ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳೆದೊಂದು ವರ್ಷದಿಂದಲೂ ಕೋವಿಡ್-19 ಮಹಾ ಸಾಂಕ್ರಾಮಿಕಕ್ಕೆ ಹೇಗೆ ಸ್ಪಂದಿಸಿದವು, ಅದರಲ್ಲೂ ಮುಖ್ಯವಾಗಿ ಎರಡನೇ ಅಲೆಯನ್ನು ಹೇಗೆ ನಿಭಾಯಿಸಿದವು ಎಂಬ ಪ್ರಶ್ನೆಗೆ ಬಹುಶಃ “ತೀರಾ ಕಮ್ಮಿ, ತೀರಾ ತಡವಾಗಿ” ಎನ್ನುವುದು ಉತ್ತರವಾಗಬಹುದು. ಈಗ ಮೂರನೇ ಅಲೆ ಬಾಗಿಲು ತಟ್ಟುತ್ತಿರುವಾಗ, ನಾವು ಕೇಳಬೇಕಿರುವ ಪ್ರಶ್ನೆಯೆಂದರೆ: ಮುಂದೆ ಬರಲಿರುವುದನ್ನು ನಿಭಾಯಿಸಲು ಸರ್ಕಾರ ಹಿಂದಿಗಿಂತ ಹೆಚ್ಚು ಸನ್ನದ್ಧವಾಗಿದೆಯಾ? ಸರ್ಕಾರ ಸೂಕ್ತವಾದ ನೀತಿ ನಿರ್ಣಯಗಳನ್ನು ಮಾಡುತ್ತಿದೆಯಾ? ಮುಖ್ಯವಾಗಿ ಆಡಳಿತ ವ್ಯವಸ್ಥೆಯ ಸನ್ನದ್ಧತೆ ಹಾಗೂ ಹಾಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳು ಪರಿಣಾಮಕಾರಿ ಆಗಿವೆಯಾ? ಎಂಬುದಾಗಿದೆ.

ರಾಜ್ಯ ಸರ್ಕಾರದ ಧೋರಣೆಯಲ್ಲಿ ಸ್ವಲ್ಪ ಬದಲಾವಣೆ ಬಂದಿರುವಂತೆ ಕಾಣುತ್ತಿದೆ. ಈ ಮೊದಲಿನ ಅತಿ ಆತ್ಮವಿಶ್ವಾಸ ಕಳಚಿದ್ದು, ಸರ್ಕಾರ ಹೆಚ್ಚು ಎಚ್ಚರದಿಂದ ಪರಿಸ್ಥಿತಿಯನ್ನು ಎದುರಿಸುತ್ತಿರುವಂತೆ ಕಾಣುತ್ತಿದೆ. ಮಹಾ ಪಿಡುಗಿನ ನಿರ್ವಹಣಾ ನೀತಿಯಲ್ಲಿನ ಒಂದು ಬಹು ಮುಖ್ಯ ಬದಲಾವಣೆಯೆಂದರೆ, ಸರ್ಕಾರವು ರಾಜ್ಯ ಸರ್ಕಾರದ ರಣನೀತಿಯನ್ನು ಬದಿಗಿಟ್ಟು, ಆಯಾ ಜಿಲ್ಲೆಗೆ ನಿರ್ದಿಷ್ಟವಾಗಿರುವಂಥ ಮಾಹಿತಿ-ದತ್ತಾಂಶಗಳನ್ನಾಧರಿಸಿ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಮಟ್ಟದಲ್ಲಿ ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ಇದು ಸರಿಯಾದ ದಿಕ್ಕಿನಲ್ಲಿಟ್ಟ ಒಂದು ಬಹುಮುಖ್ಯ ಹೆಜ್ಜೆಯಾಗಿದೆ.

