Homeಮುಖಪುಟದಿಶಾ ರವಿ, ಸೋಫಿ ಸ್ಕೋಲ್ ಮತ್ತು ಭಾರತೀಯ ಫ್ಯಾಸಿಸಂನ ಆರಂಭ...!

ದಿಶಾ ರವಿ, ಸೋಫಿ ಸ್ಕೋಲ್ ಮತ್ತು ಭಾರತೀಯ ಫ್ಯಾಸಿಸಂನ ಆರಂಭ…!

ಕೌಂಟರ್ ‌ಕರೆಂಟ್ಸ್ ಸಂಪಾದಕ ಬಿನು ಮ್ಯಾಥ್ಯೂ ಬರಹ

- Advertisement -
- Advertisement -

ನಾನು 2002 ರಲ್ಲಿ Countercurrents.org ಅನ್ನು ಸ್ಥಾಪಿಸಿದಾಗ, ದೇಶದ್ರೋಹಕ್ಕಾಗಿ ಬಂಧಿಸಲ್ಪಟ್ಟ ದಿಶಾ ರವಿ ಆಗ ಎರಡು ವರ್ಷದ ಅಂಬೆಗಾಲಿಡುವ ಮಗು. 2002 ರಲ್ಲಿ, ವಾತಾವರಣದಲ್ಲಿನ CO2 (ಇಂಗಾಲದ ಡೈಆಕ್ಸೈಡ್) ಮಟ್ಟವು 370 ಪಿಪಿಎಂ ಆಗಿತ್ತು. ಈಗ ಅದು 415 ಪಿಪಿಎಂ ಆಗಿದೆ. 19 ವರ್ಷಗಳಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟವು ವರ್ಷಕ್ಕೆ 2 ಪಿಪಿಎಂ ಹೆಚ್ಚಾಗಿದೆ. ಮಿಥೇನ್, ನೈಟ್ರಸ್ ಆಕ್ಸೈಡ್ ಇತ್ಯಾದಿಗಳನ್ನು ಒಳಗೊಂಡಂತೆ ವಾತಾವರಣದಲ್ಲಿನ ಸಂಚಿತ ಹಸಿರುಮನೆ ಅನಿಲಗಳ ಮಟ್ಟವು ಸುಮಾರು 500 ಪಿಪಿಎಂ ಆಗಿದೆ.

ಪ್ರಸ್ತುತ ದರದಲ್ಲಿ ಹಸಿರುಮನೆ ಅನಿಲಗಳ ಮಟ್ಟ ಹೆಚ್ಚಾದರೆ, ಶತಮಾನದ ಅಂತ್ಯದ ವೇಳೆಗೆ ಆರ್ಕ್ಟಿಕ್ ಪ್ರದೇಶದಲ್ಲಿ ಯಾವುದೇ ಮಂಜುಗಡ್ಡೆ ಇರುವುದಿಲ್ಲ ಮತ್ತು ಸಮುದ್ರ ಮಟ್ಟವು ಹಲವಾರು ಅಡಿಗಳಷ್ಟು ಏರಿಕೆಯಾಗುವುದರಿಂದ ಭಾರತದ ಮತ್ತು ಪ್ರಪಂಚದ ಅನೇಕ ಕರಾವಳಿ ನಗರಗಳು ವಾಸಯೋಗ್ಯವಾಗುವುದಿಲ್ಲ.

