ಇವನ ಹೆಸರು ಮಹೇಶ್ ವಿ. ಹೆಗ್ಡೆ. ಸೋಕಾಲ್ಡ್ ದೇಶಭಕ್ತರ ಸುಳ್ಳಿನ ಕಾರ್ಖಾನೆಯಂತಿರುವ `ಪೋಸ್ಟ್ ಕಾರ್ಡ್’ನ ಸಂಸ್ಥಾಪಕ ಕಂ ಸಂಪಾದಕ. ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾ, ನೆಹರೂ ಚಾರಿತ್ರ್ಯ ಹರಣದ ಜೊತೆಗೆ ಹಿಂದೂ-ಮುಸ್ಲಿಂ ಸಹಬಾಳ್ವೆಗೆ ವಿಷ ಹಿಂಡುವುದೇ ಸದರಿ ಪೋಸ್ಟ್‍ಕಾರ್ಡ್ ಹೆಗ್ಡೆಯ ಒನ್ ಅಂಡ್ ಓನ್ಲಿ ಉದ್ದೇಶ. ಜೊತೆಗೆ ಮೋದಿ ಭಜನೆಯನ್ನು ಯಾವತ್ತೂ ತಪ್ಪಿಸಿಲ್ಲ. ಕನಸಿನಲ್ಲೂ ಬಿಜೆಪಿ ಜಪ ಮಾಡುವ ಇಂತಿಪ್ಪ ಹೆಗ್ಡೆ ಮಹಾಶಯ, ಅದೇ ಬಿಜೆಪಿ ಬೆನ್ನಿಗೆ ಚೂರಿ ಹಾಕಲು ಹೊರಟಿದ್ದ ಅನ್ನೋ ಮಾತು ಕೇಳಿದರೆ ಎಂತವರಿಗೂ ಶಾಕ್ ಆಗದೆ ಇರದು. ಆದರೆ ಈತ ಇಂತಹದ್ದೊಂದು ಪ್ರಸ್ತಾವನೆ ಹಿಡಿದುಕೊಂಡು ಅಲೆದಾಡಿದ್ದು ಮಾತ್ರ ಸತ್ಯ.
ಅದು 2018. ಕರ್ನಾಟಕವು ಅಸೆಂಬ್ಲಿ ಎಲೆಕ್ಷನ್ ತಯಾರಿಯಲ್ಲಿದ್ದ ಕಾಲ. ಆಗ ಈ ಮಹೇಶ್ ಹೆಗ್ಡೆ ಒಂದು ಯಡವಟ್ಟು ಮಾಡಿಕೊಂಡ. 2018ರ ಮಾರ್ಚ್ 18ರಂದು ಗಾಯಗೊಂಡು ಕುಳಿತಿದ್ದ ಜೈನ ಮುನಿಯೊಬ್ಬರ ಫೋಟೊ ಅಪ್‍ಲೋಡ್ ಮಾಡಿದ್ದ ಹೆಗ್ಡೆ, “ಈ ಜೈನಮುನಿಯ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ. ಸಿದ್ರಾಮಯ್ಯನವರ ಸರ್ಕಾರದಲ್ಲಿ ಯಾರೂ ಸೇಫ್ ಅಲ್ಲ” ಎಂಬ ಕಮೆಂಟ್ ಬರೆದು, ಅದನ್ನು ತನ್ನ ವೈಯಕ್ತಿಕ ಮತ್ತು ಪೋಸ್ಟ್ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ.

