ಇಂದು ಈ ನಾಡು ಕಂಡ ಛಲಗಾರ, ಹಿಂದುಳಿದ ವರ್ಗದ ನಾಯಕ ಮಾಜಿ ಮುಖ್ಯ ಮಂತ್ರಿ ಸಾರೆಕೊಪ್ಪ ಬಂಗಾರಪ್ಪನವವರ ಜನ್ಮದಿನ. ರಾಜ್ಯದ ಲಕ್ಷಾಂತರ ಜನರ ರೋಮಾಂಚನಕ್ಕೆ ಹೆಸರಾಗಿದ್ದ ‘ಬಂಗಾರಪ್ಪ’ ಈ ನಾಡು ಮರೆಯದ-ಮರೆಯಲಾಗದ ವರ್ಣರಂಜಿತ ರಾಜಕಾರಣಿ; ಪಟ್ಟಭದ್ರರ ಮತ್ತು ಮೇಲ್ವರ್ಗದ ಶೋಷಣೆ ವಿರುದ್ಧ ಹಿಂದುಳಿದ ಸಮುದಾಯದಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸುವ ರಾಜಕಾರಣ ಮಾಡುತಿದ್ದ ಬಂಗಾರಪ್ಪರನ್ನು ನೆನೆಯುವುದೆಂದರೆ ಬಹುತೇಕ ಸುದ್ದಿಮನೆ ಮಂದಿಗೆ ಅದೊಂಥರಾ ಅಲವರಿಕೆ. ಆದರೆ ಗೇಣಿದಾರ ರೈತರ ಗೆಳೆಯನಾಗಿ ರಾಜಕೀಯ ಶುರುಮಾಡಿ ನಾಲ್ಕು ದಶಕಗಳ ಕಾಲ ಚಿರ ಬಂಡಾಯಗಾರನಾಗಿ ಕಂಗೊಳಿಸಿ, ಮಾಜಿ ಮುಖ್ಯಮಂತ್ರಿ ಎನಿಸಿಕೊಂಡು ನಿರ್ಗಮಿಸಿದ ಬಂಗಾರಪ್ಪ ಅಂದಾಕ್ಷಣ ನಾಡಿನ ಜನ ಮಾತ್ರ ಇವತ್ತಿಗೂ ಕಣ್ಣು-ಕಿವಿ ಅಗಲಿಸಿ ನಿಲ್ಲುತ್ತಾರೆ!
ಮಲೆನಾಡಿನ ಸೆರಗಿನ ಶಿವಮೊಗ್ಗ ಜಿಲ್ಲೆಯ ಸೊರಬದ ಹಿಂದುಳಿದ ದೀವರ ಹಟ್ಟಿಯಲ್ಲಿ ಹುಟ್ಟಿದ ಬಂಗಾರಪ್ಪ ಕಾಲೇಜು ಕಲಿತು-ಕಾನೂನು ಪದವೀಧರನಾಗಿ ರಾಜ್ಯದ ಸರಕಾರಗಳ ಕಟ್ಟುವ-ಕೆಡಹುವ ಪ್ರಚಂಡ ರಾಜಕೀಯ ಮುಂದಾಳಾಗಿ ಅವತರಿಸಿದ ಬಗೆಯೆ ಒಂದು ದಂತಕಥೆಯಂತಿದೆ. 1950-60ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕಾಗೋಡು ಚಳುವಳಿಯ ಬೈ ಪ್ರಾಡಕ್ಟ್ ಈ ಬಂಗಾರಪ್ಪ. ಮೇಲ್ವರ್ಗದ ಭೂಮಾಲೀಕರಿಂದ ಶೋಷಣೆಗೆ ಒಳಗಾಗಿದ್ದ ದೀವರು-ಮಡಿವಾಳರು ಮುಂತಾದ ಹಿಂದುಳಿದ ವರ್ಗದ ಮಂದಿಯಲ್ಲಿ ಶೋಷಕ ಒಡೆಯನ ವಿರುದ್ಧ ಬಂಡೇಳುವ ನೈತಿಕ ಧೈರ್ಯ ತಂಬಿದ ಹೋರಾಟಗಾರರಲ್ಲಿ ಬಂಗಾರಪ್ಪ ಎದ್ದುಕಾಣುತ್ತಾರೆ. ಗೇಣಿದಾರರ ಪರವಾಗಿ ಹೋರಾಟ ಕಟ್ಟಿದ್ದ ಶಾಂತವೇರಿ ಗೋಪಾಲ ಗೌಡ-ರಾಮಮನೋಹರ ಲೋಹಿಯಾರಂತ ಸಮಾಜವಾದಿ ದಿಗ್ಗಜರಿಂದ ‘ದೀಕ್ಷೆ’ ಪಡೆದಿದ್ದ ಬಂಗಾರಪ್ಪ ಆ ನಂತರದ ತಮ್ಮ ರೆಬೆಲ್ ರಾಜಕಾರಣದಲ್ಲೂ ಆ ಸಿಟ್ಟು-ತಿರುಗಿ ಬೀಳುವ ಮೊಂಡುತನ ಉಳಿಸಿಕೊಂಡಿದ್ದರು. ಆ ಬಂಡುಕೋರ ಪ್ರವೃತ್ತಿಯೇ ಬಂಗಾರಪ್ಪರನ್ನು ಹಿಂದುಳಿದ ವರ್ಗದ ಛಾಂಪಿಯನ್ ಮಾಡಿತೆನ್ನಲಾಗುತ್ತಿದೆ.
1967ರಲ್ಲಿ ಸಮಾಜವಾದಿ ಪಾರ್ಟಿಯ ಶಾಸಕರಾಗಿ ಅಸೆಂಬ್ಲಿ ಪ್ರವೇಶಿಸಿದ ಬಂಗಾರಪ್ಪ ಆ ಬಳಿಕ ಕಾಂಗ್ರೆಸ್-ಜನತಾ ರಂಗ-ಬಿಜೆಪಿ ಎಂದೆಲ್ಲ ಸುತ್ತುಹಾಕಿದರು; ತಮ್ಮದೆ ಕೆಸಿಪಿ, ಕೆವಿಪಿ ಎಂಬ ಎರಡು ಪಕ್ಷ ಕಟ್ಟಿದರು; ಶೇ.8ರಷ್ಟು ಮತ ಪಡೆದು ಹಳೆಯ ಪಕ್ಷ ಕಾಂಗ್ರೆಸ್‌ಅನ್ನು ಇಂದಿರಾ ಗಾಂಧಿ ಸಮ್ಮುಖದಲ್ಲಿಯೇ ಮಕಾಡೆ ಮಲಗಿಸಿದರು. ಯಾವ್ಯಾವುದೋ ಸರಕಾರ ಕೆಡವಿದರು; ಯಾವ್ಯಾವುದೋ ಸರಕಾರ ಸ್ಥಾಪನೆಗೆ ಕಾರಣವಾದರು. ತಾನು ಸ್ಪರ್ಧಿಸಿದ್ದ ಕ್ಷೇತ್ರ ಸೊರಬಕ್ಕೆ ಚುನಾವಣೆ ಮುಗಿವವರೆಗೆ ಕಾಲಿಡದೆ ರಾಜ್ಯದ ಉದ್ದಗಲದಲ್ಲಿ ಪ್ರಚಾರಮಾಡಿ ಯಾರ‍್ಯಾರನ್ನೋ ಎಮ್ಮೆಲ್ಲೆ-ಮಂತ್ರಿ-ಎಂಪಿ ಮಾಡಿದರು. ಇವತ್ತು ಭಸ್ಮಾಸುರನಂತೆ ಬೆಳೆದು ನಿಂತಿರುವ ಮತೀಯ ಅಜೆಂಡಾದ ಸೂತ್ರದಾರ ಬಿಜೆಪಿ ಬೆಳವಣಿಗೆಗೆ ಕೂಡ ಕಾರಣವಾದರು; ಬಂಗಾರಪ್ಪ 2004ರಲ್ಲಿ ಆ ಪಕ್ಷಕ್ಕೆ ಕುಡಿಸಿದ ಬೂಸ್ಟ್ ಕಾರಣವೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಮಂತ್ರಿ-ಮುಖ್ಯ ಮಂತ್ರಿ-ಸಂಸದ ಆದರು; ಆದರೆ ಯಾವಾಗಲೂ ಕಿಂಗ್ ಮೇಕರ್ ಆಗುತ್ತಿದ್ದ ಈ ಆಂಟಿ ಹಿರೋ ತಾವು ಅನುಭವಿಸಿದ ಅಧಿಕಾರ ಅವಧಿ ಮಾತ್ರ ತೀರಾ ಚಿಕ್ಕದು!