ಈ ಹಿನ್ನೆಲೆಯಲ್ಲಿ ದಿಶಾ ರವಿ ಮತ್ತು 18 ವರ್ಷದ ಗ್ರೆಟಾ ಥನ್‌ಬರ್ಗ್ ಹವಾಮಾನ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಅವರು ತಮ್ಮಷ್ಟಕ್ಕೇ, ತಮಗಾಗಿಯಷ್ಟೇ ಅಲ್ಲ, ಇಡೀ ಮಾನವೀಯತೆಗಾಗಿ ಹೋರಾಡುತ್ತಿದ್ದಾರೆ. ಈ ಗ್ರಹದಲ್ಲಿ ಮಾನವೀಯತೆ ಬದುಕಬೇಕಾದರೆ ಅವರ ಹೋರಾಟ ಗೆಲ್ಲಬೇಕು. ಹಿರಿಯ ತಲೆಮಾರಿನವರು ಅವರ ಮಾತನ್ನು ಕೇಳಬೇಕು ಮತ್ತು ಅವರ ಬೇಡಿಕೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು.

ಇದನ್ನೂ ಓದಿ: ’ದಿಶಾ ಕೆಲಸದ ಬಗ್ಗೆ ಹೆಮ್ಮೆಪಡುತ್ತೇವೆ’: ಬೆನ್ನಿಗೆ ನಿಂತ ’ಮೌಂಟ್ ಕಾರ್ಮೆಲ್ ಹಳೆಯ ವಿದ್ಯಾರ್ಥಿ ಸಂಘ

ಆದರೆ ಏನಾಗುತ್ತಿದೆ? ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ಸರ್ಕಾರವು ಅಂಗೀಕರಿಸಿದ ಕೃಷಿ ಕಾನೂನುಗಳ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸುವ ಸಲುವಾಗಿ ಟೂಲ್ಕಿಟ್ ಸಂಪಾದಿಸಿದ್ದಕ್ಕಾಗಿ ಬೆಂಗಳೂರಿನ 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಲಾಗಿದೆ. ಈ ಕಾನೂನುಗಳು ರೈತರನ್ನು ವಿಶ್ವದ ದೊಡ್ಡ ಕೃಷಿ ನಿಗಮಗಳಿಗೆ ತಮ್ಮ ಸ್ವಂತ ಭೂಮಿಯನ್ನು ಗುತ್ತಿಗೆ ನೀಡುವಂತೆ ಮಾಡುತ್ತವೆ. ಮಹಾತ್ಮ ಗಾಂಧಿ ಮತ್ತು ಇತರ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಹೂಡಲಾದ ವಸಾಹತುಶಾಹಿ ದೇಶದ್ರೋಹ ಕಾನೂನನ್ನು ದಿಶಾ ರವಿ ಮೇಲೆ ಹೂಡಲಾಗಿದೆ.

ದಿಶಾಳನ್ನು ಬಂಧಿಸಿದ ದೆಹಲಿ ಪೊಲೀಸರು, ದಿಶಾ ತಮ್ಮ ಕ್ರಮದಿಂದ ದೇಶಕ್ಕೆ ಅವಮಾನ ಮಾಡಿದರು ಎಂದು ಹೇಳುತ್ತಾರೆ. ಗ್ರೇಟಾ ಥನ್ಬರ್ಗ್ ಟ್ವೀಟ್ ಮಾಡಿದ ಟೂಲ್ಕಿಟ್ (ಗೂಗಲ್ ಡಾಕ್) ಗಾಗಿ ದಿಶಾ ರವಿ ಅವರನ್ನು ಬಂಧಿಸಲಾಗಿದೆ ಎಂಬುದು ಕುತೂಹಲಕಾರಿಯಾಗಿದೆ. ಗ್ರೆಟಾಳನ್ನು ಬಂಧಿಸುವ ಅಧಿಕಾರ ಭಾರತ ಸರ್ಕಾರಕ್ಕೆ ಇದ್ದರೆ ಅದು ಗ್ರೆಟಾಳನ್ನು ಬಂಧಿಸಿ ಬಿಡುತ್ತಿತ್ತೇನೋ?! ಈ ಅದು ಅಸಾಧ್ಯವಾದ ಕಾರಣ, ಅದು ಅವಳ ಸಹಚರಳಾದ ದಿಶಾ ರವಿ ಅವರನ್ನು ಬಂಧಿಸಿತು.

