ಕನ್ನಡ ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿ ಹೊಸ ಅಲೆಯನ್ನೇ ಸೃಷ್ಟಿಸಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿ ಮಹಾನಾಯಕ. (ಹಿಂದಿಯ ಏಕ್ ಮಹಾನಾಯಕ್ ಧಾರಾವಾಹಿಯ ಡಬ್ಬಿಂಗ್). ಈ ಧಾರಾವಾಹಿ ಅಂಬೇಡ್ಕರ್ ಬದುಕಿನ ಹಲವು ಘಟ್ಟಗಳನ್ನು ಕನ್ನಡಿಗರಿಗೆ ತಿಳಿಸಲು ಸಹಕಾರಿಯಾಗಿತ್ತು. ನಗರ-ಗ್ರಾಮೀಣ ಪ್ರದೇಶಗಳಲ್ಲಿ ಈ ಧಾರಾವಾಹಿ ಬೀರಿದ ಪ್ರಭಾವ ಹಲವು ಬಗೆಯದ್ದು. ಇಂದಿಗೂ ಗ್ರಾಮಗಳ ಹೆಬ್ಬಾಗಿಲುಗಳಲ್ಲಿ ಈ ಧಾರಾವಾಹಿಯ ದೊಡ್ಡ ಭಿತ್ತಿಚಿತ್ರಗಳು ಕಾಣಿಸುತ್ತವೆ. ಇದರಿಂದ ಪ್ರೇರಣೆಗೊಂಡು ಅಂಬೇಡ್ಕರ್ ವಿಚಾರಗಳನ್ನು ಕನ್ನಡಿಗರ ಕಿವಿಗೆ ಅಪ್ಪಳಿಸುವಂತೆ ಮಾಡಲು ಅಂಬೇಡ್ಕರ್ ಓದು ಅಭಿಯಾನ ಆರಂಭಿಸಿದವರು ಅರುಣ್ ಜೋಳದಕೂಡ್ಲಿಗಿ.
ಮಹಾನಾಯಕ ಧಾರಾವಾಹಿ ಪ್ರಸಾರ ಆರಂಭಿಸಿದಂತೆ ಜನರು ಅಂತರ್ಜಾಲದಲ್ಲಿ ಹೆಚ್ಚಾಗಿ ಅಂಬೇಡ್ಕರ್ ಬರಹ ಭಾಷಣಗಳ ಹುಡುಕಾಟ ಶುರುಮಾಡಿದ್ದರು. ಇದರಲ್ಲಿ ಯೂಟ್ಯೂಬ್‌ನಲ್ಲಿ ಹುಡುಕಾಟ ಮಾಡುವವರ ಸಂಖ್ಯೆ ದೊಡ್ಡದು. ಆದರೆ ಕನ್ನಡದಲ್ಲಿ ಅಂಬೇಡ್ಕರ್ ವಿಚಾರಗಳನ್ನು ಪ್ರಸ್ತುತ ಪಡಿಸುವ ವಿಡಿಯೋ, ಆಡಿಯೋಗಳು ಬಹಳ ಕಡಿಮೆ. ಹೀಗಾಗಿ ಅಂಬೇಡ್ಕರ್ ವಿಚಾರ, ಚಿಂತನೆ, ಭಾಷಣಗಳನ್ನು ಸಾಮಾನ್ಯ ಜನರಿಗೆ ತಿಳಿಸುವ ಉದ್ದೇಶ ಈ ಓದು ಅಭಿಯಾನ ಸರಣಿಯದ್ದು.

ಅಂಬೇಡ್ಕರ್ ವೈಚಾರಿಕತೆ – ಚಿಂತನೆಯಲ್ಲಿ ನಂಬಿಕೆ ಇಟ್ಟವರಿಂದ ಅಂಬೇಡ್ಕರ್ ಬರಹ-ಭಾಷಣಗಳ ಆಯ್ದ ಭಾಗಗಳನ್ನು ಓದಿಸಿ ಈ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಲಾಗುತ್ತಿದೆ. ಅಂಬೇಡ್ಕರ್ ಚಿಂತನೆಯನ್ನು ಸಾಧ್ಯವಾದಷ್ಟು ಸಾಮಾನ್ಯ ಜನರಿಗೆ ವಿಸ್ತರಿಸುವ ಕನಸು ಈ ಸರಣಿಯ ಹಿಂದಿದೆ. ಅಂತೆಯೇ ಬಾಬಾಸಾಹೇಬರ ಚಿಂತನೆಯ ಆಡಿಯೋ ರೂಪದ ಆರ್ಕೈವ್ ರೂಪಿಸುವ ಉದ್ದೇಶ ಅರುಣ್ ಜೋಳದಕೂಡ್ಲಿಗಿ ಅವರಿಗಿದೆ.
