ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಕೆಯಿಂದಾಗಿ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂ (ಶನಿವಾರ ಮತ್ತು ಭಾನುವಾರ) ರದ್ದುಗೊಳಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆ ಬಳಿಕ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
“ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರುತ್ತಿದ್ದರೂ ಕೂಡ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರ ಸಂಖ್ಯೆ ಶೇಕಡಾ 5 ರಷ್ಟಿದೆ. ಹಾಗಾಗಿ, ವೀಕೆಂಡ್ ಕರ್ಫ್ಯೂ ಹಿಂಪಡೆಯುತ್ತಿದ್ದೇವೆ. ನೈಟ್ ಕರ್ಫ್ಯೂ ಮುಂದುವರೆಯಲಿದೆ. ಮುಂದೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಇಂದು ಮಧ್ಯಾಹ್ನ 1 ಗಂಟೆಯಿಂದ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
ಇದನ್ನೂ ಓದಿ: 11 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ: ಆರೋಗ್ಯ ಸಚಿವಾಲಯ
ಮಧ್ಯಾಹ್ನ 1 ಗಂಟೆ ಆರಂಭವಾಗಿದ್ದ ಸಭೆಯಲ್ಲಿ ಸಚಿವರಾದ ಡಾ.ಕೆ ಸುಧಾಕರ್, ಆರಗ ಜ್ಞಾನೇಂದ್ರ, ಆರ್. ಅಶೋಕ್, ಗೋವಿಂದ್ ಕಾರಜೋಳ, ಬಿಸಿ ನಾಗೇಶ್ ಭಾಗಿಯಾಗಿದ್ದರು. ಜೊತೆಗೆ ಆರೋಗ್ಯ ತಜ್ಞರು, ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರು ಭಾಗವಹಿಸಿದ್ದರು.
ಸಭೆಯಲ್ಲಿ ತಜ್ಞರ ಸಲಹೆ ಮೇರೆಗೆ ವೀಕೆಂಡ್ ಕರ್ಫ್ಯೂ ನಿರ್ಧಾರವನ್ನು ಹಿಂಪಡೆಯಲಾಗಿದ್ದು, ನೈಟ್ ಕರ್ಫ್ಯೂ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ಪ್ರತಿದಿನ ಇರಲಿದೆ. ಹೋಟೆಲ್, ರೆಸ್ಟೋರೆಂಟ್, ಬಾರ್‌ಗಳಲ್ಲಿ ತಮ್ಮ ಆಸನದ ಸಾಮರ್ಥ್ಯದ 50 ರಷ್ಟು ಭರ್ತಿಗೆ ಅವಕಾಶ ನೀಡಲಾಗಿದೆ.
ಬೆಂಗಳೂರು ಬಿಟ್ಟು ಉಳಿದ ಕಡೆಗಳ ಶಾಲಾ ಕಾಲೇಜುಗಳಲ್ಲಿ ಪಾಸಿಟಿವಿಟಿ ಜಾಸ್ತಿ ಬಂದ್ರೆ 7 ದಿನ ಕಡಿಮೆ ಪ್ರಕರಣ ಬಂದರೆ 3 ದಿನ ಶಾಲಾ-ಕಾಲೇಜು ಬಂದ್ ಆಗಲಿದೆ. ಬೆಂಗಳೂರಿನಲ್ಲಿ ಜನವರಿ 29 ರ ವರೆಗೆ ಶಾಲೆಗಳು ಬಂದ್ ಇರಲಿದೆ. ಹೀಗಾಗಿ ಮತ್ತೆ ಮುಂದಿನ ಶುಕ್ರವಾರ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿನ ವೀಕೆಂಡ್ ಕರ್ಫ್ಯೂಗೆ ವಿಪಕ್ಷಗಳು ಅಲ್ಲದೆ, ಕೇಂದ್ರ ಬಿಜೆಪಿ ಸಚಿವ ಸಿ.ಟಿ. ರವಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರೇ ಸರ್ಕಾರದ ಕೊರೊನಾ ನಿರ್ಬಂಧಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.