ಆದರೆ ವಾಸ್ತವದಲ್ಲಿ, ಯಾವ ಮುಸ್ಲಿಂ ಹುಡುಗರೂ ಜೈನ ಮುನಿ ಮೇಲೆ ಹಲ್ಲೆ ಮಾಡಿರಲಿಲ್ಲ. ಆ ಫೋಟೊದಲ್ಲಿ ಇದ್ದ ಜೈನ ಮುನಿ ಮಯಾಂಕ್ ಸಾಗರ್ ಅವರು ತಮ್ಮ ಅನುಯಾಯಿಯ ಜೊತೆ ಕನಕಪುರದ ಬಳಿ ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದಾಗ, ಯಾವನೋ ಕುಡಿದ ಮತ್ತಿನಲ್ಲಿದ್ದ ಬೈಕ್ ಸವಾರನೊಬ್ಬ ಬಂದು ಗುದ್ದಿದ್ದ. ಕೆಳಕ್ಕೆ ಬಿದ್ದ ಮಯಾಂಕ್ ಸಾಗರ್ ಅವರಿಗೆ ತೋಳು ಮತ್ತು ಮೊಣಕೈಗೆ ಗಾಯವಾಗಿತ್ತು. ಹೀಗೆ ತಮ್ಮ ಗುರುಗಳಿಗೆ ಸಣ್ಣ ರಸ್ತೆ ಅಪಘಾತವಾಗಿ ಗಾಯಗೊಂಡ ಸುದ್ದಿಯನ್ನು ಜೈನ ಪ್ರಕಟಣೆಯೊಂದು ಮಾರ್ಚ್ 13ರಂದೇ ತನ್ನ ಪಬ್ಲಿಕೇಷನ್‍ನಲ್ಲಿ ಪ್ರಕಟಿಸಿತ್ತು. ಆ ಫೋಟೊ ಯಥಾವತ್ ಎತ್ತಿಕೊಂಡ ಹೆಗ್ಡೆ ಸತ್ಯ ಏನು ಅಂತ ಗೊತ್ತಿದ್ದರೂ ಸುಳ್ಳಿನ ಒಗ್ಗರಣೆ ಹಾಕಿ ಹರಿಬಿಟ್ಟಿದ್ದ. ಎಲೆಕ್ಷನ್ ಹೊಸ್ತಿಲಲ್ಲಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಷ್ಟೇ ಅವನ ಉದ್ದೇಶವಾಗಿತ್ತು.
ಇವನ ಇಂಥಾ ಫೇಕು ಸಮಾಚಾರಗಳಿಂದ ಸಾಕಷ್ಟು ರೋಸಿಹೋಗಿದ್ದ ಖಡಕ್ ಪೊಲೀಸ್ ಆಫೀಸರ್ ಹೇಮಂತ್ ನಿಂಬಾಳ್ಕರ್ ಅವರು ಸುಳ್ಳು ಸುದ್ದಿ ಮೂಲಕ ಧರ್ಮಗಳ ನಡುವೆ ಸಂಘರ್ಷ ತಂದಿಡಲು ಯತ್ನಿಸಿದ ಆರೋಪದ ಮೇಲೆ ಮಾರ್ಚ್ 29ರಂದು ಇವನನ್ನು ಅರೆಸ್ಟ್ ಮಾಡಿ ಜೈಲಿಗೆ ಗದುಮಿದ್ದರು. ಎಲೆಕ್ಷನ್ ಮೈಲೇಜ್ ಗಿಟ್ಟಿಸಲು ಬಿಜೆಪಿ ಲೀಡರ್‌ಗಳು ಮಹೇಶ್ ಹೆಗ್ಡೆಯ ಬಂಧನವನ್ನು ಖಂಡಿಸಿ, ಸಿದ್ರಾಮಯ್ಯನ ಸರ್ಕಾರ ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡುತ್ತಿದೆ ಎಂಬ ಬಾಯ್ಮಾತಿನ ಹೇಳಿಕೆ ಕೊಟ್ಟು, ಟ್ವಿಟ್ಟರ್ ಕಮೆಂಟ್ ಹಾಕಿ ಸುಮ್ಮನಾದರೆ ವಿನಾಃ ಯಾರೊಬ್ಬರು ಆತನನ್ನು ಹೊರಗೆ ತರುವ ಕಾಳಜಿ ತೋರಲಿಲ್ಲ! ಸಂಘ ಪರಿವಾರದವರು ಇವನತ್ತ ತಿರುಗಿ ನೋಡಲಿಲ್ಲ. ಬಿಜೆಪಿ ಮೇಲೆ ಮಹೇಶ್ ಹೆಗ್ಡೆಗೆ ಸಣ್ಣದಾಗಿ ಸಿಟ್ಟು ಶುರುವಾದದ್ದೇ ಆಗ.