ರಣನೀತಿಯ ವಿಚಾರದಲ್ಲಿ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವುದು ಅಗತ್ಯವಿರುವ ಹೊತ್ತಿನಲ್ಲೇ, ಆರೋಗ್ಯ ವ್ಯವಸ್ಥೆಯಲ್ಲಿ ಮೂಲ ಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು ರಾಜ್ಯ ಮಟ್ಟದಲ್ಲಿ ಆಗಬೇಕಿರುವ ಪ್ರಯತ್ನವಾಗಿದೆ. ಎರಡನೇ ಅಲೆಯ ನಂತರ ಕಂಡುಬಂದಿರುವಂತೆ, ಸುಧಾರಣೆ ಮಾಡಿಕೊಳ್ಳಲೇಬೇಕಿರುವ ಒಂದು ಬಹು ಮುಖ್ಯ ಅಂಶವೆಂದರೆ ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ನಿಗದಿಪಡಿಸಿರುವ ಆಮ್ಲಜನಕದ ಪ್ರಮಾಣದಲ್ಲಿ 1015ರಿಂದ 1020 ಮೆಟ್ರಿಕ್ ಟನ್, ಅಂದರೆ ಕೇವಲ 5 ಮೆಟ್ರಿಕ್ ಟನ್‌ನಷ್ಟು ಅಲ್ಪ ಪ್ರಮಾಣದ ಹೆಚ್ಚಳವನ್ನು ಮಾತ್ರವೇ ಮಾಡಿದೆ. ರಾಜ್ಯಕ್ಕೆ ಅರಬ್ ದೇಶಗಳಾದ ಬಹ್ರೈನ್, ಕುವೈತ್ ಮತ್ತು ಯುಎಇ ದೇಶಗಳು ಒಟ್ಟಿಗೆ 359 ಮೆಟ್ರಿಕ್ ಟನ್ ಆಮ್ಲಜನಕದ ಕೊಡುಗೆ ನೀಡಿವೆ. ಎಲ್ಲಾ ಜಿಲ್ಲೆಗಳಿಗೂ ವಿಕೇಂದ್ರಿತವಾಗಿ ಆಮ್ಲಜನಕದ ಪೂರೈಕೆ ಮತ್ತು ಸರಾಗವಾದ ಲಭ್ಯತೆ ದೃಷ್ಟಿಯಿಂದ ರಾಜ್ಯ ಸರ್ಕಾರವು ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 127 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದಾಗಿ ಹೇಳಿಕೊಂಡಿದೆ. ಆದರೆ ಈ ಪ್ರಕ್ರಿಯೆ ಪೂರ್ಣಗೊಂಡಿದೆಯಾ ಹಾಗೂ ಈ ಘಟಕಗಳು ಯಾವ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡುತ್ತಿವೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ತಾಲೂಕು ಆಸ್ಪತ್ರೆಗಳು, ಸಿಎಚ್‌ಸಿ ಮತ್ತು ಪಿಎಚ್‌ಸಿಗಳಿಗೆ ಪೂರೈಸುವುದಕ್ಕಾಗಿ ಒಟ್ಟು 10 ಸಾವಿರ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಪಾದಿಸುವುದು ಸರ್ಕಾರದ ಯೋಜನೆಯಾಗಿದೆಯಾದರೂ, ಕಳೆದ ಜೂನ್ ಮಧ್ಯಭಾಗದವರೆಗೂ ಪೂರೈಕೆಯಾಗಿರುವುದು ಕೇವಲ 780 ಸಿಲಿಂಡರುಗಳು ಮಾತ್ರ.

ರಾಜ್ಯ ಸರ್ಕಾರವು ಖಾಸಗಿ ಮೆಡಿಕಲ್ ಕಾಲೇಜುಗಳಿಗೂ ಸಹ ಆಮ್ಲಜನಕ ಉತ್ಪಾದನಾ ಸೌಕರ್ಯಗಳನ್ನು ಸ್ಥಾಪಿಸಿಕೊಳ್ಳುವುದಕ್ಕಾಗಿ ಸಬ್ಸಿಡಿಗಳನ್ನು ನೀಡುತ್ತಿದೆ. ಆಮ್ಲಜನಕದ ಸೌಲಭ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು 1970ರಿಂದ 24,000ಕ್ಕೂ, ಐಸಿಯು ಹಾಸಿಗೆಗಳನ್ನು 444ರಿಂದ 1145ಕ್ಕೂ, ವೆಂಟಿಲೇಟರ್ ಸಹಿತ ಹಾಸಿಗೆಗಳನ್ನು 610ರಿಂದ 2058ಕ್ಕೂ ಹೆಚ್ಚಿಸಿರುವುದಾಗಿ ರಾಜ್ಯ ಸರ್ಕಾರ ಹೇಳಿಕೊಂಡಿದೆ. ಹಾಗೆಯೇ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಆಮ್ಲಜನಕ ಲಭ್ಯತೆಯ ಹಾಸಿಗೆಗಳ ಸಂಖ್ಯೆ 4700ರಿಂದ 9405ಕ್ಕೆ, ವೆಂಟಿಲೇಟರ್ ಸಹಿತ ಹಾಸಿಗೆಗಳ ಸಂಖ್ಯೆ 341ರಿಂದ 646ಕ್ಕೆ ಹಾಗೂ ಎಚ್‌ಎಫ್‌ಎನ್‌ಸಿ(HFNC)ಗಳ ಸಂಖ್ಯೆ 15ರಿಂದ 570ಕ್ಕೆ ಹೆಚ್ಚಳವಾಗಿದೆ. ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೂ 200 ವೆಂಟಿಲೇಟರ್‌ಗಳನ್ನು ನೀಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಿಸುವ ಪ್ರಕ್ರಿಯೆಯಲ್ಲಿದೆ.