 

ರೈತರ ಹೋರಾಟವನ್ನು ಹೇಗೆ ಬೆಂಬಲಿಸಬೇಕು ಎಂಬುದರ ಕುರಿತು ಜನರಿಗೆ ಕೆಲವು ಸಲಹೆಗಳನ್ನು ನೀಡುವ ಟೂಲ್ಕಿಟ್ ದೇಶದ್ರೋಹ ಹೇಗಾಗುತ್ತದೆ? ಅದು ಹಾಗಾಗುವುದಾದರೆ, ನಮ್ಮ ಗಣರಾಜ್ಯವು ಸ್ವಲ್ಪ ಆತ್ಮಾವಲೋಕನ ಮಾಡಬೇಕಾಗಿದೆ. ಸರ್ಕಾರದ ವಿರುದ್ಧದ ಪ್ರತಿಭಟನೆ ಯಾವಾಗ ದೇಶದ್ರೋಹಿ ಚಟುವಟಿಕೆಯಾಯಿತು? ಕರಪತ್ರ ಅಥವಾ ಟೂಲ್ಕಿಟ್ ತಯಾರಿಸುವುದು ದೇಶದ್ರೋಹಿ ಚಟುವಟಿಕೆ ಯಾವಾಗ ಆಯಿತು? ಹಾಗಿದ್ದಲ್ಲಿ ಸರ್ಕಾರವನ್ನು ಒಪ್ಪದ ಮತ್ತು ಅದನ್ನು ವ್ಯಕ್ತಪಡಿಸುವವರೆಲ್ಲರೂ ದೇಶದ್ರೋಹಿ!

ಇದನ್ನೂ ಓದಿ: ದಿಶಾ ರವಿ ಬಂಧನ ಖಂಡಿಸಿದ ‘ಭಾರತದ ಗ್ರೇಟಾ ಥನ್‌ಬರ್ಗ್’ ರಿಧಿಮಾ ಪಾಂಡೆ

ಸರಳವಾಗಿ ಹೇಳುವುದಾದರೆ ಫ್ಯಾಸಿಸಂ ಭಾರತದ ಭೂಮಿಗೆ ಇಳಿದಿದೆ! ದಿಶಾ ರವಿ ಇತ್ತೀಚಿನ ಬಲಿಪಶು.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಾಲಾ ಮಕ್ಕಳ ಗುಂಪಿನೊಂದಿಗೆ ವಿಡಿಯೋ ಸಂವಾದದಲ್ಲಿ ಹವಾಮಾನ ಬದಲಾಗುತ್ತಿಲ್ಲ, ನಾವು ಬದಲಾಗುತ್ತಿದ್ದೇವೆ ಎಂದು ಹೇಳಿದ್ದು ಕುತೂಹಲಕಾರಿಯಾಗಿದೆ. ಅವರ ಕಾವಲಿನಲ್ಲಿಯೇ ಪರಿಸರ-ಹವಾಮಾನ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ನಾವು ಆಶ್ಚರ್ಯಪಡಬೇಕಾಗಿಲ್ಲ.