ಜೊತೆಗೆ, ಮೂಲತಃ ಮೂಡಬಿದ್ರೆಯವನಾದ ಮಹೇಶ್ ಹೆಗ್ಡೆಗೆ 2018ರ ಎಲೆಕ್ಷನ್‍ನಲ್ಲಿ ಮೂಡಬಿದರೆ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವ ಆಶ್ವಾಸನೆಗಳು ಕೇಂದ್ರ ನಾಯಕರ ಮಟ್ಟದಿಂದಲೇ ಲಭಿಸಿದ್ದವು. ಅದಕ್ಕಾಗಿಯೇ ಆತ ಸತತವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಗ್ಗಿಲ್ಲದೆ ಫೇಕ್‍ನ್ಯೂಸ್ ಹರಡುತ್ತಲೇ ಬಂದಿದ್ದ. ಆದರೆ ಕೊನೇ ಕ್ಷಣಗಳಲ್ಲಿ ಟಿಕೆಟ್ ಈತನ ಕೈತಪ್ಪಿ, 2013ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಅಭಯಚಂದ್ರರ ವಿರುದ್ಧ ಕಡಿಮೆ ಅಂತರದಲ್ಲಿ ಸೋತಿದ್ದ ಬಿಜೆಪಿಯ ಉಮಾಕಾಂತ ಕೋಟ್ಯಾನ್ ಅವರಿಗೇ ದಕ್ಕುವ ಲಕ್ಷಣಗಳು ಗೋಚರಿಸಲು ಶುರುವಾಗಿದ್ದವು. ಇದು ಕೂಡಾ ಬಿಜೆಪಿ ನಾಯಕರ ಮೇಲೆ ಮಹೇಶ್ ಹೆಗ್ಡೆಯ ಸಿಟ್ಟು ಉಲ್ಬಣಿಸುವಂತೆ ಮಾಡಿತ್ತು.

ಆಗಲೇ ಅವನು ರಾಜ್ಯ ಬಿಜೆಪಿ ಲೀಡರುಗಳಿಗೆ ತಕ್ಕ ಪಾಠ ಕಲಿಸುವ ಸಾಹಸಕ್ಕೆ ಕೈಹಾಕಿದ್ದು. ಆ ಕ್ಷಣಕ್ಕೆ ಅವನಿಗೆ ಥಟ್ಟನೆ ನೆನಪಾದದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟುರವರು. ತನಗೆ ಗುರುಗಳೂ ಆಗಿದ್ದ, ತುಮಕೂರು ವಿಶ್ವವಿದ್ಯಾಲಯದ ಪ್ರಾಚಾರ್ಯರೊಬ್ಬರು ಮಟ್ಟು ಅವರ ಆಪ್ತರಾಗಿರುವ ವಿಚಾರ ತಿಳಿದುಕೊಂಡ ಅವನು ಅವರನ್ನು ಅಪ್ರೋಚ್ ಮಾಡಿದ್ದ. “ತನ್ನ ಬಳಿ ರಾಜ್ಯ ಬಿಜೆಪಿ ನಾಯಕರ ಬಣ್ಣ ಬಯಲು ಮಾಡುವ ಸಾಕಷ್ಟು ಸೀಕ್ರೇಟ್ ಡಾಕ್ಯುಮೆಂಟ್‍ಗಳು ಮತ್ತು ರಹಸ್ಯ ಸಿಡಿಗಳು ಇವೆ. ಅವೇನಾದರು ಈ ಸಂದರ್ಭದಲ್ಲಿ ಹೊರಬಂದರೆ, ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಬಿಜೆಪಿ ಧೂಳೀಪಟವಾಗೋದು ಖಂಡಿತ. ನನಗೆ ಬೇಕಾದ ಫೇವರ್ ನಿಮ್ಮ ಕಡೆಯಿಂದ ಆಗುವುದಾದರೆ, ನಾನು ಅಷ್ಟೂ ಡಾಕ್ಯುಮೆಂಟ್‍ಗಳನ್ನು ನಿಮಗೆ ಕೊಡಲು ರೆಡಿ” ಎಂಬ ಸಂದೇಶವನ್ನು ಮಟ್ಟು ಅವರಿಗೆ ತಲುಪಿಸುವಂತೆ ತನ್ನ ಮೇಷ್ಟ್ರನ್ನು ಅಂಗಲಾಚಿದ್ದ.
