ಸಂಘರ್ಷಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ, ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಈ ಭೇಟಿಯನ್ನು ಕೇವಲ ಒಂದು ತೋರಿಕೆಯ ಕಸರತ್ತು ಎಂದು ಟೀಕಿಸಿದರೆ, ಸರ್ಕಾರ ಇದನ್ನು ಅಭಿವೃದ್ಧಿಯ ಮೂಲಕ ಜನರ ನೋವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈಗೊಂಡ ಕ್ರಮ ಎಂದು ಹೇಳಿಕೊಂಡಿದೆ.
ರಾಜ್ಯದ ಕುಕಿ ಪ್ರಾಬಲ್ಯವಿರುವ ಚುರಾಚಂದ್ಪುರ ಜಿಲ್ಲೆಯಲ್ಲಿ ತಮ್ಮ ಭಾಷಣದ ವೇಳೆ, ಮೋದಿ ಅವರು ಕೇಂದ್ರವು ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಬಲಪಡಿಸಲು ಶ್ರಮಿಸುತ್ತಿದೆ ಮತ್ತು ಅವುಗಳ ಅಭಿವೃದ್ಧಿಗಾಗಿ ಸೂಕ್ತ ನಿಧಿಗಳನ್ನು ಒದಗಿಸಲಾಗುವುದು ಎಂದು ಮಣಿಪುರ ಜನತೆಗೆ ಒತ್ತಿ ಹೇಳಿದ್ದರು. ಇದನ್ನು ಅಲ್ಲಿನ ಜನತೆ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.
ರಾಜ್ಯವನ್ನು “ಶಾಂತಿ ಮತ್ತು ಸಮೃದ್ಧಿಯ ಸಂಕೇತ“ವಾಗಿ ಪರಿವರ್ತಿಸುವ ಭರವಸೆ ನೀಡಿದ ಮೋದಿ, ಎಲ್ಲಾ ಗುಂಪುಗಳು ಹಿಂಸೆಯನ್ನು ತ್ಯಜಿಸಬೇಕೆಂದು ಕರೆ ನೀಡಿದರು ಮತ್ತು ಸಂಘರ್ಷದಿಂದ ನಲುಗಿರುವ ಜನರ ಜೀವನವನ್ನು ಪುನರ್ನಿರ್ಮಿಸಲು ಕೇಂದ್ರವು ಅವರೊಂದಿಗೆ ದೃಢವಾಗಿ ನಿಂತಿದೆ ಎಂದು ಭರವಸೆ ನೀಡಿದರು. ಪ್ರಧಾನಿಯ ಈ ಭರವಸೆಯನ್ನು ಅಲ್ಲಿನ ಬಂಡುಕೋರ ಗುಂಪುಗಳು ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ ಎಂಬುದು ತಿಳಿಯುತ್ತದೆ. ಹೇಗೆಂದರೆ ಮೋದಿ ಭೇಟಿಯ ಎರಡು ದಿನದ ನಂತರ ಕುಕಿ ಬಂಡುಕೋರ ಗುಂಪುಗಳು ರಾಷ್ಟ್ರೀಯ ಹೆದ್ದಾರಿ ಮುಕ್ತ ಸಂಚಾರಕ್ಕೆ ಮುಕ್ತವಾಗಿಲ್ಲ ಎಂದು ಹೇಳಿಕೆ ನೀಡಿದವು.
“ಇಂದು, ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ, ಕೇಂದ್ರವು ನಿಮ್ಮೊಂದಿಗಿದೆ. ಎಲ್ಲಾ ಗುಂಪುಗಳು ಮತ್ತು ಸಂಘಟನೆಗಳು ಶಾಂತಿಯ ಹಾದಿಯನ್ನು ಅನುಸರಿಸಬೇಕೆಂದು ನಾನು ಕರೆ ನೀಡುತ್ತೇನೆ,” ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ವಿವಿಧ ಗುಂಪುಗಳು ಸಂವಾದಕ್ಕೆ ಮುಂದಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, “ಸಂವಾದ, ಗೌರವ ಮತ್ತು ಪರಸ್ಪರ ತಿಳುವಳಿಕೆ” ಯ ಮೇಲೆ ಕೇಂದ್ರವು ಯಾವಾಗಲೂ ಒತ್ತು ನೀಡುತ್ತದೆ ಎಂದು ತಿಳಿಸಿದರು. ಆದರೆ, ಅವರು ನಿರ್ಗಮಿಸಿದ 24 ಗಂಟೆಗಳ ಒಳಗೆ, ರಾಜ್ಯದಲ್ಲಿ ಹಿಂಸಾತ್ಮಕ ಘರ್ಷಣೆಗಳು ಮತ್ತೆ ಭುಗಿಲೆದ್ದವು ಮತ್ತು ಚುರಾಚಂದ್ಪುರದಲ್ಲಿ ಕುಕಿ ನಾಯಕರ ಮನೆಗಳನ್ನು ಧ್ವಂಸಗೊಳಿಸಲಾಯಿತು.
ಮೋದಿ ಅವರ ಭೇಟಿಗೆ ಮುನ್ನ, ಸೆಪ್ಟೆಂಬರ್ 4ರಂದು ಕೇಂದ್ರ, ಮಣಿಪುರ ಸರ್ಕಾರ ಮತ್ತು ಕುಕಿ ಗುಂಪುಗಳ ನಡುವೆ ಮಾತುಕತೆ ನಡೆದಿತ್ತು, ಅಲ್ಲಿ ಶಾಂತಿ ಒಪ್ಪಂದವನ್ನು ಒಂದು ವರ್ಷದವರೆಗೆ ವಿಸ್ತರಿಸಲು ನಿರ್ಧರಿಸಲಾಯಿತು. ಮಾತುಕತೆಗಳ ನಂತರ ಬಿಡುಗಡೆಯಾದ ಅಧಿಕೃತ ಹೇಳಿಕೆಯು, ಕುಕಿ–ಜೋ ಕೌನ್ಸಿಲ್ (KZC) ಪ್ರಮುಖ ಹೆದ್ದಾರಿ NH-2 ಅನ್ನು ಪ್ರಯಾಣಿಕರು ಮತ್ತು ಅಗತ್ಯ ವಸ್ತುಗಳ ಮುಕ್ತ ಸಂಚಾರಕ್ಕಾಗಿ ಪುನಃ ತೆರೆಯಲು ನಿರ್ಧರಿಸಿದೆ ಎಂದು ತಿಳಿಸಿತು. ಆದರೆ ಇತರೆ 6 ಕುಕಿ ಬಂಡುಕೋರ ಗುಂಪುಗಳು ಇದಕ್ಕೆ ತದ್ವಿರುದ್ದ ಹೇಳಿಕೆ ನೀಡಿದವು. ರಾಷ್ಟ್ರೀಯ ಹೆದ್ದಾರಿಯು ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲವೆಂದು ಹೇಳಿದವು.
ಆದರೆ, ಶಾಂತಿ ಒಪ್ಪಂದ ವಿಸ್ತರಣೆಗೆ ಸಹಿ ಹಾಕಿದ್ದ ಕುಕಿ ಗುಂಪುಗಳು, ಅಧಿಕೃತ ಹೇಳಿಕೆಯನ್ನು ತಪ್ಪಾಗಿ ರೂಪಿಸಲಾಗಿದೆ ಮತ್ತು ಹೆದ್ದಾರಿಯ ಉದ್ದಕ್ಕೂ ಶಾಂತಿಯನ್ನು ಕಾಪಾಡಲು ಭದ್ರತಾ ಪಡೆಗಳಿಂದ ಕೇವಲ ಸಹಕಾರ ಕೋರಲಾಗಿದೆ ಎಂದು ಹೇಳಿದವು. ಈ ಹೆದ್ದಾರಿ ಮಣಿಪುರ ಮತ್ತು ನೆರೆಯ ನಾಗಾಲ್ಯಾಂಡ್ ಎರಡಕ್ಕೂ ಜೀವನಾಡಿಯಾಗಿದೆ.