“ಅಂಬೇಡ್ಕರ್ ಕುರಿತ ಧಾರಾವಾಹಿ ಮಹಾನಾಯಕ ಪ್ರಸಾರವಾದಾಗ ಇಂಟರ್‌ನೆಟ್‌ನಲ್ಲಿ ಹೆಚ್ಚಾಗಿ ಜನ ಅಂಬೇಡ್ಕರ್ ಬಗ್ಗೆ ಹುಡುಕಾಡಿದ್ದಾರೆ. ಈ ಧಾರವಾಹಿ ಮೂಲಕ ಜನಪ್ರಿಯ ವಲಯದಲ್ಲಿ ಅಂಬೇಡ್ಕರ್ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಾಯಿತು. ಹಾಗಾಗಿ ಹೆಚ್ಚು ಜನ ಹುಡುಕಾಡಿದ್ದಾರೆ. ನಾನುಗೌರಿ.ಕಾಂ ಕೂಡ ಈ ಬಗ್ಗೆ ಲೇಖನ ಮಾಡಿತ್ತು. ಅದನ್ನು ಓದಿದ ನಂತರ ನಾನು ಕೂಡ ಹುಡುಕಾಡಿದೆ. ಆದರೆ ಎಂಟತ್ತು ಭಾಷಣಗಳು ಹಾಗೂ ಕೆಲವು ಹಾಡುಗಳು ಮಾತ್ರ ಸಿಗುತ್ತಿತ್ತು. ಕನ್ನಡದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳ ವಿಡಿಯೋ, ಆಡಿಯೋ ಅಷ್ಟಾಗಿ ಇಲ್ಲ ಎಂಬುದು ತಿಳಿಯಿತು. ಹಾಗಾಗಿ ಈ ಪ್ರಯತ್ನಕ್ಕೆ ಕೈಹಾಕಿದ್ದೇನೆ” ಎನ್ನುತ್ತಾರೆ ಅರುಣ್.

ಪ್ರಸ್ತುತ ಜಾನಪದ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಅರುಣ್ ಈ ಅಭಿಯಾನದ ಬಗ್ಗೆ ಹೇಳಿದ್ದು ಹೀಗೆ: “ಅಂಬೇಡ್ಕರ್ ವಿಚಾರಗಳನ್ನು ಸಂಪುಟಗಳಲ್ಲಿ ಕೊಟ್ಟರೆ ಅದು ಹಾಗೆ ಮನೆಯ ಕಪಾಟುಗಳಲ್ಲಿ ಉಳಿದುಬಿಡುವ ಸಾಧ್ಯತೆ ಇದೆ. ಜನ ಅದನ್ನು ಮತ್ತೆ ತೆರೆದು ನೋಡುವುದು ಕಡಿಮೆ. ಬೇಸಿಕ್ ವಿಚಾರಗಳನ್ನು ಜನರಿಗೆ ಹಂಚುವ ಉದ್ದೇಶದಿಂದ ಮೊದಲು ಸುಮಾರು 300 ಜನರಿಗೆ ನನ್ನ ವಿಚಾರ ತಿಳಿಸಿದೆ. ಆದರೆ ಅಂತಹ ಸ್ಪಂದನೆ ಸಿಗಲಿಲ್ಲ. ಆಮೇಲೆ ನಾನು ವೈಯಕ್ತಿಕವಾಗಿ ಕರೆ ಮಾಡಿ ಕೇಳಿಕೊಂಡ ನಂತರ ಕೆಲವರು ಒಪ್ಪಿದರು” ಎನ್ನುತ್ತಾರೆ.
