Homeನ್ಯಾಯ ಪಥಹಿರೇಮಠ್ ಅವರ ನೆನಪುಗಳಲ್ಲಿ ಪ್ರಶಾಂತ್ ಭೂಷಣ್ ಜನಪರ ಹೋರಾಟದ ದಿನಗಳು

ಹಿರೇಮಠ್ ಅವರ ನೆನಪುಗಳಲ್ಲಿ ಪ್ರಶಾಂತ್ ಭೂಷಣ್ ಜನಪರ ಹೋರಾಟದ ದಿನಗಳು

- Advertisement -
- Advertisement -

“ಭಾರತದ ಇತ್ತೀಚಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳ ಕುರಿತು ಕಳವಳ ವ್ಯಕ್ತಪಡಿಸಿದ್ದ ದೆಹಲಿ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಎ.ಪಿ. ಶಾ, ‘ದೇಶದಲ್ಲಿ ನ್ಯಾಯಾಲಯ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಾಶಗೊಳಿಸಲಾಗುತ್ತಿದೆ, ಅಲ್ಲದೆ, ಭಾರತ ಒಂದು ರೀತಿಯ ಚುನಾಯಿತ ಸರ್ವಾಧಿಕಾರದತ್ತ ಸಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದ್ದರು.

ನಿವೃತ್ತ ನ್ಯಾಯಮೂರ್ತಿ ಎ.ಪಿ. ಶಾ ಹೀಗೊಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ವಕೀಲರಾದ ಪ್ರಶಾಂತ್ ಭೂಷಣ್ ಅವರ ಮೇಲಿನ ನ್ಯಾಯಾಂಗ ನಿಂದನೆ ಆರೋಪವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಅಲ್ಲದೆ, ಶಿಕ್ಷೆಯ ಪ್ರಮಾಣವನ್ನು ನಂತರದಲ್ಲಿ ತಿಳಿಸುವುದಾಗಿ ಹೇಳಿದ ದಿನ ಶಿಕ್ಷೆಯನ್ನು ಘೋಷಿಸುವುದಾಗಿಲ್ಲ . ಅಲ್ಲಿಗೆ ಎ.ಪಿ. ಶಾ ಮಾತಿನಂತೆ ಪ್ರಾಮಾಣಿಕ ವಕೀಲರೊಬ್ಬರನ್ನು ಹಣಿಯಲು ಇಡೀ ವ್ಯವಸ್ಥೆ ಸಿದ್ಧತೆಯಲ್ಲಿ ತೊಡಗಿದೆ ಎಂಬುದು ಸ್ಟಷ್ಟವಾಗುತ್ತದೆ.

ಇದನ್ನೂ ಓದಿ: ಕೊರೊನಾ ವಿಚಾರದಲ್ಲಿ ತಬ್ಲೀಘಿಗಳನ್ನು ’ಬಲಿಪಶು’ ಮಾಡಲಾಗಿದೆ: ಬಾಂಬೆ ಹೈಕೋರ್ಟ್

“ಅಸಲಿಗೆ ಪ್ರಶಾಂತ್ ಭೂಷಣ್ ಮಾಡಿದ್ದ ಅಪರಾಧವಾದರೂ ಏನು ಎಂದು ಹುಡುಕುತ್ತಾ ಹೋದರೆ, ಸತ್ಯವನ್ನು ಮಾತನಾಡಿದ್ದೊಂದೆ ಅವರು ಮಾಡಿದ್ದ ಅಪರಾಧ. ನ್ಯಾಯಾಂಗ ವ್ಯವಸ್ಥೆಯನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿಯಲು ಹೊರಟಿರುವ ಭ್ರಷ್ಟಾಚಾರದ ಬಗ್ಗೆ ಅವರು ಬಹಿರಂಗವಾಗಿ ಪ್ರಶ್ನೆ ಮಾಡಿದ್ದೊಂದೆ ಅವರು ಮಾಡಿದ ಬಹುದೊಡ್ಡ ಅಪರಾಧವಾಗಿದೆ. ಇದಕ್ಕೆಂದೆ ಇಂದು ಅವರ ಮೇಲೆ ಮುರಿದುಬಿದ್ದಿದ್ದಾರೆಯೇ ಎಂಬ ಅನುಮಾನ ಮೇಲೆದ್ದಿದೆ.

