Homeಮುಖಪುಟಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗಳಲ್ಲಿ ಆಳವಾಗಿ ಬೇರೂರಿರುವ ಹಿಂಸಾಚಾರಕ್ಕೆ ಕಾರಣಗಳೇನು?

ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗಳಲ್ಲಿ ಆಳವಾಗಿ ಬೇರೂರಿರುವ ಹಿಂಸಾಚಾರಕ್ಕೆ ಕಾರಣಗಳೇನು?

- Advertisement -
- Advertisement -

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಘೋಷಣೆಯಾದಾಗಿನಿಂದ ನಡೆದ ಹಿಂಸಾಚಾರದಲ್ಲಿ 22 ಜನ ಮೃತಪಟ್ಟಿದ್ದಾರೆ. ಹಾಗಾಗಿ ಚುನಾವಣಾ ದಿನ ಸಂಭವಿಸಬಹುದಾದ ಹಿಂಸಾಚಾರ ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತೆಯಾಗಿ 11,000ಕ್ಕೂ ಹೆಚ್ಚು ಜನರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. 8,000ಕ್ಕೂ ಹೆಚ್ಚು ಜಾಮೀನುರಹಿತ ವಾರಂಟ್‌ಗಳನ್ನು (NBWs) ಹೊರಡಿಸಲಾಗಿತ್ತು. 20,000ಕ್ಕೂ ಹೆಚ್ಚು ಪರವಾನಗಿ ಪಡೆದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. 60,000ದಷ್ಟು ಸಿಬ್ಬಂದಿಯಿದ್ದ ಕೇಂದ್ರೀಯ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿತ್ತು. ಹಾಗಿದ್ದರೂ ಪೂರ್ಣಪ್ರಮಾಣದಲ್ಲಿ ಹಿಂಸಾಚಾರ ನಿಗ್ರಹಿಸಲು ಸಾಧ್ಯವಾಗಲಿಲ್ಲ. ಚುನಾವಣಾ ಸಂಬಂಧಿತ ಹಿಂಸಾಚಾರದಲ್ಲಿ 20 ಜನ ಜೀವ ಕಳೆದುಕೊಂಡರು. 696 ಬೂತ್‌ಗಳಲ್ಲಿ ಮರುಮತದಾನಕ್ಕೆ ಆದೇಶಿಸಲಾಯಿತು.

ಪಶ್ಚಿಮ ಬಂಗಾಳವು 3,317 ಗ್ರಾಮ ಪಂಚಾಯತ್‌ಗಳನ್ನು ಮತ್ತು 63,283 ಪಂಚಾಯತ್ ಸ್ಥಾನಗಳನ್ನು ಹೊಂದಿದೆ. ಜೂನ್ 9ರಂದು ಪಂಚಾಯತ್ ಚುನಾವಣೆ ಘೋಷಿಸಲಾಯ್ತು. 1,60,000 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ಇನ್ನು 60,000 ಅಭ್ಯರ್ಥಿಗಳು ಸಮಯದ ಕೊರತೆ, ಬೆದರಿಕೆಗಳಿಂದ ನಾಮಪತ್ರ ಸಲ್ಲಿಸಲು ಸಾಧ್ಯವಾಗಿಲ್ಲ. ಇದಕ್ಕೆ ಟಿಎಂಸಿ ಸರ್ಕಾರದ ದಬ್ಬಾಳಿಕೆಯ ಕಾರಣ ಎಂದು ಆರೋಪಿಸಲಾಗಿದೆ. ಇವೆಲ್ಲವೂ ಹಿಂಸೆಗೆ ಎಡೆಮಾಡಿಕೊಟ್ಟಿವೆ.

