ಅತ್ಯಾಚಾರ ಆರೋಪ ಹೊತ್ತ ವ್ಯಕ್ತಿಯ ಕುಟುಂಬದ ಕಿರುಕುಳ ಮತ್ತು ಆರೋಪಿ ಕುಟುಂಬದವರು ಬೆಂಕಿ ಹಚ್ಚಿದ್ದರು ಎನ್ನಲಾಗಿದ್ದ ಉತ್ತರ ಪ್ರದೇಶದ ಬುಲಂದ್‌ಶಹರ್‌ನ 16 ವರ್ಷದ ಸಂತ್ರಸ್ತೆ ದೆಹಲಿಯ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ.
ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಮಂಗಳವಾರ ತಿಳಿಸಿದ್ದಾರೆ. ಮಂಗಳವಾರ ಅನುಮಾನಾಸ್ಪದ ರೀತಿಯಲ್ಲಿ ಬಾಲಕಿಯನ್ನು ಸುಟ್ಟಗಾಯಗಳೊಂದಿಗೆ ಚಿಕಿತ್ಸೆಗಾಗಿ ದೆಹಲಿಗೆ ಕರೆತರಲಾಗಿತ್ತು.
ಹಳ್ಳಿಯಲ್ಲಿ ಮಾವಿನ ತೋಟ ಕಾಯಲು ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಬಾಲಕಿ ತನ್ನಆಗಸ್ಟ್ 15 ರಂದು ದೂರು ದಾಖಲಿಸಿದ್ದರು. ಸಂತ್ರಸ್ತೆ ದೂರಿನ ನಂತರ ಪೊಲೀಸರು ಕ್ರಮ ಕೈಗೊಂಡು ಅದೇ ದಿನ ಆರೋಪಿಗಳನ್ನು ಬಂಧಿಸಿದ್ದರು.
ಆದರೆ ಆರೋಪಿಗಳ ಚಿಕ್ಕಪ್ಪ ಮತ್ತು ಅವರ ಕೆಲವು ಸ್ನೇಹಿತರು, ಕುಟುಂಬ ಸದಸ್ಯರು ಸಂತ್ರಸ್ತೆಯ ಮೇಲೆ ತನ್ನ ದೂರನ್ನು ಹಿಂಪಡೆಯಲು ಮತ್ತು ಆರೋಪಿಯೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಡ ಹೇರುತ್ತಿದ್ದರು. ಸಂತ್ರಸ್ತೆಯ ಕುಟುಂಬವು ರಾಜಿ ಮಾಡಿಕೊಳ್ಳಲು ಒಪ್ಪದ ಹಿನ್ನೆಲೆ ಅವರು ಬಾಲಕಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದರು.
ಇದನ್ನೂ ಓದಿ: ಉತ್ತರಪ್ರದೇಶ: ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡದ ಕಾರಣಕ್ಕೆ ದಲಿತ ಬಾಲಕಿಗೆ ಬೆಂಕಿಹಚ್ಚಿದ ಕ್ರೂರಿ!
ಸಂತ್ರಸ್ತೆ ಸಾಯುವ ಮುನ್ನ ತನ್ನ ಹೇಳಿಕೆಯಲ್ಲಿ, ಅತ್ಯಾಚಾರ ಪ್ರಕರಣದ ಆರೋಪಿಗಳ ಚಿಕ್ಕಪ್ಪ ಮತ್ತು ಆತನ ಇತರ ಐದು ಮಂದಿ ಕುಟುಂಬ ಸದಸ್ಯರು ಮಂಗಳವಾರ ಆಕೆಗೆ ಬೆಂಕಿ ಹಚ್ಚಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಜಹಾಂಗೀರಾಬಾದ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಕುಟುಂಬ ಕೊಲೆ ಪ್ರಕರಣ ದಾಖಲಿಸಿದೆ. ನಂತರ ಮೂವರನ್ನು ಬಂಧಿಸಲಾಗಿದೆ. ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡದ ಸಬ್ ಇನ್ಸ್‌ಪೆಕ್ಟರ್ ವಿನಾಯಕಾಂತ್ ಗೌತಮ್ ಮತ್ತು ಬೀಟ್ ಕಾನ್‌ಸ್ಟೆಬಲ್ ವಿಕ್ರಾಂತ್ ತೋಮರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸಂತೋಷ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.
ಮೊದಲು ಸಂತ್ರಸ್ತ ಬಾಲಕಿ ತನಗೆ ತಾನೇ ತಾನೇ ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ನಂತರ ಬಾಲಕಿ ಮೇಲೆ ಆರೋಪಿಗಳ ಕುಟುಂಬ ಸದಸ್ಯರು ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಬುಲಂದ್‌ಶಹರ್) ಎಸ್.ಕೆ.ಸಿಂಗ್ ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಹತ್ರಾಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶದಲ್ಲಿ ತೀವ್ರ ತರಹದ ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಆದರೂ ಕೂಡ ಸರ್ಕಾರ ಮಹಿಳೆಯರ ಸುರಕ್ಷತೆ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.
ದಿನೇ ದಿನೇ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಘಟನೆಗಳು ವರದಿಯಾಗುತ್ತಲೇ ಇವೆ. ರಾಮನ ನಾಡು ಎಂದು ಕರೆಸಿಕೊಳ್ಳುವಲ್ಲಿ ಮಹಿಳೆಯರಿಗೆ ಸುರಕ್ಷತೆ ಕನಸಿನ ಮಾತಾಗಿದೆ ಎಂದು ಸಾಮಾಜಿಕ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.


