Homeಮುಖಪುಟಬಿಲ್ಕಿಸ್ ಬಾನೋಳ ಮುಗಿಯದ ವನವಾಸ ಮತ್ತು ಸಂಸ್ಕಾರವಂತ ಅತ್ಯಾಚಾರಿಗಳು

ಬಿಲ್ಕಿಸ್ ಬಾನೋಳ ಮುಗಿಯದ ವನವಾಸ ಮತ್ತು ಸಂಸ್ಕಾರವಂತ ಅತ್ಯಾಚಾರಿಗಳು

- Advertisement -
- Advertisement -

ಭಯಾನಕ ಹಿನ್ನೆಲೆ

ಫೆಬ್ರವರಿ 27, 2002ರಂದು ಗುಜರಾತ್‌ನ ತುಂಬಾ ಕೋಮು ಗಲಭೆಗಳು ಭುಗಿಲೆದ್ದಿದ್ದವು. ಗಲಭೆ ಸಂಸ್ಕೃತಿಯ ಅವಿಭಾಜ್ಯ ಎಂದಾಗಿರುವ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆಗಳು ಪೊಲೀಸರ ಕಣ್ಗಾವಲಿನಲ್ಲಿಯೇ ನಡೆದವು. ದಿನ ಬೆಳಗಾಗಿ ಮುಖನೋಡುತ್ತಿದ್ದ ನೆರೆಹೊರೆಯವರು ಧರ್ಮದ ಅಮಲಿನಲ್ಲಿ ರಾಕ್ಷಸರಿಗಿಂತ ವಿಪರೀತವಾಗಿ ವರ್ತಿಸಿದರು.

ಗಲಭೆಯಿಂದ ರಕ್ಷಿಸಿಕೊಳ್ಳಲು ಕುಟುಂಬ ಸಮೇತ ಟ್ರಕ್‌ನಲ್ಲಿ ಹೋಗುತ್ತಿದ್ದಾಗ ಎದುರಾದ ಗಲಭೆಕೋರರು ಬಿಲ್ಕಿಸ್ ಬಾನೋ ಕೈಯಿಂದ ಅವಳ 3 ವರ್ಷದ ಮಗುವನ್ನು ಎಳೆದುಕೊಂಡು ನೆಲಕ್ಕೆ ಚಚ್ಚಿ ಕೊಂದರು. 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಮೇಲೆ, ಅವಳನ್ನು ದಿನಲೂ ನೋಡುತ್ತಿದ್ದ ಗಂಡಸರು ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರವೆಸಗಿದರು. ಗಾಡಿಯಲ್ಲಿದ್ದ ಬಿಲ್ಕಿಸ್ ಕುಟುಂಬದ 7 ಸದಸ್ಯರನ್ನು ಕೊಲೆ ಮಾಡಿದರು. ಬಿಲ್ಕಿಸ್ ಕೂಡ ಸತ್ತಿರಬಹುದೆಂದುಕೊಂಡ ಕೊಲೆಗಡುಕರು ಹೊರಟುಹೋದರು. ಆ ಕರಾಳ ಹಿಂಸೆಯ ಮಧ್ಯೆ ಬದುಕುಳಿದ ಬಿಲ್ಕಿಸ್ ತನ್ನ ಗಾಯಗಳನ್ನು ದಿನವೂ ಕೆದಕುವ ಭಯಾನಕ ನೆನಪುಗಳ ವಾತಾವರಣದಲ್ಲಿ ನ್ಯಾಯಕ್ಕಾಗಿ ಮುಳ್ಳಿನ ಹಾದಿ ತುಳಿದಳು.

