Homeಬಹುಜನ ಭಾರತಸಮರಸವ ಸಾರಿದ ಮಾನವಂತ ಪತ್ರಕರ್ತ ಕಮಾಲ್ ಖಾನ್

ಸಮರಸವ ಸಾರಿದ ಮಾನವಂತ ಪತ್ರಕರ್ತ ಕಮಾಲ್ ಖಾನ್

- Advertisement -
- Advertisement -

ಪತ್ರಿಕಾವೃತ್ತಿಯು ಲಜ್ಜೆಗೆಟ್ಟು ಮಾನ ಕಳೆದುಕೊಂಡಿರುವ ಇಂದಿನ ದಿನಮಾನಗಳ ರೊಜ್ಜಿನ ನಡುವೆ ಕಮಲದಂತೆ ಹೊಳೆದ ಹೃದಯವಂತ ಕಮಾಲ್ ಖಾನ್. ಪತ್ರಿಕಾವೃತ್ತಿ ಜನಪರ ನೆಲೆಯದಾಗಿತ್ತೇ ವಿನಾ ಅಧಿಕಾರಕೇಂದ್ರಿತ ಆಗಿರಲಿಲ್ಲ. ಅವರ ಒಟ್ಟಂದದ ವರದಿಗಾರಿಕೆಯು ಭಾರತದ ಬಹುಮುಖೀ ಸಂಸ್ಕೃತಿ ಮತ್ತು ಗಂಗಾ-ಜಮುನಾ ಸಾಮಾಜಿಕ ಸದ್ಭಾವನೆಯ ಸಮರಸದ ಪ್ರತೀಕ.

ಗಂಗೆ ಯಮುನೆ ಹರಿಯುವ ಉತ್ತರ ಭಾರತದ ಕೆಲವು ಸೀಮೆಗಳಲ್ಲಿ ’ಗಂಗಾ-ಜಮುನೀ ತೆಹಜೀಬ್’ ಎಂಬ ಅವಧೀ ನುಡಿಗಟ್ಟಿನ ಕಾವ್ಯಾತ್ಮಕ ರೂಪಕವೊಂದಿದೆ. ಹಿಂದಿಗಿಂತ ಪುರಾತನ ಹಿಂದಿ ನುಡಿಗಟ್ಟು ಅವಧೀ, ಅವಧ ಸೀಮೆಯ ಆಡುನುಡಿ. ಹಿಂದೂ-ಮುಸ್ಲಿಮ್ ಸಂಗಮ ಸಂಸ್ಕೃತಿ ಎಂದು ಇದರ ಅರ್ಥ. ಹಿಂದೂ ಮುಸ್ಲಿಮ್ ಮೈತ್ರಿ- ಸಾಮರಸ್ಯವನ್ನು ಗಂಗೆ-ಯಮುನೆಯರ ಸಂಗಮಕ್ಕೆ ಹೋಲಿಸಲಾಗಿದೆ. ಬನಾರಸಿನ ಹಿಂದೂ-ಮುಸ್ಲಿಮ್ ಸಂಸ್ಕೃತಿ, ಕೊಡಕೊಳುವ ಸಂಬಂಧ ಹಾಗೂ ಜೀವನವಿಧಾನಗಳ ಶಾಂತಿಯುತ ಸಂಗಮ. ಅವಧದ ನವಾಬರು ಈ ಸಂಸ್ಕೃತಿಯ ಪ್ರವರ್ತಕರು. ಅಲಹಾಬಾದ್, ಲಖ್ನೋ, ಕಾನ್ಪುರ್, ಫೈಜಾಬಾದ್-ಅಯೋಧ್ಯ ಹಾಗೂ ವಾರಾಣಸಿ ಈ ಸಂಸ್ಕೃತಿಯ ಪ್ರಮುಖ ಸೀಮೆಗಳು. ದೆಹಲಿ ಕೂಡ ಈ ಸಾಲಿಗೆ ಸೇರುವುದುಂಟು. ಚುಟುಕಾಗಿ ತಕ್ಷಣ ಮನಮುಟ್ಟುವಂತೆ ಹೇಳಬೇಕೆಂದರೆ ಶಹನಾಯ್ ಸಂಗೀತ ಗುರು ಉಸ್ತಾದ್ ಬಿಸ್ಮಿಲ್ಲಾಖಾನ್ ಅವರು ಈ ಸಂಸ್ಕೃತಿಯ ಪ್ರತೀಕಗಳಲ್ಲೊಬ್ಬರು. ಬಿಸ್ಮಿಲ್ಲಾಖಾನ್ ಹೆಜ್ಜೆ ಗುರುತುಗಳನ್ನು ಅನುಸರಿಸಿದವರು ಕಮಾಲ್ ಖಾನ್.

ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹರಿದ ಕಂಬನಿಯ ಧಾರೆಯೇ ಈ ಮಾತುಗಳಿಗೆ ಸಾಕ್ಷಿ. ಕಮಾಲ್ ಖಾನ್ ಅವರನ್ನು ಖುದ್ದು ಭೇಟಿಯೇ ಆಗಿರದ ಪ್ರಜ್ಞಾವಂತ ನಾಗರಿಕರು, ಪತ್ರಕರ್ತರು ಆತನ ಸಾವಿನ ನಷ್ಟ ತಮಗೇ ಉಂಟಾದ ನಷ್ಟವೆಂದು ಭಾವಿಸಿ ಖಿನ್ನರಾಗಿದ್ದಾರೆ. ಅಂತಹವರ ಸಂಖ್ಯೆ ನಮ್ಮ ನಿಮ್ಮ ಊಹೆಗಿಂತ ಹಲವು ಪಟ್ಟು ದೊಡ್ಡದು.

ಉಸ್ತಾದ್ ಬಿಸ್ಮಿಲ್ಲಾಖಾನ್

ತಥ್ಯಾಂಶಗಳ ಜೊತೆಗೆ ಮಾನವೀಯತೆ ಮತ್ತು ಕಾವ್ಯಾತ್ಮಕ ಭಾಷೆ ಬೆರೆಸಿ ವರದಿಗಾರಿಕೆಯನ್ನು
ಸಂಪನ್ನಗೊಳಿಸುತ್ತಿದ್ದವರು ಕಮಾಲ್. ಸಭ್ಯತೆ ಸತ್ಯಶೀಲತೆ, ಸಮತೂಕ, ಸಂಯಮವನ್ನು ಅವರ ವರದಿಗಳಲ್ಲಿ ಕಾಣಬಹುದಾಗಿತ್ತು. ಇಂದಿನ ಬಹುತೇಕ ಪತ್ರಕರ್ತರು ಮರೆತೇ ಹೋಗಿರುವ ಅಧ್ಯಯನಶೀಲತೆಯ ಗುಣ ಕಮಾಲ್ ಅವರಲ್ಲಿ ಧಾರಾಳವಾಗಿತ್ತು. ಅದು ಅವರ ವರದಿಗಳಲ್ಲಿ ಜಿನುಗುತ್ತಿತ್ತು ಕೂಡ. ಕುರಾನಿನಂತೆ ರಾಮಾಯಣ ಭಗವದ್ಗೀತೆಯ ಶ್ಲೋಕಗಳನ್ನೂ, ದೃಷ್ಟಾಂತಗಳು, ನೀತಿಗಳನ್ನೂ ಸುಲಲಿತವಾಗಿ ಉಲ್ಲೇಖಿಸಬಲ್ಲವರಾಗಿದ್ದರು. ಎಲ್ಲಿಂದಲೋ ಎರಡು ಸಾಲುಗಳ ಕದ್ದು ವರದಿಯೊಂದಿಗೆ ಹೆಣೆಯುವ ಪತ್ರಕರ್ತರಾಗಿರಲಿಲ್ಲ ಅವರು. ತುಳಸೀರಾಮಾಯಣವನ್ನು ಆಳದಿಂದ ಬಲ್ಲವರಾಗಿದ್ದರು. ಉತ್ತರಪ್ರದೇಶದ ಸಮಾಜ ಧರ್ಮದಲ್ಲೇ ಮುಳುಗೇಳುವ ಸಮಾಜವೆಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಇಂತಹ ಭೋಳೆತನವನ್ನು ಕೆರಳಿಸಿ ಕುದಿಸುವುದು ರಾಜಕಾರಣಕ್ಕೆ ಚಿಟಿಕೆ ಹೊಡೆದಷ್ಟು ಸಲೀಸು ಕೆಲಸ. ಈ ತೆರನ ಸಮಾಜದೊಡನೆ ಪತ್ರಕರ್ತನಾಗಿ ಸಂವಾದ ನಡೆಸಲು ಅಸಂಖ್ಯ ಧಾರ್ಮಿಕ ಹೊತ್ತಿಗೆಗಳನ್ನು ಅಭ್ಯಾಸ ಮಾಡಿದ್ದರು ಕಮಾಲ್ ಖಾನ್. ಕೇಳುಗರ ಹೃದಯದ ಆಳಕ್ಕೆ ಇಳಿದುಬಿಡುತ್ತಿದ್ದರು. ಎಲ್ಲದರ ಆಳದಲ್ಲಿ ಹುದುಗಿರುವುದು ಸೋದರಭಾವ, ಪ್ರೇಮ ಆದರಗಳೇ ವಿನಾ ದ್ವೇಷ ತಿರಸ್ಕಾರಗಳಲ್ಲ ಎಂದು ಸಾಧಿಸುತ್ತಿದ್ದರು. ಗೂಗಲ್ ಪೂರ್ವಕಾಲದ ವರದಿಗಾರ ಆತ ಎಂಬುದು ಮಹತ್ವಪೂರ್ಣ ಅಂಶ. ಸುದ್ದಿ ನಿರೂಪಣೆಯ ಅವರ ಅನುಪಮ ಶೈಲಿ ಆದರ್ಶಪ್ರಾಯ.

ಪತ್ರಕರ್ತ ಕಮಾಲ್ ಉತ್ತಮ ಕವಿಯಾಗಿದ್ದರು. ಅಸಾಧಾರಣ ಕಥಾನಿರೂಪಣೆಯ ಪ್ರತಿಭೆ ಅವರದಾಗಿತ್ತು. ತಮ್ಮ ನಾಲ್ಕು ಸಾಲುಗಳ ಸ್ಕ್ರಿಪ್ಟ್ ಬರೆಯಲು ತಾಸುಗಟ್ಟಲೆ ಓದುತ್ತಿದ್ದರುಶ್ರ॒ದ್ಧೆಯಿಂದ ಹೆಣಗುತ್ತಿದ್ದರು. ಆಗ ರೂಪು ತಳೆಯುತ್ತಿತ್ತು ಮಾನ ಸಮ್ಮಾನದ ಒಂದು ಮಾನವೀಯ ಒಕ್ಕಣೆ. ಮತ್ತೊಬ್ಬ ಕಮಾಲ್ ಖಾನರನ್ನು ರೂಪಿಸುವ ನೈತಿಕಶಕ್ತಿಯನ್ನು ಈ ದೇಶ ಸದ್ಯಕ್ಕೆ ಕಳೆದುಕೊಂಡಿದೆ ಎನ್ನುತ್ತಾರೆ ಮತ್ತೊಬ್ಬ ಮಾನವೀಯ ಪತ್ರಕರ್ತ ರವೀಶ್ ಕುಮಾರ್.