ಬಂಗಾಳದಲ್ಲಿ ಈ ರೀತಿಯ ಚುನಾವಣಾ ಹಿಂಸಾಚಾರಗಳು ಭುಗಿಲೆದ್ದಿರುವುದು ಇದೇ ಮೊದಲಲ್ಲ. 2003ರಲ್ಲಿ ಸಿಪಿಐ(ಎಂ) ಆಡಳಿತದಲ್ಲಿದ್ದಾಗಿನ ಪಂಚಾಯತ್ ಚುನಾವಣಾ ಪ್ರಕ್ರಿಯೆಯಲ್ಲಿ 76 ಜನರು ಹತ್ಯೆಯಾಗಿದ್ದರು. 2013ರಲ್ಲಿ ಮೃತಪಟ್ಟವರ ಸಂಖ್ಯೆ 39 ಆಗಿದ್ದರೆ, 2018ರಲ್ಲಿ 29 ಜನರು ಹತ್ಯೆಯಾಗಿದ್ದರು. ವಿಧಾನಸಭಾ ಚುನಾವಣೆ ಅಥವಾ ಲೋಕಸಭಾ ಚುನಾವಣೆಯಲ್ಲಿ ಈ ಮಟ್ಟದ ಹಿಂಸಾಚಾರ, ಸಾವುನೋವುಗಳು ಕಂಡುಬರುವುದಿಲ್ಲ. ಆದರೆ ಸ್ಥಳೀಯ ಪಂಚಾಯತ್ ಚುನಾವಣೆಗಳಲ್ಲಿ ಮಾತ್ರ ಹಿಂಸಾಚಾರವನ್ನು ಸಂಪೂರ್ಣವಾಗಿ ಅಥವಾ ಗರಿಷ್ಠ ಮಟ್ಟದಲ್ಲಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಟರೆ ಹಲವಾರು ಸಂಕೀರ್ಣ ವಿಚಾರಗಳು ಒಂದಕ್ಕೊಂದು ಹೆಣೆದುಕೊಂಡಿರುವುದು ಕಂಡುಬರುತ್ತದೆ. ಅದನ್ನು ಶೋಧಿಸುವ ಪ್ರಯತ್ನ ಇಲ್ಲಿದೆ.

ಬಂಗಾಳದ ಗ್ರಾಮೀಣ ಜನರ ಹೋರಾಟದ ರಕ್ತಸಿಕ್ತ ಇತಿಹಾಸ

ಪಶ್ಚಿಮ ಬಂಗಾಳದ ಗ್ರಾಮೀಣ ಜನತೆಗೆ ಬಹುದೊಡ್ಡ ಹೋರಾಟದ ಇತಿಹಾಸವಿದೆ. 1902ರಲ್ಲಿ ಶ್ರೀ ಅರವಿಂದರು ಸ್ಥಾಪಿಸಿದ ಅನುಶೀಲನ ಸಮಿತಿ ಸಶಸ್ತ್ರ ಹೋರಾಟದ ಮೂಲಕ ಬ್ರಿಟಿಷರನ್ನು ಹೊರದೂಡಬೇಕೆಂಬ ಆಶಯ ಹೊಂದಿತ್ತು. 1937ರಲ್ಲಿ ಬ್ರಿಟಿಷ್ ರಾಜ್ ಪ್ರಾಂತೀಯ ಸರ್ಕಾರಕ್ಕೆ ಪ್ರಜಾಸತ್ತಾತ್ಮಕ ಮತದಾನವನ್ನು ಪರಿಚಯಿಸಿದ ನಂತರ ಗ್ರಾಮೀಣ ಭಾಗವನ್ನು ನಿಯಂತ್ರಿಸುತ್ತಿದ್ದ ಭೂಮಾಲೀಕರು ಮತ್ತು ಗೇಣಿದಾರರ ನಡುವೆ ಸಂಘರ್ಷ ಏರ್ಪಟ್ಟಿತು. ಕೃಷಕ್ ಸಮಾಜ್ ಪಾರ್ಟಿ ಬಡರೈತರ ಜೊತೆನಿಂತ ನಂತರ ರಾಜಕೀಯ ಮತ್ತಷ್ಟು ಬಿರುಸು ಪಡೆದುಕೊಂಡಿತು.