ಬಹಳ ಮುಖ್ಯವಾಗಿ ಪಿಎಚ್‌ಸಿಗಳಿಗೆ ಒಬ್ಬ ವೈದ್ಯರ ಬದಲು ಇಬ್ಬರು ವೈದ್ಯರನ್ನು ನೇಮಿಸಲಾಗುವುದು. ಸಿಎಚ್‌ಸಿಗಳಲ್ಲಿನ ಎಲ್ಲಾ 30 ಹಾಸಿಗೆಗಳನ್ನೂ ಆಮ್ಲಜನಕವಿರುವ ಹಾಸಿಗೆಗಳಾಗಿ ಪರಿವರ್ತಿಸಿ, 5 ಐಸಿಯು ಮತ್ತು 5 ಎಚ್‌ಡಿಯು ಹಾಸಿಗೆಗಳನ್ನು ಒದಗಿಸಲಾಗುವುದು. ಪ್ರತಿಯೊಂದು ತಾಲೂಕು ಆಸ್ಪತ್ರೆಗೂ 50 ಐಸಿಯು ಹಾಸಿಗೆ, 15 ವೆಂಟಿಲೇಟರ್‌ಗಳು ಹಾಗೂ 6 ಚಿಕ್ಕ ಮಕ್ಕಳ ಹಾಸಿಗೆಗಳನ್ನು ಪೂರೈಸಲಾಗುವುದು. ಇದು ಕಳೆದ ಬಾರಿಗಿಂತ ಗಣನೀಯ ಪ್ರಮಾಣದ ಪ್ರಗತಿ ಎನ್ನಿಸಿದರೂ ಸಹ, “ಕಡುಬಿನ ರುಚಿ ಗೊತ್ತಾಗುವುದು ಅದನ್ನು ತಿಂದ ಮೇಲೆಯೇ” ತಾನೆ? ಆದ್ದರಿಂದ, ತುರ್ತಿನ ಸಂದರ್ಭದಲ್ಲಿ ಸರ್ಕಾರ ಹೇಗೆ ಸ್ಪಂದಿಸುತ್ತೆ ಎಂಬುದನ್ನು ಕಾದುನೋಡಬೇಕಿದೆ.

ಕೊರೊನಾ ಮೂರನೇ ಅಲೆಯು 18 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಗುರಿ ಮಾಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ ಮಕ್ಕಳ ವಾರ್ಡ್‌ಗಳನ್ನು ಸ್ಥಾಪಿಸಿದೆ. 6 ವರ್ಷಕ್ಕಿಂತ ಕೆಳಗಿನ ಎಲ್ಲ ಮಕ್ಕಳನ್ನೂ ತೀವ್ರ ಅಪೌಷ್ಠಿಕತೆಯ (Severe Acute Malnutrition – SAM) ಪರೀಕ್ಷೆಗೆ ಒಳಪಡಿಸುವ ಕ್ರಮವನ್ನು ಆರಂಭಿಸಿದ್ದು, ಈ ಸಮಸ್ಯೆಯಿರುವ ಎಲ್ಲ ಮಕ್ಕಳನ್ನೂ ವಿಶೇಷ ಪೌಷ್ಠಿಕತೆ ವೃದ್ಧಿಗಾಗಿ ತಾಯಂದಿರ ಸಮೇತ ಜಿಲ್ಲಾ ಆಸ್ಪತ್ರೆಗಳಲ್ಲಿ 14 ದಿನಗಳ ಕಾಲ ಅಡ್ಮಿಟ್ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ಸಮಸ್ಯಾ ಮಗುವಿಗೆ ಅದರ ತಾಯಿ ಅಥವಾ ತಂದೆಯ ಜೊತೆಯಲ್ಲಿ ಐಸಿಯು ಮತ್ತು ಮಕ್ಕಳ ವಾರ್ಡ್‌ಗಳಲ್ಲಿ ಸ್ಥಳಾವಕಾಶ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸ್ನಾತಕೋತ್ತರ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲಾ ಮೆಡಿಕಲ್ ವಿದ್ಯಾರ್ಥಿಗಳನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19ರ ಕೆಲಸಕ್ಕಾಗಿ ನಿಯೋಜಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ವೆಂಟಿಲೇಟರ್‌ಗಳು,
ಎನ್‌ಐವಿ(NIV)ಗಳು ಮತ್ತಿತರ ಉಪಕರಣಗಳ ಚಲಾವಣೆ, ಆಮ್ಲಜನಕದ ಪೂರೈಕೆ, ಆಘಾತದ (ಶಾಕ್) ನಿರ್ವಹಣೆ, ಸಿಪಿಆರ್ಗ(CPR)ಳನ್ನು ಒದಗಿಸುವುದು ಮುಂತಾದ ಕೆಲಸಗಳಲ್ಲಿ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳಿಗೂ ತರಬೇತಿ ನೀಡಲಾಗುತ್ತಿದೆ.