ರಷ್ಯನ್ ಭಾಷೆಯನ್ನು ಓದಿ ಬರೆದು ಮಾತಾಡಬಲ್ಲವರಾಗಿದ್ದ ಕಮಾಲ್, ಪತ್ರಿಕಾವೃತ್ತಿಗೆ ಕಾಲಿಡುವ ಮುನ್ನ ಸಾರ್ವಜನಿಕ ಕ್ಷೇತ್ರದ ಉದ್ಯಮವೊಂದರಲ್ಲಿ ರಷ್ಯನ್ ಅನುವಾದಕರಾಗಿ ಕೆಲಸ ಮಾಡುತ್ತಿದ್ದರು.

ಅವರದು ಅಂತರಧರ್ಮೀಯ ವಿವಾಹ. ಪತ್ರಕರ್ತರೂ ಆಗಿದ್ದ ಪತ್ನಿ ರುಚಿ ಕುಮಾರ್ ಹಿಂದೂ ಕುಟುಂಬಕ್ಕೆ ಸೇರಿದವರು. ಮನೆಯಲ್ಲಿನ ಉದಾರವಾದೀ ವಾತಾವರಣ ಕಸುಬಿನಲ್ಲೂ ಪ್ರತಿಫಲಿಸಿತ್ತು. ಲಖ್ನೋದ ಸಮರಸ ಸಂಸ್ಕೃತಿಯ ಅಸಲು ಪ್ರತಿನಿಧಿಯಾಗಿ ಬದುಕಿದವರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಈ ಬಗೆಯ ಪತ್ರಿಕಾವೃತ್ತಿಯ ಝಲಕುಗಳ ಸರಣಿಯನ್ನೇ ಕಾಣಬಹುದು. ದ್ವೇಷದ ಬೆಂಕಿಯನ್ನು ತಣಿಸುವ ಶಕ್ತಿ ಅವರ ಮಾತುಗಳಿಗಿತ್ತು.

ನೋಡುಗರ ಗಮನ ಸೆಳೆದು ಟಿ.ಆರ್.ಪಿ. ಏರಿಸಲು ಟಿವಿ ವರದಿಗಾರಿಕೆ ಏನೆಲ್ಲ ಹುಚ್ಚುಚ್ಚು ಕಸರತ್ತುಗಳನ್ನು ಅಸ್ತ್ರದಂತೆ ಬಳಸುತ್ತದೆ. ಆದರೆ ಭಾರೀ ಎನ್ನಲಾಗುವ ಸುದ್ದಿಗಳ ವರದಿ ಮಾಡುವ ಘಳಿಗೆಗಳಲ್ಲೂ ಕಮಾಲ್ ಭಾವಾವೇಶಕ್ಕೆ ಒಳಗಾದವರಲ್ಲ. ದನಿಯಲ್ಲಿ ಸಮಚಿತ್ತ ಸಂಯಮ ಸಡಿಲುತ್ತಿರಲಿಲ್ಲ. ಟಿವಿ ಮಾಧ್ಯಮದ ನಾಟಕೀಯತೆಯನ್ನು ದೂರ ಇರಿಸಿದ್ದ ಅತಿವಿರಳ ವರದಿಗಾರ.