“ದೇಶದ ಉಳಿದ ಕ್ಷೇತ್ರಗಳಂತೆ ನ್ಯಾಯಾಂಗ ವ್ಯವಸ್ಥೆಯಲ್ಲೂ ಭ್ರಷ್ಟತೆ ಮೆಲ್ಲಮೆಲ್ಲನೆ ನುಸುಳಿ ತನ್ನ ಹೆಜ್ಜೆಯನ್ನು ಆಳವಾಗಿ ಊರುತ್ತಿರುವುದು ಇಂದು ಗುಟ್ಟಾಗೇನು ಉಳಿದಿಲ್ಲ. ಇದನ್ನು ನಿರೂಪಿಸಲು ಸಾಕಷ್ಟು ಸಾಕ್ಯಾಗಳಿವೆ. ಆದ್ದರಿಂದ, ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟತೆಯನ್ನು ಪ್ರಶ್ನೆ ಮಾಡಲು ಓರ್ವ ವಕೀಲನಿಗಿಂತ ಬೇರೆ ಯಾರಿಗೆ ಅಧಿಕಾರವಿದೆ?


ವಿಡಿಯೋ: ತುರ್ತು ಪರಿಸ್ಥಿತಿಯ ನೆನಪು: ಎಸ್‌. ಆರ್‌. ಹಿರೇಮಠ್‌

“ಮತ್ತು ವಕೀಲರೊಬ್ಬರು ಇದನ್ನು ಪ್ರಶ್ನೆ ಮಾಡುವುದರಲ್ಲಿ ತಪ್ಪೇನಿದೆ? ಪ್ರಶಾಂತ್ ಭೂಷಣ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಡೆ ದುರಾದೃಷ್ಟಕರ. ಇದು ವ್ಯಕ್ತಿಯೊಬ್ಬನ ಸ್ವಾತಂತ್ಯ್ರ ಹರಣ. ಅಲ್ಲದೆ, ಇದರ ಹಿಂದೆ ಕೆಲವು ರಾಜಕೀಯ ಹಿತಾಸಕ್ತಿಗಳ ಒತ್ತಡ ತಂತ್ರವೂ ಕೆಲಸ ಮಾಡಿದೆ” ಎಂದು ವಿಷಾದಿಸುತ್ತಾರೆ ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್.ಆರ್. ಹಿರೇಮಠ್.

ಎಸ್.ಆರ್. ಹಿರೇಮಠ್ ಮತ್ತು ವಕೀಲ ಪ್ರಶಾಂತ್ ಭೂಷಣ್ ಕಳೆದ ಎರಡು ದಶಕಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸಲ್ಲಿಸಿ ಅನೇಕರಿಗೆ ನ್ಯಾಯ ಕೊಡಿಸಿದ್ದಾರೆ. ಹೀಗಾಗಿ ಪ್ರಶಾಂತ್ ಭೂಷಣ್ ಅವರ ಜೊತೆಗಿನ ತಮ್ಮ ಹೋರಾಟದ ಅನುಭವವನ್ನು, ಅವರ ಘನ ವ್ಯಕ್ತಿತ್ವವನ್ನು ಎಸ್.ಆರ್. ಹಿರೇಮಠ್ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಛತ್ತೀಸ್‌ಗಢದಿಂದ ಬಳ್ಳಾರಿ ಗಣಿ ಹೋರಾಟದವರೆಗೆ:

“ವಕೀಲ ಪ್ರಶಾಂತ್ ಭೂಷಣ್ ಅವರ ತಂದೆ ಶಾಂತಿ ಭೂಷಣ್ ಸಹ ಸುಪ್ರೀಂ ಕೋರ್ಟ್ನಲ್ಲಿ ಹಿರಿಯ ನ್ಯಾಯವಾಧಿಯಾಗಿ ಕೆಲಸ ಮಾಡಿದ್ದವರು.1977 ರಿಂದ 1979ರ ಅವದಿಗೆ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ಅವರು ಕಾನೂನು ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು.

“ಹುಟ್ಟು ಪ್ರತಿಭಾವಂತರಾಗಿದ್ದ ಮತ್ತು ಸ್ವಭಾವತಃ ಮಾನವೀಯ ಅಂತಕರಣ ಉಳ್ಳ ಪ್ರಶಾಂತ್ ಭೂಷಣ್ ಆಯ್ಕೆ ಮಾಡಿಕೊಂಡ ದಾರಿ ಧ್ವನಿ ಇಲ್ಲದವರಿಗೆ ಕಾನೂನು ನೆರವು ಮಾಡುವುದು ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗುವುದು.