ಸಂಪೂರ್ಣವಾಗಿ ಸರ್ಕಾರದ ಕೈಗೊಂಬೆಯಾಗಿದ್ದ ಪೊಲೀಸರು ಅವಳ ಕಂಪ್ಲೇಂಟನ್ನು ಕಡೆಗಣಿಸಿದರು. ಅನಿವಾರ್ಯವಾಗಿ ಅವಳು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ನಂತರ ಸುಪ್ರೀಂ ಕೋರ್ಟ್ 2003ರಲ್ಲಿ ಸಿಬಿಐಗೆ ವಿಚಾರಣೆಯನ್ನು ಒಪ್ಪಿಸಿತು. ಆದರೆ ನಿರಂತರವಾಗಿ ಭಯದ ನೆರಳಲ್ಲಿ ಬದುಕುತ್ತಿದ್ದ ಬಿಲ್ಕಿಸ್‌ಳ ಮನವಿಯ ಮೇರೆಗೆ ಕೇಸನ್ನು ನೆರೆ ರಾಜ್ಯವಾದ ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಯಿತು. ವಿಚಾರಣೆ ನಂತರ 20 ಜನರ ಪೈಕಿ 13 ಜನರನ್ನು ಅಪರಾಧಿಗಳು ಎಂದು ತೀರ್ಪು ನೀಡಿದ ಕೋರ್ಟ್ 11 ಜನರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು. 2017ರಲ್ಲಿ ಬಾಂಬೆ ಹೈಕೋರ್ಟ್ ಈ ತೀರ್ಮಾನವನ್ನು ಎತ್ತಿ ಹಿಡಿಯಿತು. ಅತ್ಯಾಚಾರಿ, ಕೊಲೆಗಡುಕರು ಕೊನೆಗೂ ಜೈಲು ಸೇರಿದ್ದರು.

ಬಿಲ್ಕಿಸ್ ತನ್ನ ಮುರಿದ ಬದುಕನ್ನು ಮರಳಿಕಟ್ಟುವ ಪ್ರಯತ್ನದಲ್ಲಿ ನಿಧಾನವಾಗಿ ತೊಡಗಿದಳು. ತನ್ನ ನೋವಿಗೆ ನ್ಯಾಯಾಂಗ ಸ್ಪಂದಿಸಿದ್ದನ್ನು ಅನುಭವಿಸುವಷ್ಟರಲ್ಲಿ ಇದೇ ಆಗಸ್ಟ್ 15, 2022ರಂದು ಸನ್ನಡತೆಯ ಆಧಾರದ ಮೇಲೆ ಎಲ್ಲ 11 ಅತ್ಯಾಚಾರಿ-ಕೊಲೆಗಡುಕರನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದೆ. ಆ ಎಲ್ಲ ಕೊಲೆಗಡುಕರನ್ನು ಜೈಲಿನಿಂದ ಹೊರಬಂದಾಗ ಹಾರ ಹಾಕಿ ಸಿಹಿ ತಿನ್ನಿಸಿ ಸ್ವಾಗತ ಕೋರಲಾಯಿತು. ಈ ನಡೆ ಇಡೀ ದೇಶದಲ್ಲಿ ವ್ಯಾಪಕವಾಗಿ ಟೀಕೆಗೆ ಒಳಗಾದರೆ, ಕೆಲಜನ ಅದನ್ನು ಗೆಲುವಿನ ರೀತಿ ಸಂಭ್ರಮಿಸಿದರು. ವಿಕೃತ ಮನಸ್ಸುಗಳ ಈ ಸಂಭ್ರಮದಲ್ಲಿ ಬಿಲ್ಕಿಸ್ ಮತ್ತು ಅವಳ ಕುಟುಂಬದ ಮನಸ್ಸು-ಹೃದಯಗಳು ಒಡೆದು ಚೂರಾಗಿವೆ. ಇಂತಹ ಹೀನ ಕೃತ್ಯದ ಅಪರಾಧಿಗಳನ್ನು ಇಷ್ಟು ಸಲೀಸಲಾಗಿ ಬಿಡಬಹುದಾ? ಅವರನ್ನು ಬಿಡುಗಡೆಗೊಳಿಸಿದ ರೀತಿ ಕಾನೂನಾತ್ಮಕವಾಗಿ ಸರಿಯಾಗಿದೆಯಾ? ಅಥವಾ ಯಾವೆಲ್ಲಾ ಸಂದೇಹ ಮತ್ತು ಸಂಶಯಗಳಿಗೆ ಅದು ಎಡೆಮಾಡಿಕೊಡುತ್ತದೆ. ಈ ಬಿಡುಗಡೆ ಹಠಾತ್ತಾಗಿ ಆಗಿದ್ದಾ ಅಥವಾ ಸರಿಯಾದ ಪ್ರಕ್ರಿಯೆಗಳ ಮೂಲಕ ಆಗಿದೆಯಾ? ಮುಂತಾದ ನೂರಾರು ಪ್ರಶ್ನೆಗಳು ಜನರಲ್ಲಿ ಮೂಡಿವೆ.