ಕಾಶಿಯ ಸ್ನಾನ ಸೋಪಾನಗಳ ಮೇಲೆ ಗಂಗಾರತಿಯ ಜೊತೆಜೊತೆಯಲ್ಲಿ ಕಮಾಲ್ ಖಾನ್ ಚಿತ್ರಪಟ ಇರಿಸಿ ಹಣತೆಗಳನ್ನು ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಂಗಾ ಜಮುನಾ ಸಂಸ್ಕೃತಿಯಿದು. ಹಿಂದೂಸ್ತಾನದ ಅಸಲು ಸಂಸ್ಕೃತಿ ಸಹಬಾಳುವೆಯ ಪ್ರತೀಕ. ಬಾಬರಿ ಮಸೀದಿಯನ್ನು ಕೆಡವಿ ವಿವಾದಿತ ಸ್ಥಳದಲ್ಲಿ ರಾಮಲಲ್ಲಾನನ್ನು ಪ್ರತಿಷ್ಠಾಪಿಸಿದ ವರ್ಷಗಳ ನಂತರ ವರದಿ ಮಾಡಲು ಕಮಾಲ್ ಖಾನ್ ಅಯೋಧ್ಯೆಗೆ ತೆರಳಿರುತ್ತಾರೆ. ಪೂಜಾ ಸಾಮಗ್ರಿಗಳ ಸಾಲುಸಾಲು ಮುಂಗಟ್ಟುಗಳು. ಇಂತಹ ಹಿಂದೂ ಪೂಜಾ ಸಾಮಗ್ರಿಗಳ ಮಾರುವ ಒಂದು ಮುಂಗಟ್ಟಿನ ಮೂಲೆಯೊಂದರಲ್ಲಿ ಧೂಳು ಹಿಡಿದ ಅರಬ್ಬಿ ಲಿಪಿಯ ಪಟ್ಟಿಕೆಯೊಂದು ಅವರ ಕಣ್ಣಿಗೆ ಬೀಳುತ್ತದೆ. ಮಾರಾಟಕ್ಕೆ ಕುಳಿತ ಬಾಲಕ ಹೇಳುತ್ತಾನೆ, ಅವನ ಅಪ್ಪ ಇಲ್ಲೇ ಎಲ್ಲೋ ಹೋಗಿದ್ದು ಇದೀಗ ಮರಳುತ್ತಾನೆಂದು. ಮರಳಿದ ಆ ಅಪ್ಪನ ಹೆಸರು ಝಹೂರ್ ಖಾನ್. ತಾನು ಇಲ್ಲಿ ಬಹಳ ಕಾಲದಿಂದ ಇದ್ದೇನೆ ಮತ್ತು ಸುರಕ್ಷಿತವಾಗಿದ್ದೇನೆಂದು ಆತ ಕಮಾಲ್ ಖಾನ್‌ಗೆ ಹೇಳುತ್ತಾನೆ. ಸ್ಥಳೀಯರ್‍ಯಾರೂ ಇಲ್ಲಿನ ಮುಸಲ್ಮಾನರ ಮೈ ಮುಟ್ಟಿಲ್ಲ, ಕೊಂದವರು ಹೊರಗಡೆಯವರು. ನಾವು ಸಾಮರಸ್ಯದಿಂದ ಬಾಳಿದ್ದೇವೆ. ಹದಿನಾಲ್ಕು ವರ್ಷಗಳ ಕಠಿಣ ವನವಾಸದಿಂದ ಅಯೋಧ್ಯೆಗೆ ಮರಳಿದ ಶ್ರೀರಾಮ ಎಲ್ಲಕ್ಕೂ ಮೊದಲು ಹೋಗಿ ನಮಿಸುವುದು ತನ್ನನ್ನು ವನವಾಸಕ್ಕೆ ಕಳಿಸಲು ಮೂಲಕಾರಣಳಾದ ಚಿಕ್ಕಮ್ಮ ಕೈಕೇಯಿಯನ್ನು. ಅಂತಹ ರಾಮನ ನೆಲವಿದು ಎಂಬ ಕತೆಯನ್ನು ಝಹೂರ್ ಖಾನ್ ಹೇಳುತ್ತಾನೆ.