ಭಾರತದಲ್ಲಿನ ರೈತರ ಹೋರಾಟ ಮತ್ತು ಅದನ್ನು ಇಂದಿನ ಸರ್ಕಾರವು ಹೇಗೆ ನಿರ್ವಹಿಸುತ್ತಿದೆ ಎಂಬ ದೃಷ್ಟಕೋನದಲ್ಲಿ ದಿಶಾ ರವಿ ಬಂಧನವನ್ನು ನೋಡಬೇಕು. ಭಾರತದ ಅನೇಕ ಪ್ರಮುಖ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳನ್ನು ಈಗಿನ ಸರ್ಕಾರವು ಸರ್ಕಾರದ ಹಾದಿಗೆ ಬಾರದಂತೆ ಗುರಿಯಾಗಿಸಿಕೊಂಡಿದೆ. ಭಾರತದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳನ್ನು ಸರ್ಕಾರಿ ಸಂಸ್ಥೆಗಳು ವಿವಿದ ರೀತಿಯಲ್ಲಿ ಮೌನಗೊಳಿಸಿವೆ. ಸರ್ಕಾರದ ನೆರೆಷನ್ ಮತ್ತು ಬೆದರಿಕೆಗಳನ್ನು ಮುದ್ದು ಮಾಡುವವರನ್ನು ಬೆಂಬಲಿಸಲಾಗುತ್ತಿದೆ. ವಿರೋಧಿಸುವವರನ್ನು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಇತರ ಸರ್ಕಾರಿ ಸಂಸ್ಥೆಗಳ ದಾಳಿಗಳ ಮೂಲಕ ಹತ್ತಿಕ್ಕುವ ಯತ್ನ ಮಾಡಲಾಗುತ್ತಿದೆ.

ನೊದೀಪ್ ಕೌರ್

 

ಹೀಗಾಗಿ, ಮುಖ್ಯವಾಹಿನಿಯ ಮಾಧ್ಯಮಗಳು ಐತಿಹಾಸಿಕ ರೈತರ ಆಂದೋಲನಕ್ಕೆ ಯಾವುದೇ ಗಮನ ಕೊಡುವುದಿಲ್ಲ. ಈ ಐತಿಹಾಸಿಕ ಪ್ರತಿಭಟನೆಗೆ ಸರಿಯಾದ ಪ್ರಸಾರವನ್ನು ನೀಡುತ್ತಿರುವುದು ಪರ್ಯಾಯ ಮಾಧ್ಯಮ. ರೈತರ ಪ್ರತಿಭಟನೆಯನ್ನು ಧೈರ್ಯದಿಂದ ಕವರ್ ಮಾಡಿರುವ ನ್ಯೂಸ್‌ಕ್ಲಿಕ್.ಇನ್ ಮೇಲೆ ಆರ್ಥಿಕ ಅಕ್ರಮಗಳೆಂದು ಆರೋಪಿಸಿ ಜಾರಿ ನಿರ್ದೇಶನಾಲಯದ ದಾಳಿ ನಡೆಸಿದೆ. ಈ ದಾಳಿ ಸುಮಾರು 100 ಗಂಟೆಗಳ ಕಾಲ ನಡೆಯಿತು. ಕೆಲವು ತಿಂಗಳ ಹಿಂದೆ ಭಾರತ ಸರ್ಕಾರ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಮೇಲೆ ದಾಳಿ ನಡೆಸಿ ಭಾರತದಲ್ಲಿ ತಮ್ಮ ಚಟುವಟಿಕೆಗಳನ್ನು ಮುಚ್ಚುವಂತೆ ಒತ್ತಾಯಿಸಿತ್ತು.

ಇದನ್ನೂ ಓದಿ: ಆಕೆಯ ಹೆಸರು ‘ದಿಶಾ ರವಿ ಜೋಸೇಫ್’ ಅಲ್ಲ!: ಸುಳ್ಳಿನ ವಿರುದ್ಧ ದಿಶಾ ಸ್ನೇಹಿತರ ಆಕ್ರೋಶ

ವಾಕ್ ಸ್ವಾತಂತ್ರ್ಯದ ಎಲ್ಲಾ ಮಾರ್ಗಗಳನ್ನು ಸರ್ಕಾರ ಮೌನಗೊಳಿಸಲು ಏಕೆ ಪ್ರಯತ್ನಿಸುತ್ತಿದೆ? ದಿಶಾ ರವಿ ಅವರನ್ನು ಸರ್ಕಾರ ಏಕೆ ಬಂಧಿಸುತ್ತಿದೆ? ಆಕೆಗೆ ವಾಕ್ ಸ್ವಾತಂತ್ರ್ಯದ ಹಕ್ಕು ಇಲ್ಲವೇ? ಅಥವಾ ಭಾರತದಲ್ಲಿ ವಾಕ್ ಸ್ವಾತಂತ್ರ್ಯದ ಹಕ್ಕು ಕೊನೆಗೊಂಡಿದೆ ಮತ್ತು ಅದೀಗ ಡಿಫ್ಯಾಕ್ಟೊ ಫ್ಯಾಸಿಸ್ಟ್ ಆಡಳಿತವಾಗಿ ಮಾರ್ಪಟ್ಟಿದೆ ಎಂಬುದು ಸತ್ಯವೇ?

ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಮಾತೃ ಸಂಸ್ಥೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಸೊಲಿನಿಯ ಫ್ಯಾಸಿಸ್ಟ್ ಆಡಳಿತದ ಮಾದರಿಯಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆರ್‌ಎಸ್‌ಎಸ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಬಿ.ಎಸ್ ಮೂಂಜೆ ಮುಸೊಲಿನಿಯನ್ನು ಭೇಟಿಯಾಗಿದ್ದರು ಮತ್ತು ಮುಸೊಲಿನಿಯ ಫ್ಯಾಸಿಸ್ಟ್ ಸೈನಿಕರಿಗೆ ತಮ್ಮ ಪ್ರಶಂಸೆಯನ್ನು ಬರೆದರು. ಆರ್‌ಎಸ್‌ಎಸ್‌ನ ಎರಡನೇ ಮುಖ್ಯಸ್ಥರಾಗಿದ್ದ ಎಂ.ಎಸ್. ಗೋಲ್ವಾಲ್ಕರ್ ಅವರು ನಾಜಿ ಜರ್ಮನಿಯ ದೊಡ್ಡ ಅಭಿಮಾನಿ ಮತ್ತು ಆರ್‌ಎಸ್‌ಎಸ್ ನಾಜಿಸಂ ಅನ್ನು ಅನುಕರಿಸಲು ಬಯಸಿದ್ದರು.

ಈಗ ಗೋಲ್ವಾಲ್ಕರ್ ಅವರ ಅನುಯಾಯಿಗಳು ಅಧಿಕಾರದಲ್ಲಿರುವಾಗ, ದಿಶಾ ರವಿ ಮತ್ತು ಭಾರತದ ಹಲವಾರು ಪ್ರಮುಖ ಬುದ್ಧಿಜೀವಿಗಳು, ಹೋರಾಟಗಾರರು ಮತ್ತು ಪತ್ರಕರ್ತರ ಬಂಧನದಲ್ಲಿ ಭಾರತದಲ್ಲಿ ನಾಜಿ ಜರ್ಮನಿಯ ಪುನರಾವರ್ತನೆಯನ್ನು ನಾವು ನೋಡುತ್ತಿದ್ದೇವೆ. ನಾಜಿ ಜರ್ಮನಿಯ ಅದೇ ವಿಧಾನಗಳನ್ನು ಭಾರತ ಪುನರಾವರ್ತಿಸುತ್ತಿದೆಯೇ? ನನ್ನ ಪ್ರಕಾರ ಫ್ಯಾಸಿಸಂ ಭಾರತದಲ್ಲಿ ಚೆನ್ನಾಗಿ ನೆಲೆಗೊಂಡಿದೆ.