ಆ ಮೇಷ್ಟ್ರು ತನ್ನ ಶಿಷ್ಯನ ಸಂದೇಶವನ್ನು ಅಮೀನ್‍ಮಟ್ಟು ಅವರಿಗೆ ಯಥಾವತ್ ತಲುಪಿಸಿದ್ದರು. ಸಮಯಸಾಧಕ ಮಹೇಶ್ ಹೆಗ್ಡೆಯ ಈ ಆಫರ್‌ಗೆ ಸಕಾರಾತ್ಮಕವಾಗಿ ಸ್ಪಂದಿಸುವುದಕ್ಕೆ ಮಟ್ಟು ಅವರಿಗೆ ಮನಸ್ಸಾಗಲೇ ಇಲ್ಲ. ಆದರೆ ಈ ಮೇಷ್ಟ್ರು-ಶಿಷ್ಯನ ಜೋಡಿ ಸೇರಿಕೊಂಡು ಚುನಾವಣೆಯ ಹೊತ್ತಲ್ಲಿ ತನ್ನ ಮೂಲಕ ಸಿದ್ರಾಮಯ್ಯನವರನ್ನೂ ಟ್ರ್ಯಾಪ್ ಮಾಡಲು ಏನಾದರು ಹುನ್ನಾರ ಹೆಣೆದಿದ್ದಾರಾ ಎಂಬ ಸಣ್ಣ ಅನುಮಾನ ಶುರುವಾಯ್ತು. ಅದನ್ನು ಬಗೆಹರಿಸಿಕೊಳ್ಳುವ ಸಲುವಾಗಿ, “ಅದೇನು ದಾಖಲೆಗಳಿವೆಯೋ ಅವುಗಳ ವಿವರವನ್ನು ನಮ್ಮ ಕಡೆಯವರು ಯಾರಿಗಾದರು ವಿವರವಾಗಿ ತಿಳಿಸಲಿ, ಆಮೇಲೆ ನೋಡೋಣ. ಆದರೆ ನಾನಂತು ಖಂಡಿತ ಆತನ ಜೊತೆ ಮಾತುಕತೆಗೆ ಬರಲ್ಲ” ಎಂಬ ಜಾಣ ಸಂದೇಶ ರವಾನಿಸಿದ್ದರು.
ಆದರೆ ಅಮೀನ್‍ಮಟ್ಟು ಅವರೇ ಖುದ್ದಾಗಿ ಬರಲಿ ಅನ್ನುತ್ತಿದ್ದಾನೆ ಎಂದು ಪ್ರಾಚಾರ್ಯರು ಪ್ರತಿಸಂದೇಶ ತಂದಾಗ ಮಟ್ಟು ಅವರು ವಿಶೇಷ ಆಸಕ್ತಿ ತೋರಲಿಲ್ಲ. ಅದೇ ವೇಳೆಗೆ ಚುನಾವಣಾ ಪ್ರಚಾರಕ್ಕೆಂದು ಬಿಜೆಪಿಯ ಅಮಿತ್ ಶಾ ಬೆಳಗಾವಿಗೆ ಆಗಮಿಸಿದ್ದರು. ಆರಂಭದಿಂದಲೂ ಮಹೇಶ್ ಹೆಗ್ಡೆಗೆ ಬೆಂಬಲ ನೀಡುತ್ತಾ ಬಂದಿದ್ದ ಉತ್ತರ ಕರ್ನಾಟಕದ ಬಿಜೆಪಿ ನಾಯಕರೊಬ್ಬರ ಕಾಳಜಿಯಿಂದ ಅಮಿತ್ ಶಾ ಸಮ್ಮುಖದಲ್ಲೆ ಹೆಗ್ಡೆಯ ಸಿಟ್ಟನ್ನೆಲ್ಲ ಶಮನ ಮಾಡಲಾಗಿತ್ತು. ಹಾಗೆ ನೋಡಿದರೆ, ಸೋಶಿಯಲ್ ಮೀಡಿಯಾ ಪ್ರಚಾರ ವೈಖರಿಯನ್ನೆ ಅತಿಯಾಗಿ ಅವಲಂಬಿಸಿರುವ ಅಮಿತ್ ಶಾ ಸ್ಥಳೀಯ ರಾಜಕೀಯ ನಾಯಕರುಗಳ ಸಂಪರ್ಕಕ್ಕಿಂತ ಇಂತಹ ಫೇಕುವಾಲಾಗಳ ಸಂಪರ್ಕವನ್ನೇ ಹೆಚ್ಚಾಗಿ ಇಟ್ಟುಕೊಂಡಿರುತ್ತಾರೆ ಎಂಬ ಮಾತಿದೆ. ತಾನು ನೇರವಾಗಿ ಅಮಿತ್ ಶಾ ಅವರ ಸಂಪರ್ಕದಲ್ಲೇ ಇದ್ದೇನೆ ಎಂದು ಈತನೂ ಆಗಾಗ್ಗೆ ಹೇಳಿಕೊಂಡು ಓಡಾಡಿದ್ದುಂಟು. ಆ ಸಂಧಾನದ ನಂತರ ಆತನ ಹಳೇ ಪ್ರಸ್ತಾಪವನ್ನಿಡಿದು ಅವನ ಮೇಷ್ಟ್ರು, ಮಟ್ಟು ಅವರತ್ತ ಬರಲಿಲ್ಲ. ಒಂದುವೇಳೆ, ಬೆಳಗಾವಿಯಲ್ಲಿ ಹೆಗ್ಡೆಯ ಸಿಟ್ಟು ಶಮನವಾಗದಿದ್ದರೆ ಅದ್ಯಾವ್ಯಾವ ಬಿಜೆಪಿ ನಾಯಕರ ಬೆನ್ನಿಗೆ ಚೂರಿ ಇರಿಯುತ್ತಿದ್ದನೋ, ದೇವರೇ ಬಲ್ಲ!? ಅಥವಾ ಹಲವರು ಅನುಮಾನಿಸುತ್ತಿರುವಂತೆ ಆ ಪ್ರಾಚಾರ್ಯರೇ ಹೂಡಿದ್ದ `ಆಟ’ವಾ ಇದು!? ಪ್ರಶ್ನೆಗಳಂತೂ ಇವೆ…..

ಆರಂಭದಲ್ಲಿ, ಬೆಂಗಳೂರಿನ ಮಡಿವಾಳ ಮಸೀದಿಯ ಹಿಂಭಾಗದಲ್ಲಿ ಪುಟ್ಟ ವಾಟರ್ ಪ್ಯೂರಿಫಯರ್ ಏಜೆನ್ಸಿ ಅಂಗಡಿ ಇಟ್ಟುಕೊಂಡಿದ್ದ ಮಹೇಶ್ ಹೆಗ್ಡೆ ಬಹಳ ಸಭ್ಯಸ್ಥ ಸೋಗಿನ ಮಹಾ ಸಮಯಸಾಧಕ. ಇವತ್ತು ಮುಸ್ಲಿಂ ಸಮುದಾಯದ ಮೇಲೆ ಇಲ್ಲಸಲ್ಲದ ಫೇಕ್‍ನ್ಯೂಸ್ ಹರಿಬಿಟ್ಟು ವಿಷಕಾರುವ ಈತನ ಆ ಹಳೇ ದುಖಾನಿನಲ್ಲಿ ಮುಕ್ಕಾಲು ಪಾಲು ಕೆಲಸಗಾರರು ಮುಸ್ಲಿಂ ಹುಡುಗರೇ ಆಗಿದ್ದರು. ಅದೂ ಕರಾವಳಿಯಿಂದ ಕರೆತಂದಿದ್ದ ಬ್ಯಾರೀ ಹುಡುಗರು! ಆಗೆಲ್ಲ ಆ ಮುಸ್ಲಿಂ ಹುಡುಗರ ಬಗ್ಗೆ ಬಹಳ ಕಾಳಜಿ ತೋರುತ್ತಿದ್ದ. ಅಷ್ಟೇನು