ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಕುರಿತ ಹೇಳಿಕೆಗೆ ಸಂಬಂಧಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಸಮನ್ಸ್ ರದ್ದುಗೊಳಿಸುವಂತೆ ಎಎಪಿ ನಾಯಕರು ಸಲ್ಲಿಸಿರುವ ಅರ್ಜಿಯನ್ನು ನಾಲ್ಕು ವಾರಗಳೊಳಗಡೆ ವಿಲೇವಾರಿ ನಡೆಸುವಂತೆ ಗುಜರಾತ್ ಹೈಕೋರ್ಟ್‌ಗೆ ಸೂಚಿಸಿದೆ. ಗುಜರಾತ್ ಹೈಕೋರ್ಟ್ ತೀರ್ಪಿನವರೆಗೂ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸಂಜಯ್ ಸಿಂಗ್ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಗುಜರಾತ್ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿ ಸಲ್ಲಿಸಿದ ಮೇಲ್ಮನವಿಯು ಬಾಕಿ ಇರುವಾಗಲೂ ತನ್ನ ಕಕ್ಷಿದಾರನನ್ನು ಅಪರಾಧಿ ಎಂದು ಪರಿಗಣಿಸಿ ಅನರ್ಹಗೊಳಿಸುವ ಉದ್ದೇಶವಿದೆ ಎಂದು ಪೀಠಕ್ಕೆ ತಿಳಿಸಿದರು. ಹೈಕೋರ್ಟ್‌ನಲ್ಲಿ ವಿಷಯ ಬಾಕಿ ಇರುವಾಗಲೂ ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಮುಂದುವರಿಸುತ್ತಿದೆ ಎಂದು ಸಿಂಘ್ವಿ ಪೀಠಕ್ಕೆ ತಿಳಿಸಿದ್ದಾರೆ.
ಪ್ರಕರಣದಲ್ಲಿ ದೂರುದಾರರಾಗಿರುವ ಗುಜರಾತ್ ವಿಶ್ವವಿದ್ಯಾಲಯದ ವಿರುದ್ಧ ನನ್ನ ಕಕ್ಷಿದಾರರು ಒಂದು ಮಾತನ್ನೂ ಆಡಿಲ್ಲ. ಅಲ್ಲದೆ ವಿಶ್ವವಿದ್ಯಾನಿಲಯವು ರಾಜ್ಯ ಸರ್ಕಾರದ ಅನುದಾನಿತ ಮತ್ತು ಒಟ್ಟಾರೆಯಾಗಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವುದರಿಂದ ವಿಚಾರಣೆಯನ್ನು ಗುಜರಾತ್‌ನಿಂದ ಹೊರಗೆ ವರ್ಗಾಯಿಸಬಹುದೇ ಎಂದು ನಾನು ಕೇಳುತ್ತಿದ್ದೇನೆ. ನನ್ನ ಅರ್ಜಿಯಲ್ಲಿ ನಾನು ಕೋಲ್ಕತ್ತಾಗೆ ವರ್ಗಾಯಿಸುವಂತೆ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಮೋದಿ ಅವರ ಪದವಿಗಳ ಕುರಿತು ಎಎಪಿ ನಾಯಕರು ಪತ್ರಿಕಾಗೋಷ್ಠಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿಕರ ಮತ್ತು ವ್ಯಂಗ್ಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪಿಯೂಷ್ ಪಟೇಲ್ ಅವರು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.
ಮೋದಿ ಅವರಿಗೆ 1978ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಕಲಾ ಪದವಿ ಮತ್ತು 1983ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನು ನೀಡಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಈ ಪದವಿಗಳನ್ನು ಕಪೋಲಕಲ್ಪಿತವಾಗಿದೆ ಎಂದು ಆರೋಪಿಸಿತ್ತು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಪ್ರಧಾನಿ ಮೋದಿ ಅವರ ಪದವಿ ಪ್ರಮಾಣಪತ್ರದ ಮಾಹಿತಿ ಕೋರಿ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು.
ಕೇಜ್ರಿವಾಲ್‌ಗೆ ಮೋದಿಯ ಶೈಕ್ಷಣಿಕ ಪದವಿಗಳ ಮಾಹಿತಿಯನ್ನು ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಸೂಚಿಸಿತ್ತು. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಮೋದಿ ಅವರ ಶೈಕ್ಷಣಿಕ ಪದವಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ ಮುಖ್ಯ ಮಾಹಿತಿ ಆಯುಕ್ತರ (ಸಿಐಸಿ) ಆದೇಶವನ್ನು ಗುಜರಾತ್ ಹೈಕೋರ್ಟ್ ರದ್ದುಗೊಳಿಸಿತ್ತು.
ಕೇಜ್ರಿವಾಲ್ ಅವರು ನೀಡಿದ ಒಂದು ಹೇಳಿಕೆಯನ್ನು ಪಟೇಲ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಧಾನಿ ದೆಹಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿಶ್ವವಿದ್ಯಾಲಯದಲ್ಲಿ ಓದಿದ್ದರೆ, ಗುಜರಾತ್ ವಿಶ್ವವಿದ್ಯಾಲಯವು ತಮ್ಮ ಹಳೆಯ ವಿದ್ಯಾರ್ಥಿ ಪ್ರಧಾನಿಯಾಗಿದ್ದಾನೆ ಎಂದು ಸಂಭ್ರಮಿಸಬೇಕು ಮತ್ತು ಅವರು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಮತ್ತು ಪದವಿಯನ್ನು ಬಹಿರಂಗಪಡಿಸುತ್ತಿಲ್ಲ ಎಂದು ಹೇಳಿದ್ದರು. ಗುಜರಾತ್ ವಿಶ್ವವಿದ್ಯಾನಿಲಯದ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಈ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ಅವರು ಈ ಪೋಸ್ಟ್ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಇದನ್ನು ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ: ಜಾಮೀನಿನ ಮೇಲಿರುವ ಆರೋಪಿಗೆ ನೊಟೀಸ್ ನೀಡಿದ ಸುಪ್ರೀಂಕೋರ್ಟ್