ಸಾಮಾಜಿಕ ಮಾಧ್ಯಮ ವಿಮರ್ಶಕ ದರ್ಶನ್ ಮೊಂಡ್ಕರ್ ಇದನ್ನು ಫೇಸ್‌ಬುಕ್‌ನಲ್ಲಿ ಕೆಳಗಿನಂತೆ ಬರೆದಿದ್ದಾರೆ:
ಆಗ ನಾಜಿ-ಜರ್ಮನಿ ಎಂದು ಕರೆಯಲಾಗುತ್ತಿದ್ದ ಆಡಳಿತದ ಸಂದರ್ಭದಲ್ಲಿ ಸೋಫಿ ಸ್ಕೋಲ್ ಎಂಬ 21 ವರ್ಷದ ಸಾಮಾಜಿಕ ಕಾರ್ಯಕರ್ತೆಯೊಬ್ಬಳಿದ್ದಳು. ಫೆಬ್ರವರಿ 18, 1943 ರಂದು ಮ್ಯೂನಿಚ್ ವಿಶ್ವವಿದ್ಯಾಲಯದಲ್ಲಿ ಕರಪತ್ರಗಳನ್ನು ವಿತರಿಸಿದ್ದಕ್ಕಾಗಿ ಸೋಫಿಯನ್ನು ಗೆಸ್ಟಾಪೊ (ನಾಜಿ ಪೊಲೀಸ್ ಪಡೆ) ಬಂಧಿಸಿತ್ತು. ಈ ಕರಪತ್ರಗಳಲ್ಲಿ ನಾಜಿ ಸಿದ್ಧಾಂತವನ್ನು ವಿರೋಧಿಸಲು ಜರ್ಮನಿಯ ಜನರನ್ನು ಒತ್ತಾಯಿಸುವ ಮಾಹಿತಿ ಮತ್ತು ಸೂಚನೆಗಳು ಇದ್ದವು. ಈ ಕರಪತ್ರಗಳು ಸರ್ಕಾರದ ವಿರುದ್ಧ ಸೌಮ್ಯವಾಗಿ ಮತ್ತು ಅಹಿಂಸಾತ್ಮಕವಾಗಿ ಭಿನ್ನಾಭಿಪ್ರಾಯವನ್ನು ಹೇಗೆ ವ್ಯಕ್ತಪಡಿಸಬೇಕು ಎಂಬ ಬಗ್ಗೆ ಕಾರ್ಯವಿಧಾನಗಳನ್ನು ವಿವರಿಸಿದ್ದವು.

ಇದನ್ನೂ ಓದಿ: ದಿಶಾ ಅವರಂತೆ ಎಲ್ಲರೂ ಸುಳಿಯಲ್ಲಿದ್ದಾರೆ! – ಲಿಯೋ ಸಾಲ್ಡಾನಾ

ಆದ್ದರಿಂದ ಮೂಲತಃ ಈ ಕರಪತ್ರಗಳು 1940 ರ ಟೂಲ್‌ಕಿಟ್ ಆಗಿದ್ದವು. ಗೆಸ್ಟಾಪೊ ಪಡೆಗೆ ಈ ಕರಪತ್ರಗಳು ಸರ್ಕಾರದ ವಿರುದ್ಧದ ಪಿತೂರಿ ಎನಿಸಿತು. ದೇಶದ್ರೋಹದ ಆರೋಪದ ಮೇಲೆ ಸೋಫಿಯನ್ನು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. “ಯಾರಾದರೂ ಇಂಥದ್ದನ್ನು ಪ್ರಾಂಭಿಸಲೇಬೇಕಿತ್ತು. ನಾವು ಬರೆದಿದ್ದನ್ನು ಮತ್ತು ಹೇಳಿದ್ದನ್ನು ಬಹಳಷ್ಟು ಜನ ನಂಬಿದರು. ನಾವು ಮಾಡಿದಂತೆ ಅವರು ತಮ್ಮನ್ನು ತಾವು ವ್ಯಕ್ತಪಡಿಸುವ ಧೈರ್ಯವನ್ನು ಹೊಂದಿಲ್ಲ – ಸೋಫಿ ತನ್ನ ಡಿಫೇನ್ಸ್‌ನಲ್ಲಿ ಮಾಡಿದ ಏಕೈಕ ಹೇಳಿಕೆ ಇದು. ಫೆಬ್ರವರಿ 22, 1943 ರಂದು ಸೋಫಿಯನ್ನು ಗಿಲ್ಲೊಟಿನ್ (ನಮ್ಮಲ್ಲಿರುವ ಮೇವು ಕತ್ತರಿಸುವ ಉಪಕರಣದಂತಹ) ಬಳಸಿ ಶಿರಚ್ಛೇದನ ಮಾಡಲಾಯಿತು. ಸೋಫಿ ತಪ್ಪು ಮಾಡಿದ್ದಾಳೆ ಎಂದು ಅವಳ ಶಿರಚ್ಛೇದ ಮಾಡಲಿಲ್ಲ, ಆದರೆ ತಪ್ಪಿನ ವಿರುದ್ಧ ಧ್ವನಿ ಎತ್ತುವ ಧೈರ್ಯದ ಕಾರಣಕ್ಕೆ!