ಬಿಡುಗಡೆಯ ಅಡಿಪಾಯ

11 ಜನರಲ್ಲಿ ರಾಧಾಶ್ಯಾಮ ಎನ್ನುವ ಅಪರಾಧಿ ಗುಜರಾತ್ ಹೈಕೋರ್ಟಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ. ಆದರೆ ಅದು ತಿರಸ್ಕೃತಗೊಂಡ ನಂತರ ಸುಪ್ರೀಂ ಕೋರ್ಟ್‌ನ ಮೊರೆಹೋಗಿದ್ದ. ಗುಜರಾತ್ ಹೈಕೋರ್ಟ್ ಅರ್ಜಿ ತಿರಸ್ಕರಿಸಲು ಕಾರಣ ನೀಡುತ್ತ ’ಮಹಾರಾಷ್ಟ್ರ ಹೈಕೋರ್ಟ್ ತೀರ್ಪು ನೀಡಿರುವುದರಿಂದ ಅದೇ ಕೋರ್ಟಿಗೆ ಹೋಗುವಂತೆ’ ಸಲಹೆ ನೀಡಿತ್ತು. ಆದರೆ ಹಾಗೆ ಮಾಡದೆ ಸುಪ್ರೀಂ ಕೋರ್ಟಿಗೆ ಹೋದ ರಾಧಾಶ್ಯಾಮ ಅಲ್ಲಿ ಅರ್ಜಿ ಸಲ್ಲಿಸಿ 1992ರ ಹಳೆಯ ಗುಜರಾತ್ ಸರ್ಕಾರದ ಕ್ಷಮಾದಾನದ ಸುತ್ತೋಲೆ ಪ್ರಕಾರ ತನ್ನ ಮನವಿಯನ್ನು ಪರಿಗಣಿಸುವಂತೆ ಸೂಚಿಸಲು ಕೋರಿದ. ಈ ಸುತ್ತೋಲೆ ಪ್ರಕಾರ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳು 14 ವರ್ಷಗಳನ್ನು ಜೈಲಿನಲ್ಲಿ ಕಳೆದ ಬಳಿಕ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಬಹುದು.

ಅಷ್ಟೊತ್ತಿಗಲೇ ಜೈಲಿನಲ್ಲಿ 15 ವರ್ಷ ಕಳೆದಿದ್ದರಿಂದ ಸುಪ್ರೀಂ ಕೋರ್ಟ್ ಅವನ ಮನವಿಯನ್ನು ಪರಿಗಣಿಸಿತು. ಅಲ್ಲದೆ ತೀರ್ಪು ನೀಡಿದ ನಂತರ ಮಹಾರಾಷ್ಟ್ರದ ಪಾತ್ರ ಅಲ್ಲಿಗೇ ಮುಗಿಯಿತು, ಅಪರಾಧ ಗುಜರಾತ್‌ನಲ್ಲಿ ನಡೆದಿದ್ದರಿಂದ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ಗುಜರಾತ್ ಹೈಕೋರ್ಟ್ ನಡೆಸಬೇಕು ಎಂದು ಹೇಳಿತು.

ಕ್ಷಮಾದಾನದ ಅಧಿಕಾರ ರಾಜ್ಯ ಸರ್ಕಾರದ್ದಾಗಿರುವುದರಿಂದ ಮುಂದಿನ ಪ್ರಕ್ರಿಯೆ ಗುಜರಾತ್‌ನಲ್ಲಿ ನಡೆಯಬೇಕು ಎಂದಿತು. ಅಲ್ಲದೇ ತನ್ನದೆ ಕೋರ್ಟಿನ ತೀರ್ಮಾನವಾದ ಹರಿಯಾಣ ರಾಜ್ಯ ವರ್ಸಸ್ ಜಗದೀಶ್ ಎನ್ನುವ ಕೇಸಿನ ಉಲ್ಲೇಖ ಮಾಡುತ್ತ, “ಅವಧಿಗೂ ಮುನ್ನ ಬಿಡುಗಡೆ ಮಾಡುವ ವಿಚಾರದಲ್ಲಿ, ಅಪರಾಧ ಜರುಗಿದ ಸಮಯದಲ್ಲಿ ಜಾರಿಯಲ್ಲಿರುವ ಕಾಯ್ದೆಗಳನ್ನು ಅನುಸರಿಸಬೇಕು” ಎಂದಿತು. ಆದ್ದರಿಂದಲೇ 2012ರಲ್ಲಿ ಕಾಯ್ದೆಯ ಬದಲಾವಣೆ ಆಗಿದ್ದರೂ ಕೂಡ ರಾಧಾಶ್ಯಾಮನ ಮನವಿ 1992ರ ಕಾಯ್ದೆಯ ಅಡಿಯಲ್ಲಿ ಬರುತ್ತದೆ.