ಹೆದ್ದಾರಿಗಳನ್ನು ತೆರೆಯುವುದು ಕೇಂದ್ರದ ಅಧಿಕಾರವಾಗಿದೆ ಮತ್ತು ಮೊದಲನೆಯದಾಗಿ, ಇದು ಎಂದಿಗೂ ಸಂಚಾರಕ್ಕೆ ಮುಚ್ಚಿರಲಿಲ್ಲ ಮತ್ತು ಪ್ರಯಾಣಿಕರು ಪ್ರತಿದಿನ ಅದನ್ನು ಬಳಸುತ್ತಿದ್ದಾರೆ ಎಂದು ಕುಕಿ ಗುಂಪುಗಳು ಹೇಳಿದವು.
ಮತ್ತೊಂದೆಡೆ, ಮೈತೇಯಿಗಳು ಕುಕಿಗಳ ಹಕ್ಕನ್ನು ವಿರೋಧಿಸಿ, ಮಣಿಪುರದಲ್ಲಿ ಮೇ 2023ರಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಪ್ರಶ್ನಾರ್ಹ NH ಅನ್ನು ಬಳಸಲು ತಮ್ಮ ಸಮುದಾಯಕ್ಕೆ ಕುಕಿ ಗುಂಪುಗಳು ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಆದರೆ, ಪ್ರಮುಖ ಪ್ರಶ್ನೆ ಏನೆಂದರೆ, ಎರಡೂ ಸಂಘರ್ಷನಿರತ ಸಮುದಾಯಗಳ ನಡುವಿನ ಆಳವಾದ ಅಪನಂಬಿಕೆ ಹಾಗೆಯೇ ಉಳಿದಿದೆ ಮತ್ತು ರಾಜ್ಯಕ್ಕೆ ಮೋದಿ ಅವರ ಭೇಟಿ ಜನರ ನಡುವೆ ಪರಸ್ಪರ ಸಮನ್ವಯದ ಯಾವುದೇ ಸಣ್ಣ ಹೆಜ್ಜೆಗಳಿಗೂ ಕಾರಣವಾಗಿಲ್ಲ.
ಸಾಮಾಜಿಕ ವಿಭಜನೆಯು ಎಷ್ಟೊಂದು ಆಳವಾಗಿದೆ ಎಂದರೆ, ಹಲವಾರು ಬಿಜೆಪಿ ಶಾಸಕರು, ಮುಖ್ಯವಾಗಿ ಕುಕಿಗಳು ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಶಾಂತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ವಿನಂತಿಸಿದರು. ಮಣಿಪುರದ ಕುಕಿ–ಪ್ರಾಬಲ್ಯವಿರುವ ಪ್ರದೇಶಗಳಿಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನು ಸಹ ಅವರು ಒತ್ತಾಯಿಸಿದರು.
ಬಿಜೆಪಿ ಮತ್ತು ಇತರ ರಾಜಕೀಯ ಘಟಕಗಳ ಶಾಸಕರು ಸಹಿ ಮಾಡಿದ ಈ ಮನವಿ ಪತ್ರವು, ಅದರ ಉದ್ದೇಶವನ್ನು ಹೆಚ್ಚು ಸ್ಪಷ್ಟವಾಗಿ ಹೇಳಿದೆ: “ನಾವು ಈಗ ಕೇವಲ ಒಳ್ಳೆಯ ನೆರೆಹೊರೆಯವರಾಗಿ ಶಾಂತಿಯಿಂದ ಬದುಕಬಹುದು, ಎಂದಿಗೂ ಒಂದೇ ಸೂರಿನಡಿ ಇರಲು ಸಾಧ್ಯವಿಲ್ಲ.”