1946ರ ಸಂದರ್ಭದಲ್ಲಿ ಸಿಪಿಐ ಪಕ್ಷದ ರೈತ ವಿಭಾಗವಾದ ಆಲ್ ಇಂಡಿಯಾ ಕಿಸಾನ್ ಸಭಾ ’ತೇಭಾಗ’ ಹೋರಾಟವನ್ನು ಪ್ರಾರಂಭಿಸಿತ್ತು. ಅಂದರೆ ಭೂಮಾಲೀಕರ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ಗೇಣಿದಾರರು ಬೆಳೆದ ಬೆಳೆಗಳಲ್ಲಿ ಭೂಮಾಲೀಕರಿಗೆ ಅರ್ಧ ನೀಡುವ ಬದಲು ಮೂರನೇ ಒಂದು ಭಾಗ ನೀಡುತ್ತೇವೆ ಎಂದು ಬೇಡಿಕೆಯಿಟ್ಟರು. ಭೂಮಾಲೀಕರು ಇದಕ್ಕೆ ಒಪ್ಪದಿದ್ದಾಗ ಮುಸ್ಲಿಂ ಲೀಗ್ ರೈತ ಗೇಣಿದಾರರ ಪರ ನಿಂತು ಕಾನೂನು ತಂದಿತು. ಭೂಮಾಲೀಕರು ಅದಕ್ಕೂ ಬಗ್ಗದೇ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದಾಗ ಕಮ್ಯುನಿಸ್ಟ್ ಕಾರ್ಯಕರ್ತರು ಶಸ್ತ್ರಾಸ್ತ್ರ ಹೋರಾಟಕ್ಕೆ ಮುಂದಾಗಿ ಹಿಂಸಾಚಾರದ ಮೂಲಕ ತೇಭಾಗ ಹೋರಾಟವನ್ನು ಮುನ್ನಡೆಸಿ ಕಾಯ್ದೆ ಜಾರಿಗೊಳಿಸಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಬುಗಿಲೆದ್ದ ಪಂಚಾಯ್ತಿ ಚುನಾವಣಾ ಹಿಂಸಾಚಾರ; ಬಾಂಬ್‌ ಸ್ಫೋಟದಲ್ಲಿ ಮಕ್ಕಳಿಗೆ ಗಾಯ

ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭೂಮಾಲೀಕರು ಮತ್ತೆ ಬಲಿತಿದ್ದರು. ರೈತರ ಮೇಲಿನ ದೌರ್ಜನ್ಯಗಳು ಮಿತಿ ಮೀರುತ್ತಿದ್ದಾಗ ನಕ್ಸಲ್ಬರಿ ಹೋರಾಟ ಭುಗಿಲೆದ್ದಿತು. ಚಾರು ಮುಜುಂದಾರ್ ನೇತೃತ್ವದ ನಕ್ಸಲ್ ಚಳವಳಿಯ ಮಿಲಿಟೆಂಟ್ ಗುಂಪು ಹಲವು ಭೂಮಾಲೀಕರನ್ನು ಹತ್ಯೆಗೈದು ಬಡರೈತರಿಗೆ ಭೂಮಿ ಹಂಚಿತು. ಈ ಚಳವಳಿ ವೇಗವಾಗಿ ಬೆಳೆಯಿತು. ಆನಂತರ 1977ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿದ ಸಿಪಿಐ(ಎಂ) ಪಕ್ಷವು ಪರಿಣಾಮಕಾರಿಯಾಗಿ ಭೂಸುಧಾರಣೆ ಜಾರಿಗೆ ತಂದು ಉಳುವವರಿಗೆ ಭೂಮಿಯ ಮಾಲೀಕತ್ವ ನೀಡಿತು. ಇದೆಲ್ಲದರ ಪರಿಣಾಮ ಗ್ರಾಮೀಣ ರೈತಾಪಿ ಜನರು ಎಷ್ಟು ಪ್ರಬಲರಾಗಿದ್ದರೆಂದರೆ 2005ರ ನಂತರ ಕೈಗಾರಿಕೆಗಳಿಗಾಗಿ ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳಲು ಮುಂದಾದ ಸಿಪಿಐ(ಎಂ) ಪಕ್ಷವನ್ನೇ ಧೂಳೀಪಟ ಮಾಡಿಬಿಟ್ಟರು. ಈ ಎಲ್ಲಾ ಐತಿಹಾಸಿಕ ಕಾರಣಗಳಿಂದಾಗಿ ಈ ಗ್ರಾಮೀಣ ಭಾಗದ ಜನರ ಹೊಡಿ-ಬಡಿ ಮಿಲಿಟೆಂಟ್ ಹೋರಾಟಗಳು ಪಂಚಾಯ್ತಿ ಚುನಾವಣೆಗಳಲ್ಲಿಯೂ ಮುಂದುವರಿದಿವೆ.

