ಈ ತಿಂಗಳ ಅಂತ್ಯದೊಳಗೆ ವಿವಾದಿತ ಕೃಷಿ ಕಾನೂನುಗಳು ಮತ್ತು ಎಂಎಸ್‌ಪಿಯ ಮೇಲಿನ ತನ್ನ ಬೇಡಿಕೆಗಳನ್ನು ಈಡೇರಿಸಲು ಒಕ್ಕೂಟ ಸರ್ಕಾರ ವಿಫಲವಾದರೇ ಸೆಪ್ಟೆಂಬರ್ 8 ರಿಂದ ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಆರ್‌ಎಸ್‌ಎಸ್-ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಎಚ್ಚರಿಕೆ ನೀಡಿದೆ.
ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ವೆಚ್ಚದ ಆಧಾರದ ಮೇಲೆ ನಿರ್ಧರಿಸಬೇಕು. ವಿವಾದಿತ ಕೃಷಿ ಕಾನೂನುಗಳಿಂದ ಉಂಟಾಗಿರುವ ವಿವಾದವನ್ನು ಪರಿಹರಿಸಲು, ರೈತರು ತೋರಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾನೂನನ್ನು ರೂಪಿಸಬೇಕು ಎಂದು ಬಿಕೆಎಸ್ ಹೇಳಿದೆ.
“ಈ ಬೇಡಿಕೆಗಳಿಗಾಗಿ, ರಾಷ್ಟ್ರವ್ಯಾಪಿ ಸಾಂಕೇತಿಕ ಧರಣೆಯನ್ನು ಸೆಪ್ಟೆಂಬರ್ 8 ರಂದು ಆಯೋಜಿಸಲಾಗುವುದು. ಬೇಡಿಕೆಗಳನ್ನು ಈಡೇರಿಸಲು ಮೋದಿ ಸರ್ಕಾರಕ್ಕೆ ಆಗಸ್ಟ್ 31 ರವರೆಗೆ ಕಾಲಾವಕಾಶ ನೀಡಲಾಗಿದೆ. ನಮ್ಮ ಬೇಡಿಕೆಗಳ ಬಗ್ಗೆ ಸಕಾರಾತ್ಮಕ ನಿಲುವು ತೆಗೆದುಕೊಳ್ಳದಿದ್ದರೆ, ಸೆಪ್ಟೆಂಬರ್ 8ರ ಧರಣಿಯ ನಂತರ , ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಬಿಕೆಎಸ್ ಖಜಾಂಚಿ ಯುಗಲ್ ಕಿಶೋರ್ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: ಕಬ್ಬಿನ ಯೋಗ್ಯ ಬೆಲೆಗೆ ಪಂಜಾಬ್ ರೈತರ ಪಟ್ಟು: 55ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು
“ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾ ಬೆಲೆಯನ್ನು ಪಡೆಯುತ್ತಿಲ್ಲ. ಎಂಎಸ್‌ಪಿ ಲಾಭದಾಯಕವಾಗಿಲ್ಲ. ಈ ಕಾರಣದಿಂದಾಗಿ ತಮ್ಮ ಸಂಸ್ಥೆಯು ಪ್ರತಿಭಟನೆಗೆ ಮುಂದಾಗುತ್ತಿದೆ” ಎಂದು ಹೇಳಿದ್ದಾರೆ.
“ಆರ್‌ಎಸ್‌ಎಸ್ ಸಂಘಟನೆ ನರೇಂದ್ರ ಮೋದಿ ಸರ್ಕಾರವನ್ನು ನಡೆಸುವುದಿಲ್ಲ, ಇಲ್ಲದಿದ್ದರೆ ನಮ್ಮ ಸಂಘಟನೆ ಪ್ರತಿಭಟನೆಗೆ ಮುಂದಾಗುತ್ತಿರಲಿಲ್ಲ. ರೈತರ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳ ಬಗ್ಗೆಯೂ ಯಾವುದೇ ಸರ್ಕಾರ ಗಂಭೀರವಾಗಿಲ್ಲ” ಎಂದು ಬಿಕೆಎಸ್ ನಾಯಕ ಹೇಳಿದ್ದಾರೆ.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಮೋದಿ ಸರ್ಕಾರದ ಭರವಸೆಯ ಬಗ್ಗೆ ಕೇಳಿದಾಗ, ಅವರು ಎಷ್ಟು ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಮೊದಲು ನಿರ್ಧರಿಸಬೇಕು ಎಂದು ಹೇಳಿದ್ದಾರೆ.
“ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಸರ್ಕಾರಗಳು ವೆಚ್ಚದ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆಯನ್ನು ಪರಿಗಣಿಸಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಮುಂದಿನ 6 ತಿಂಗಳಿಗಾಗಿ ಪಡಿತರ ಸಂಗ್ರಹಿಸುತ್ತಿರುವ ರೈತ ಮಹಿಳೆಯರು