ಮತ್ತೊಂದೆಡೆ, ಕುಕಿ ಬಂಡುಕೋರರ ಗುಂಪುಗಳೊಂದಿಗೆ ಶಾಂತಿ ಒಪ್ಪಂದವನ್ನು ಒಂದು ವರ್ಷದವರೆಗೆ ವಿಸ್ತರಿಸಲು ಕೇಂದ್ರವು ನಿರ್ಧರಿಸಿರುವುದರಿಂದ ಬಹುಸಂಖ್ಯಾತ ಮೈತೇಯಿಗಳು ಅಸಮಾಧಾನಗೊಂಡಿದ್ದಾರೆ. ಇದರರ್ಥ, ಬಂಡುಕೋರರು ತಮ್ಮ ನಿರ್ದಿಷ್ಟ ಶಿಬಿರಗಳಿಗೆ ಹಿಂತಿರುಗುತ್ತಾರೆ, ಮತ್ತು ಈ ಶಿಬಿರಗಳನ್ನು ಮೈತೇಯಿ ಪ್ರಾಬಲ್ಯವಿರುವ ಪ್ರದೇಶಗಳಿಂದ ದೂರಕ್ಕೆ ಸ್ಥಳಾಂತರಿಸಲಾಗುವುದು.
ಇದು ಕುಕಿ ಬಂಡುಕೋರ ಗುಂಪುಗಳಿಗೆ ಅಕ್ರಮ ಗಸಗಸೆ ತೋಟಗಳನ್ನು ಬೆಳೆಸಲು ಮತ್ತು “ತಮ್ಮ ಶಿಬಿರಗಳಲ್ಲಿ ಇದ್ದುಕೊಂಡೇ” ಹಿಂಸಾಚಾರದಲ್ಲಿ ತೊಡಗಲು ಹೆಚ್ಚಿನ ಸ್ವಾತಂತ್ರ್ಯ ನೀಡುತ್ತದೆ ಎಂದು ಬಹುಸಂಖ್ಯಾತ ಮೈತೇಯಿ ಹೇಳಿಕೊಂಡಿದ್ದಾರೆ.
ಒಂದೇ ರಾಜ್ಯದಲ್ಲಿ ವಾಸಿಸುತ್ತಿರುವ ಜನರ ನಡುವೆ ಇನ್ನೂ ಅಪನಂಬಿಕೆ ಮತ್ತು ವಿಶ್ವಾಸದ ಕೊರತೆ ಇರುವ ಕಾರಣ, ಪ್ರಧಾನಮಂತ್ರಿಯು ಜನರ ನಡುವೆ ವಿಶ್ವಾಸ ಮೂಡಿಸಲು ಹೆಚ್ಚು ಸಕ್ರಿಯವಾದ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗಿದೆ. ಈ ಜನರು ಇನ್ನೂ ಎರಡು ವರ್ಷಗಳ ಕಾಲ ನಡೆದ ಜನಾಂಗೀಯ ಸಂಘರ್ಷದಿಂದಾಗಿ ಉಂಟಾದ ನೋವಿನಿಂದ ಹೊರಬಂದಿಲ್ಲ.
ಮೂಲ: ಅನಿಮೇಶ್ ಸಿಂಗ್, ದಿ ಟ್ರಿಬ್ಯೂನ್
ನೇಪಾಳದ ದಂಗೆ ಮತ್ತು ಪಾಕಿಸ್ತಾನದ ಪಾಠಗಳು: ದಕ್ಷಿಣ ಏಷ್ಯಾದಲ್ಲಿ ಯುವ ಶಕ್ತಿಯನ್ನು ಹೇಗೆ ಸಮರ್ಥವಾಗಿ ನಿರ್ವಹಿಸುವುದು?


