ರೈಲುಗಳಲ್ಲಿ ಬೆಂಕಿ ಆಕಸ್ಮಿಕಗಳನ್ನು ತಪ್ಪಿಸುವ ಸಲುವಾಗಿ ರಾತ್ರಿ ವೇಳೆಯಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಮಾರ್ಚ್ 13 ರಂದು ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್‌ಪ್ರೆಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾತ್ರಿ 11 ರಿಂದ ಬೆಳಿಗ್ಗೆ 5 ಗಂಟೆಯರವರೆಗೆ ಪ್ರಯಾಣಿಕರನ್ನು ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳ ಚಾರ್ಜಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಂದ್ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
“ಇದು ಎಲ್ಲಾ ರೈಲ್ವೆ ವಲಯಗಳಿಗೆ ರೈಲ್ವೆ ಮಂಡಳಿಯ ಸೂಚನೆಯಾಗಿದೆ. ಮಾರ್ಚ್ 16 ರಿಂದ ನಾವು ಅದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದ್ದೇವೆ” ಎಂದು ಪಶ್ಚಿಮ ರೈಲ್ವೆಯ ಸಿಪಿಆರ್‌ಒ ಸುಮಿತ್ ಠಾಕೂರ್ ತಿಳಿಸಿದ್ದಾರೆ.
ಈ ಸೂಚನೆಗಳು ಹೊಸದಲ್ಲ, ಆದರೆ ರೈಲ್ವೆ ಮಂಡಳಿಯ ಹಿಂದಿನ ಆದೇಶಗಳನ್ನು ಮತ್ತೆ ಹೇಳಲಾಗಿದೆ ಎಂದು ದಕ್ಷಿಣ ರೈಲ್ವೆ ಸಿಪಿಆರ್‌ಒ ಬಿ.ಗುಗನೇಶನ್ ಹೇಳಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.
ಇದನ್ನೂ ಓದಿ: ‘ರಾಹುಲ್ ಗಾಂಧಿ ಅವಿವಾಹಿತ, ಎಚ್ಚರಿಕೆಯಿಂದಿರಿ’: ಮಾಜಿ ಸಂಸದನ ಹೇಳಿಕೆಗೆ ಭಾರಿ ವಿರೋಧ
ಮಾರ್ಚ್ 13 ರಂದು ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಇತರ ಏಳು ಬೋಗಿಗಳಿಗೆ ಹರಡಿತ್ತು. ಇದಾದ ಕೇವಲ ಆರು ದಿನಗಳ ನಂತರ, ರಾಂಚಿ ನಿಲ್ದಾಣದಲ್ಲಿ ಗೂಡ್ಸ್ ರೈಲಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ನಂತರ, ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ವಿಚ್ ಆಫ್ ಮಾಡಲು 2014 ರಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಶಿಫಾರಸು ಮಾಡಿದ್ದರು.
“ರೈಲಿನಲ್ಲಿ ಇತ್ತೀಚಿನ ಬೆಂಕಿ ಆಕಸ್ಮಿಕ ಘಟನೆಗಳ ದೃಷ್ಟಿಯಿಂದ ಈ ನಿರ್ಧಾರ. ಇದು ಮುನ್ನೆಚ್ಚರಿಕೆ ಕ್ರಮವಾಗಿದ್ದು, ಇದಕ್ಕೂ ಮುಂಚೆಯೇ ರೈಲ್ವೆ ಮಂಡಳಿ ಇಂತಹ ಆದೇಶಗಳನ್ನು ಹೊರಡಿಸಿತ್ತು. ರಾತ್ರಿ 11 ರಿಂದ 5 ರವರೆಗೆ ರೈಲಿನಲ್ಲಿ ಮೇನ್ ಸ್ವಿಚ್ ಆಫ್ ಮಾಡಲಾಗುತ್ತದೆ” ಎಂದು ಗುಗನೇಶನ್ ಮಾಹಿತಿ ನೀಡಿದ್ದಾರೆ.
ಬೆಂಕಿ ಅಕಸ್ಮಿಕ ಘಟನೆಗಳ ವಿರುದ್ಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ರೈಲ್ವೆ ಪ್ರಯಾಣಿಕರು ಮತ್ತು ನೌಕರರು ಸೇರಿದಂತೆ ಎಲ್ಲಾ ಸಿಬ್ಬಂದಿಗೂ ಶಿಕ್ಷಣ ನೀಡಲು ಏಳು ದಿನಗಳ ಜಾಗೃತಿ ಅಭಿಯಾನ ನಡೆಸಲು ರಾಷ್ಟ್ರೀಯ ಸಾರಿಗೆ ವಲಯ ರೈಲ್ವೆಗೆ ಸೂಚನೆ ನೀಡಿದೆ.
ಇದನ್ನೂ ಓದಿ: ಬಿಜೆಪಿಯೊಳಗಿನ ಮಹಿಳೆಯ ಹತ್ಯೆಗೆ ಅವರೇ ಸಂಚು ಹೂಡಿದ್ದಾರೆ: ಮಮತಾ ಬ್ಯಾನರ್ಜಿ ಆರೋಪ