“ನಾನು ಮತ್ತು ಪ್ರಶಾಂತ್ ಭೂಷಣ್ 19755ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಮೆರಿಕದಲ್ಲಿ ಪರಿಚಯಸ್ಥರೊಬ್ಬರ ಮೂಲಕ ಭೇಟಿಯಾದರೂ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು 1998ರಲ್ಲಿ. ಛತ್ತೀಸ್‌ಗಢ ರಾಜ್ಯದ ಬಸ್ತರ್ ಪ್ರದೇಶದ ಬುಡಕಟ್ಟು ಜನರ ಹಕ್ಕಿನ ಹೋರಾಟದಲ್ಲಿ. ಅಲ್ಲಿಂದ ಆರಂಭವಾದ ನಮ್ಮ ಹೋರಾಟ ಬಳ್ಳಾರಿ ಗಣಿಗಾರಿಕೆಯನ್ನು ವಿರೋಧಿಸುವವಂರೆಗೆ ಮುಂದುವರೆದಿತ್ತು.

PC: Bar and Bench.

“ಇಂದು ಛತ್ತೀಸ್‌ಗಢಕ್ಕೆ ಸೇರಿರುವ ಬಸ್ತರ್ ಎಂಬ ಪ್ರದೇಶ ಆಗ ಮಧ್ಯಪ್ರದೇಶದ ಭಾಗವಾಗಿತ್ತು. ಬಹುಪಾಲು ಬುಡಕಟ್ಟು ಜನರೇ ವಾಸಿಸುವ ಭಾಗ. ಕಾಡಿನಿಂದ ಹೊರ ಜಗತ್ತಿಗೆ ಬಂದು ಬದುಕುವುದೂ ಇಲ್ಲಿನ ಜನರಿಗೆ ಸಾಧ್ಯವಿರಲಿಲ್ಲ. ಆದರೆ, ಅಂದಿನ ಮಧ್ಯಪ್ರದೇಶ ಸರ್ಕಾರ ಟಿಂಬರ್ ಮಾಫಿಯಾಗೆ ಮಣಿದಿತ್ತು. ಒಂದು ಖಾಸಗಿ ಸಂಸ್ಥೆಗೆ ಅರಣ್ಯ ಪ್ರದೇಶವನ್ನು ಗುತ್ತಿಗೆೆ ನೀಡಿತ್ತು.

“ಈ ವೇಳೆ ಈ ಬುಡಕಟ್ಟು ಜನರನ್ನು ಕಾಡಿನಿಂದ ಹೊರ ಹಾಕಲು ಅವರಿಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಾಕಷ್ಟು ಕಿರುಕುಳ ನೀಡಿದ್ದರು. ಬೆಲೆಬಾಳುವ ಸಾಗುವಾಣಿ ಮರಗಳನ್ನು ಕಡಿಯಲು ಕಡಿಮೆ ಹಣಕ್ಕೆ ಖಾಸಗಿ ಕಂಪೆನಿಗಳಿಗೆ ಸರ್ಕಾರ ಪರವಾನಗಿ ನೀಡಿತ್ತು. ಪರಿಣಾಮವಾಗಿ ಬುಡಕಟ್ಟು ಜನರ ಬದುಕು ಅಕ್ಷರಶಃ ಬೀದಿಗೆ ಬಿದ್ದಿತ್ತು.

“ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ನಾನು ಮೊದಲ ಬಾರಿಗೆ ಸುಪ್ರೀಂ ಕೋರ್ಟ್ನಲ್ಲಿ ಈ ಅರಣ್ಯನಾಶ ನಿಲ್ಲಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದೆ. ಅಂದು ಈ ಅರ್ಜಿಯ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಹಾಜರಾದದ್ದು ಇದೇ ಪ್ರಶಾಂತ್ ಭೂಷಣ್.

“ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಕೇವಲ ವಾದವನ್ನು ಮುನ್ನಡೆಸುವುದು ಮಾತ್ರ ನನ್ನ ಮತ್ತು ಪ್ರಶಾಂತ್ ಭೂಷಣ್ ಅವರ ಗುರಿಯಾಗಿರಲಿಲ್ಲ. ಬದಲಿಗೆ ಇಬ್ಬರೂ ಜತೆಗೂಡಿ ಸ್ಥಳೀಯ ಬುಡಕಟ್ಟು ಜನರನ್ನು ಒಟ್ಟುಗೂಡಿಸಿದೆವು. ಒಂದು ಹೋರಾಟವನ್ನು ರೂಪಿಸಿ ಅಧಿಕಾರಿಶಾಹಿಗಳಿಗೆ ಬಿಸಿ ಮುಟ್ಟಿಸಲು ಯತ್ನಿಸಿದೆವು. ಅಂದು ಫಾರೆಸ್ಟ್ ರೇಂಜರ್ ಮುಖ್ಯಸ್ಥರ ಸಹಾಯದಿಂದ ಬಸ್ತರ್ ಪ್ರದೇಶದ ಅರಣ್ಯದಲ್ಲಿ ಮರ ಕಡಿಯಲು ಸುಪ್ರೀಂ ಕೋರ್ಟ್ನಿಂದ ಕೊನೆಗೂ ತಡೆ ಆಜ್ಞೆ ತರುವಲ್ಲಿ ನಾವಿಬ್ಬರೂ ಯಶಸ್ವಿಯಾಗಿದ್ದೆವು. ಈ ಕಾರ್ಯವನ್ನು ಈಗಲೂ ಛತ್ತೀಸ್‌ಗಢದ ಮೂಲನಿವಾಸಿಗಳು ಸ್ಮರಿಸುತ್ತಾರೆ.

ಇದನ್ನೂ ಓದಿ: ನ್ಯಾಯಾಲಯ ತನ್ನ ಪ್ರಬುದ್ಧತೆಯನ್ನು ಪ್ರದರ್ಶಿಸಿ ತೀರ್ಪನ್ನು ಪುನರ್‌ವಿಮರ್ಶೆ ಮಾಡಬೇಕು

“ಬುಡಕಟ್ಟು ಮತ್ತು ರೈತರ ಬಗೆಗಿನ ನಮ್ಮ ಹೋರಾಟ ಇಷ್ಟಕ್ಕೆ ಸೀಮಿತವಾಗಿರಲಿಲ್ಲ. ಬದಲಾಗಿ, ನೆಲದ ಮೂಲ ನಿವಾಸಿಗಳಾದ ಆದಿವಾಸಿ, ಬುಡಕಟ್ಟು ಮತ್ತು ರೈತ ಸಮುದಾಯವನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಅಧಿಕಾರಶಾಹಿ ವರ್ಗದಿಂದ ರಕ್ಷಿಸಬೇಕು. ಅದಕ್ಕೆಂದು ಒಂದು ಕಾಯ್ದೆ ರೂಪುಗೊಳ್ಳಬೇಕು ಎಂಬುದು ನಮ್ಮಿಬ್ಬರ ಮಹತ್ವಾಕಾಂಕ್ಷೆಯಾಗಿತ್ತು. ಹೀಗೆ ನಮ್ಮಿಬ್ಬರ ಪರಿಶ್ರಮ ಮತ್ತು ದೀರ್ಘ ಅಧ್ಯಯನದಿಂದ ಜಾರಿಗೆ ಬಂದ ಕಾಯ್ದೆಯೇ Land Acquisition Rehabilitation and Resettlement bill 2013 (ಭೂ ಸ್ವಾಧೀನ ಪುನಶ್ಚೇತನ ಮತ್ತು ಪುನರ್ವಸತಿ ಮಸೂದೆ 2013)

ರೈತರ ಭೂ-ಸ್ವಾಧೀನ ಮತ್ತು ಪುನರ್ವಸತಿ ಮಸೂದೆ 2013:

“ಅಭಿವೃದ್ಧಿ ಕೆಲಸಗಳಿಗೆ ರೈತ, ಆದಿವಾಸಿ ಹಾಗೂ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಿ ಅವರ ಜಾಗವನ್ನು ಅತಿಕ್ರಮಿಸುವುದು ಸಾಮಾನ್ಯ. ಆದರೆ, ಹೀಗೆ ತಮ್ಮ ಭೂಮಿಯಿಂದ ಹೊರಬೀಳುವ ಜನ ಬೇರೆ ಪರಿಸರದಲ್ಲಿ ಬದುಕುವುದು ಅಸಾಧ್ಯವಾದ ಮಾತು. ಹೀಗಾಗಿ ರೈತರು ಮತ್ತು ಆದಿವಾಸಿ ಜನರನ್ನು ಅವರ ಭೂಮಿಯಿಂದ ಒಕ್ಕಲೆಬ್ಬಿಸುವ ಮುನ್ನ ಅವರಿಗೆ ಸೂಕ್ತ ಪುನರ್ವಸತಿಯನ್ನೂ, ಪರಿಹಾರವನ್ನು ನೀಡಬೇಕು ಎಂಬುದು ನಮ್ಮ ಹೋರಾಟದ ಮೂಲ ಉದ್ದೇಶವಾಗಿತ್ತು.