“ಮೊದಲು ನನಗೆ ಆಡಿಯೋ ಕಳಿಸಿದ್ದು ಲೇಖಕಿ ಎಚ್.ಎಸ್.ಅನುಪಮಾ ಅವರು. ಹಾಗಾಗಿ ಅವರದ್ದೇ ಆಡಿಯೋವನ್ನು 7 ಸೆಪ್ಟಂಬರ್ 2020ರಂದು ಮೊದಲ ಸಂಚಿಕೆಯಾಗಿ ಪ್ರಸಾರ ಮಾಡಿದೆ. ಈ ಅಭಿಯಾನದಲ್ಲಿ ಇಂತವರೇ ಓದಬೇಕು ಅನ್ನುವ ನಿಯಮಗಳಿಲ್ಲ. ಎಲ್ಲರೂ ಓದಬಹುದು. ಕನಿಷ್ಠ 10 ರಿಂದ 15 ನಿಮಿಷಗಳ ಆಡಿಯೋ ಮಾಡಿ ಕಳುಹಿಸಬಹುದು”.
“ಪ್ರತಿದಿನ ಹಾಕುವ ಈ ಆಡಿಯೋಗಳು ಎಷ್ಟು ಜನಕ್ಕೆ ತಲುಪುತ್ತದೋ ಗೊತ್ತಿಲ್ಲ. ಆದರೆ, ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಹೆಚ್ಚು ಶೇರ್ ಆಗುತ್ತಿದೆ. ಒಟ್ಟು 100 ಗಂಟೆಗಳ ಆಡಿಯೋ ಮಾಡುವುದು ನನ್ನ ಉದ್ದೇಶ. ಇಲ್ಲಿಯವರೆಗೆ 160 ಆಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ಮುಂದಕ್ಕೆ ಸುಮಾರು 700ಕ್ಕೂ ಹೆಚ್ಚು ಆಡಿಯೋ ಕ್ಲಿಪ್‌ಗಳು ಆಗಬಹುದು. ಒಟ್ಟಾರೆ ಕನ್ನಡದಲ್ಲಿ ಅಂಬೇಡ್ಕರ್ ವಿಚಾರಗಳು, ಅವರ ಭಾಷಣಗಳು ಜನರಿಗೆ ಸುಲಭವಾಗಿ ಸಿಗಬೇಕು. ಅದಕ್ಕೊಂದು ಆರ್ಕೈವ್ ಬೇಕು. ಅದನ್ನೂ ಮಾಡುವ ಕೆಲಸ ಮಾಡುತ್ತಿದ್ದೇನೆ” ಎನ್ನುತ್ತಾರೆ.
ಬೇರೆ ಭಾಷೆಗಳಲ್ಲಿ ಇಂತಹ ಒಂದು ಪ್ರಯತ್ನ ನಡೆದಿಲ್ಲ. ಹಾಗಾಗಿ ಕನ್ನಡ ಒಂದು ಮಾದರಿಯಾಗಲಿದೆ. ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರ್ ಕೇಂದ್ರಗಳಿವೆ. ಕೋಟ್ಯಂತರ ರೂಪಾಯಿ ಅನುದಾನ ಬರುತ್ತೆ. ಆದರೆ, ವರ್ಷಕ್ಕೆ ಸುಮಾರು 3-4 ಲಕ್ಷ ಖರ್ಚು ಮಾಡಿ ಒಂದು ಕಾರ್ಯಕ್ರಮ ಮಾಡಿ ಸುಮ್ಮನಾಗುತ್ತಾರೆ. ಆದರೆ ಈ ಮೂಲಕ ಅಂಬೇಡ್ಕರ್ ಜನಸಾಮಾನ್ಯರಿಗೆ ದಕ್ಕುವುದಿಲ್ಲ. ಹಾಗಾಗಿ ಅವರನ್ನು ಬೈಯುತ್ತಾ, ವಿಮರ್ಶೆ ಮಾಡಿಕೊಂಡು ಕುಳಿತುಕೊಳ್ಳುವ ಬದಲು ನಾವೇ ಏನಾದರೂ ಮಾಡಬೇಕು ಅಲ್ಲವೇ ಎಂದು ಪ್ರಶ್ನಿಸುತ್ತಾರೆ ಅರುಣ್.

