Homeಮುಖಪುಟಕೌಶಲ್ಯಾಭಿವೃದ್ಧಿ ಹಗರಣ: ಎಫ್ಐಆರ್ ರದ್ದು ಕೋರಿ ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಕೌಶಲ್ಯಾಭಿವೃದ್ಧಿ ಹಗರಣ: ಎಫ್ಐಆರ್ ರದ್ದು ಕೋರಿ ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

- Advertisement -
- Advertisement -

ಕೌಶಲ್ಯ ಅಭಿವೃದ್ಧಿ ಯೋಜನೆ ಹಗರಣ ಪ್ರಕರಣದಲ್ಲಿ ತನ್ನ ವಿರುದ್ಧ ದಾಖಲಾದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠವು, ಮ್ಯಾಜಿಸ್ಟ್ರೇಟ್ ಹೊರಡಿಸಿದ ರಿಮಾಂಡ್ ಆದೇಶ ಮತ್ತು ರದ್ದತಿ ಅರ್ಜಿಯನ್ನು ವಜಾಗೊಳಿಸಿದ ಆಂಧ್ರ ಪ್ರದೇಶ ಹೈಕೋರ್ಟ್ ನಿರ್ಧಾರವನ್ನು ಎತ್ತಿಹಿಡಿದಿದೆ.

ಆದರೆ, ಸಾರ್ವಜನಿಕ ಸೇವಕರನ್ನು ಅವರ ಅಧಿಕೃತ ಕಾರ್ಯ ಅಥವಾ ಕರ್ತವ್ಯಗಳ ನಿರ್ವಹಣೆಯಲ್ಲಿ ಮಾಡಲಾದ ಕೆಲಸಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸುವಾಗ ಸರ್ಕಾರದ ಪೂರ್ವಾನುಮತಿ ಪಡೆಯುವುದು ಅಗತ್ಯ ಎಂಬ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ವ್ಯಾಖ್ಯಾನದ ಬಗ್ಗೆ ಇಬ್ಬರೂ ನ್ಯಾಯಾಮೂರ್ತಿಗಳು ಭಿನ್ನ ತೀರ್ಪು ನೀಡಿದ್ದಾರೆ.

ಸೆಕ್ಷನ್ 17ಎ ಅಡಿಯಲ್ಲಿ ಪೂರ್ವಾನುಮತಿ ಕಡ್ಡಾಯ ಎನ್ನುವುದನ್ನು ಪಾಲಿಸುವುದು ಅವಶ್ಯಕವಾಗಿದ್ದು, ಸೆಕ್ಷನ್ 17ಎ ಸೇರ್ಪಡೆಯಾದ 2018ಕ್ಕಿಂತ ಮುಂಚಿನ ಪ್ರಕರಣಗಳಿಗೆ ಕೂಡ ಅನುಮತಿ ಪಡೆಯುವುದು ಅಗತ್ಯ ಎಂದು ನ್ಯಾಯಮೂರ್ತಿ ಅನಿರುದ್ಧ ಬೋಸ್ ಹೇಳಿದ್ದಾರೆ.

2018ರಲ್ಲಿ ಸೇರಿಸಲಾದ ಸೆಕ್ಷನ್ 17ಎಯ ಅನ್ವಯಿಸುವಿಕೆ ಭವಿಷ್ಯವರ್ತಿಯಾಗಿದ್ದು, ಅಪ್ರಾಮಾಣಿಕ ಸಾರ್ವಜನಿಕ ಸೇವಕರನ್ನು ರಕ್ಷಿಸುವುದಕ್ಕೆ ಇದನ್ನು ಬಳಸುವಂತಿಲ್ಲ ಎಂದು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ತಿಳಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಈ ಕಾಯಿದೆಯ ಉದ್ದೇಶವಾಗಿದ್ದು, ಸಾರ್ವಜನಿಕ ಹುದ್ದೆಯಲ್ಲಿರುವ ಪ್ರಾಮಾಣಿಕರನ್ನು ಕಿರುಕುಳದಿಂದ ರಕ್ಷಿಸುವುದು ಸೆಕ್ಷನ್ 17ಎಯ ಗುರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೆಕ್ಷನ್ 17ಎ ವ್ಯಾಖ್ಯಾನದ ವಿಚಾರವಾಗಿ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆ, ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ.

ಕೌಶಲ್ಯಾಭಿವೃದ್ಧಿ ಯೋಜನೆಗಾಗಿ ಮೀಸಲಿಟ್ಟ ಹಣವನ್ನು ನಕಲಿ ಬಿಲ್‌ ಸೃಷ್ಟಿಸಿ ಬೇನಾಮಿ ಕಂಪೆನಿಗಳಿಗೆ ವರ್ಗಾಯಿಸಿದ ಆರೋಪ ಚಂದ್ರಬಾಬು ನಾಯ್ದು ಮೇಲಿದೆ. ಪ್ರಕರಣ ಸಂಬಂಧ ಈ ಹಿಂದೆ ಚಂದ್ರಬಾಬು ನಾಯ್ದು ಅವರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಅವರು ಇತ್ತೀಚೆಗೆ ಬಿಡುಗಡೆಯಾಗಿದ್ದರು. ಆಂಧ್ರ ಪ್ರದೇಶ ಹೈಕೋರ್ಟ್‌ ನೀಡಿದ ಜಾಮೀನನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇದೆ.

ಇದನ್ನೂ ಓದಿ : ಮೋದಿ ಪದವಿ ವಿವಾದ: ಕೇಜ್ರಿವಾಲ್, ಸಂಜಯ್ ಸಿಂಗ್‌ಗೆ ರಿಲೀಫ್‌ ನೀಡಿದ ಸುಪ್ರೀಂಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...