ಆರ್ಥಿಕತೆಯಲ್ಲಿ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ

ಪಶ್ಚಿಮ ಬಂಗಾಳದ 70% ಭಾಗ ಗ್ರಾಮೀಣ ಪ್ರದೇಶವಾಗಿದೆ. ಅವುಗಳ ಆರ್ಥಿಕತೆ ಮೇಲೆ ಗ್ರಾಮ ಪಂಚಾಯ್ತಿಗಳು ಬಿಗಿ ಹಿಡಿತ ಹೊಂದಿವೆ. ಸಿಪಿಐ(ಎಂ) ಪಕ್ಷವು ಅಧಿಕಾರಕ್ಕೆ ಬರುತ್ತಲೇ 1978ರಲ್ಲಿ ಪಂಚಾಯತ್ ರಾಜ್ ಕಾಯ್ದೆಯನ್ನು ಬಲಪಡಿಸಿ ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡಿತು. ಅಧಿಕಾರ ವಿಕೇಂದ್ರಿಕರಣದಲ್ಲಿ ದೇಶದಲ್ಲಿಯೇ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ. ಗ್ರಾಮಪಂಚಾಯ್ತಿಗಳ ಮೂಲಕ ಹಲವಾರು ಯೋಜನೆಗಳು ಫಲಾನುಭವಿಗಳಿಗೆ ತಲುಪುವುದರಿಂದ, ಪಂಚಾಯ್ತಿ ಸದಸ್ಯರಾಗಲು, ಅಧಿಕಾರ ಹಿಡಿಯಲು ಪೈಪೋಟಿ ಹೆಚ್ಚಿತು. ಅಲ್ಲಿನ ಸಂಪನ್ಮೂಲಗಳ ಮೇಲಿನ ನಿಯಂತ್ರಣ ಮುಂದುವರೆದಂತೆ ಸಿಪಿಎಂನಂತಹ ಕೇಡರ್ ಆಧರಿತ ಪಕ್ಷಗಳು ಗ್ರಾಮ ಪಂಚಾಯ್ತಿಗಳ ಮೇಲೆ ಸಂಪೂರ್ಣ ಅಧಿಪತ್ಯ ಸಾಧಿಸಿದ್ದವು. ಕೆಲವೊಮ್ಮೆ ಚುನಾಯಿತ ಪ್ರತಿನಿಧಿಗಳಿಗಿಂತ ಪಕ್ಷದ ಸ್ಥಳೀಯ ಘಟಕಗಳು ಅಧಿಕಾರ ಚಲಾಯಿಸುತ್ತಿದ್ದವು.