ವಿಶೇಷವಾಗಿ, ಕೋವಿಡ್-19 ಹಾಗೂ ಅದರ ಹಿಂದೆಯೇ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬಹುಮುಖ ಉರಿಯೂತದ ಚಿಹ್ನೆ(MIS-C)ಗಳ ತೀವ್ರ ಸ್ವರೂಪದ ಪ್ರಕರಣಗಳ ಶುಶ್ರೂಷೆಗೆ ಬೇಕಾದ ಔಷಧಿಗಳ ಲಭ್ಯತೆ ಪ್ರಶ್ನೆಯು ಬಹಳ ಮುಖ್ಯವಾಗಿ ಗಮನ ಕೊಡಬೇಕಾದ ಒಂದು ವಿಚಾರವಾಗಿದೆ. MIS-C-ಅ ಚಿಕಿತ್ಸೆಗೆ 15,000ದಿಂದ 20,000 ರೂ.ಗಳಷ್ಟು ದುಬಾರಿಯಾದ IVIG (Intravenous Immunoglobulin) ಎಂಬ ಔಷಧಿಯ ಅಗತ್ಯವಿದ್ದು, ಇದರ ಖರೀದಿಗಾಗಿ ರಾಜ್ಯ ಸರ್ಕಾರ 10 ಕೋಟಿ ರೂ.ಗಳನ್ನು ತೆಗೆದಿರಿಸಿದೆ. ಆದರೆ ಅದನ್ನು ಎಷ್ಟು ಪ್ರಮಾಣದಲ್ಲಿ ಖರೀದಿಸಿ ಜಿಲ್ಲೆಗಳಿಗೆ ವಿತರಿಸಲಾಗಿದೆ ಎನ್ನುವುದು ಇನ್ನೂ ಸ್ಪಷ್ಟವಿಲ್ಲ.

MIS-C ಕುರಿತಂತೆ ರಾಜ್ಯ ಸರ್ಕಾರವು ಪೋಷಕರಲ್ಲಿ ಅರಿವನ್ನು ಹೆಚ್ಚಿಸುವ ಅಗತ್ಯವಿದೆ: ಇದು ಅವರಲ್ಲಿ ಆತಂಕ ಮೂಡಿಸುವಂತಿರದೆ, ಕೋವಿಡ್ ಸೋಂಕು ತಗುಲಿದ ಮಕ್ಕಳಲ್ಲಿ ಈ ಬೇನೆ ಇದೆಯೇ ಎಂದು ತಿಳಿಯಲು ಯಾವ ಲಕ್ಷಣಗಳ ಮೇಲೆ ನಿಗಾ ಇಟ್ಟಿರಬೇಕು ಎಂಬ ಗ್ರಹಿಕೆಯನ್ನು ಅವರಲ್ಲಿ ಮೂಡಿಸುವಂತಿರಬೇಕು. ತಕ್ಷಣ ಚಿಕಿತ್ಸೆ ನೀಡಬೇಕಾದ ಈ ಬೇನೆಯ ಲಕ್ಷಣಗಳನ್ನು ಅಮೆರಿಕದ ರೋಗ ನಿಯಂತ್ರಣ ಕೇಂದ್ರವು ಈ ಕೆಳಗಿನಂತೆ ಪಟ್ಟಿ ಮಾಡಿದೆ:

* ಹೆಚ್ಚುವರಿಯಾಗಿ 3 ದಿನ ಜ್ವರ
* ಕರುಳು ನೋವು
* ರಕ್ತದಿಂದ ಕೆಂಪೇರಿದ ಕಣ್ಣು
* ಎದೆ ಬಿಗಿತ/ನೋವು
* ಭೇದಿ
* ಅತಿಯಾದ ಸುಸ್ತು
* ತಲೆನೋವು
* ಕತ್ತು ನೋವು
* ದದ್ದು
* ವಾಂತಿ

ಒಂದುವೇಳೆ ಮಗುವಿಗೆ ಉಸಿರಾಟದಲ್ಲಿ ತೊಂದರೆ, ಹೊಸಹೊಸ ಗೊಂದಲ, ಎಚ್ಚರಗೊಳ್ಳಲು ಅಥವಾ ಎಚ್ಚರವಾಗಿರಲು ಆಗದಿರುವುದು, ಚರ್ಮ, ತುಟಿ ಅಥವಾ ಉಗುರಿನ ಮೇಲ್ಮೈ ಬಣ್ಣರಹಿತ, ಬೂದು ಇಲ್ಲವೇ ನೀಲಿಯಾಗುವುದು, ಇಂಥ ಲಕ್ಷಣಗಳು ಕಂಡಲ್ಲಿ ಮಗುವಿಗೆ ತುರ್ತು ಚಿಕಿತ್ಸೆ ಕೊಡಿಸಬೇಕು. ಎಲ್ಲಾ ಮಕ್ಕಳಲ್ಲೂ ಈ ಎಲ್ಲಾ ಲಕ್ಷಣಗಳೂ ಗೋಚರಿಸುವುದಿಲ್ಲ. ಆದ್ದರಿಂದ ಮೇಲ್ಕಂಡ ಯಾವುದೇ ಲಕ್ಷಣ ಕಂಡರೂ ತುರ್ತು ಚಿಕಿತ್ಸೆ ಪಡೆದುಕೊಳ್ಳಬೇಕು.

ಕೋವಿಡ್-19 ಸೋಂಕು ತಗುಲಿರುವವರ ಪೈಕಿ ಮಕ್ಕಳ ಪ್ರಮಾಣದಲ್ಲಿ ಈವರೆಗೂ ಗಣನೀಯ ಹೆಚ್ಚಳವೇನೂ ಕಂಡುಬಂದಿಲ್ಲ ಎಂದು, ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯ (AIIMS) ತಜ್ಞರನ್ನೂ ಒಳಗೊಂಡಂತೆ ಹಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರಾದರೂ, ಮೂರನೇ ಅಲೆಯು 18 ವರ್ಷಕ್ಕೆ ಕೆಳಗಿನ ಮಕ್ಕಳನ್ನು ಗುರಿ ಮಾಡುವುದೆಂಬ ನಿರೀಕ್ಷೆ ಇದೆ. ಆದರೆ, ಕೊರೊನಾ ಸೋಂಕಿನ ಹರಡುವಿಕೆಯ ಪ್ರಮಾಣ 2%ಗಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯುವ ಸರ್ಕಾರದ ನಿರ್ಧಾರವು ಅತ್ಯಂತ ವಿವಾದಾಸ್ಪದವಾಗಿದೆ. ಈ ವಿಚಾರದ ಸರಿತಪ್ಪುಗಳ ಕುರಿತು ಮಾಧ್ಯಮಗಳಲ್ಲಿ ತಜ್ಞರ ನಡುವೆ ಬಿಸಿಬಿಸಿ ಚರ್ಚೆಗಳು ನಡೆದಿವೆ.