ಇಂತಹದೇ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದವರಂತೆ ಗುಜರಾತ್ ಸರ್ಕಾರ ಗೋಧ್ರಾದ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿತು. ಆ ಸಮಿತಿಯಲ್ಲಿ ಬಿಜೆಪಿ ಶಾಸಕರುಗಳಾದ ಸಿ.ಕೆ ರಾವೋಲ್‌ಜಿ ಮತ್ತು ಸುಮನ್ ಚೌಹನ್, ಗೋಧ್ರಾದ ಮಾಜಿ ನಗರಸಭಾ ಸದಸ್ಯ ಮತ್ತು ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ಸ್ನೇಹಾಬೆನ್ ಭಾಟಿಯಾ ಅವರಿದ್ದರು. ಈ ಸಮಿತಿಯ ರಚನೆಯೇ ಇದರ ಉದ್ದೇಶವನ್ನು ಸ್ಪಷ್ಟಪಡಿಸುವಂತಿತ್ತು. ಅಂದುಕೊಂಡ ಹಾಗೆಯೇ ಈ ಸಮಿತಿ ಒಮ್ಮತದಿಂದ ನಿರ್ಧಾರ ಕೈಗೊಂಡು ಎಲ್ಲ ಅಪರಾಧಿಗಳ ಕ್ಷಮಾದಾನವನ್ನು ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ತನ್ನ ಶಿಫಾರಸ್ಸನ್ನು ಸಲ್ಲಿಸಿತು. ಈ ವರದಿಯನ್ನು ಆಧರಿಸಿ ಸರ್ಕಾರ “ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು” ನೊಂದ ಮನಸ್ಸುಗಳಿಗೆ ವಿಷವುಣಿಸುವ ನಿರ್ಧಾರ ಕೈಗೊಂಡು ಎಲ್ಲ 11 ಅತ್ಯಾಚಾರಿ ಕೊಲೆಗಡುಕರನ್ನು ಬಿಡುಗಡೆ ಮಾಡಿತು.

ಕ್ಷಮಾದಾನದ ಸುತ್ತ

ಕೈದಿಗಳ ಕ್ಷಮಾದಾನ ಎನ್ನುವುದು ಎಲ್ಲರಿಗೂ ಗೊತ್ತಿರುವಂತೆ ಒಂದು ಸುಧಾರಣಾ ಕ್ರಮ. ಆದರೆ ದೇಶಾದ್ಯಂತ ಈ ಕ್ಷಮಾದಾನದ ವಿರುದ್ಧ ವ್ಯಕ್ತವಾಗಿರುವ ವ್ಯಾಪಕ ಪ್ರತಿರೋಧವನ್ನು ನೋಡಿದಾಗ ಇದರಲ್ಲಡಗಿರುವ ಸೂಕ್ಷ್ಮಗಳನ್ನು ಕೆದಕಲೇಬೇಕಾಗುತ್ತದೆ.

* ಕ್ಷಮಾದಾನವನ್ನು ಸಂವಿಧಾನಾತ್ಮಕವಾಗಿ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಮಾಡಬಹುದು. ಇನ್ನೊಂದು ಬಗೆಯಲ್ಲಿ ರಾಜ್ಯ ಸರ್ಕಾರಗಳು ಸೂಕ್ತ ಪ್ರಕರಣಗಳಲ್ಲಿ ಈ ಹಕ್ಕನ್ನು ಬಳಸಬಹುದು. ಆದರೆ ಯಾವುದೇ ಕಾರಣಕ್ಕೂ 14 ವರ್ಷಗಳಿಗಿಂತ ಕಡಿಮೆ ಅವಧಿ ಜೈಲಿನಲ್ಲಿ ಕಳೆದವರಿಗೆ ಇದು ಅನ್ವಯವಾಗುವುದಿಲ್ಲ.