“ಬಿ.ಸುರೇಶ್, ಎಚ್.ಎಸ್.ಅನುಪಮಾ, ಎಚ್.ಎಸ್.ರಾಘವೇಂದ್ರ ರಾವ್, ದೇವನೂರು ಮಹಾದೇವ, ಮಂಜಮ್ಮ ಜೋಗತಿ ಹೀಗೆ ಹಲವು ಪ್ರಸಿದ್ಧರು ಓದು ಅಭಿಯಾನದ ಭಾಗವಾಗಿದ್ದಾರೆ. ಈಗಾಗಲೇ 160 ಸಂಚಿಕೆಗಳಾಗಿವೆ. 2ನೇ ಸರಣಿ ಆರಂಭವಾದಾಗ ಹೆಚ್ಚು ಜನ ಸಕ್ರಿಯರಾಗಿದ್ದಾರೆ. ತುಂಬಾ ಜನ ತಾವೇ ಮುಂದಾಗಿ ಓದು ಅಭಿಯಾನದ ಭಾಗವಾಗಲು ಬರುತ್ತಿದ್ದಾರೆ. ಅಂತಹವರನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಾಮುಖ್ಯತೆಯಿದೆ. ಹೊಸ ಹೊಸ ವಿಚಾರಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ನಾನೇ ಸಂಪುಟಗಳಿಂದ ಪಠ್ಯವನ್ನು ಆರಿಸಿಕೊಡುತ್ತಿದ್ದೇನೆ” ಎಂದು ಅರುಣ್ ತಿಳಿಸುತ್ತಾರೆ.
“ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ಜಾತಿ, ತಾರತಮ್ಯದ ವಿರುದ್ಧದ ಹೋರಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ವಿಜ್ಞಾನ, ತಂತ್ರಜ್ಞಾನದ ಕುರಿತು ಮಾತನಾಡಿದ್ದಾರೆ. ಹಲವು ವಿಚಾರಗಳನ್ನು ತಮ್ಮ ಭಾಷಣಗಳಲ್ಲಿ, ಬರಹಗಳಲ್ಲಿ ತಿಳಿಸಿದ್ದಾರೆ. ಹಾಗಾಗಿ ಇವುಗಳ ಮೂಲಕವೂ ಅಂಬೇಡ್ಕರ್ ಅವರ ಮಾತುಗಳನ್ನು ಜನರ ಕಿವಿಗೆ ತಲುಪಿಸುವ ಕೆಲಸವಾಗುತ್ತಿದೆ” ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಓದು ಸರಣಿಯಲ್ಲಿ ಪಾಲ್ಗೊಂಡಿರುವ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷ ಕುಗ್ವೆ “ಇದೊಂದು ಉತ್ತಮ ಕೆಲಸ. ಭಾರತದಲ್ಲಿ ಯಾವ ಭಾಷೆಯಲ್ಲಿಯೂ ಅಂಬೇಡ್ಕರ್ ಅವರನ್ನು ಹೀಗೆ ಕಟ್ಟಿಕೊಡುವ ಕೆಲಸವಾಗಿಲ್ಲ. ಅರುಣ್ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಈ ಕೆಲಸ ಬೇಕಾಗಿತ್ತು. ನಾನು ದೀರ್ಘವಾಗಿ ಒಂದು ಗಂಟೆ ಕಾಲ ಅಂಬೇಡ್ಕರ್ ವಿಚಾರಗಳನ್ನು ಓದಿದ್ದೇನೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಒಂದು ಕಿರುತೆರೆಯ ಧಾರಾವಾಹಿ ಕೂಡ ಜನರ ಮೇಲೆ ಪ್ರಭಾವ ಬೀರಬಲ್ಲದು. ಕೇವಲ ಅತ್ತೆ ಸೊಸೆ ಜಗಳ, ಗಂಡಿಗಾಗಿ ಅಕ್ಕ-ತಂಗಿ ಜಗಳ ಮಾತ್ರವಲ್ಲದೆ, ಕೆಲವು ಧಾರಾವಾಹಿಗಳು ಉತ್ತಮ ಕೆಲಸಗಳಿಗೆ ಕಾರಣವಾಗುತ್ತದೆ ಎಂಬುದನ್ನು ಮಹಾನಾಯಕ ತಿಳಿಸಿಕೊಟ್ಟಿದೆ.


