Homeಮುಖಪುಟದಿಶಾ ಅವರಂತೆ ಎಲ್ಲರೂ ಸುಳಿಯಲ್ಲಿದ್ದಾರೆ! - ಲಿಯೋ ಸಾಲ್ಡಾನಾ

ದಿಶಾ ಅವರಂತೆ ಎಲ್ಲರೂ ಸುಳಿಯಲ್ಲಿದ್ದಾರೆ! – ಲಿಯೋ ಸಾಲ್ಡಾನಾ

- Advertisement -
- Advertisement -

“ದೇಶ ಕಿ ಗದ್ದಾರೊಂಕೊ!” (ದೇಶದ್ರೋಹಿಗಳಿಗೆ) ಎಂದು ಅನುರಾಗ್ ಠಾಕೂರ್ ಕಿರುಚಿದರೆ, “ಗೋಲಿಮಾರೊ ಸಾಲೊಂ ಕೋ” (ಗುಂಡು ಹೊಡೆಯಿರಿ) ಎಂದು ಜನಸಮೂಹ ಪ್ರತಿಕ್ರಿಯಿಸಿತು. ವಾರಗಳ ನಂತರ ದೆಹಲಿಯಾದ್ಯಂತ ಭೀಕರ ಹಿಂಸಾಚಾರ ಸಂಭವಿಸಿ, ಇದರಲ್ಲಿ ಮುಸ್ಲಿಂ ಪ್ರಾಬಲ್ಯದ ನೆರೆಹೊರೆಗಳನ್ನು ಟಾರ್ಗೆಟ್ ಮಾಡಲಾಗಿತ್ತು. ಹೀಗೆ ದಮನಕ್ಕೆ ಬಳಗಾದವರು ಜನರನ್ನು ವಿಭಜಿಸುವ ಇರಾದೆ ಹೊಂದಿದ್ದ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದರು. ದೆಹಲಿ ಪೊಲೀಸರು ಹಿಂಸಾಚಾರವನ್ನು ಕಡಿಮೆ ಮಾಡಲು ಏನೂ ಮಾಡಲಿಲ್ಲ. ಬಹಳಷ್ಟು ಜನರು, ಮುಖ್ಯವಾಗಿ ಮುಸ್ಲಿಮರು ಜೀವ ತೆತ್ತರು. ಜನಸಮೂಹವನ್ನು ಹಿಂಸಾಚಾರಕ್ಕೆ ಪ್ರೋತ್ಸಾಹಿಸಿದ್ದಕ್ಕಾಗಿ ಮತ್ತು ಗಲಭೆ ಉಂಟುಮಾಡಿದ್ದಕ್ಕಾಗಿ ಅನುರಾಗ್ ಠಾಕೂರ್ ವಿರುದ್ಧ ದೂರುಗಳ ಹೊರತಾಗಿಯೂ, ಆತನಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಹಣಕಾಸು ರಾಜ್ಯ ಸಚಿವ ಸ್ಥಾನ ದೊರಕಿತು.

ರೈತ ವಿರೋಧಿ ಕಾನೂನುಗಳನ್ನು ಪ್ರತಿಭಟಿಸುವ ರೈತರೊಂದಿಗೆ ಸೇರಲು ಜನರನ್ನು ಪ್ರೋತ್ಸಾಹಿಸುವ ಡಾಕ್ಯುಮೆಂಟ್‌ಅನ್ನು ಸಂಪಾದಿಸಿದ್ದಾಗಿ ದೆಹಲಿ ಪೊಲೀಸರು ಆರೋಪಿಸಿರುವ ಕಾರಣ ಬೆಂಗಳೂರಿನ ದಿಶಾ ರವಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಜಾಗತಿಕ ಜೂಮ್ ಕರೆಯಲ್ಲಿ ಭಾಗವಹಿಸಿದ್ದ ವಿದೇಶಿಗರಲ್ಲಿ ಒಬ್ಬರು ಖಲಿಸ್ತಾನದ ಪ್ರತಿಪಾದಕರಾಗಿದ್ದರು ಎಂದು ಆರೋಪಿಸಲಾಗುತ್ತಿದೆ.

