Homeಕರ್ನಾಟಕಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಜಾಮೀನಿನ ಮೇಲಿರುವ ಆರೋಪಿಗೆ ನೊಟೀಸ್‌ ನೀಡಿದ ಸುಪ್ರೀಂಕೋರ್ಟ್‌

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಜಾಮೀನಿನ ಮೇಲಿರುವ ಆರೋಪಿಗೆ ನೊಟೀಸ್‌ ನೀಡಿದ ಸುಪ್ರೀಂಕೋರ್ಟ್‌

- Advertisement -
- Advertisement -

ಚಿಂತಕಿ, ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಆರೋಪಿಗೆ ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಹತ್ಯೆಗೀಡಾದ ಪತ್ರಕರ್ತೆಯ ಸಹೋದರಿ ಕವಿತಾ ಲಂಕೇಶ್ ಅವರು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಅರ್ಜಿಯಲ್ಲಿ ಮೋಹನ್ ನಾಯಕ್‌ಗೆ ಜಾಮೀನು ರದ್ದುಗೊಳಿಸುವಂತೆ ಕವಿತಾ ಲಂಕೇಶ್ ಕೋರಿದ್ದರು.

ಗೌರಿ ಲಂಕೇಶ್‌ ಹತ್ಯೆ ಆರೋಪಿ ಮೋಹನ್ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ಡಿ.7, 2023ರಂದು ಜಾಮೀನು ನೀಡಿತ್ತು. ಮೋಹನ್ ನಾಯಕ್ ಪರ ಹೈಕೋರ್ಟ್‌ನಲ್ಲಿ ವಕೀಲ ಅಮರ್ ಕೊರಿಯಾ ವಾದ ಮಂಡಿಸಿದ್ದರು. ಗೌರಿ ಹತ್ಯೆಯ ಕ್ರಿಮಿನಲ್ ಪಿತೂರಿಯ ಭಾಗವಾಗಿರುವ ಮೋಹನ್ ನಾಯಕ್‌ಗೆ ನೀಡಲಾದ ಜಾಮೀನನ್ನು ರದ್ದುಗೊಳಿಸುವಂತೆ ನಿರ್ದೇಶನ ನೀಡುವಂತೆ ಕವಿತಾ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಆರೋಪಿಯು ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾನೆ ಮತ್ತು ವಿಚಾರಣೆಯಲ್ಲಿ ಅನಗತ್ಯ ವಿಳಂಬವನ್ನು ಉಲ್ಲೇಖಿಸಿ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾಯಕ್‌ಗೆ ಜಾಮೀನು ಮಂಜೂರು ಮಾಡಿತ್ತು. ವಿಶೇಷ ತನಿಖಾ ತಂಡ(ಎಸ್‌ಐಟಿ) ಪ್ರಕರಣದ ತನಿಖೆ ನಡೆಸುತ್ತಿದೆ. ನಾಯಕ್ ಪ್ರಕರಣದಲ್ಲಿ 11ನೇ ಆರೋಪಿಯಾಗಿದ್ದು, ಒಟ್ಟು 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗಮನಾರ್ಹವಾಗಿ 2021ರ ಅಕ್ಟೋಬರ್ 21ರಂದು ಸುಪ್ರೀಂಕೋರ್ಟ್ ಆರೋಪಿ ಮೋಹನ್ ನಾಯಕ್ ಎನ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯ (ಕೆಸಿಒಸಿಎ) ಅಡಿಯಲ್ಲಿ ಆರೋಪಗಳನ್ನು ರದ್ದುಗೊಳಿಸಿದ ಏಪ್ರಿಲ್ 22, 2021ರ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದೆ. ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಠಿಣ ನಿಬಂಧನೆಗಳನ್ನು ಅನ್ವಯಿಸಬಹುದು ಎಂದು ಅದು ಹೇಳಿದೆ. ಗೌರಿ ಹತ್ಯೆಯ ಹೊರತಾಗಿ ಅನೇಕ ಸಂಘಟಿತ ಅಪರಾಧಗಳನ್ನು ಎಸಗಿರುವ ಅಮೋಲ್ ಕಾಳೆ ನೇತೃತ್ವದ ತಂಡದ ಭಾಗವಾಗಿ ನಾಯಕ್ ಇದ್ದ ಎನ್ನುವುದು ತನಿಖೆಯ ವೇಳೆ ಬಯಲಾಗಿತ್ತು.