ಆದರೆ 2011ರಲ್ಲಿ ಎಡಪಕ್ಷಗಳ ಕುಸಿತ ಮತ್ತು ಟಿಎಂಸಿಯ ಏಳಿಗೆ ಏಕಕಾಲದಲ್ಲಾಯಿತು. ಮಮತಾ ಬ್ಯಾನರ್ಜಿಯವರು ತಮ್ಮ ವರ್ಚಸ್ಸಿನಿಂದ ರಾಜ್ಯ ಅಧಿಕಾರದ ಚುಕ್ಕಾಣಿ ಹಿಡಿದರು. ಆದರೆ ಅವರಿಗೆ ಗ್ರಾಮೀಣ ಮಟ್ಟದಲ್ಲಿ ಸದೃಢ ಸಂಘಟನಾ ರಚನೆಗಳಾಗಲಿ, ಕಾರ್ಯಕರ್ತರ ಬೇಸ್ ಆಗಲಿ ಇರಲಿಲ್ಲ. ಅದಕ್ಕಾಗಿ ಪೈಪೋಟಿ ಮತ್ತು ರಕ್ತಪಾತ ಮುಂದುವರಿಯಿತು.

ಜಾತಿ ಧರ್ಮಕ್ಕಿಂತ ಪಕ್ಷಕ್ಕೆ ಹೆಚ್ಚಿನ ಆದ್ಯತೆ

ಪಶ್ಚಿಮ ಬಂಗಾಳದಲ್ಲಿ ಪಕ್ಷಗಳ ನಡುವಿನ ವೈರತ್ವ ಅನಾದಿಕಾಲದಿಂದಲೂ ಬೆಳೆದುಬಂದಿದೆ. 70ರ ದಶಕದ ನಂತರ ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ಹಗೆತನವಿದ್ದರೆ 2000ನೇ ಇಸವಿಯ ನಂತರ ಸಿಪಿಎಂ, ಕಾಂಗ್ರೆಸ್ ಮತ್ತು ಟಿಎಂಸಿ ನಡುವೆ ತ್ರಿಕೋನ ವೈರತ್ವ ಶುರುವಾಯಿತು. 2014ರ ನಂತರ ಬಿಜೆಪಿ ಸಹ ಬೇರುಬಿಟ್ಟಮೇಲೆ ನಾಲ್ಕು ಪಕ್ಷಗಳ ನಡುವೆ ಚತುಷ್ಕೋನ ವೈರತ್ವ, ಟೀಕೆ, ಜಿದ್ದಾಜಿದ್ದಿ ಜೋರಾಗಿದೆ. ಹಾಗಾಗಿ ಅಲ್ಲಿನ ಕಾರ್ಯಕರ್ತರು ಸಹ ಜಾತಿ, ಧರ್ಮಕ್ಕಿಂತ ಪಕ್ಷನಿಷ್ಠೆಗೆ ಹೆಚ್ಚಿನ ಬೆಲೆ ಕೊಡುತ್ತಾರೆ. ಬಹುತೇಕ ಎಲ್ಲರೂ ಸೈದ್ಧಾಂತಿಕ ಬದ್ಧತೆಯ ಹೆಸರಿನಲ್ಲಿ ಹಿಂಸಾಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಪಂಚಾಯ್ತಿ ಚುನಾವಣೆಗಳಲ್ಲಿ ಮತಗಳ ಸಂಖ್ಯೆ ಕಡಿಮೆ ಇರುವುದರಿಂದ ಮತದಾರರು ಒಲೈಕೆಗೆ ಮಣಿಯದಿದ್ದರೆ ಬೆದರಿಕೆ ಮೂಲಕ ಅಥವಾ ರಿಗ್ಗಿಂಗ್ ಮೂಲಕ ಅಧಿಕಾರಕ್ಕೇರಲು ಎಲ್ಲಾ ಪಕ್ಷಗಳು ಯತ್ನಿಸುತ್ತಿರುವುದು ಹಿಂಸಾಚಾರಕ್ಕೆ ಕಾರಣವಾಗುತ್ತಿವೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ: 9 ಜನರ ಸಾವು

