ಕೊರೊನಾ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಪಿಎಂ ಕೇರ್ ನಿಧಿಯಿಂದ 100 ಕೋಟಿ ರೂ. ನೀಡುವುದಾಗಿ ಹೇಳಿದ್ದ ಒಕ್ಕೂಟ ಸರ್ಕಾರವು, ಇದಕ್ಕಾಗಿ ಒಂದು ಪೈಸೆಯನ್ನೂ ನೀಡಿಲ್ಲ ಎಂದು ಆರ್‌ಟಿಐ ವರದಿಯೊಂದು ಇತ್ತೀಚೆಗೆ ಬಹಿರಂಗ ಪಡಿಸಿದೆ. ಸಮಾಜಿಕ ಕಾರ್ಯಕರ್ತ ಲೋಕೇಶ್ ಬಾತ್ರಾ ಎಂಬವರು ಕೇಳಿದ್ದ ಆರ್‌ಟಿಐ ಪ್ರಶ್ನೆಗೆ ಒಕ್ಕೂಟ ಸರ್ಕಾರದ ಆರೋಗ್ಯ ಸಚಿವಾಲಯವು ಈ ಮಾಹಿತಿಯನ್ನು ನೀಡಿದೆ.
2020 ರಲ್ಲಿ, ಸಾಂಕ್ರಾಮಿಕ ರೋಗವು ದೇಶದಾದ್ಯಂತ ಹರಡಿದಾಗ, ಮೇ 13 ರ ಪತ್ರಿಕಾ ಪ್ರಕಟಣೆಯ ಮೂಲಕ ಪ್ರಧಾನ ಮಂತ್ರಿಗಳ ಕಚೇರಿ (PMO)ಯು ಕೊರೊನಾ ವಿರುದ್ಧ ಹೋರಾಡಲು ಪಿಎಂ ಕೇರ್ ನಿಧಿಯಿಂದ 3,100 ಕೋಟಿ ರೂಪಾಯಿಗಳನ್ನು ನೀಡುತ್ತದೆ ಎಂದು ಹೇಳಿತ್ತು.
ಇದನ್ನೂ ಓದಿ:ಸಂಸದೀಯ ಸಮಿತಿಯಿಂದ ಪಿಎಂ ಕೇರ್ಸ್ ಪರಾಮರ್ಶೆಗೆ ಬಿಜೆಪಿ ವಿರೋಧ!
ಈ ನಿಧಿಯಲ್ಲಿ 100 ಕೋಟಿ ರೂ.ಗಳನ್ನು ಪ್ರಧಾನ ವೈಜ್ಞಾನಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಲಸಿಕೆ ಅಭಿವೃದ್ಧಿಪಡಿಸಲು ಪಾವತಿಸಲಾಗುವುದು ಎಂದು ಈ ಪತ್ರಿಕಾ ಪ್ರಕಟಣೆಯು ತಿಳಿಸಿತ್ತು.
ಲೊಕೇಶ್ ಬಾತ್ರಾ ಅವರು ಜುಲೈ 16 ರಂದು RTI ಮೂಲಕ ಈ ಪ್ರಶ್ನೆಯನ್ನು ಕೇಳಿದ್ದರು. ಅವರು ಕೇಳಿದ ಪ್ರಶ್ನೆಗೆ ಮೊದಲು ಅಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಲಾಗಿತ್ತು. ಆದ್ದರಿಂದ ಅವರು ಮತ್ತೇ ಪ್ರಶ್ನೆ ಕೇಳಿದ್ದರು. ನಾಲ್ಕು ತಿಂಗಳ ನಿರಂತರವಾದ ಆರ್‌ಟಿಐ ಅರ್ಜಿಯ ನಂತರ, ಒಕ್ಕೂಟ ಸರ್ಕಾರದ ಆರೋಗ್ಯ ಸಚಿವಾಲಯ ಅಂತಿಮವಾಗಿ ಲಸಿಕೆ ಅಭಿವೃದ್ಧಿಗೆ ಯಾವುದೇ ಹಣವನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಮಧ್ಯೆ, ಒಕ್ಕೂಟ ಸರ್ಕಾರವು PM CARES ಸಾರ್ವಜನಿಕ ಪ್ರಾಧಿಕಾರವಲ್ಲ ಮತ್ತು ಆದ್ದರಿಂದ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಪಿಎಂ ಕೇರ್ಸ್ ಅನ್ನು 2020 ರ ಮಾರ್ಚ್ 28 ರಂದು ಸ್ಥಾಪಿಸಲಾಯಿತು. ಇದಕ್ಕೆ ಸಾರ್ವಜನಿಕರಿಂದ ದೇಣಿಗೆಗಳನ್ನು ಆಹ್ವಾನಿಸಲಾಗಿತ್ತು. ಪ್ರಧಾನ ಮಂತ್ರಿ ಟ್ರಸ್ಟ್‌ನ ಪದನಿಮಿತ್ತ ಅಧ್ಯಕ್ಷರಾಗಿದ್ದು, ರಕ್ಷಣಾ, ಗೃಹ ಮತ್ತು ಹಣಕಾಸು ಸಚಿವರು ಪದನಿಮಿತ್ತ ಟ್ರಸ್ಟಿಗಳಾಗಿರುತ್ತಾರೆ.
ಇದನ್ನೂ ಓದಿ:ಮೋದಿ ಸರ್ಕಾರಕ್ಕೆ ಏಳು ವರ್ಷ; ರಾಜ್ಯಗಳ ಮೇಲೆ ಸವಾರಿ ದೇಶದ ಸಮಗ್ರತೆಯ ಜತೆ ಚೆಲ್ಲಾಟ: ಎ ನಾರಾಯಣ