ಠಾಕೂರ್ ಜನರನ್ನು ಕೊಲ್ಲಲು ಸಕ್ರಿಯವಾಗಿ ಪ್ರಚೋದಿಸಿದ್ದರು. ರೈತ ವಿರೋಧಿ ಕಾನೂನುಗಳನ್ನು ಶಾಂತಿಯುತವಾಗಿ ವಿರೋಧಿಸಲು ಮಾತ್ರ ದಿಶಾ ರವಿ ಕೇವಲ ಯುವಜನರನ್ನು ಪ್ರೋತ್ಸಾಹಿಸಿದ್ದರು. ಈ ವಿರೋಧಾಭಾಸ ಇಂದಿನ ಭಾರತದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವ್ಯಾಖ್ಯಾನಿಸುತ್ತದೆ. ಆಡಳಿತಾರೂಢ ಬಿಜೆಪಿಯ ನಿರೂಪಣೆ – ಅದರ ಕಾರ್ಯಸೂಚಿಯನ್ನು ಒಪ್ಪದ ಯಾರಾದರೂ ರಾಷ್ಟ್ರ ವಿರೋಧಿ, ಮತ್ತು ಹೆಚ್ಚಾಗಿ ದೇಶದ್ರೋಹಿ ಎಂದು ಕರೆಯಲ್ಪಡುತ್ತಿದ್ದಾರೆ. ಇದು ಎಷ್ಟು ಹೆಚ್ಚಳಗೊಂಡಿದೆ ಎಂದರೆ, ಅದು ಈಗ ನೀರಸದ ವಿಷಯ ಎನ್ನುವಷ್ಟು!

ಈ ಹಿನ್ನೆಲೆಯಲ್ಲಿ, ಕಳೆದ ವರ್ಷ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿದಾಗ, ಕರ್ನಾಟಕ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಫೇಸ್‌ಬುಕ್ ಕಾಮೆಂಟ್ಅನ್ನು ನಾವು ನೆನಪಿಸಿಕೊಳ್ಳಬೇಕು: “ಮಹಾರಾಷ್ಟ್ರದಲ್ಲಿ ಬಹಿರಂಗವಾಗಿ ಪ್ರದರ್ಶಿಸಲಾದ ತುರ್ತು ಪರಿಸ್ಥಿತಿಯ ಮನಸ್ಥಿತಿಯನ್ನು ದೇಶ ಖಂಡಿಸುತ್ತದೆ. #ಇಂಡಿಯಾಸ್ಟ್ಯಾಂಡ್ಸ್‌ವಿಥ್‌ಅರ್ನಾಬ್. 1975ರಲ್ಲಿ ಘೋಷಿತ ತುರ್ತು ಪರಿಸ್ಥಿತಿಯಲ್ಲಿ ಜೈಲು ಶಿಕ್ಷೆ ಅನುಭವಿಸಿದ ಇದೇ ಸಚಿವರು, ದಿಶಾ ರವಿ ಅವರ ಬಂಧನದ ಬಗ್ಗೆ ಏನನ್ನೂ ಹೇಳಲಿಲ್ಲ. ಅದರಲ್ಲೂ ವಿಶೇಷವಾಗಿ ದೆಹಲಿ ಪೊಲೀಸರು ಆಕೆಯನ್ನು ಬಂಧಿಸಿ, ಎತ್ತಿಕೊಂಡು, ದೆಹಲಿಗೆ ಹಾರಿದರು, ಮತ್ತು ಪೊಲೀಸ್ ಕಸ್ಟಡಿ ಪಡೆಯಲು ಮರುದಿನ ದೆಹಲಿ ನ್ಯಾಯಾಲಯದಲ್ಲಿ ಅವಳನ್ನು ಹಾಜರುಪಡಿಸಲಾಯಿತು. ಇವೆಲ್ಲವೂ ಕಾನೂನಿನ ನಿಯಮವನ್ನು ಉಲ್ಲಂಘಿಸಿದ ವಿದ್ಯಮಾನಗಳು. ಮುಖ್ಯವಾಗಿ ಮತ್ತು ವಿಶೇಷವಾಗಿ, ದೆಹಲಿ ಹೈಕೋರ್ಟ್, ಸಂದೀಪ್‌ಕುಮಾರ್ ಪ್ರಕರಣದಲ್ಲಿ, ಅಂತರರಾಜ್ಯ ತನಿಖೆ ಮತ್ತು ಬಂಧನಗಳ ಕುರಿತಾಗಿ ನಿಖರವಾದ ಕಾರ್ಯವಿಧಾನವನ್ನು ಅನುಸರಿಸಬೇಕು ಎಂದು ಸೂಚಿಸಿದೆ ಎಂಬುದನ್ನು ಗಮನಿಸಿದರೆ, ಈಗ ದೆಹಲಿ ಪೊಲೀಸರ ಕ್ರಮ ಕಾನೂನುಬಾಹಿರ ಅನಿಸುತ್ತದೆ.

ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ನ್ಯಾಯಾಂಗ-ಮೀರಿದ (ಎಕ್ಸ್ಟ್ರಾ ಜುಡಿಷಿಯಲ್) ಎಂದು ಕರೆಯಲ್ಪಡುವ ಕೃತ್ಯದ ವಿರುದ್ಧ ನೀವೇಕೆ ಧ್ವನಿ ಎತ್ತಲಿಲ್ಲ ಎಂದು ಕೇಳಿದಾಗ, ಕರ್ನಾಟಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ: “ಪ್ರೊಟೋಕಾಲ್ ಎಂಬುದು ಏನೂ ಇಲ್ಲ. ನಾವು ಹೋಗಿ ನಮ್ಮ ರಾಜ್ಯದ ಹೊರಗಿನ ಅನೇಕ ಜನರನ್ನು ಬಂಧಿಸುತ್ತೇವೆ” ಎಂದರು. ದಿಶಾ ಅವರ ಬಂಧನವು ಎಲ್ಲ ರೀತಿಯಲ್ಲೂ ದೆಹಲಿ ಹೈಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಯೋಚಿಸುವ ಕಾಳಜಿಯನ್ನು ಬೊಮ್ಮಾಯಿಯವರು ತಳೆಯಲಿಲ್ಲ.
ಭಾರತ ಸರ್ಕಾರವು ಆಗಾಗ್ಗೆ ಪಿತೂರಿಯ ನರೆಟಿವ್‌ಗಳನ್ನು ಸೃಷ್ಟಿ ಮಾಡಿ ರೂಪಿಸುತ್ತಿದೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಪರಿಸರ ರಕ್ಷಕರನ್ನು ಜೈಲಿಗೆ ಹಾಕುತ್ತಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ, ಪ್ರಮುಖ ಪತ್ರಕರ್ತರು, ವಕೀಲರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು ಈಗ ಎರಡು ವರ್ಷಗಳಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ ಮತ್ತು ಭಾರತದ ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಿಂದ ಜಾಮೀನು ವ್ಯವಸ್ಥಿತವಾಗಿ ನಿರಾಕರಿಸಲ್ಪಟ್ಟಿದೆ. ಕೋವಿಡ್‌ನಿಂದ ಬಳಲುತ್ತಿದ್ದ ವರವರ ರಾವ್ ಮತ್ತು ಪಾರ್ಕಿನ್‌ಸನ್‌ನಿಂದ ಬಳಲುತ್ತಿರುವ ಫಾದರ ಸ್ಟಾನ್ ಸ್ವಾಮಿಯವರು, ಮಾರಣಾಂತಿಕ ಪರಿಸ್ಥಿತಿಯಲ್ಲಿ ಇರುವುದು ಗೊತ್ತಿದ್ದೂ ಜಾಮೀನು ನಿರಾಕರಿಸಲಾಗಿದೆ. ಭಾರತದ ಆದಿವಾಸಿಗಳ ನಡುವೆ ವಕೀಲರಾಗಿ ಕೆಲಸ ಮಾಡಲು ಅಮೆರಿಕದ ಪೌರತ್ವವನ್ನು ತ್ಯಜಿಸಿದ್ದ ಮತ್ತು ದೇಶದಿಂದ ಪಲಾಯನ ಮಾಡುವ ಯಾವುದೇ ಉದ್ದೇಶವಿಲ್ಲದ ಸುಧಾ ಭಾರದ್ವಾಜ್ ಅವರ ಆರೋಗ್ಯವು ಹದಗೆಡುತ್ತಿರುವಾಗಲೂ ಜಾಮೀನು ನಿರಾಕರಿಸಲಾಗಿದೆ. ಲಲಿತ್ ಮೋದಿ, ನೀರವ್ ಮೋದಿ, ಚೋಕ್ಸಿ, ಮಲ್ಯ ಮತ್ತು ಇತರರು ತಮ್ಮ ವಿರುದ್ಧ ಬಂಧನ ವಾರಂಟ್ ಇದ್ದಾಗಲೂ ದೇಶದಿಂದ ಪಲಾಯನ ಮಾಡಲು ಸಮರ್ಥರಾಗಿರುವ ವಿರೋಧಾಭಾಸವನ್ನು ತಿಳಿಯಬೇಕಿದೆ.

ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳದೆ ಉಪದೇಶ ಮತ್ತು ಒಪ್ಪಿಗೆಯ ಅನುಸರಣೆಯ ಮೇಲೆ ನಿರ್ಮಿತವಾದ ಹಾಗೂ ಗಂಭೀರವಲ್ಲದ ಮಿಥ್ಯದ ಹಾಕಸ್-ಪೋಕಸ್ ಇತಿಹಾಸದ ನಿರೂಪಣೆಗಳನ್ನು ಹೊಂದಿರುವ ಆರ್‌ಎಸ್‌ಎಸ್ ಭಾರತದ ಯುವಕರ ಭಿನ್ನಾಭಿಪ್ರಾಯ, ಪ್ರತಿರೋಧ ಮತ್ತು ಚೈತನ್ಯವನ್ನು ಸಹಿಸಬಲ್ಲ ವ್ಯವಸ್ಥೆಯಲ್ಲ. ಇಂದು ಬಹುಪಾಲು ಯುವಜನರು ಉತ್ಸಾಹಿಗಳು, ಗಂಭೀರ ವಿಷಯಗಳ ಕುರಿತು ವಾದಿಸಬಲ್ಲವರು ಮತ್ತು ಸಂವಾದ ಬೆಳೆಸಬಲ್ಲವರು. ಅವರು ತಮ್ಮ ಇಷ್ಟದ ರಾಜಕೀಯ ಸಿದ್ಧಾಂತಗಳನ್ನು ಮುಕ್ತವಾಗಿ ಮತ್ತು ಬಹಿರಂಗವಾಗಿ ತೋರಿಸಿಕೊಳ್ಳುವವರು, ಮತ್ತು ಅವರಲ್ಲಿ ಹಲವರು ಅಧಿಕಾರದ ಎದುರು ಸತ್ಯವನ್ನು ನುಡಿಯಲು ಹಿಂಜರಿಯದವರು. ಅವರು ಭೀಮಾ ಕೋರೆಗಾಂವ್ ಪ್ರಕರಣದ ಬಗ್ಗೆ, ರೈತರ ಪ್ರತಿಭಟನೆ, ಹವಾಮಾನ ಬದಲಾವಣೆ ಮತ್ತು ಇನ್ನೂ ಹೆಚ್ಚಿನದರ ಬಗ್ಗೆ ಕೇಳುತ್ತಾರೆ, ಪ್ರಶ್ನಿಸುತ್ತಾರೆ.

