ಕ್ಷುಲ್ಲಕ ಕಾರಣಕ್ಕೆ ದಲಿತರ ಕೇರಿಗೆ ನುಗ್ಗಿದ ಮೇಲ್ವರ್ಗದ ಜನರ ಗುಂಪು ಕಬ್ಬಿಣದ ರಾಡು, ದೊಣ್ಣೆ, ಕಟ್ಟಿಗೆಗಳಿಂದ ದಲಿತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಘಟನೆ ರಾಯಚೂರು ಜಿಲ್ಲೆಯ ಮುದಗಲ್ ಪೋಲಿಸ್ ಠಾಣೆ ವ್ಯಾಪ್ತಿಗೆ ಬರುವ ರಾಮತ್ನಾಳ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ದಲಿತರು ಕೆಲಸಕ್ಕೆ ಹೊರಟ ಸಮಯದಲ್ಲಿ ದಲಿತರ ಕೇರಿಗೆ ನುಗ್ಗಿದ ಲಿಂಗಾಯತ ಸಮುದಾಯದ ಜನರು ಮಹಿಳೆಯರು, ನನ್ನ ವೃದ್ಧ ತಂದೆಯ ಮೇಲೆ, ಮಹಿಳೆಯರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಪರಸಪ್ಪ, ಮುದಗಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಸೇರಿದ 36 ಮಂದಿಯ ವಿರುದ್ಧ ದೂರು ದಾಖಲಾಗಿದೆ. ಸೆಕ್ಷನ್ 143, 147, 148, 448, 323, 307, 324, 354, 504, 506 ಸೇರಿದಂತೆ ಎಸ್‌ಸಿ ಎಸ್‌ಟಿ ತಿದ್ದುಪಡಿ ಕಾಯ್ದೆ- 2015ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: Writing With Fire: ದಲಿತ ಹೆಣ್ಣುಮಕ್ಕಳೇ ಕಟ್ಟಿದ ’ಖಬರ್ ಲಹರಿಯಾ’ ಕಥೆ
“ಫೆ.28 ರಂದು ಸಂಜೆ ದೂರುದಾರರ ಕೇರಿಯ ಮುಂದಿನ ಚಿಕ್ಕ ಸಿಸಿ ರಸ್ತೆಯಲ್ಲಿ ವಿಪರೀತ ವೇಗದಲ್ಲಿ ಹಾಡುಗಳನ್ನು ಜೋರಾಗಿ ಹಾಕಿಕೊಂಡು ಟ್ಯ್ರಾಕ್ಟರ್‌ಗಳಲ್ಲಿ ಆರೋಪಿಗಳು ಹೊಗುತ್ತಿದ್ದರು. ರಸ್ತೆಯಲ್ಲಿ ಮಕ್ಕಳಿರುತ್ತಾರೆ ಸ್ಪಲ್ಪ ನಿಧಾನಕ್ಕೆ ಟ್ಯ್ರಾಕ್ಟರ್ ಚಲಾಯಿಸಿ ಎಂದು ದೂರುದಾರರು ಹೇಳಿದಕ್ಕೆ ಕೋಪಗೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಬೆಳಗ್ಗೆ ಗುಂಪು ಕಟ್ಟಿಕೊಂಡು ಬಂದು ಕ್ಟಿಗೆ, ಕಬ್ಬಿಣದ ರಾಡು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ರಕ್ಷಣೆಗೆ ಬಂದವರ ಮೇಲೂ ಹಲ್ಲೆ ಮಾಡಲಾಗಿದೆ. ದೂರುದಾರರ ತಂದೆ, ತಾಯಿ, ತಂಗಿಯರ ಮೇಲೂ ಹಲ್ಲೆ ನಡೆಸಲಾಗಿದೆ” ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಕೊಲೆ ಮಾಡಲು ಯತ್ನಿಸಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ನಮಗೆ ರಕ್ಷಣೆ ನೀಡಬೇಕು ಎಂದು ದೂರುದಾರ ಪರಸಪ್ಪ ಮನವಿ ಮಾಡಿದ್ದರು.
ಘಟನೆಯಲ್ಲಿ ಒಬ್ಬಾಕೆಯ ಕೈಮುರಿದಿದ್ದು, ಇನ್ನೊಬ್ಬರ ತಲೆಗೆ ಆರು ಹೊಲಿಗೆ ಹಾಕಲಾಗಿದೆ. ಗಾಯಾಳುಗಳಿಗೆ ಲಿಂಗಸ್ಗೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ದಲಿತರ ಕೇರಿಗೆ ನುಗ್ಗಿದ ಮೇಲ್ವರ್ಗದ ಜನರ ಗುಂಪು ಕಬ್ಬಿಣದ ರಾಡು, ದೊಣ್ಣೆ, ಕಟ್ಟಿಗೆಗಳಿಂದ ದಲಿತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಘಟನೆ ರಾಯಚೂರು ಜಿಲ್ಲೆಯ ಮುದಗಲ್ ಪೋಲಿಸ್ ಠಾಣೆ ವ್ಯಾಪ್ತಿಗೆ ಬರುವ ರಾಮತ್ನಾಳ ಗ್ರಾಮದಲ್ಲಿ ನಡೆದಿದೆ. ಪ್ರಕರಣ ದಾಖಲಾಗಿದೆ.#raichur #karnataka pic.twitter.com/oQiXk6MsU4
— Naanu Gauri (@naanugauri) March 5, 2022
ಇದನ್ನೂ ಓದಿ: ಅರಕಲಗೂಡು: ದಲಿತರು ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದಕ್ಕೆ ಸವರ್ಣಿಯರಿಂದ ಹಲ್ಲೆ



