ಸರ್ಕಾರಿ, ಅನುದಾನಿತ, ಮತ್ತು ಮದರಸಾ ಶಾಲೆಗಳಲ್ಲಿ 12 ನೇ ತರಗತಿ ಕಲಿಯುತ್ತಿರುವ 9.5 ಲಕ್ಷ ವಿದ್ಯಾರ್ಥಿಗಳಿಗೆ ತಲಾ 10,000 ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಶಾಲೆಗಳನ್ನು ಮುಚ್ಚಿದ್ದು, ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಅಡೆತಡೆಗಳನ್ನು ಪರಿಗಣಿಸಿ ಅವರಿಗೆ ಟ್ಯಾಬ್ ಒದಗಿಸುವುದಾಗಿ ಈ ಹಿಂದೆ ರಾಜ್ಯ ಸರ್ಕಾರ ಘೋಷಿಸಿತ್ತು.
ಬಂಗಾಳದ ಗ್ರಾಮೀಣ ಭಾಗಗಳಲ್ಲಿನ ಹೆಚ್ಚಿನ ವಿದ್ಯಾರ್ಥಿಗಳ ಕುಟುಂಬದಲ್ಲಿ ಒಂದು ಹ್ಯಾಂಡ್‌ಸೆಟ್ ಹೊಂದಿದ್ದಾರೆ. ಕೆಲವರು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಬೇಕಾದಂತ ಸ್ಮಾರ್ಟ್‌ಫೋನ್ ಕೂಡ ಹೊಂದಿಲ್ಲ ಎಂದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು.
ಇದನ್ನೂ ಓದಿ: ಬಿಜೆಪಿ ಕಳ್ಳರ ಪಕ್ಷ, ಅವರಿಗಿಂತ ದೊಡ್ಡ ಕಳ್ಳರು ಎಲ್ಲೂ ಇಲ್ಲ- ಮಮತಾ ಬ್ಯಾನರ್ಜಿ ವಾಗ್ದಾಳಿ
ಈಗ ಟ್ಯಾಬ್ ಬದಲು ಎಲ್ಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 10,000 ರೂಪಾಯಿಗಳನ್ನು ಹಾಕುವುದಾಗಿ ತಿಳಿಸಿದೆ. ಇನ್ನು ಮೂರು ದಿನಗಳಲ್ಲಿ ಹಣವನ್ನು ವರ್ಗಾಯಿಸಲಾಗುವುದು. ವಿದ್ಯಾರ್ಥಿಗಳೇ ತಮಗೆ ಬೇಕಾದ ಸ್ಮಾರ್ಟ್‌ಪೋನ್ ಅಥವಾ ಟ್ಯಾಬ್ ತೆಗೆದುಕೊಳ್ಳಬಹುದು ಎಂದಿದೆ.
“ಟ್ಯಾಬ್‌ಗಳನ್ನು ವಿತರಿಸಲು ನಾವು ಟೆಂಡರ್ ಕರೆದಿದ್ದೆವು. ಆದರೆ ಇಷ್ಟು ದೊಡ್ಡ ಪ್ರಮಾಣದ ಟ್ಯಾಬ್‌ಗಳನ್ನು ಪೂರೈಸಲು ಯಾರು ಮುಂದೆ ಬರಲಿಲ್ಲ. ಕೇಂದ್ರ ಸರ್ಕಾರ ಚೀನಾದಲ್ಲಿ ತಯಾರಿಸಿದ ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿರುವುದರಿಂದ, ನಾವು ಇತರ ಬ್ರಾಂಡ್‌ಗಳನ್ನು ಅವಲಂಬಿಸಬೇಕಾಗಿದೆ. ಹೀಗಾಗಿ, ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲು ನಾವು ನಿರ್ಧರಿಸಿದ್ದೇವೆ. ಮೂರು ವಾರಗಳಲ್ಲಿ ವಿದ್ಯಾರ್ಥಿಗಳ ಖಾತೆಗೆ ಹಣ ತಲುಪಲಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: IPS ಅಧಿಕಾರಿಗಳ ವರ್ಗಾವಣೆ: ಮಮತಾ ಬ್ಯಾನರ್ಜಿ ಬೆನ್ನಿಗೆ ನಿಂತ ಕೇಜ್ರೀವಾಲ್
ಶಿಕ್ಷಣ ಇಲಾಖೆ ಇತರ ಟ್ಯಾಬ್ ತಯಾರಕರೊಂದಿಗೆ ಮಾತುಕತೆ ನಡೆಸಿದೆ. ಆದರೆ ಅದು ಉಪಯೋಗಕ್ಕೆ ಬರಲಿಲ್ಲ ಎಂದು ರಾಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ. “ಟ್ಯಾಬ್ ತಯಾರಕರು, ವಾರಕ್ಕೆ ಗರಿಷ್ಠ 15,000 ದಿಂದ 20,000 ಟ್ಯಾಬ್‌ಗಳನ್ನು ಪೂರೈಸಬಹುದೆಂದು ಹೇಳಿದರು. ಆದರೆ ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳಿಗೆ ಟ್ಯಾಬ್ ವಿತರಿಸುವಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದಲೂ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ” ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ಶಿಕ್ಷಣ ಆರಂಭವಾದಾಗಿನಿಂದ ಅನೇಕ ವಿದ್ಯಾರ್ಥಿಗಳು ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಕಾರಣದಿಂದಲೂ ಆನ್‌ಲೈನ್ ಶಿಕ್ಷಣಕ್ಕೆ ವಿರೋಧಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಬಿಜೆಪಿ ನನ್ನ ಜೈಲಿಗೆ ಹಾಕಿದರೂ, ಅಲ್ಲಿಂದಲೇ ಪಕ್ಷವನ್ನು ಗೆಲ್ಲಿಸುವೆ-ಮಮತಾ ಬ್ಯಾನರ್ಜಿ