ಇಂಥದ್ದೇ ಸ್ಫೂರ್ತಿ ಮತ್ತು ಮನೋಭಾವವನ್ನು, 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ ಇಂದಿರಾಗಾಂಧಿ ಆಡಳಿತದ ದಬ್ಬಾಳಿಕೆಯ ಅಳ್ವಿಕೆಯನ್ನು ಉರುಳಿಸಲು ಹೋರಾಡಿದ ಬಿಜೆಪಿಯ ಪೂರ್ವವರ್ತಿಯಾದ ಜನ ಸಂಘದ ಭಾಗವಾಗಿದ್ದ ಅನೇಕರು ಸಂಭ್ರಮಿಸಿದ್ದರು. ಆಗ ಬೃಹತ್ ಪ್ರತಿಭಟನೆಗಳನ್ನು ಮುನ್ನಡೆಸಿದ ಹಲವರು ಮುಂದೆ ಭಾರತದ ಪ್ರಧಾನಿ ಮತ್ತು ಉಪ ಪ್ರಧಾನಮಂತ್ರಿಗಳಾಗಿದ್ದಾರೆ. ಇದು ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸುವ ವಿಧಾನವಾಗಿದೆ. ಆದರೆ ಆರ್‌ಎಸ್‌ಎಸ್‌ನ ರಾಜಕೀಯ ವಿಭಾಗ ಬಿಜೆಪಿ ಸಂಪೂರ್ಣ ಅಧಿಕಾರವನ್ನು ಪಡೆದಾಗ, ಪ್ರತಿಯೊಬ್ಬರೂ ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಒಪ್ಪಿಗೆ ಸೂಚಿಸಿ ಇರಬೇಕು, ಇಲ್ಲದಿದ್ದರೆ ಪ್ರತೀಕಾರವನ್ನು ಎದುರಿಸಬೇಕಾಗುತ್ತದೆ.

ದಿಶಾ ರವಿ ಅವರ ವಿಷಯದಲ್ಲಿ ನೋಡುವುದಾದರೆ, ಎಬಿವಿಪಿ (ಆರಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆ) ಸದಸ್ಯರಾಗಿ ಸುರೆಶ್ ಕುಮಾರ್ ಜನಸಮೂಹವನ್ನು ಸಂಘಟಿಸುತ್ತಿದ್ದ ಪ್ರಮಾಣದ ಒಂದಂಶದಷ್ಟಾದರೂ ದಿಶಾ ಸಂಘಟಿಸುತ್ತಿದ್ದಾರೆಂದು ಸೂಚಿಸಲು ಏನೂ ಪುರಾವೆ ಇಲ್ಲ ಮತ್ತು ಸುರೇಶ್‌ಕುಮಾರ್ ಅದಕ್ಕಾಗಿ ತುರ್ತು ಸಮಯದಲ್ಲಿ ಜೈಲಿನಲ್ಲಿದ್ದರು. ದಿಶಾ ಅವರು ’ಫ್ರೈಡೇಸ್ ಫಾರ್ ಫ್ಯೂಚರ್ ಎಂಬ ಯುವಜನರ ಅಂತಾರಾಷ್ಟ್ರೀಯ ನೆಟ್‌ವರ್ಕ್‌ನ ಒಂದು ಭಾಗವಾಗಿದ್ದಾರೆ. ಇವರೆಲ್ಲರೂ ಜಾಗತಿಕ ತಾಪಮಾನ ಏರಿಕೆ ಮತ್ತು ಅದರ ಪರಿಣಾಮವಾಗಿ ಸಂಭವಿಸುವ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ವಿಶ್ವದಾದ್ಯಂತ ಸರ್ಕಾರಗಳು ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ತೀವ್ರವಾಗಿ ಚಿಂತಿತರಾಗಿದ್ದಾರೆ.

ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸರ್ಕಾರಗಳು ಕೆಲಸ ಮಾಡುವಂತೆ ಒತ್ತಾಯಿಸಲು, ಈ ಯುವಕರು ಸೆಮಿನಾರ್‌ಗಳು, ಪ್ರತಿಭಟನೆಗಳು ಮತ್ತು ಆನ್‌ಲೈನ್ ಅಭಿಯಾನಗಳನ್ನು ಆಯೋಜಿಸುತ್ತಾರೆ. ವಿಶ್ವದ ಕೇವಲ ಶೇ. 1 ಶ್ರೀಮಂತರ ಪರವಿರುವ ಕಾನೂನು ಮತ್ತು ಪಾಲಿಸಿಗಳನ್ನು ಬಯಲುಮಾಡಿ ಜಾಗೃತಿ ಮೂಡಿಸಲು ಕೆಲಸ ಮಾಡುತ್ತಾರೆ. ಇದಕ್ಕಾಗಿ ಅವರು ಇದ್ದಕ್ಕಿದ್ದಂತೆ ರಾಷ್ಟ್ರ ವಿರೋಧಿಗಳು ಮತ್ತು ಪಿತೂರಿಗಾರರಾಗುತ್ತಾರಾ? ಉದಾಹರಣೆಗೆ, ಈ ಆಂದೋಲನವನ್ನು ಪ್ರಾರಂಭಿಸಿದ ಗ್ರೇಟಾ ಥನ್‌ಬರ್ಗ್‌ರನ್ನು ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಮತ್ತು ಪ್ರಧಾನಿ ಮೋದಿ ಹಾಜರಾಗುವ ದಾವೋಸ್ ಶೃಂಗಸಭೆಯಲ್ಲಿ ಮಾತನಾಡಲು ಆಹ್ವಾನಿಸಲಾಗಿತ್ತು. ಹೀಗಾಗಿ ಅವಳು ಆಗ ಸ್ಪಷ್ಟವಾಗಿ ಜಾಗತಿಕ ಸಂಚುಕೋರಳಾಗಿರಲಿಲ್ಲ. ಆದರೆ ದೆಹಲಿ ಪೊಲೀಸ್ ಆವೃತ್ತಿಯ ಪ್ರಕಾರ, ಅವಳು ಈಗ ಇದ್ದಕ್ಕಿದ್ದಂತೆ ಸಂಚುಕೋರಳಾಗುವುದು ಹೇಗೆ? ಹಾಗಿದ್ದರೆ, ಆಕೆ ಭಾರತದ ಭದ್ರತೆಗೆ ಬೆದರಿಕೆಯಾಗಿ ಬೆಳೆಯುತ್ತಿದ್ದಾಗ ನಮ್ಮ ಗುಪ್ತಚರ ಸಂಸ್ಥೆಗಳು ನಿದ್ರಿಸುತ್ತಿದ್ದವು ಎಂದು ಇದು ಸೂಚಿಸುತ್ತದೆಯೇ? ಮತ್ತು ವಿಶ್ವಸಂಸ್ಥೆಯು ’ಸಹ-ಸಂಚುಕೋರ’ನಾಗುತ್ತದೆಯೇ?

ಆತ್ಮವಿಶ್ವಾಸದ ಸರ್ಕಾರವು ದಿಶಾ ರವಿ ಮತ್ತು ಗ್ರೇಟಾ ಥನ್‌ಬರ್ಗ್‌ರನ್ನು ಸಂವಾದಕ್ಕೆ ಆಹ್ವಾನಿಸಬೇಕು. ಆಗ ಇದು ಆಗಾಗ್ಗೆ ಕೇಳಿಬರುವ ನುಡಿಗಟ್ಟು ವಸುದೈವಕುಟುಂಬಕಂ ಅನ್ನು ನಿಜವಾಗಿಯೂ ಪ್ರತಿಬಿಂಬಿಸುತ್ತದೆ. ಹೇಗಾದರೂ, ದಿಶಾ ರವಿ ಅವರ ಅತ್ಯಂತ ಪ್ರಶ್ನಾರ್ಹ ಬಂಧನವನ್ನು ಸಮರ್ಥಿಸುವಲ್ಲಿ, ದೆಹಲಿ ಪೊಲೀಸರಿಂದ ನಾವು ಪಡೆಯುವುದು ಟಿವಿಯಲ್ಲಿ ಬಿಡುಗಡೆಯಾದ ತುಣುಕುಗಳು! ಅವಳು ಟೂಲ್ ಕಿಟ್‌ಅನ್ನು ಸಂಪಾದಿಸಿದ್ದಳು ಮತ್ತು ಜೂಮ್ ಕರೆಯಲ್ಲಿ ಭಾಗವಹಿಸಿದ್ದಳು ಮತ್ತು ಅದು ಭಾರತದ ಭದ್ರತೆಗೆ ಭಂಗ ತಂದಿದೆ ಎಂಬ ಟಿವಿ ಮಾಧ್ಯಮಗಳ ಮಾತುಗಳು!