“2001-02 ಸಂದರ್ಭದಲ್ಲಿ ರಾಷ್ಟ್ರ ದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿತ್ತು. ಈ ವೇಳೆ ಪ್ರಶಾಂತ್ ಭೂಷಣ್ ಮತ್ತು ನಾನು ಅಂದಿನ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಜೊತೆಗೆ ಈ ಕುರಿತು ಚರ್ಚೆ ನಡೆಸಿದ್ದೆವು. ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸುವ ಮುನ್ನ ಕೈಗೊಳ್ಳಬೇಕಾದ ಪುನರ್ವಸತಿ ಕುರಿತು ಒಂದು ಕಾಯ್ದೆ ರೂಪಿಸುವಂತೆ ಮನವಿ ಮಾಡಿದ್ದೆವು. ಕೊನೆಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಎಂ.ಸಿ. ಸಕ್ಸೇನಾ ಅವರ ಒತ್ತಾಯದ ಮೇರೆಗೆ ನಾವೇ ಒಟ್ಟಾಗಿ ಸಾಕಷ್ಟು ಅಧ್ಯಯನ ನಡೆಸಿ ಭೂ ಸ್ವಾಧೀನ ಸಂದರ್ಭದಲ್ಲಿ ಕಡ್ಡಾಯವಾಗಿ ಕೈಗೊಳ್ಳಬೇಕಾದ ಪುನರ್ವಸತಿ ಮತ್ತು ಪರಿಹಾರ ನಿಯಮವನ್ನು ಕಾಯ್ದೆಯನ್ನಾಗಿ ರೂಪಿಸಿದ್ದೆವು. ಕರಡನ್ನು ಸಿದ್ಧಪಡಿಸಿದ್ದೆವು.

ಇದನ್ನೂ ಓದಿ: 2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ವ್ಯಯಿಸಿದ್ದು ಎಷ್ಟು ಗೊತ್ತೆ?

“ಆದರೆ, ಅಂದು ಕೇಂದ್ರ ಸರ್ಕಾರದ ಅಧಿ ಕಾರದ ಚುಕ್ಕಾಣಿ ಹಿಡಿದಿದ್ದ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಈ ಕಾಯ್ದೆಯನ್ನು ಅಂಗೀಕರಿಸುವ ಕುರಿತು ಹೆಚ್ಚು ಮಹತ್ವ ನೀಡಿರಲಿಲ್ಲ. ಆದರೆ, ಈ ಕಾಯ್ದೆ ಜಾರಿಯಾಗಲೇಬೇಕು ಎಂದು ನಾನು ಮತ್ತು ಪ್ರಶಾಂತ್ ಭೂಷಣ್ ನಿರಂತರವಾಗಿ ದಶಕಗಳ ಕಾಲ ಹೋರಾಟ ನಡೆಸಿದ್ದೆವು. ಕೊನೆಗೆ 2013ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ Land Acquisition Rehabilitation and Resettlement bill 2013 ಎಂಬ ಹೆಸರಿನಲ್ಲಿ ಇದೇ ಕಾಯ್ದೆ ಅಂಗೀಕಾರವಾಗಿತ್ತು. ಅಲ್ಲಿಗೆ ನಮ್ಮ ಹೋರಾಟಕ್ಕೆ ಒಂದು ಹಂತದ ಜಯ ದಕ್ಕಿತ್ತು.

ಬಳ್ಳಾರಿಯ ಗಣಿಗಾರಿಕೆ ಹೋರಾಟ:

ಕರ್ನಾಟಕದ ಬಳ್ಳಾರಿ ಗಣಿ ಹಗರಣವನ್ನುಬಯಲಿಗೆಳೆಯುವುದರಲ್ಲಿಯೂ ಪ್ರಶಾಂತ್ ಭೂಷಣ್ ಅವರ ಕಾರ್ಯ ಮಹತ್ತರವಾದದ್ದು. ಕಳೆದ ದಶಕದಲ್ಲಿ ಕರ್ನಾಟಕದ ರಾಜಕಾರಣ ಮತ್ತು ಬಳ್ಳಾರಿ ಗಣಿಗೆ ಬಿಡಿಸಲಾರದ ಬಂಧವಿತ್ತು. ಒಂದು ಹಂತದಲ್ಲಿ ಇಡೀ ರಾಜ್ಯ ರಾಜಕೀಯವನ್ನೆ ನಿಯಂತ್ರಿಸುವಂತಹ ಶಕ್ತಿ ಬಳ್ಳಾರಿ ಗಣಿ ದಣಿಗಳಿಗೆ ಇತ್ತು ಎಂದರೆ ಗಣಿ ಲಾಬಿಯ ಪ್ರಭಾವ ಎಷ್ಟರಮಟ್ಟಿಗಿತ್ತು ಎಂಬುದನ್ನು ನಾವು ಊಹಿಸಬಹುದು.