ಇಂದು ಭಾರತದಲ್ಲಿ, ನಮ್ಮಲ್ಲಿ ಒಬ್ಬ ಸದಾಫ್ ಜಾಫರ್, ಒಬ್ಬ ನೌದೀಪ್ ಕೌರ್, ಒಬ್ಬ ದಿಶಾ ರವಿ…… ಇದ್ದಾರೆ. ಭಾರತದ ಅನೇಕ ಸೋಫಿಗಳು ತಪ್ಪುಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಕ್ಷುಲ್ಲಕ ಆರೋಪದ ಮೇಲೆ ಅಂತಹವರನ್ನು ಬಂಧಿಸಲಾಗುತ್ತಿದೆ, ವಿಚಾರಣೆ ಮಾಡದೇ ಬಂಧನದಲ್ಲಿಡಲಾಗಿದೆ, ನಿಂದನೆ, ಥಳಿಸುವುದು, ಮ್ಯಾನ್‌ ಹ್ಯಾಂಡ್ಲಿಂಗ್ ಮಾಡುವುದು, ಕಸ್ಟಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗುವುದು ನಡೆದೇ ಇವೆ. ಇದೆಲ್ಲ ಆಗುತ್ತಿರುವುದು ಅವರು ತಪ್ಪು ಮಾಡಿದ ಕಾರಣಕ್ಕಲ್ಲ…ಆದರೆ ಅವರು ಧೈರ್ಯ ಮಾಡಿದ ಕಾರಣಕ್ಕೆ. ಯಾಕೆಂದರೆ ಯಾರಾದರೂ ಧೈರ್ಯ ಮಾಡಬೇಕಾಗಿದೆ, ಏಕೆಂದರೆ ನಮ್ಮಲ್ಲಿ ಉಳಿದವರಿಗೆ ಧೈರ್ಯ ತೋರುವ ಗಟ್ಸ್ ಇಲ್ಲ…!

ದಬ್ಬಾಳಿಕೆಯ ಶಕ್ತಿಕೇಂದ್ರಗಳ ವಿರುದ್ಧ ಧ್ವನಿ ಎತ್ತುವಷ್ಟು ಧೈರ್ಯಶಾಲಿಯಾಗಿರುವ ಈ ಎಲ್ಲ ಮಹಿಳೆಯರಿಗೆ ನನ್ನ ವಂದನೆ ಮತ್ತು ಗೌರವ. ಈ ಶಕ್ತಿಕೇಂದ್ರದ ಅಡಿಯಲ್ಲಿರುವ ರಾಜಿ ಸಂಸ್ಥೆಗಳ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿದ್ದು, ವಿಶೇಷವಾಗಿ ಮಹಿಳೆಯರು ಧೈರ್ಯ ಮಾಡಕೂಡದು ಎಂಬ ಅಲಿಖಿತ ನಿಯಮ ಜಾರಿಯಲ್ಲಿರುವ ಈ ದೇಶದಲ್ಲಿ ಅವರು ಧ್ವನಿ ಎತ್ತಿರುವುದಕ್ಕೆ ನನ್ನ ನಮನ. ತಮ್ಮ ಕಣ್ಣೆದುರು ಏನಾಗುತ್ತಿದೆ ಎಂಬುದನ್ನು ನಿರ್ಲಕ್ಷಿಸಿ, ಉಳಿದ ಭಾರತವು ನಿಷ್ಕ್ರಿಯ ಪ್ರೇಕ್ಷಕರಾಗಿ ನಿಲ್ಲುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಭಾರತವು ಸೋಫಿಯಾಳನ್ನು ಹೊಂದಲು ಸಾಧ್ಯವಿಲ್ಲ. ನಾವು ಅದು ಸಂಭವಿಸಲು ಬಿಡುವುದಿಲ್ಲ..