ಕೆಲವು ಟ್ವೀಟ್‌ಗಳು ಮತ್ತು ಟೂಲ್‌ಕಿಟ್‌ಗಳ ಹಂಚಿಕೆಯಿಂದ ಅಲುಗಾಡಬಹುದಾದಂತಹ ದುರ್ಬಲ ದೇಶ ಭಾರತವಲ್ಲ. ಆದರೆ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ, ತಮ್ಮ ಮನಸ್ಸಿಗೆ ಸರಿ ಎನಿಸಿದ್ದನ್ನು ಮುಕ್ತವಾಗಿ ಮಾತಾಡುವ ಯುವಜನರೆಂದರೆ ಅಸಹನೆಯಿದೆ. ಅಂತಹ ಉದಾರವಾದಿ ಪ್ರಜಾಪ್ರಭುತ್ವ ಮನೋಭಾವವು ಆರ್‌ಎಸ್‌ಎಸ್‌ನ ಡಿಎನ್‌ಎಗೆ ವಿರುದ್ಧವಾಗಿದೆ, ಅದಕ್ಕೆ ಎಲ್ಲವೂ ತನ್ನ ನಿರೂಪಣೆಗೆ, ಒಪ್ಪಿಕೊಳ್ಳುವವರು ಬೇಕು. ದಿಶಾ ರವಿ ಮತ್ತು ಅವರಂತಹ ಲಕ್ಷಾಂತರ ಯುವಕರು ದೇಶ ಕಟ್ಟುವ ವಿಭಿನ್ನ ಕಲ್ಪನೆಯನ್ನು ಹೊಂದಿದ್ದಾರೆ. ಅವರು ನಿಜವಾಗಿಯೂ ವಸುದೈವಕುಟುಂಬಕಂ ಅನ್ನು ನಂಬುತ್ತಾರೆ; ಮತ್ತು ಬ್ರಹ್ಮಾಂಡದಲ್ಲಿ ಜೀವವಿರುವ ಏಕೈಕ ಗ್ರಹವನ್ನು ರಕ್ಷಿಸಲು ಎಲ್ಲಾ ೬ ಶತಕೋಟಿ ಮಾನವರು ಒಟ್ಟಾಗಿ ಕೆಲಸ ಮಾಡಬೇಕೆಂದು ಬಯಸುತ್ತಾರೆ. ಅವರು ಎಲ್ಲರಿಗೂ ಸಮಾನತೆ ಮತ್ತು ನ್ಯಾಯವನ್ನು ಬಯಸುತ್ತಾರೆ. ಅಭಿವೃದ್ಧಿಯ ಬದಲಾವಣೆಯ ಮಾದರಿಯನ್ನು ಅವರು ಬಯಸುತ್ತಾರೆ, ಅದು ೧% ಸೂಪರ್ ಶ್ರೀಮಂತರನ್ನು ಉತ್ಪಾದಿಸದ ಮತ್ತು ಭೂಮಿಯನ್ನು ಜೀವ ಪೋಷಕ ವ್ಯವಸ್ಥೆಗಳಿಂದ ವಂಚಿಸದ ಅಭಿವೃದ್ಧಿ ಮಾದರಿ.

ಅತ್ಯಂತ ಶ್ರೀಮಂತರಿಗಾಗಿ ಕೆಲಸ ಮಾಡುವ ಸರ್ಕಾರಗಳು ತಮಗೆ ಭಯಾನಕ ಭವಿಷ್ಯವನ್ನು ಬಿಡುತ್ತವೆ ಎಂದು ಈ ಯುವಕರು ವಾದಿಸುತ್ತಾರೆ. ಸಂಸತ್ತಿನ ಮೂಲಕ ಹೇರಲ್ಪಟ್ಟ ಪ್ರಸ್ತುತ ಕಾನೂನುಗಳು ಮತ್ತು ನೀತಿಗಳು ಸಂವಿಧಾನದ ಪ್ರಕಾರ ಕಟ್ಟಿಕೊಂಡ ಭಾರತದ ಕಲ್ಪನೆಯಲ್ಲ ಎಂದು ಅವರು ನಿಖರವಾಗಿ ಸೂಚಿಸುತ್ತಾರೆ. ಈ ಯುವಕರು ಯಾವುದನ್ನು ವಿರೋಧಿಸಬೇಕು ಮತ್ತು ಏಕೆ ವಿರೋಧಿಸಬೇಕು ಎಂದು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರು. ಭಾರತದಲ್ಲಿ, ಚೀನಾದಲ್ಲಿ, ಅಮೆರಿಕಾ, ಯುರೋಪಿನಾದ್ಯಂತ, ಆಫ್ರಿಕಾ, ಬ್ರೆಜಿಲ್ ಮತ್ತು ಎಲ್ಲೆಡೆ, ಅವರು ಭವಿಷ್ಯದ ಧ್ವನಿಯಾಗಿದ್ದು, ಪ್ರಸ್ತುತ ಪ್ರಬಲ ಧ್ವನಿಗಳು ಅವರ ಧ್ವನಿಗಳನ್ನು ಕೇಳಲೇಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಇದರಿಂದ ಪ್ರತಿಯೊಬ್ಬರಿಗೂ ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯ ಸಿಗಲಿದೆ ಎನ್ನುತ್ತಿದ್ದಾರೆ.