ವ್ಯವಹಾರಸ್ಥನಲ್ಲದ ಹೆಗ್ಡೆ ಸಿಕ್ಕಾಪಟ್ಟೆ ಲಾಸ್ ಮಾಡಿಕೊಂಡು ಕೈಸುಟ್ಟುಕೊಂಡ. ಆಮೇಲೆ ವಿವೇಕ್ ಶೇಣವಾ ಎಂಬಾತನ ಜೊತೆ ಸೇರಿಕೊಂಡು ಒಂದು ನೀರಿನ ಶುದ್ಧೀಕರಣ ಘಟಕವನ್ನೂ ಆರಂಭಿಸಿದ. ಅಲ್ಲೂ ಶ್ಯಾನೆ ಲಾಸ್‍ಗೆ ಕಾರಣನಾದ. ಆಗ ಶೇಣವಾ ಈತನನ್ನು ಹೊರದಬ್ಬಿದ. ಮೊದಲ ಬಾರಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಅದೇಗೊ ವಶೀಲಿಬಾಜಿ ನಡೆಸಿ ಸಮಸ್ತ ಉತ್ತರ ಕರ್ನಾಟಕದ ಶುದ್ಧ ಕುಡಿಯುವ ನೀರಿನ ಆರ್.ಒ. ಘಟಕಗಳ ಸ್ಥಾಪನೆಯ ಕಾಂಟ್ರ್ಯಾಕ್ಟು ಗಿಟ್ಟಿಸಿಕೊಂಡ. ಅಲ್ಲೂ ನೆಟ್ಟಗೆ ನಿಲ್ಲಲಿಲ್ಲ. ಕೊನೆಗೆ ಇವನ ಪರಿಸ್ಥಿತಿ ನೋಡಲಾಗದೆ ಮುಂಬೈನಲ್ಲಿ ಹೊಟೇಲ್ ಉದ್ಯಮಿಯಾಗಿರುವ ಇವರ ಅಣ್ಣ ದಮನ್‍ನಲ್ಲಿ ಇವನಿಗೆಂದು ಹೊಟೇಲ್ ಹಾಕಿಕೊಟ್ಟರು. ಅದನ್ನೂ ನೆಟ್ಟಗೆ ನಿಭಾಯಿಸಲಿಲ್ಲ. ಕೊನೆಗೆ ಈತ ಸಕ್ಸಸ್‍ನ ಸೂತ್ರ ಕಂಡುಕೊಂಡದ್ದು ಸಮಾಜಕ್ಕೆ ವಿಷವಿಕ್ಕುವ `ಪೋಸ್ಟ್ ಕಾರ್ಡ್’ ಎಂಬ ಫೇಕು ಉದ್ಯಮದಲ್ಲಿ!
ಈಗ ಅದೇ ಹೆಗ್ಡೆ ಕೋಟಿಗೆ ತೂಗುತ್ತಾನೆ. ದೇಶಪ್ರೇಮದ ತುತ್ತೂರಿ ಊದುತ್ತಾನೆ. ಆದ್ರೆ ಮುಗ್ಧ ಹೆಣ್ಮಕ್ಕಳು ಬಂದು ಒಂದು ಸಲ `ವಂದೇ ಮಾತರಂ’ ಹೇಳಪ್ಪಾ ಅಂದ್ರೆ, ಪೆಂಗನಂತೆ ಮುಖಮಾಡಿಕೊಂಡು ಹಲ್ಲುಕಿರಿಯುತ್ತಾನೆ. ಆದರೆ ಒಂದಂತೂ ಸತ್ಯ, ಈತನ ಸಮಯಸಾಧಕತನಕ್ಕೆ ಮುಂದೊಂದು ದಿನ ಬಿಜೆಪಿ ಪಿಗ್ಗಿಬಿದ್ದರೂ ಅಚ್ಚರಿಯಿಲ್ಲ…..