* ಇನ್ನು ಕೆಲವು ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಅಧಿಕಾರ ಇದ್ದರೂ ಕೂಡ ಅಕಸ್ಮಾತ್ ಪ್ರಕರಣದ ತನಿಖೆಯನ್ನು ಕೇಂದ್ರದ ಯಾವುದಾದರೂ ತನಿಖಾ ಸಂಸ್ಥೆ ನಡೆಸಿದ್ದರೆ ಅಂತಹ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ಅವರು ಒಪ್ಪಿದ ಮೇಲೆ ಮಾತ್ರ ಕ್ಷಮಾದಾನ ಮಾಡಬಹುದು.

ವಕೀಲೆ ಶೋಭಾಗುಪ್ತಾ

ಈಗ ಪ್ರತಿರೋಧಿಸುತ್ತಿರುವ ಜನ ಕೇಳುತ್ತಿರುವುದು ಇದನ್ನೇ. ’ಬೇಟಿ ಬಚಾವೋ, ಬೇಟಿ ಪಡಾವೋ’, ’ಹೆಂಗಸರನ್ನು ಗೌರವದಿಂದ ನೋಡುವುದನ್ನು ಕಲಿಯುವ ಅಗತ್ಯವಿದೆ’ ಎಂದು ಮನದಾಳದಿಂದ ಹೇಳುವ ಮಾನ್ಯ ಪ್ರಧಾನಮಂತ್ರಿಗಳ ಮಂತ್ರಿಮಂಡಲದ ಅದ್ಯಾವ ನಾರಿದ್ವೇಷಿ ಮಂತ್ರಿ ಇದಕ್ಕೆ ಸಮ್ಮತಿ ನೀಡಿದ್ದಾನೋ ಎಂಬುದು! ಬಿಲ್ಕಿಸ್ ಪ್ರಕರಣದ ತನಿಖೆ ಸಿಬಿಐ ಮಾಡಿರುವುದರಿಂದ ಕೇಂದ್ರದ ಒಪ್ಪಿಗೆ ಕ್ಷಮಾದಾನಕ್ಕೆ ಅನಿವಾರ್ಯ. ಆದರೆ ಎಂದಿನಂತೆ ಮಾನ್ಯ ಪ್ರಧಾನಿ ಮೌನಕ್ಕೆ ಶರಣಾಗಿದ್ದಾರೆ.

ಕಾನೂನು ಇದೆ ಎಂದ ಮಾತ್ರಕ್ಕೆ ಎಂಥ ಅಪರಾಧಿಗಳನ್ನಾದರೂ ಕ್ಷಮಿಸಬಹುದಾ? ನಿರ್ಭಯಾ ಪ್ರಕರಣದ ನಂತರ ಆದ ಬದಲಾವಣೆಗಳು ಕೇವಲ ತೋರಿಕೆಗೆ ಮಾತ್ರವೆ? ತೆಲಂಗಾಣದ ಪ್ರಿಯಾಂಕಾ ರೆಡ್ಡಿ ಕೇಸಿನಲ್ಲಿ ಎನ್‌ಕೌಂಟರ್ ಆದಾಗ ಪೊಲೀಸ್ ವ್ಯವಸ್ಥೆಯನ್ನು ಕೊಂಡಾಡಿದ ಜನಕ್ಕೆ ಈಗ ಏನೂ ಅನ್ನಿಸುವುದಿಲ್ಲವೆ?

ಒಬ್ಬ ವ್ಯಕ್ತಿ ಕ್ಷಮಾದಾನ ಕೋರಿದಾಗ 11 ಜನರನ್ನು ಬಿಡುಗಡೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಅಲ್ಲಿ ನಾಗರಿಕರು ಎನಿಸಿಕೊಂಡವರಿಗೆ ಅಸಹ್ಯವೆನ್ನಿಸುವುದಿಲ್ಲವೆ? ಜೈಲಿನಿಂದ ಹೊರಬಂದವರಿಗೆ ಸಿಹಿ ತಿನ್ನಿಸಿ ಹಾರ ಹಾಕಿ ಸ್ವಾಗತಿಸಿದ ರೀತಿ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿತೇ?