ಇದಕ್ಕಾಗಿ ಅವರನ್ನು ಸಂಚುಕೋರರು ಎಂದು ಗುರಿ ಮಾಡಲಾಗುತ್ತಿದೆಯೇ? ಭಾರತದ ಸಂವಿಧಾನ ಮತ್ತು ಯುಎನ್ ಮಾನವ ಹಕ್ಕುಗಳ ಸನ್ನದನ್ನು ದೆಹಲಿ ಪೊಲೀಸರು ಹಿಂತಿರುಗಿ ಓದಬೇಕು ಎಂದು ನಾನು ಭಾವಿಸುತ್ತೇನೆ. ಪ್ರತಿ ಪೊಲೀಸ್ ಕಚೇರಿಯು, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ದೇಶದ್ರೋಹವನ್ನು ಬಳಸಿದ ಬ್ರಿಟಿಷ್ ಸಾಮ್ರಾಜ್ಯದ ಗುಲಾಮರಾಗಿದ್ದಾರೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬಾರದೇಕೆ? ಮೋದಿ ಆಡಳಿತವು ಈಗ ದೇಶದ್ರೋಹವನ್ನು ಹೇಗೆ ಬಳಸುತ್ತಿದೆ ಎಂಬುದಕ್ಕೆ ತದ್ವಿರುದ್ಧವಾದ ಅಂಶವೆಂದರೆ: ಬ್ರಿಟಿಷರು ಭಾರತೀಯ ದಂಡಸಂಹಿತೆಯ ಈ ಕರಾಳ ನಿಬಂಧನೆಯನ್ನು ಮಿತವಾಗಿ ಬಳಸಿದ್ದಾರೆ, ದೆಹಲಿ ಪೊಲೀಸರು ಬಹುಶಃ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆಜ್ಞೆಯಡಿಯಲ್ಲಿ ಈಗ ಬಳಸುತ್ತಿರುವಂತೆ ವಿಪರೀತವಾಗಿ ಅಲ್ಲ.
ಅನುವಾದ : ಮಲ್ಲನಗೌಡ್ರು\

ಲಿಯೋ ಎಫ್. ಸಾಲ್ಡಾನಾ
ಪರಿಸರ ಸಂರಕ್ಷಕ ಕಾರ್ಯಕರ್ತರು ಹಾಗೂ ’ಭಾರತದಲ್ಲಿ ಪರಿಸರಕ್ಕಾಗಿ ನ್ಯಾಯ’ ಮೈತ್ರಿ ಬಳಗದ ಭಾಗವಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ: ಪಕ್ಷಾತೀತವಾಗಿ ಒಗ್ಗೂಡಿದ ಸಮುದಾಯದ ನಾಯಕರು

0
ಜನಸಂಖ್ಯಾಗನುಗುಣವಾಗಿ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಬೇಕೆಂದು ಒಕ್ಕಲಿಗ ಸಮುದಾಯ ಹೋರಾಟದ ಸೂಚನೆ ನೀಡಿದೆ. ಈ ಕುರಿತು ಬೆಂಗಳೂರಿನಲ್ಲಿ ಒಕ್ಕಲಿಗ ನಾಯಕರ ಸಭೆ ನಡೆದಿದೆ. ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ,...