’ವಿಶ್ವಸಂಸ್ಥೆಯ ಮಕ್ಕಳ ನಿಧಿ’ಯು (UNICEF) 2021ರ ಜುಲೈ 9ರಂದು ಒಂದು ಹೇಳಿಕೆ ಬಿಡುಗಡೆ ಮಾಡಿ, “ಶಾಲೆಗಳ ಪುನರಾರಂಭವನ್ನು ತಡ ಮಾಡುವಂತಿಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ. ಜಗತ್ತಿನಾದ್ಯಂತ 19 ದೇಶಗಳ 15.6 ಕೋಟಿ ವಿದ್ಯಾರ್ಥಿಗಳ ಶಿಕ್ಷಣ ಹಾನಿಗೀಡಾಗಿರುವ ಈ ಶೈಕ್ಷಣಿಕ ಬಿಕ್ಕಟ್ಟಿನ ಮೇಲೆ ಅದು ಬೆಳಕು ಚೆಲ್ಲಿದೆ. ಕೋವಿಡ್ ಸೋಂಕನ್ನು ಹರಡುವುದರಲ್ಲಿ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲಾ ವಿದ್ಯಾರ್ಥಿಗಳ ಪಾತ್ರ ಗಣನೀಯವಲ್ಲ ಎಂಬ ಬಗ್ಗೆ ಅದು ಸಾಕ್ಷ್ಯಾಧಾರಗಳನ್ನು ಒದಗಿಸಿದೆ. ಬಾರ್‌ಗಳು ಮತ್ತು ಹೋಟೆಲ್‌ಗಳನ್ನು ತೆರೆಯಲು ಅನುಮತಿ ನೀಡಿರುವ ಸರ್ಕಾರಗಳು ಶಾಲೆಗಳನ್ನು ಮಾತ್ರ ಮುಚ್ಚಿರುವುದನ್ನು ಅದು ಟೀಕಿಸಿದೆ. ನಿರ್ಧಾರಗಳು ಅಪಾಯದ ವಿಶ್ಲೇಷಣೆ (ರಿಸ್ಕ್ ಅನಾಲಿಸಿಸ್) ಹಾಗೂ ಸಾಂಕ್ರಾಮಿಕ ರೋಗಶಾಸ್ತ್ರೀಯ ಪರಿಗಣನೆಗಳನ್ನಾಧರಿಸಿ ಇರಬೇಕು ಎಂದು ಕೂಡ ಅದು ಹೇಳಿದೆ. “ತಲೆಮಾರಿನ ಮಹಾದುರಂತ”ವನ್ನು ತಪ್ಪಿಸಲು “ಶಾಲೆಗಳ ಸುರಕ್ಷಿತ ಪುನರಾರಂಭ”ಕ್ಕೆ ಒತ್ತು ನೀಡುವಂತೆ ಅದು ಸರ್ಕಾರಗಳನ್ನು ಒತ್ತಾಯಿಸಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಅಪಾಯಗಳು ಮತ್ತು ಅನುಕೂಲಗಳ ನಡುವೆ ಸಮತೋಲನ ಸಾಧಿಸುವುದು ಹಗ್ಗದ ಮೇಲಿನ ನಡಿಗೆಯಂತೆ ಕಡು ಕಷ್ಟದ ಕೆಲಸವೇ ಹೌದು. ವಿಶೇಷವಾಗಿ ಅಂಚಿಗೊತ್ತಲ್ಪಟ್ಟ ಸಮುದಾಯಗಳ ಮಕ್ಕಳು ಹಾಗೂ ಬೆಳವಣಿಗೆಯ ಕೀಲಕ ಹಂತಗಳಲ್ಲಿನ ಚಿಕ್ಕ ಮಕ್ಕಳಿಗೆ ಗಂಭೀರವಾದ ಶೈಕ್ಷಣಿಕ ನಷ್ಟವುಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರಗಳು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ. ಅನೇಕ ಮಕ್ಕಳು ಈಗಾಗಲೇ ಕೂಲಿಗೆಲಸದಲ್ಲಿ ತೊಡಗಿದ್ದು ಪುನಃ ಶಾಲೆಗೆ ಬರದೇ ಇರುವ ವಾಸ್ತವವನ್ನು ಸಹ ಸರ್ಕಾರಗಳು ಗಣನೆಗೆ ತೆಗೆದುಕೊಳ್ಳಬೇಕಿದೆ. ಅದೇ ವೇಳೆ ಅವು ಶಾಲಾ ಪುನರಾರಂಭವನ್ನು ಹಂತಹಂತವಾಗಿ ಯೋಜಿಸಬೇಕಿದೆ. ಅನೇಕ ಸಮುದಾಯಗಳಲ್ಲಿ ಮಕ್ಕಳು ಮಾಸ್ಕ್ ಧಾರಣೆಯಂಥ ಯಾವುದೇ ಕೋವಿಡ್ ಪೂರಕ ನಡವಳಿಕೆಗಳಿಲ್ಲದೆ ಒಟ್ಟುಗೂಡಿ ಆಟವಾಡಿಕೊಂಡಿರುವುದು ಅನೇಕ ಸಮುದಾಯಗಳಲ್ಲಿನ ವಾಸ್ತವವಾಗಿದೆ. ಹೀಗಾಗಿ ಅವರು ಶಾಲೆಗೆ ಹಿಂದಿರುಗುವುದು ಮತ್ತೊಂದು ಹೆಚ್ಚುವರಿ ಅಪಾಯವನ್ನು ಹುಟ್ಟುಹಾಕಬಾರದು ಎಂಬುದೂ ಮುಖ್ಯವಾದ ಅಂಶ.