“ಈ ವೇಳೆ ಸಾಮಾಜಿಕ ಪರಿವರ್ತನಾ ಸಮುದಾಯದ ವತಿಯಿಂದ ನಾನು ಮೊದಲ ಬಾರಿಗೆ ಬಳ್ಳಾರಿ ಗಣಿ ಅಕ್ರಮವನ್ನು ಬಯಲಿಗೆಳೆದಿದ್ದೆ. ರಾಷ್ಟ್ರ ಮಟ್ಟದಲ್ಲಿ ಈ ಗಣಿ ಹಗರಣ ದೊಡ್ಡ ಮಟ್ಟದ ಚರ್ಚೆಗೆ ಮತ್ತು ಸುದ್ದಿಗೆ ಗ್ರಾಸವಾಗಿತ್ತು. ನಮ್ಮ ಸಂಘಟನೆಯ ನಿರಂತರ ಹೋರಾಟ, ಜನರ ಆಶೋತ್ತರ ಹಾಗೂ ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದಿದ್ದ ಅಂದಿನ ರಾಜ್ಯ ಬಿಜೆಪಿ ಸರ್ಕಾರ ಅನಿವಾರ್ಯವಾಗಿ ಈ ಹಗರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿತ್ತು.

“ಅಂದು ಲೋಕಾಯುಕ್ತ ಮುಖ್ಯಸ್ಥರಾಗಿದ್ದ ಜಸ್ಟೀಸ್ ಸಂತೋಷ್ ಹಗೆಡೆ ತಮ್ಮ ವರದಿಯಲ್ಲಿ “ರಿಪಬ್ಲಿಕ್ ಆಫ್ ಬಳ್ಳಾರಿ” ಎಂಬ ಪ್ರತ್ಯೇಕ ಅಧ್ಯಾಯವನ್ನೇ ಬರೆದಿದ್ದರು. ಇದರಲ್ಲಿ ಅಕ್ರಮ ಗಣಿಗಾರಿಕೆಯ ಆಳ ಅಗಲಗಳನ್ನು ಸವಿಸ್ತಾರವಾಗಿ ವಿವರಿಸಿದ್ದರು. ಈ ವೇಳೆ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರವನ್ನು ವಕೀಲ ರಾಜು ರಾಮಚಂದ್ರನ್ ಪ್ರತಿನಿಧಿಸಿದ್ದರೆ, ನಮ್ಮ ಸಾಮಾಜಿಕ ಪರಿವರ್ತನಾ ಸಮಿತಿಯ ಪರವಾಗಿ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ನಲ್ಲಿ ವಾದವನ್ನು ಮಂಡಿಸಿದ್ದರು.

ಪ್ರಶಾಂತ್‌ ಭೂಷಣ್ ಮಾಡಿದ್ದ ಟ್ವೀಟ್

“ಪರಿಣಾಮ ಗಣಿ ಅಕ್ರಮ ಮತ್ತು ಅಂತಾರಾಜ್ಯ ಗಡಿರೇಖೆಯ ನಾಶ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲು ಸೇರುವಂತಾಗಿತ್ತು. ಇಡೀ ರಾಜ್ಯ ರಾಜಕೀಯವನ್ನೇ ತನ್ನ ಕಪಿಮುಷ್ಠಿಯಲ್ಲಿ ಹಿಡಿದಿದ್ದ ರೆಡ್ಡಿ ಬ್ರದರ್ಸ್ರನ್ನು ಹಣಿಯುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಯಾವುದಕ್ಕೂ ಅಂಜದ ಪ್ರಶಾಂತ್ ಭೂಷಣ್ ಕೊನೆಗೂ ಜನಾರ್ಧನ ರೆಡ್ಡಿಯನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸಿದ್ದರು. ಇದು ನಿಜಕ್ಕೂ ಸಣ್ಣ ಸಾಧನೆ ಏನಲ್ಲ. ಹಾಗೇ ನೋಡಿದರೆ ಬಳ್ಳಾರಿಯ ಅಕ್ರಮ ಗಣಿಗಾರಿಕೆಯ ಕುರಿತು ಹಿಡಿಶಾಪ ಹಾಕುವ ಕರ್ನಾಟಕದ ಜನ ಎಂದಿಗೂ ಸ್ಮರಿಸಿಕೊಳ್ಳಬೇಕಾದ ಹೆಸರು ಪ್ರಶಾಂತ್ ಭೂಷಣ್.