ಬಿಲ್ಕಿಸ್ ಪ್ರಕರಣವನ್ನು ಘಟನೆ ನಡೆದಂದಿನಿಂದಲೂ ಅನುಸರಿಸುತ್ತ ಬಂದಿರುವ ಪತ್ರಕರ್ತೆ ಬರ್ಖಾದತ್ ನಡೆಸುವ ’ಮೋಚೋ ಸ್ಟೋರಿ’ಗೆ ಸಂದರ್ಶನ ನೀಡಿದ್ದ ಸಿ.ಕೆ ರಾವೋಲ್‌ಜಿ ಬಿಡುಗಡೆಗೊಂಡವರ ಬಗ್ಗೆ ಹೇಳುತ್ತ “ಅವರೆಲ್ಲ ಬ್ರಾಹ್ಮಣರಾಗಿದ್ದರೆ ಮತ್ತು ಬ್ರಾಹ್ಮಣರು ಸಂಸ್ಕಾರವಂತರಾಗಿರುತ್ತಾರೆ” ಎಂದು ಹೇಳಿದ್ದಾನೆ. ಇದನ್ನು ಕೇಳಿದ ನೀತಿವಂತ ಬ್ರಾಹ್ಮಣರು ನಾಚಿಕೆಯಿಂದ ತಲೆತಗ್ಗಿಸಬೇಕು.

ಇಷ್ಟೆಲ್ಲದರ ನಡುವೆ ಬಿಲ್ಕಿಸ್‌ಳನ್ನು ಪ್ರತಿನಿಧಿಸಿದ ವಕೀಲೆ ಶೋಭಾಗುಪ್ತಾ ಇನ್ನು ಮುಂದೆ ಹೋರಾಡಲು ಅವಳಿಗೆ ಶಕ್ತಿ ಇಲ್ಲ ಎಂದಾಗ ಪ್ರಧಾನಮಂತ್ರಿಗಳ ಮಾತಿನ ಖಾಲಿತನ ಅರಿವಾಗುತ್ತದೆ.

23.08.2022ರಂದು ಸುಪ್ರೀಂಕೋರ್ಟ್‌ನಲ್ಲಿ ಸಿಪಿಐ(ಎಂ)ನ ಸುಭಾಷಿಣಿ ಅಲಿ ಹಾಗೂ ಟಿಎಂಸಿಯ ಮಹುವಾ ಮೊಯಿತ್ರಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಗುಜರಾತ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ ರಮಣ ಮುಂದಿನ ಕ್ರಮಕ್ಕಾಗಿ ಹಾಗೂ ಶೀಘ್ರ ಪರಿಗಣನೆಗೆ ಒಪ್ಪಿರುವುದು ಒಂದು ಆಶಾದಾಯಕ ಬೆಳವಣಿಗೆ. ವಿಪರ್ಯಾಸವೆಂದರೆ ಪ್ರತಿಬಾರಿ ಪ್ರಕರಣಗಳು ಇಷ್ಟು ದೀರ್ಘವಾದ ಪ್ರಯಾಣ ಬೆಳೆಸಲೇಬೇಕಾ? ಒಂದು ತಾರ್ಕಿಕ ಅಂತ್ಯವನ್ನು ಕೆಳಗಿನ ಹಂತದಲ್ಲಿ ಕಂಡುಕೊಳ್ಳಲು ಸಾಧ್ಯವೇ ಇಲ್ಲವೇ? ಎಂಬುದು. ಬಿಲ್ಕಿಸ್ ಬಾನೋಳ ವನವಾಸ ಮುಗಿಯುವುದಾ ಅಥವಾ ಸಂಸ್ಕಾರವಂತ ಅತ್ಯಾಚಾರಿಗಳಿಗೆ ಜಯವಾಗುವುದಾ ಕಾದು ನೋಡಬೇಕು.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.


ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅತ್ಯಾಚಾರಿ-ಕೊಲೆಗಡುಕರನ್ನು ಗೌರವಿಸಿದ ಕರಾಳ ವಿದ್ಯಮಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...