ಇನ್ನೊಂದೆಡೆ ಸರ್ಕಾರದ ಯೋಜನೆಗಳು, ಸೌಲಭ್ಯಗಳೂ ಕೂಡ ಪಕ್ಷದ ಆಧಾರದಲ್ಲಿಯೇ ಹಂಚಿಕೆಯಾಗುತ್ತವೆ. ನೇರ ಹಣ ವರ್ಗಾವಣೆ ಇದ್ದರೂ ಯಾರು ಫಲಾನುಭವಿಗಳಾಗಬೇಕೆಬುದನ್ನು ಗ್ರಾಮ ಪಂಚಾಯ್ತಿಗಳೇ ನಿರ್ಧಾರ ಮಾಡುತ್ತವೆ. ಹಾಗಾಗಿ ಆ ಯೋಜನೆಗಳನ್ನು ತಮ್ಮದೇ ಪಕ್ಷದ ಕಾರ್ಯಕರ್ತರು ಮತ್ತು ಸದಸ್ಯರಿಗೆ ನೀಡುವ ಮೂಲಕ ಅವರನ್ನು ಶಾಶ್ವತ ವೋಟ್ ಬ್ಯಾಂಕ್ ಆಗಿ ಮಾಡಿಕೊಳ್ಳುವ ಕೆಲಸಗಳು ನಡೆದಿವೆ. ಇದು ಉಳಿದ ಪಕ್ಷಗಳಲ್ಲಿ ಅಸಮಾಧಾನ ಉಂಟಾಗಿ ಅಧಿಕಾರ ಹಿಡಿಯಲು ಎಂತಹ ಹಿಂಸೆಗೂ ಮುಂದಾಗುವ ಪ್ರವೃತ್ತಿಗಳು ಕಂಡುಬಂದಿವೆ.

2018ರ ಹಿಂದಿನ ಪಂಚಾಯತ್ ಚುನಾವಣೆಯಲ್ಲಿ, ಶೇ.34 ರಷ್ಟು ಸ್ಥಾನಗಳಲ್ಲಿ ಟಿಎಂಸಿಯಿಂದ ಕಣಕ್ಕಿಳಿದ ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದರು. ಅಂದರೆ ಅವರ ವಿರುದ್ಧ ಉಳಿದ ಪಕ್ಷಗಳು ನಾಮಪತ್ರವನ್ನೇ ಸಲ್ಲಿಸಿರಲಿಲ್ಲ. ಟಿಎಂಸಿ ಕಾರ್ಯಕರ್ತರ ಬೆದರಿಕೆಯೇ ಅದಕ್ಕೆ ಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ವಿಧಾನಸಭೆ, ಲೋಕಸಭಾ ಚುನಾವಣೆಗಳಿಗೆ ಬುನಾದಿ

ಗ್ರಾಮ ಪಂಚಾಯ್ತಿಗಳಲ್ಲಿ ಅಂದರೆ ಬೂತ್‌ಮಟ್ಟದಲ್ಲಿ ಹಿಡಿತ ಹೊಂದುವುದು ವಿಧಾನಸಭೆ, ಲೋಕಸಭಾ ಚುನಾವಣೆಗಳಿಗೆ ಬುನಾದಿ ಎಂಬುದನ್ನು ಅಲ್ಲಿನ ಪಕ್ಷಗಳು ಅರ್ಥ ಮಾಡಿಕೊಂಡಿವೆ. 5.6 ಕೋಟಿ ಮತದಾರರು ಗ್ರಾಮೀಣ ಭಾಗದಲ್ಲಿರುವುದರಿಂದ ಅವರನ್ನು ಓಲೈಸಿಕೊಳ್ಳಲು ಪಂಚಾಯ್ತಿ ಚುನಾವಣೆಗಳು ಎಲ್ಲಾ ಪಕ್ಷಗಳಿಗೂ ಮುಖ್ಯವಾಗಿಚೆ. ಅದಕ್ಕಾಗಿ ಯಾವ ದಾರಿಯಾದರೂ ಸೈ ಅನ್ನುತ್ತಾರೆ.