“ಗಣಿ ಅಕ್ರಮದ ಕುರಿತು ನನ್ನ ಮತ್ತು ಪ್ರಶಾಂತ್ ಭೂಷಣ್ ಅವರ ಹೋರಾಟ ಇಲ್ಲಿಗೆ ಅಂತ್ಯವಾಗಲಿಲ್ಲ. ಕರ್ನಾಟಕದ ನಂತರ ಗೋವಾ, ಒರಿಸ್ಸಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಕುರಿತು ನಾವು ಒಟ್ಟಾಗಿ ಹೋರಾಟ ರೂಪಿಸಿದ್ದೇವೆ. ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದು ಪರಿಸರ ರಕ್ಷಿಸುವ ಮಹತ್ವದ ಕೆಲಸಕ್ಕೆ ಮುಂದಾಗಿದ್ದೇವೆ. ಈಗಲೂ ನಮ್ಮ ಹೋರಾಟ ಜೊತೆ ಜೊತೆಗೆ ಸಾಗುತ್ತಿದೆ.

“ಅಕ್ರಮ ಗಣಿಗಾರಿಕೆ, ಪರಿಸರ ಉಳಿಸುವ ಹೋರಾಟ,
ರೈತ-ಆದಿವಾಸಿ-ಬುಡಕಟ್ಟು ಜನರ ಬದುಕನ್ನು ಉಳಿಸುವ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪರವಾಗಿ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ನಲ್ಲಿ ಹಾಜರಾಗಿದ್ದಾರೆ. ಈ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಒಂದು ವರ್ಚಸ್ಸು
ತಂದುಕೊಟ್ಟ ಹಿರಿಮೆ ಪ್ರಶಾಂತ್ ಭೂಷಣ್ ಅವರಿಗೆ ಸಲ್ಲುತ್ತದೆ.

“ಇದಲ್ಲದೆ, ರಾಜೀವ್ ಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಬೊಫೋರ್ಸ್ ಹಗರಣದ ಕುರಿತು ಪ್ರಶಾಂತ್ ಭೂಷಣ್ ಪುಸ್ತಕವನ್ನೇ ಬರೆದಿದ್ದರು. 2013-14ರಲ್ಲಿ ಲೋಕಪಾಲ ಕಾಯ್ದೆಗೆ ಒತ್ತಾಯಿಸಿ ದೇಶದಾದ್ಯಂತ ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆದಾಗ ಅದರಲ್ಲೂ ಪ್ರಶಾಂತ್ ಭೂಷಣ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ನರ್ಮದಾ ಬಚಾವೋ ಆಂದೋಲನದ ಭಾಗವಾಗಿಯೂ ಇದ್ದ ಅವರದ್ದು ನಿರಂತರ ಹೋರಾಟದ ಬದುಕು.

ಇದನ್ನೂ ಓದಿ: ‘ಮೈ ಲಾರ್ಡ್’, ಹಾಡು ಸ್ವತಂತ್ರ ಎಲ್ಲ ದಿಕ್ಕಿಗೆ ಹರಿದು ಹೋದೀತು 

“ಓರ್ವ ವಕೀಲನಾಗಿ ಕಾನೂನನ್ನು ಬಡ ಮತ್ತು ತಳ ಸಮುದಾಯದ ಜನರಿಗೆ ತಲುಪಿಸಬೇಕು. ಈ ಮೂಲಕ ದನಿ ಇಲ್ಲದವರ ದನಿಯಾಗಬೇಕು ಎಂಬುದು ಪ್ರಶಾಂತ್ ಭೂಷಣ್ ಅವರ ಮಹತ್ವಾಕಾಂಕ್ಷೆಯಾಗಿತ್ತು. ಇದಕ್ಕೆಂದೆ ಹಿಮಾಚಲ ಪ್ರದೇಶದಲ್ಲಿ ಒಂದು ಕಾನೂನು ಶಾಲೆಯನ್ನೂ ಆರಂಭಿಸಿದ್ದಾರೆ. ಇಲ್ಲಿ ಪ್ರತಿವರ್ಷ ರಾಷ್ಟ್ರ ದ ಮೂಲೆಮೂಲೆಯಿಂದ ಅನೇಕ ಕಾನೂನು ವಿದ್ಯಾರ್ಥಿಗಳು ಬಂದು ಸೇರುತ್ತಾರೆ. ಇಲ್ಲಿ ಕಾನೂನು ಕ್ಷೇತ್ರದಲ್ಲಿ ಆಗಬೇಕಾದ ಮಹತ್ವದ ಬೆಳವಣಿಗೆಗಳ ಕುರಿತು ಅನೇಕ ವಿಚಾರಗೋಷ್ಠಿಗಳು ನಡೆಯುತ್ತವೆ.