ರವೀಶ್ ಕುಮಾರ್

ಅಯೋಧ್ಯೆಯ ಸೈಯದ್ ವಾಡಾ ಎಂಬ ಕೇರಿಯ ಮತ್ತೊಂದು ಕತೆಯನ್ನು ಕಮಾಲ್ ಖಾನ್ ಹೇಳುತ್ತಿದ್ದರು- ಈ ವಾಡಾದಲ್ಲಿ 300-400 ಮುಸಲ್ಮಾನರಿದ್ದರು. 1992ರಲ್ಲಿ ಲಕ್ಷಾಂತರ ಕರಸೇವಕರು ಹೊರಗಿನಿಂದ ಬಂದರು. ಆಗ ಹೆದರಿದ ಈ ಮುಸಲ್ಮಾನರ ಮನೆ ತೊರೆದು ಪಲಾಯನ ಮಾಡಿದ್ದರು. ಇವರ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಎದುರಿನಲ್ಲೇ ರಾಮನ ಗುಡಿಯೊಂದಿತ್ತು. ಅಲ್ಲಿನ ಸಾಧುಸಂತರು ಗೋಡೆ ಹಾರಿಬಂದು ಬಾವಿಗಳಿಂದ ನೀರು ಸೇದಿ ತಂದು ಈ ಮನೆಗಳಿಗೆ ಬಿದ್ದಿದ್ದ ಬೆಂಕಿಯನ್ನು ನಂದಿಸಿದರು. ಈ ಪೈಕಿ ಚಾರುಶೀಲ ಎಂಬ ಸಾಧ್ವಿಯೂ ಇದ್ದರು. ಸನಿಹದಲ್ಲೇ ಹೂತೋಟವೊಂದರ ಮಾಲೀಕರು ರಯೀಸ್ ಮತ್ತು ಹಫೀಸ್. ಈ ತೋಟದಲ್ಲಿ ಕಿತ್ತ ಮೊದಲ ಹೂವುಗಳಿಗೆ ಇವರು ಹಣ ಪಡೆಯುತ್ತಿರಲಿಲ್ಲ. ದೇವರ ಮುಡಿಗೇರಿಸಲು ಕಳಿಸುತ್ತಿದ್ದರು. ಮತ್ತೊಂದು ಮೊಹಲ್ಲಾದ ಹೆಸರು ಬೇಗಂಪುರಾ. ಅಲ್ಲೊಬ್ಬ ಮುನ್ನೂ ಮಿಯಾ ಎಂಬ ಶಿಯಾ ಮುಸ್ಲಿಮರೊಬ್ಬರಿದ್ದರು. 1949ರಿಂದ 1999ರಲ್ಲಿ ತಾವು ನಿಧನರಾಗುವ ತನಕ ಅವರು ಸುಂದರಭವನ ಎಂಬ ದೇವಾಲಯದ ಮಹಂತರಾಗಿದ್ದರು.