ಈ ಹಿಂಸಾಚಾರಗಳಿಂದ ಯಾರಿಗೆ ಲಾಭ?

ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷಗಳಿಗೆ ಈ ಹಿಂಸಾಚಾರದಿಂದ ಲಾಭವಿದೆ, ಹಾಗಾಗಿ ಹಿಂಸೆಗೆ ಪ್ರಚೋದನೆ ನೀಡುತ್ತಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಕಾಂಗ್ರೆಸ್ ವಿರುದ್ಧ ಎಡಪಕ್ಷಗಳು, ವಿರೋಧ ಪಕ್ಷಗಳ ವಿರುದ್ಧ ಟಿಎಂಸಿ ಹಿಂಸೆಗೆ ಪ್ರಚೋದನೆ ನೀಡುತ್ತಿವೆ ಎನಿಸಬಹುದು. ಆದರೆ ಈ ಗ್ರಾಮೀಣ ಹಿಂಸಾಚಾರಗಳನ್ನು ನಿಯಂತ್ರಿಸುವ ಶಕ್ತಿ ಕೋಲ್ಕತ್ತದಲ್ಲಿ ಅಧಿಕಾರ ಹಿಡಿದವರಿಗೂ ಸಾಧ್ಯವಾಗುತ್ತಿಲ್ಲ ಎನ್ನುವ ಮಾತಿನಲ್ಲಿ ಅರ್ಥವಿದೆ. ಈಗಾಗಲೇ ಸಿಂಗೂರು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಿಪಿಐ(ಎಂ) ಈ ಪಾಠ ಕಲಿತಿದೆ.

ಇನ್ನು ಈ ವರ್ಷದ ಹಿಂಸಾಚಾರದಿಂದ ಹತ್ಯೆಯಾದವರಲ್ಲಿ ಹೆಚ್ಚಿನ ಜನ ಆಳುವ ಟಿಎಂಸಿ ಪಕ್ಷಕ್ಕೆ ಸೇರಿದ್ದಾರೆ. 2003ರಲ್ಲಿಯೂ ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಹೆಚ್ಚಿನ ಕಾರ್ಯಕರ್ತರು ಕೊಲೆಯಾಗಿದ್ದರು. ಇದಕ್ಕೆ ಮುಖ್ಯ ಕಾರಣ ಪಕ್ಷದ ಸ್ಥಳೀಯ ಘಟಕಗಳಲ್ಲಿನ ಬಣ ರಾಜಕೀಯವಾಗಿದೆ. ಟಿಕೆಟ್ ಸಿಗದವರು ಬಂಡಾಯವಾಗಿ ಸ್ಪರ್ಧಿಸಲು ಮುಂದಾಗುವುದು, ಪಕ್ಷದೊಳಗೆ ಬಣ ರಚಿಸುವುದು ಇಲ್ಲವೇ ಎದುರಾಳಿ ಪಕ್ಷ ಸೇರಲು ಮುಂದಾಗುವುದು, ಅದಕ್ಕೆ ಉಳಿದವರು ವಿರೋಧ ವ್ಯಕ್ತಪಡಿಸುವುದು ಇವೆಲ್ಲವೂ ಹಿಂಸಾಚಾರಕ್ಕೆ ಕಾರಣವಾಗುತ್ತಿವೆ. ಅಂದರೆ ಈ ವ್ಯವಸ್ಥೆಯ ಭಾಗವಾದವರು, ಅದರಿಂದ ಲಾಭ ಪಡೆದವರು ಅದು ಬದಲಾಗದಂತೆ ನೋಡಿಕೊಳ್ಳಲು ಮುಂದಾಗುತ್ತಾರೆ. ವಂಚಿತರಾದವರು ಅದನ್ನು ಪಡೆಯಲು ಶತಾಯಗತಾಯ ಯತ್ನಿಸುತ್ತಾರೆ. ಹಾಗಾಗಿ ಹಿಂಸಾಚಾರ ಉಲ್ಭಣವಾಗುತ್ತದೆ.

