ್ಕಾರ PM-CARES ಸ್ಥಾಪಿಸಿದೆ. ಹಾಗಾಗಿ ಅದೊಂದು ಸರ್ಕಾರಿ ಟ್ರಸ್ಟ್ ಆಗಿದೆ. ಆದರೆ ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೊಸ ಆರ್‌ಟಿಐ ಅರ್ಜಿಗೆ ಸರ್ಕಾರ ಮಾಹಿತಿ ನೀಡಿದೆ.
ಸರ್ಕಾರ ತನ್ನ ವೆಬ್‌ಸೈಟ್‌ನಲ್ಲಿ ಖಾಸಗಿ ಎಂದು ಬರೆದುಕೊಂಡಿದ್ದನ್ನು ಪ್ರಶ್ನಿಸಿದ ಹೊಸ ಆರ್‌ಟಿಐ ಅರ್ಜಿಗೆ ಉತ್ತರಿಸುವಾಗ ಅದು ಉಲ್ಟಾ ಹೊಡೆದಿದೆ. ಖಾಸಗಿ ಮಾಧ್ಯಮ ಸಂಸ್ಥೆ ಸಲ್ಲಿಸಿರುವ ಆರ್‌ಟಿಐಗೆ ನೀಡಿರುವ ಪ್ರತ್ಯುತ್ತರದಲ್ಲಿ, PM-CARES “ಭಾರತ ಸರ್ಕಾರದ ಒಡೆತನದಲ್ಲಿದೆ, ಸರ್ಕಾರದಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಸರ್ಕಾರದಿಂದ ಸ್ಥಾಪಿಸಲ್ಪಟ್ಟಿದೆ” ಎಂದು ಹೇಳಿದೆ.
ಆದರೆ, PM-CARES ನಿಧಿಗೆ ಕಾರ್ಪೊರೇಟ್ ಸಂಸ್ಥೆಗಳು ದೇಣಿಗೆ ನೀಡಿರುವುದಕ್ಕಾಗಿ ಮಾಹಿತಿ ಹಕ್ಕು ಕಾನೂನಿನ (RTI) ಅಡಿಯಲ್ಲಿ ಬರುವುದಿಲ್ಲ ಎಂದು ಸರ್ಕಾರ ಸಮರ್ಥನೆ ನೀಡಿದೆ.
ಡಿಸೆಂಬರ್ 24 ರ ಆರ್‌ಟಿಐಗೆ ಉತ್ತರ ನೀಡಿರುವ ಟ್ರಸ್ಟ್, ’ ಈ ನಿಧಿಗೆ ವ್ಯಯಕ್ತಿಕವಾಗಿ ವ್ಯಕ್ತಿಗಳು, ಸಂಸ್ಥೆಗಳು, ಕಾರ್ಪೊರೇಟ್‌ಗಳು, ವಿದೇಶಿ ವ್ಯಕ್ತಿಗಳು, ವಿದೇಶಿ ಸಂಸ್ಥೆಗಳು ಸಂಪೂರ್ಣವಾಗಿ ದೇಣಿಗೆ, ಹಣಕಾಸು ಒದಗಿಸುತ್ತದೆ. ಈ ನಿಧಿಗೆ ಸರ್ಕಾರ ಹಣಕಾಸು ಒದಗಿಸುವುದಿಲ್ಲ. ಹೀಗಾಗಿ ಖಾಸಗಿ ವ್ಯಕ್ತಿಗಳು ಇದರ ಟ್ರಸ್ಟಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 2 (h) ಪ್ರಕಾರ ಈ ನಿಧಿಯನ್ನು ಸಾರ್ವಜನಿಕ ಪ್ರಾಧಿಕಾರವೆಂದು ಪರಿಗಣಿಸಲಾಗುವುದಿಲ್ಲ’ ಎಂದು ಹೇಳಿದೆ.
ಇದನ್ನೂ ಓದಿ: ‘PM-CARES’ ಖಾಸಗಿ ನಿಧಿ- ದಾಖಲೆಗಳು ಬಿಚ್ಚಿಟ್ಟ ವೈರುಧ್ಯ!, ದೇಶಕ್ಕೆ ಇಷ್ಟು ದೊಡ್ಡ ಸುಳ್ಳು ಹೇಳಿದರೇ ಮೋದಿ?
ಪ್ರಧಾನಮಂತ್ರಿ ಅಧ್ಯಕ್ಷರಾಗಿರುವ PM-CARES ಟ್ರಸ್ಟ್‌ನ ನಿಧಿಯನ್ನು ದೆಹಲಿಯ ಕಂದಾಯ ಇಲಾಖೆಯಲ್ಲಿ ನೋಂದಾಯಿಸಲಾಗಿದೆ. ಆದರೆ ಸಾರ್ವಜನಿಕಗೊಂಡಿರುವ ಟ್ರಸ್ಟ್‌ನ ದಾಖಲೆ ಪತ್ರವು ಇದನ್ನು ಸರ್ಕಾರಿ ಟ್ರಸ್ಟ್ ಎಂದು ಹೇಳುವುದಿಲ್ಲ.