“ಇಡೀ ವ್ಯವಸ್ಥೆ ಲಾಭಕೋರತನವನ್ನು ಮೈಗೂಡಿಸಿಕೊಂಡಿರುವಾಗ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಅದೂ ಓರ್ವ ಕಾನೂನು ತಜ್ಞ ಹೆಜ್ಜೆ ಇರಿಸುವುದನ್ನು ಅಧಿಕಾರಶಾಹಿ ವರ್ಗ ಸಹಿಸುವುದಿಲ್ಲ. ಈ ಹಿಂದೆಯೂ ಪ್ರಶಾಂತ್ ಭೂಷಣ್ ಅವರ ವಿರುದ್ಧ ಸಾಕಷ್ಟು ಹಲ್ಲೆಗಳು ರಾಜಕೀಯ ಪ್ರೇರಿತ ದಾಳಿಗಳಾಗಿದ್ದವು. ಆದರೆ, ಈ ಬಾರಿ ಪ್ರಭುತ್ವವೇ ಮುಂದೆ ನಿಂತು ನ್ಯಾಯಾಂಗದ ಮೂಲಕ ಪ್ರಶಾಂತ್ ಭೂಷಣ್ ಅವರನ್ನು ಹಣಿಯಲು ಸಜ್ಜಾಗುತ್ತಿರುವುದು ಮಾತ್ರ ವಿಪರ್ಯಾಸ.

“ಆದರೆ, ಇಂತಹ ದಾಳಿಗಳಿಂದ ಸತ್ಯದ ಬಾಯಿಯನ್ನು ಮುಚ್ಚಿಸುತ್ತೇವೆ, ಪ್ರಶಾಂತ್ ಭೂಷಣ್ ಅಂತವರ ಹೋರಾಟಕ್ಕೆ ಪೂರ್ಣ ವಿರಾಮ ಹಾಕುತ್ತೇವೆ ಎಂಬುದು ಕೇವಲ ಅಧಿಕಾರಶಾಹಿಗಳ ಭ್ರಮೆಯಷ್ಟೆ. ಅಧಿಕಾರವರ್ಗ ಎಷ್ಟೇ ದಾಳಿ ಮಾಡಿದರೂ ಪ್ರಶಾಂತ್ ಭೂಷಣ್‌ರಂತವರು ಮತ್ತೆ ಮತ್ತೆ ಬೆಳೆಯುತ್ತಲೇ ಇರುತ್ತಾರೆ. ಜನ ಚಳುವಳಿ ಎಂದಿಗೂ ಅವರ ಬೆನ್ನಿಗಿರುತ್ತದೆ.

ನಿರೂಪಣೆ: ಬಿ. ಎ. ತೇಜಸ್ವಿ

ಎಸ್ ಆರ್ ಹಿರೇಮಠ್

ಎಸ್ ಆರ್ ಹಿರೇಮಠ್
ಹಿರಿಯ ಸಾಮಾಜಿಕ ಹೋರಾಟಗಾರ ಮತ್ತು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕರು. ಹಲವು ಭ್ರಷ್ಟಾಚಾರಗಳ ವಿರುದ್ಧ ಹೋರಾಟ, ಇಂದಿರಾಗಾಂಧಿ ಅವರ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ, ಈಗ ಪ್ರಜಾಸತ್ತಾತ್ಮಕ ಮೌಲ್ಯಗಳ ಉಳಿವಿಗೆ ಹೋರಾಟ ಹೀಗೆ ಹಲವು ಜನಪರ ಚಳವಳಿಯಲ್ಲಿ ಸದಾ
ಭಾಗಿಯಾಗಿದ್ದಾರೆ.


ವಿಡಿಯೊ ನೋಡಿ: ಖ್ಯಾತ ಗಾಯಕಿ ಎಂ ಡಿ ಪಲ್ಲವಿ ಹಾಡಿರುವ ಗುರುದೇವ ರವೀಂದ್ರ ಠಾಗೋರ್‌ ಅವರ ‘ಅಂತರಂಗವನು ಅರಳಿಸು!’ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...