ಮದುವೆಯ ನೆಪದಲ್ಲಿ ಮಹಿಳೆಯರನ್ನು ನಂಬಿಸಿ ಮೋಸ ಮಾಡಿ, ಬ್ಲಾಕ್ ಮೇಲ್ ಮಾಡುತ್ತಿದ್ದ 36 ವರ್ಷದ ನಿರುದ್ಯೋಗಿ ವ್ಯಕ್ತಿಯನ್ನು ಬೆಂಗಳೂರಿನ ಈಶಾನ್ಯ ಸೈಬರ್ ಕ್ರೈಂ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆರೋಪಿಯನ್ನು ರಾಜಾಜಿ ನಗರದ ನಿವಾಸಿ ವಿಜಯ್ ಕುಮಾರ್ ಎಸ್ ಎಂದು ಗುರುತಿಸಲಾಗಿದ್ದು, ಈತ ಹಲವು ಯುವತಿಯರ ಖಾಸಗಿ ಫೋಟೋಗಳನ್ನು ಸಂಗ್ರಹಿಸಿ ಅವರಿಗೆ ಬ್ಲಾಕ್ ಮೇಲ್ ಮಾಡಿ ಸುಲಿಗೆ ಮಾಡಿದ್ದರು.
ಇತ್ತೀಚಿಗೆ ಆರೋಪಿ ವಿಜಯ್ ಕುಮಾರ್ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದರು. ಅವರನ್ನು ಭೇಟಿ ಕೂಡ ಮಾಡಿದ್ದರು. ಬಳಿಕ ಅವರ ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಆತ ಆಕೆಗೆ 50,000 ರೂಪಾಯಿ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕ್ಲಬ್‌ಹೌಸ್‌ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ದ್ವೇಷ ಭಾಷಣ: ಮುಂಬೈನಲ್ಲಿ ಮೂರು ಜನರ ಬಂಧನ
ಆರೋಪಿ ವಿಜಯ್ ಕುಮಾರ್, ಪರಿಸ್ಥಿತಿಗೆ ಅನುಗುಣವಾಗಿ ಪತ್ರಕರ್ತ, ಚಿತ್ರ ಕಲಾವಿದ ಮತ್ತು ಐಟಿ ಉದ್ಯೋಗಿ ಎಂದು ಹೇಳಿಕೊಳ್ಳುತ್ತಿದ್ದರು. ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಯುವತಿಯರಿಗೆ ಆಮಿಷ ಒಡ್ಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯರ ಸ್ನೇಹ ಬೆಳಸಿ, ಅವರ ವಿಶ್ವಾಸ ಗಳಿಸಿದ ಬಳಿಕ ಖಾಸಗಿ ಚಿತ್ರಗಳನ್ನು ತೆಗೆದು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು. ಇದೇ ವಿಧಾನವನ್ನು ಬಳಸಿಕೊಂಡು ಅನೇಕ ಮಹಿಳೆಯರಿಗೆ ಕಿರುಕುಳ ಕೊಟ್ಟು ಸುಲಿಗೆ ಮಾಡಿದ್ದರು. ಇಷ್ಟೇ ಅಲ್ಲದೆ ಸಂತ್ರಸ್ತೆಯ ಹೆಸರಿನಲ್ಲಿ ನಕಲಿ ಖಾತೆಯನ್ನೂ ಸೃಷ್ಟಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.