ಸೋಂಕು ಹರಡುವಿಕೆ ಪ್ರಮಾಣ 2%ಗಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳನ್ನು ಪುನರಾರಂಭಿಸುವ ಸರ್ಕಾರದ ನಿರ್ಧಾರವು ಎಚ್ಚರಿಕೆಯ, ವಿವೇಕದ ನಡೆಯಾಗಿದೆ. ಆದರೂ ಸೋಂಕು ಹರಡುವಿಕೆಯನ್ನು ಕನಿಷ್ಠ ಮಟ್ಟದಲ್ಲಿರಿಸುವ ನಿಟ್ಟಿನಲ್ಲಿ ಶಾಲೆಗಳು ಕೆಲವು ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಬೇಕಿದೆ:

1. ವಿದ್ಯಾರ್ಥಿಗಳು, ಪೋಷಕರು ಹಾಗೂ ಆಯಾ ಸಮುದಾಯಗಳ ಇನ್ನಿತರ ಆಸಕ್ತರನ್ನು (ಸ್ಟೇಕ್‌ಹೋಲ್ಡರ್‍ಸ್) ತೊಡಗಿಸಿಕೊಂಡು, ಶಾಲೆಗಳ ಪುನರಾರಂಭದ ವಿಚಾರದಲ್ಲಿ ಅವರ ಸಲಹೆ ಮತ್ತು ಬೆಂಬಲವನ್ನು ಪಡೆಯಬೇಕು.

2. ಶಾಲೆಯ ಎಲ್ಲಾ ಸಿಬ್ಬಂದಿಗಳು ಮುಂಚೂಣಿ ಕಾರ್ಯಕರ್ತರಾಗಿರುವುದರಿಂದ ಅವರೆಲ್ಲರಿಗೂ ವ್ಯಾಕ್ಸಿನೇಶನ್ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

3. ಸಾಕಷ್ಟು ವ್ಯಾಕ್ಸಿನ್‌ಗಳು ಲಭ್ಯವಿದ್ದಲ್ಲಿ ಎಲ್ಲಾ ಮಕ್ಕಳ ಪೋಷಕರಿಗೂ ವ್ಯಾಕ್ಸಿನೇಶನ್ ಆಗಿರುವಂತೆ ನೋಡಿಕೊಳ್ಳಬೇಕು.

4. ಶಾಲೆಗಳನ್ನು ಮೊದಲಿಗೆ ಕಡಿಮೆ ಅವಧಿಗೆ ಆರಂಭಿಸಬೇಕು.

5. ಎಲ್ಲಾ ತರಗತಿಗಳ ಎಲ್ಲಾ ಮಕ್ಕಳೂ ಏಕಕಾಲಕ್ಕೆ ಶಾಲೆಗೆ ಬರಬೇಕಾಗಿಲ್ಲ.

6. ಶಾಲೆಗಳನ್ನು ಶಿಫ್ಟ್‌ಗಳಲ್ಲಿ ಅಥವಾ ತರಗತಿಗಳನ್ನು ದಿನ ಬಿಟ್ಟು ದಿನ ನಡೆಸಿ ಒಂದು ತರಗತಿಯ ಅರ್ಧದಷ್ಟು ಸಂಖ್ಯೆಯ ಮಕ್ಕಳು ಒಂದು ದಿನ ಅಥವಾ ಒಂದು ಶಿಫ್ಟಿನಲ್ಲೂ ಮಿಕ್ಕವರು ಇನ್ನೊಂದರಲ್ಲೂ ಹಾಜರಾಗುವಂತೆ ಮಾಡಬಹುದು.

7. ಮಕ್ಕಳು ಶಾಲೆಗೆ ಆದಷ್ಟೂ ಕಡಿಮೆ ವಸ್ತುಗಳನ್ನು ಒಯ್ಯುವಂತೆ ನೋಡಿಕೊಳ್ಳಬೇಕು.