2017ರ ಸೆಪ್ಟೆಂಬರ್ 05ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಮನೆಯ ಹೊರಗೆ ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಒಟ್ಟು 18 ಆರೋಪಿಗಳ ಪೈಕಿ 17 ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ವಿಕಾಸ್ ಪಾಟೀಲ್ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣದ ಕುರಿತು ತನಿಖೆ ನಡೆಸಿದ ಎಸ್ಐಟಿ ಅಧಿಕಾರಿಗಳು ಬೆಂಗಳೂರಿನ 1ನೇ ಸೆಷನ್ಸ್ ಕೋರ್ಟ್‌ಗೆ ಒಂದು ವರ್ಷದ ಬಳಿಕ 500ಕ್ಕೂ ಹೆಚ್ಚು ಸಾಕ್ಷಿಗಳು ಹಾಗೂ 1 ಸಾವಿರಕ್ಕೂ ಹೆಚ್ಚು ಪುರಾವೆಗಳನ್ನು ದಾಖಲಿಸಿರುವ ಸುಮಾರು 10 ಸಾವಿರ ಪುಟಕ್ಕೂ ಹೆಚ್ಚಿನ ಚಾರ್ಜ್‌ಶೀಟ್‌ನ್ನು ಸಲ್ಲಿಸಿದ್ದಾರೆ.

ಒಟ್ಟು 18 ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯ್ದೆಯ ಸೆಕ್ಷನ್ಗಳಾದ 25(1), 25(1ಃ), 27(1) ಮತ್ತು ಕೋಕಾ ಕಾಯ್ದೆಯ ಸೆಕ್ಷನ್ಗಳಾದ 3(1), 3(2), 3(3), 3(4)ರಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆ, ಪರಶುರಾಮ್ ವಾಗ್ಮೊರೆ, ಗಣೇಶ್ ಮಿಸ್ಕಿನ್, ಅಮಿತ್ ಬಡ್ಡಿ, ಅಮಿತ್ ದೆಗ್ವೇಕರ್, ‘ರತ್ ಕುರ್ಣೇ, ಸುರೇಶ್ ಎಚ್.ಎಲ್, ರಾಜೇಶ್ ಬಂಗೇರ, ಸುನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ್ ಎಡವೆ, ಶ್ರೀಕಾಂತ್ ಪಂಗರ್ಕರ್, ಕೆ.ಟಿ.ನವೀನ್ಕುಮಾರ್ ಹಾಗೂ ಹೃಷಿಕೇಶ್ ದೇವಡೇಕರ್ ಬಂಧನದಲ್ಲಿದ್ದಾರೆ. ಅಮೋಲ್ ಕಾಳೆಯನ್ನೂ ಒಳಗೊಂಡಂತೆ 7 ಆರೋಪಿಗಳು ಮಹಾರಾಷ್ಟ್ರದವರು, ಉಳಿದವರು ಕರ್ನಾಟಕ ರಾಜ್ಯದವರಾಗಿದ್ದಾರೆ.

ಈ ಎಲ್ಲ ಆರೋಪಿಗಳಿಗೂ ಸನಾತನ ಸಂಸ್ಥೆ ಮತ್ತು ‘ಹಿಂದೂ ಜನ ಜಾಗೃತಿ ಸಂಸ್ಥೆ’ಗಳೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಂಬಂಧಗಳಿವೆ ಎಂಬುವುದು ಪ್ರಾಸಿಕ್ಯೂಷನ್ ಪತ್ತೆ ಹಚ್ಚಿರುವ ಸಂಗತಿಯಾಗಿದ್ದು, ಸನಾತನ ಸಂಸ್ಥೆಯ ಸಿದ್ಧಾಂತ ಮತ್ತು ಗುರಿಗಳು ಈ ಆರೋಪಿಗಳನ್ನು ಹತ್ಯೆ ಮಾಡಲು ಪ್ರೇರೇಪಿಸಿದೆ ಎಂದು ಪ್ರಾಸಿಕ್ಯೂಷನ್ ಆರೋಪವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆ ತಂಡದವರೇ ಮಹಾರಾಷ್ಟ್ರದ ದಾಬೋಲ್ಕರ್, ಪನ್ಸಾರೆ ಹಾಗೂ ಕರ್ನಾಟಕದ ಸಂಶೋಧಕ ಪ್ರೊ.ಎಂ.ಎಂ.ಕಲಬುರ್ಗಿಯವರ ಹತ್ಯೆಯಲ್ಲೂ ಆರೋಪಿಗಳಾಗಿದ್ದಾರೆ ಎನ್ನಲಾಗಿದೆ. ಇವರಲ್ಲಿ ಕೆಲವರು ಮಹಾರಾಷ್ಟ್ರದ ಜೈಲಿನಲ್ಲಿದ್ದಾರೆ. ಉಳಿದವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...