ಮಾರ್ಚ್ 27 ರಂದು ಈ ಟ್ರಸ್ಟ್ ನೋಂದಾಯಿಸಲಾಗಿದ್ದು, ಮಾರ್ಚ್ 28 ರಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಕಾರ್ಪೊರೇಟ್ ದೇಣಿಗೆ ಸ್ವೀಕರಿಸಲು ”ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ” (CSR)ಯ ಅರ್ಹತೆ ಇರುವ ಜ್ಞಾಪಕ ಪತ್ರವನ್ನು PM-CARESಗೆ ನೀಡಿತ್ತು.
ಪಿಎಂ ಕೇರ್ಸ್‌ನ ಅಧಿಕೃತ ದಾಖಲೆಗಳಲ್ಲಿ ವಿರೋಧಾಭಾಸವು ಹೊರಹೊಮ್ಮಿದ ನಂತರ ನಿಧಿಯ ಬಗೆಗಿನ ಗೊಂದಲ ಹೆಚ್ಚಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ತುರ್ತು ಪರಿಸ್ಥಿತಿಯಲ್ಲಿ ಈ ನಿಧಿಯನ್ನು ಬಳಸುವ ಸಲುವಾಗಿ ವಿವಿಧ ದಾನಿಗಳಿಂದ ದೇಣಿಗೆ ಪಡೆಯುವ ಸರ್ಕಾರಿ ಘಟಕವೆಂದು ಪಿಎಂ ಕೇರ್ಸ್ ಸ್ಥಾಪಿಸಲಾಗಿತ್ತು.
ಇದನ್ನೂ ಓದಿ: ಪಿಎಂ ಕೇರ್ಸ್ ಮಾಹಿತಿ ನೀಡುವುದರಿಂದ ಸಂಪನ್ಮೂಲಗಳು ದಿಕ್ಕುತಪ್ಪುತ್ತದೆ: ಪಿಎಂಒ
ಪಿಎಂ ಕೇರ್ಸ್ ಬಗ್ಗೆ ಟ್ರಸ್ಟ್ ಹೇಳುವ ವಿಚಾರಕ್ಕೂ, ಸರ್ಕಾರ ನೀಡುವ ಉತ್ತರಕ್ಕೂ ಸಾಕಷ್ಟು ಗೊಂದಲಗಳಿವೆ. ಸರ್ಕಾರ ಈಗ ಇದು ಸಾರ್ವಜನಿಕ ನಿಧಿ ಎಂದು ಹೇಳುತ್ತಲೇ ಮಾಹಿತಿ ಹಕ್ಕನ್ನೂ ನಿರಾಕರಿಸಿದೆ. ಇದು ಮೊದಲೇನು ಅಲ್ಲ, ಕೋಟ್ಯಾಂತರ ರೂಪಾಯಿ ಹರಿದು ಬಂದಿರುವ ಪಿಎಂ ಕೇರ್ಸ್ ಬಗ್ಗೆ ಒಂದು ಚಿಕ್ಕ ಮಾಹಿತಿಯನ್ನು ಕೇಂದ್ರ ಸರ್ಕಾರ ಬಿಟ್ಟು ಕೊಡುತ್ತಿಲ್ಲ.
ಪಿಎಂ ಕೇರ್ಸ್ ನಿಧಿಯ ಬಳಕೆ ಬಗ್ಗೆ ಮಾಹಿತಿ ಕೇಳಿ ಹಲವಾರು ಅರ್ಜಿಗಳು ದಾಖಲಾಗಿರುವ ಪ್ರತಿ ಬಾರಿಯೂ, ಅಂತಹ ಮಾಹಿತಿ ಒದಗಿಸುವುದು “ಕಚೇರಿಯ ಸಂಪನ್ಮೂಲಗಳ ಅಸಮರ್ಪಕ ತಿರುವಿಗೆ” ಕಾರಣವಾಗುತ್ತದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಹೇಳಿದೆ.
ಆರ್‌ಟಿಐ ಕಾಯ್ದೆಯ ಸೆಕ್ಷನ್ 7 (9) ಮತ್ತು ಹೈಕೋರ್ಟ್, ಕೇಂದ್ರ ಮಾಹಿತಿ ಆಯೋಗದ ತೀರ್ಪುಗಳ ಹೊರತಾಗಿಯೂ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಪಿಎಂಒ ಕಚೇರಿ ಹೇಳುತ್ತಲೇ ಇದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಎಡಪಕ್ಷಗಳೊಂದಿಗೆ ‘ಕೈ’ ಜೋಡಿಸಲು ಒಪ್ಪಿಗೆ – ಅಧೀರ್ ಚೌಧರಿ