8. ಪ್ರತಿಯೊಂದು ತರಗತಿಯಲ್ಲೂ ಸ್ಯಾನಿಟೈಸೇಶನ್ ಸೌಕರ್ಯಗಳು ಲಭ್ಯವಿರಬೇಕು. ಪ್ರತಿಯೊಂದು ತರಗತಿಗೆ ಮೊದಲು ಮತ್ತು ನಂತರ ಎಲ್ಲಾ ಶಿಕ್ಷಕರು ಮತ್ತು ಮಕ್ಕಳೂ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವಂತೆ ಹೇಳಬೇಕು.

9. ಮಕ್ಕಳು ಮತ್ತು ಶಿಕ್ಷಕರು ಕೈಗಳನ್ನು ಸರಿಯಾಗಿ ಮತ್ತು ಅಗತ್ಯವಿರುವಷ್ಟು ಸ್ಯಾನಿಟೈಸ್ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು.

10. ತರಗತಿಗಳನ್ನು ಗಾಳಿ ಬೆಳಕು ಚೆನ್ನಾಗಿರುವಂತಹ ಕೊಠಡಿಗಳಲ್ಲಿ ಅಥವಾ ಹೊರಗಡೆಯಲ್ಲಿ ನಡೆಸಬೇಕು.

11. ಮಕ್ಕಳು ದೂರದೂರ ಕೂತುಕೊಳ್ಳಬೇಕು.

12. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಾಸ್ಕ್‌ಗಳನ್ನು ಸಮರ್ಪಕವಾಗಿ (ಮೂಗು-ಬಾಯಿ ಮುಚ್ಚುವಂತೆ) ಮತ್ತು ಎಲ್ಲಾ ಹೊತ್ತಿನಲ್ಲೂ ಧರಿಸಿರಬೇಕು.

13. ಶಾಲೆಗೆ ಬಂದವರೆಲ್ಲರೂ ಮನೆಗೆ ಮರಳಿದ ತಕ್ಷಣವೇ ತಮ್ಮ ಬಟ್ಟೆಬರೆ ಮತ್ತು ತಾವು ತಂದಿದ್ದ ವಸ್ತುಗಳೆಲ್ಲವನ್ನೂ ಸ್ಯಾನಿಟೈಸ್ ಮಾಡುವಂತೆ ನೋಡಿಕೊಳ್ಳಬೇಕು. ಕೊರೊನಾ ಸಾಂಕ್ರಾಮಿಕವು ದೀರ್ಘ ಕಾಲ ಇರಲಿದೆ. ಆದ್ದರಿಂದ ಜಗತ್ತಿನೊಂದಿಗಿನ ನಮ್ಮ ಒಡನಾಟಕ್ಕೆ ನವೀನ ವಿಧಾನಗಳನ್ನು ಕಂಡುಕೊಳ್ಳಬೇಕಿದೆ; ಆದ್ಯತೆಯ ಚಟುವಟಿಕೆಗಳನ್ನು ಅನಿರ್ದಿಷ್ಟವಾಗಿ ಮುಂದೂಡಲು ಸಾಧ್ಯವಿಲ್ಲ. ಯಾವುದೇ ಚಟುವಟಿಕೆಗೆ ಯಾವುದೇ ಸಮಯವು ಅತ್ಯುತ್ತಮ ಎಂಬುದಿಲ್ಲ. ಆದ್ದರಿಂದ, ಅಪಾಯ-ಪ್ರಯೋಜನದ ವಿಶ್ಲೇಷಣೆಯನ್ನಾಧರಿಸಿದ ಎಚ್ಚರಿಕೆಯ, ಲೆಕ್ಕಾಚಾರದ ನಿರ್ವಹಣೆಯೊಂದೇ ನಮ್ಮ ಮುಂದಿರುವ ಮಾರ್ಗ.

ಡಾ.ಅಖಿಲಾ ವಾಸನ್

ಡಾ.ಅಖಿಲಾ ವಾಸನ್
ಕರ್ನಾಟಕ ಜನಾರೋಗ್ಯ ಚಳವಳಿಯ ಸಕ್ರಿಯ ಕಾರ್ಯಕರ್ತೆ

(ಕನ್ನಡಕ್ಕೆ): ಸಿರಿಮನೆ ನಾಗರಾಜ್


ಇದನ್ನೂ ಓದಿ: ಬಿಜೆಪಿಯ ಜನಾಶೀರ್ವಾದ ಯಾತ್ರೆಯಲ್ಲಿ ಕೊರೊನಾ ಬರುವುದಿಲ್ಲವೆ?: ಕಾಂಗ್ರೆಸ್ ಪ್ರಶ್ನೆ

LEAVE A REPLY

Please enter your comment!
Please enter your name here