ತನ್ನನ್ನು ಅಪ್ರಾಮಾಣಿಕ ಎಂದು ಕರೆದಿರುವ ಆಮ್ ಆದ್ಮಿ ಪಾರ್ಟಿ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಸೋದರಳಿಯನ ಮನೆ ಸೇರಿದಂತೆ ಹಲವೆಡೆ ದಾಳಿ ನಡೆಸಿದ ನಂತರ ಅರವಿಂದ್ ಕೇಜ್ರಿವಾಲ್, ಅಪ್ರಾಮಾಣಿಕ ಎಂದು ಕರೆದಿದ್ದರು.
ಅರವಿಂದ್ ಕೇಜ್ರಿವಾಲ್ ಅವರು ಇತರರ ಗೌರವವನ್ನು ಹಾಳು ಮಾಡಲು ಆರೋಪಗಳನ್ನು ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಈ ಹಿಂದೆ ಕೂಡ ಅವರು ಬಿಜೆಪಿ ನಾಯಕರಾದ ನಿತಿನ್ ಗಡ್ಕರಿ, ದಿವಂಗತ ಅರುಣ್ ಜೇಟ್ಲಿ ಮತ್ತು ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಮೇಲೆ ಆರೋಪಿಸಿ ಬಳಿಕ ಹೇಗೆ ಕ್ಷಮೆಯಾಚಿಸಿದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಮುಖ್ಯಮಂತ್ರಿ ಚನ್ನಿ ತಿಳಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಚುನಾವಣೆ: ಸಂಸದ ಭಗವಂತ್ ಮಾನ್ ಆಪ್‌ನ ಮುಖ್ಯಮಂತ್ರಿ ಅಭ್ಯರ್ಥಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರು ಈಗ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ತಾವು ತಮ್ಮ ಪಕ್ಷಕ್ಕೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.
“ನಾನು ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಅದಕ್ಕೆ ಅನುಮತಿ ನೀಡುವಂತೆ ನನ್ನ ಪಕ್ಷಕ್ಕೆ ಮನವಿ ಮಾಡಿದ್ದೇನೆ. ನನಗೆ ಮೊಕದ್ದಮೆ ಹೂಡುವ ಸ್ಥಿತಿಗೆ ಅವರೇ ತಂದಿದ್ದಾರೆ. ಅವರು ನನ್ನನ್ನು ಅಪ್ರಾಮಾಣಿಕ ಎಂದು ಕರೆಯದಿದ್ದು, ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿದ್ದಾರೆ” ಎಂದು ಹೇಳಿದ್ದಾರೆ.
“ಹಣ ಬೇರೆಯವರ ಬಳಿ ಸಿಕ್ಕಿದೆ. ಬೇರೆಯವರ ಮೇಲೆ ದಾಳಿ ನಡೆಸಲಾಗಿದೆ, ಆದರೆ ಅರವಿಂದ್ ಕೇಜ್ರಿವಾಲ್ ನೋಟುಗಳ ಬಂಡಲ್‌ಗಳನ್ನು ತೋರಿಸುವ ಫೋಟೋಗಳನ್ನು ಹಾಕುವ ಮೂಲಕ ನನ್ನನ್ನು ಅಪ್ರಾಮಾಣಿಕ ಎಂದು ಕರೆಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ಮತ್ತು ಅಕ್ರಮ ಮರಳು ದಂಧೆ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸೋದರಳಿಯನ ಮನೆ ಸೇರಿದಂತೆ ಹಲವೆಡೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದಾಗಿನಿಂದಲೂ ಆಮ್ ಆದ್ಮಿ ಪಕ್ಷ ಸಿಎಂ ಮೇಲೆ ದಾಳಿ ನಡೆಸುತ್ತಿದೆ. “ಚನ್ನಿ ಸಾಮಾನ್ಯ ವ್ಯಕ್ತಿಯಲ್ಲ ಅಪ್ರಾಮಾಣಿಕ ವ್ಯಕ್ತಿ” ಎಂದು ಕೇಜ್ರಿವಾಲ್ ಬುಧವಾರ ಹೇಳಿದ್ದರು.