ಈ ಚುನಾವಣೆಯಲ್ಲಿಯೂ ಸಹ ಅದು ಪ್ರತಿಧ್ವನಿಸಿದೆ. ಚುನಾವಣೆಗೂ ಮೊದಲು ಟಿಎಂಸಿ ಹೈಕಮಾಂಡ್ ಸ್ಥಳೀಯ ಮಟ್ಟದಲ್ಲಿ ಟಿಕೆಟ್‌ಗಾಗಿನ ಗುಂಪುಗಾರಿಕೆ ನಿಯಂತ್ರಿಸಲು ಎಚ್ಚರಿಕೆ ನೀಡಿತ್ತು. ಸಂದರ್ಶನವೊಂದರಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಟಿಕೆಟ್‌ವಂಚಿತ ಬಂಡಾಯ ಅಭ್ಯರ್ಥಿಗಳಿಗೆ, “ನಿಮ್ಮ ಪಂಚಾಯತ್‌ಗಳಿಗೆ ನಮ್ಮ ಸರ್ಕಾರ ಹಣ ನೀಡುತ್ತದೆ. ಹಾಗಾಗಿ ಅಧಿಕೃತ ಟಿಎಂಸಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಪಂಚಾಯತ್‌ಅನ್ನು ಗೆಲ್ಲುವುದರಿಂದ ನಿಮಗೆ ಅಂತಹ ಪ್ರಯೋಜನವಾಗುವುದಿಲ್ಲ” ಎಂದು ಬೆದರಿಕೆಯೊಡ್ಡಿದ್ದರು. ಆದರೂ ಟಿಎಂಸಿಯಲ್ಲಿ ಗುಂಪುಗಾರಿಕೆ ಮುಂದುವರಿಯಿತು. ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಂದರೆ ಕೋಲ್ಕತ್ತಾದಲ್ಲಿ ಕುಳಿತು ಗ್ರಾಮೀಣ ಪ್ರದೇಶಗಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಇದು ತೋರಿಸುತ್ತದೆ.

ಇನ್ನು 60,000ಕ್ಕೂ ಸಿಬ್ಬಂದಿಗಳು ಇದ್ದ ಹೆಚ್ಚು ಕೇಂದ್ರೀಯ ಪಡೆಗಳನ್ನು ನಿಯೋಜಿಸಿದ್ದರೂ ಸಹ ಹಿಂಸಾಚಾರ ತಡೆಗಟ್ಟಲು ಸಾಧ್ಯವಾಗಿಲ್ಲ. ಅಂದರೆ ರೂಢಿಗತವಾಗಿ ಬಂದಿರುವ ಮಿಲಿಟೆಂಟ್ ಹೋರಾಟದ ಮನೋಭಾವ, ಕೆಲವು ಕಡೆಯಲ್ಲಿ ರೈತರ ಪ್ರಾಬಲ್ಯ ಹಿಂಸಾಚಾರಕ್ಕೆ ಬಹುಪಾಲು ಕಾರಣವಾಗಿದೆ. ಒಟ್ಟಾರೆ ವಿರೋಧಾಭಾಸಗಳಿಂದ ಕೂಡಿರುವ ಈ ಪಂಚಾಯ್ತಿ ಚುನಾವಣೆಗಳಲ್ಲಿ ಜನರ ಭಾಗವಹಿಸುವಿಕೆ ಮಾತ್ರ ಅತ್ಯಧಿಕವಾಗಿರುತ್ತದೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ 81% ಮತದಾನವಾಗಿರುವುದೇ ಅದಕ್ಕೆ ಸಾಕ್ಷಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...