ಡಿಸ್‌ಕ್ಲೇಮರ್: “ಆ ಒಂದು ಉತ್ತಮವಾದ, ಪ್ರಜ್ವಲಿಸುವ ದಿನ, ನಾನು ಹೊರಡಲೇಬೇಕಿದೆ… ನನ್ನ ಸಾವಿನ ವಿಷಯವೇನು ಮಹತ್ವದ್ದಲ್ಲ ಬಿಡಿ, ಆ ಮೂಲಕ, ಸಾವಿರಾರು ಜನರು ಎಚ್ಚರಗೊಂಡು ಕಾರ್ಯಶೀಲರಾಗುವುದಾದರೆ? ನಾಜಿ ಸರ್ಕಾರದ ವಿರುದ್ಧ ದೇಶದ್ರೋಹಕ್ಕಾಗಿ ಶಿರಚ್ಛೇದನಕ್ಕೆ ಒಳಗಾಗುವ ಮೊದಲು ಸೋಫಿ ಸ್ಕೋಲ್ ಹೇಳಿದ ಕೊನೆಯ ಮಾತುಗಳಿವು. ಹೌದು, ಭಾರತವು ನಾಜಿಗಳ ದಿನಗಳ ಕೀಳುಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ. ಅದಕ್ಕೂ ಮೊದಲು ನಾವು ಎಚ್ಚರಗೊಳ್ಳಬೇಕು. ಇಡೀ ಭಾರತ ಮತ್ತು ಭಾರತವನ್ನು ಬೆಂಬಲಿಸುವ ಇಡೀ ಜಗತ್ತು ಎಚ್ಚರಗೊಂಡು ಈ ಫ್ಯಾಸಿಸ್ಟ್ ಆಡಳಿತವನ್ನು ಪ್ರಶ್ನಿಸಬೇಕು. ಇಲ್ಲದಿದ್ದರೆ, ಭಾರತವು ನಾಜಿ ಜರ್ಮನಿಯ ಹಾದಿಯಲ್ಲಿ ಸಾಗಲಿದೆ…

(ಲೇಖಕ ಬಿನು ಮ್ಯಾಥ್ಯೂ ಕೌಂಟರ್‌ಕರೆಂಟ್ಸ್.ಆರ್ಗ್‌ನ ಸಂಪಾದಕರು)

ಇದನ್ನೂ ಓದಿ: ದಿಶಾಳ ವಾಟ್ಸಾಪ್ ಚಾಟ್ಸ್‌, ತನಿಖಾ ಮಾಹಿತಿ ಸೋರಿಕೆ: ನ್ಯೂಸ್‌ ಚಾನೆಲ್‌ಗಳಿಗೆ ನೋಟಿಸ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಮ್ಮ ದೇಶದಲ್ಲಿಂದು ನಡೆಯುತ್ತಿರುವ ಗಟನೆಗಳ ಬಗ್ಗೆ ಪ್ರಜ್ಞಾವಂತರು ದನಿ ಎತ್ತದಿದ್ದರೆ, ದಿಶಾರಂತಹ ಇನ್ನೂ ಹಲವರ ಬಂದನ ಆಗಲಿದೆ.

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...