ಅಲ್ಲಿಯೇ ಸನಿಹದಲ್ಲಿ ದಂತಧವನ ಕುಂಡ… ಖುದ್ದು ಶ್ರೀರಾಮಚಂದ್ರನೇ ಇಲ್ಲಿ ಹಲ್ಲುಜ್ಜುತ್ತಿದ್ದನೆಂಬ ಪ್ರತೀತಿ. ಪಕ್ಕದಲ್ಲೇ ಸತ್ಯಸ್ನೇಹಿ ಮಂದಿರ. 70-80 ವಯಸ್ಸಿನ ವೃದ್ಧ ಪೂಜಿಸುತ್ತಿದ್ದ ಅಲ್ಲಿನ ಗರ್ಭಗೃಹದಲ್ಲಿ ಹಲವು ಧರ್ಮಗಳ ಪೂಜೆ ನಡೆಯುತ್ತಿತ್ತು. ರಾಮ ಲಕ್ಷ್ಮಣ ಸೀತೆಯರೊಂದಿಗೆ, ಬುದ್ಧ, ಮಹಾವೀರ, ಶಿಲುಬೆಗೇರಿಸಿದ್ದ ಕ್ರಿಸ್ತ ಹಾಗೂ ಕಾಬಾದ ಪಟಗಳಿದ್ದವು. ಮಹಾಕುಂಭದಲ್ಲೊಮ್ಮೆ ಹಿಂದೂ ಗುರುವಿನ ಅನುಯಾಯಿ ರಷ್ಯನ್ ಮಹಿಳೆ ಕಮಾಲ್ ಖಾನ್‌ಗೆ ಎದುರಾಗಿದ್ದಳು. ಬೊಲ್ಷೆವಿಕ್ ಕ್ರಾಂತಿಯಲ್ಲಿ ಭಾಗವಹಿಸಿದ್ದ ತಂದೆಯ ಮಗಳು ಆಕೆ. ಕಲ್ಪವಾಸ ಮಾಡಲು ಬಂದಿದ್ದೇನೆಂದಳು. ದ್ವಾಪರದಲ್ಲಿ ಶ್ರೀಕೃಷ್ಣ ಹೇಳಿದ್ದ ಪ್ರಕಾರ ಮೋಕ್ಷಪ್ರಾಪ್ತಿಗೆ ಬಂದಿದ್ದೇನೆಂದಳು. ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದದ ಮೊಕದ್ದಮೆಯಲ್ಲಿ ಎದುರಾಳಿಗಳಾಗಿದ್ದ ಹಾಶೀಮ್ ಅನ್ಸಾರಿ ಮತ್ತು ರಾಮಚಂದ್ರ ಪರಮಹಂಸ ಒಟ್ಟಿಗೆ ನ್ಯಾಯಾಲಯಕ್ಕೆ ತೆರಳುತ್ತಿದ್ದ ಗೆಳೆಯರು. ಬಾಬರಿ ಮಸೀದಿ ಉರುಳಿದ ನಂತರ ಖಾನ್‌ಗೆ ನೀಡಿದ್ದ ಸಂದರ್ಶನವೊಂದರಲ್ಲಿ ರಾಮಲಲ್ಲಾ ಟೆಂಟಿನಲ್ಲಿದ್ದಾನೆಂದೂ, ಆತನಿಗೆ ಬೇಗನೆ ಮಂದಿರ ನಿರ್ಮಿಸಬೇಕೆಂದೂ ಭಾವುಕರಾಗಿ ಅತ್ತುಬಿಟ್ಟಿದ್ದರು ಹಾಶೀಮ್ ಅನ್ಸಾರಿ. ಈ ವಿಡಿಯೋ ಈಗಲೂ ನೋಡಸಿಗುತ್ತದೆ. ಈ ಝಹೂರ್ ಖಾನ್, ಹಾಶೀಮ್ ಅನ್ಸಾರಿ, ರಷ್ಯನ್ ಮಹಿಳೆ ನಮಗೆ ಅಗತ್ಯವಾಗಿ ನೆನಪಾಗಬೇಕು. ಈ ಭೂಮಿಯ ಮೇಲೆ ಘನ ಸೌಂದರ್ಯವಿದೆ, ಅಪಾರ ಪ್ರೇಮವೂ ಇದೆ. ದ್ವೇಷವನ್ನು ದೂರವಿಡಬೇಕಿದೆ ಎನ್ನುತ್ತಿದ್ದರು ಕಮಾಲ್ ಖಾನ್.

ಸ್ತ್ರೀದ್ವೇಷ, ಗಂಡಾಳಿಕೆಯ ಕಡು ವಿರೋಧಿಯಾಗಿದ್ದವರು. ಗಂಡಾಳಿಕೆಯ ಬೇರುಬಿಳಿಲುಗಳ ಕುರಿತು ತಮ್ಮ ಸಾವಿನ ಹಿಂದಿನ ದಿನವಷ್ಟೇ ಅದೆಷ್ಟು ಘನತೆಯಿಂದ ಮಾತಾಡಿದ್ದರು!

ಇಂತಹ ಕಮಾಲ್ ಖಾನ್ ಸಾಯುವುದಿಲ್ಲ…


ಇದನ್ನೂ ಓದಿ: ಯೋಗಿ ವಿರುದ್ಧ ಗೋರಕ್‌ಪುರ ಕ್ಷೇತ್ರದಿಂದ ಭೀಮ್‌ ಆರ್ಮಿಯ ಚಂದ್ರಶೇಖರ್‌ ಆಜಾದ್‌ ಸ್ಪರ್ಧೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...