ವಿವಾದಿತ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶದ ರೈತರು ಗುರುವಾರ (ಫೆ.18) ರಂದು ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ನಡೆಸಿದ “ರೈಲು ರೋಕೊ” ಇಲಾಖೆ ಮೇಲೆ ಭಾರಿ ಪರಿಣಾಮ ಬೀರಿಲ್ಲ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಕೆಲವು ವಲಯಗಳಲ್ಲಿ ಯಾವುದೇ ರೈಲು ನಿಲ್ಲಿಸಲಾಗಿಲ್ಲ, ಆದರೆ, ಉತ್ತರ ವಲಯದಲ್ಲಿ ಸುಮಾರು 25 ರೈಲುಗಳನ್ನು ನಿಯಂತ್ರಿಸಲಾಗಿದೆ ಎಂದು ವಲಯ ರೈಲ್ವೆ ವಕ್ತಾರರು ಮಾಹಿತಿ ನೀಡಿದ್ದಾರೆ.
“ಇಲ್ಲಿಯವರೆಗೆ ಸುಮಾರು 25 ರೈಲುಗಳನ್ನು ನಿಯಂತ್ರಿಸಲಾಗಿದೆ. ಆಂದೋಲನದಿಂದಾಗಿ ರೈಲು ಸೇವೆಗಳ ಮೇಲೆ ಕನಿಷ್ಠ ಪರಿಣಾಮ ಬೀರಿದೆ” ಎಂದು ಉತ್ತರ ರೈಲ್ವೆ ವಕ್ತಾರ ದೀಪಕ್ ಕುಮಾರ್ ಹೇಳಿದ್ದಾರೆ.
25 ರೈಲುಗಳಲ್ಲಿ ಕೆಲವನ್ನು ರದ್ದುಗೊಳಿಸಲಾಗಿದೆ. ಮತ್ತೆ ಕೆಲವನ್ನು ಬೇರೆ ಮಾರ್ಗಕ್ಕೆ ಮರು ಹೊಂದಿಸಿಲಾಗಿದೆ. ಆದರೂ ಕೂಡ ಇಂದಿನ ರೈಲ್ ರೋಕೋ ಚಳವಳಿ ರೈಲ್ವೆ ಇಲಾಖೆ ಮೇಲೆ ಭಾರಿ ಪರಿಣಾಮ ಬೀರಿಲ್ಲ ಎಂದು ಎನ್‌ಡಿಟಿವಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ಕಳಂಕಿತ ಕೈಗಳನ್ನು ಹಿಡಿದು ಮೋದಿ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆಯೆ?’: ಸ್ಟಾಲಿನ್ ಪ್ರಶ್ನೆ
ರೈತ ಹೋರಾಟದ ಮುಂದಾಳತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚ್ ಫೆಬ್ರವರಿ 10 ರಂದು ಪತ್ರಿಕಾ ಹೇಳಿಕೆಯಲ್ಲಿ ಫೆಬ್ರವರಿ 18 ರಂದು ದೇಶಾದ್ಯಂತ ರೈಲ್ ರೋಕೋ ಚಳವಳಿ ನಡೆಸಲು ಕರೆ ನೀಡಿತ್ತು. ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ರೈಲು ತಡೆ ನಡೆಸಲು ತಿಳಿಸಲಾಗಿತ್ತು.
Modinagar: Members of Bharatiya Kisan Union shower flower petals on police personnel and offer sweets to them during farmers' 'Rail Roko' protest
Police appeals to BKU members to end their agitation pic.twitter.com/wiBvvxbuRK
— ANI UP (@ANINewsUP) February 18, 2021
ದೆಹಲಿಯ ಸಮೀಪವಿರುವ ನಿಲ್ದಾಣಗಳಲ್ಲಿಯೂ ಪ್ರತಿಭಟನಾಕಾರರು ರೈಲು ಹಳಿಗಳ ಮೇಲೆ ಪ್ರತಿಭಟನೆ ನಡೆಸಿದರು. ಗಾಜಿಪುರ ಗಡಿ ಬಳಿಯ ಮೋದಿ ನಗರ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಹರಿಯಾಣದ ಕುರುಕ್ಷೇತ್ರದಲ್ಲಿ “ರೈಲು ರೋಕೊ” ಚಳವಳಿ ನಡೆಯುತ್ತಿದ್ದರೂ ಚಲಿಸಲು ಮುಂದಾಗಿದ್ದ ಗೀತಾ ಜಯಂತಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಹತ್ತಿ ರೈತರು ಪ್ರತಿಭಟನೆ ನಡೆಸಿದರು. ಇನ್ನೂ ಚಾರ್ಖಿ ದಾದ್ರಿ ರೈಲ್ವೆ ನಿಲ್ದಾಣದಲ್ಲಿ ರೈಲು ಹಳಿಗಳನ್ನು ಬಂದ್ ಮಾಡಿ, ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳಿಗೆ ರೈತರು ಜಿಲೇಬಿ, ಚಹಾ ಮತ್ತು ತಿಂಡಿಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!
ಪಂಜಾಬ್‌ನಲ್ಲಿ ದೆಹಲಿ-ಲೂಧಿಯಾನ-ಅಮೃತಸರ ರೈಲ್ವೆ ಮಾರ್ಗದಲ್ಲಿ ಪ್ರತಿಭಟನಾಕಾರರು ಅನೇಕ ಸ್ಥಳಗಳಲ್ಲಿ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಜಲಂಧರ್‌ನ ಜಲಂಧರ್ ಕ್ಯಾಂಟ್-ಜಮ್ಮು ರೈಲು ಹಳಿಗಳನ್ನು ನಿರ್ಬಂಧಿಸಿದಲಾಗಿತ್ತು. ಮೊಹಾಲಿ ಜಿಲ್ಲೆಯಲ್ಲಿಯೂ ರೈಲ್ ರೋಕೋ ಪ್ರತಿಭಟನೆ ನಡೆಸಲಾಗಿತ್ತು.
ಹರಿಯಾಣ ಮತ್ತು ಪಂಜಾಬ್ ಎರಡು ರಾಜ್ಯಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ರೈಲ್ವೆ ಪೊಲೀಸ್ ಮತ್ತು ರಾಜ್ಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ 20 ಹೆಚ್ಚುವರಿ ರೈಲ್ವೆ ಸಂರಕ್ಷಣಾ ವಿಶೇಷ ಪಡೆ (ಆರ್‌ಪಿಎಸ್‌ಎಫ್) ಪಡೆಗಳನ್ನು ರೈಲು ಇಲಾಖೆ ನಿಯೋಜಿಸಿತ್ತು.
ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ರೈಲ್ ರೋಕೋಗೆ ರಾಜ್ಯದಲ್ಲಿಯೂ ಭಾರಿ ಬೆಂಬಲ ವ್ಯಕ್ತವಾಗಿದೆ. ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಆರಂಭವಾದರೆ, ಮತ್ತೆ ಕೆಲವು ಕಡೆ 12 ಗಂಟೆಗೆ ಚಳವಳಿ ಆರಂಭವಾಗಿತ್ತು.
ಇದನ್ನೂ ಓದಿ: ರೈತ ಹೋರಾಟ: ರೈಲ್ ರೋಕೋ ಚಳವಳಿಗೆ ರಾಜ್ಯದಲ್ಲಿ ಭಾರಿ ಬೆಂಬಲ