ಮನುಷ್ಯ ಸಂಬಂಧಗಳನ್ನು ಕಟ್ಟಿಕೊಳ್ಳುತ್ತಿದ್ದ ಬಂಗಾರಪ್ಪ ರಾಜ್ಯ ಕಂಡ ಮಾಸ್ ಲೀಡರ್. ಸ್ವಜಾತಿ ಈಡಿಗರಿಗಷ್ಟೆ ಬಂಗಾರಪ್ಪ ನಾಯಕರಗಿರಲಿಲ್ಲ. ಇಡೀ ರಾಜ್ಯದಲ್ಲಿ ಎಲ್ಲ ಜಾತಿ-ಧರ್ಮದವರನ್ನು ಸೆಳೆಯುವ ಚುಂಬಕ ಇಮೇಜ್ ಹೊಂದಿದ್ದರು; ಹೆಗಡೆ-ಯಡಿಯೂರಪ್ಪ-ದೇವೇಗೌಡ ಮಾಸ್ ಲೀಡರ್‌ಗಳಾದರು ಬಂಗಾರಪ್ಪರಂತೆ ಇಡೀ ರಾಜ್ಯದಲ್ಲಿ ಪ್ರಭಾವ ಬೀರಲಾಗಿಲ್ಲ ಎಂಬ ತರ್ಕ ರಾಜಕೀಯ ಪಡಸಾಲೆಯಲ್ಲಿದೆ. ತೀರಾ ದಯನೀಯ ಸ್ಥಿತಿಯಲ್ಲಿದ್ದ ಮಲೆನಾಡಿನ-ಕರಾವಳಿಯ ದೀವರು-ನಾಮಧಾರಿಗಳು-ಬಿಲ್ಲವರಾಗಲಿ-ಮೀನುಗಾರಗಾಗಲಿ-ಇತರ ಮೈಕ್ರೋಸ್ಕೋಪಿಕ್ ಮೈನಾರಿಟಿ ಮಂದಿಯಾಗಲಿ ಇವತ್ತು ಸವರ್ಣೀಯರ ಸರಿಸಮಕ್ಕೆ ಎದೆಸೆಟೆಸಿ ನಿಲ್ಲುವಂತಾಗಿದ್ದರೆ ಅದು ಬಂಗಾರಪ್ಪನವರ ಹಿಂದುಳಿದ ವರ್ಗದ ಪರವಾದದ ಬದ್ಧತೆಯ ರಾಜಕಾರಣದ ಕೊಡುಗೆ ಎನ್ನಲಾಗುತ್ತಿದೆ.
ಹಾಗಂತ ಬಂಗಾರಪ್ಪ ಹಿಂದುಳಿದವರ ಮೇಲೆತ್ತುವ ಭರದಲ್ಲಿ ಮೇಲ್ವರ್ಗದ ಮನುಷ್ಯ ವಿರೋಧಿಯಾಗಿರಲಿಲ್ಲ. ಎಲ್ಲ ಜಾತಿ-ಧರ್ಮದದವರಿಗೆ ಸ್ಪಂದಿಸುವ ಹೃದಯವಂತ ಮುಂದಾಳಾಗಿದ್ದರು. ಆದರೂ ಬಂಗಾರಪ್ಪರನ್ನು ಬ್ರಾಹ್ಮಣ-ಲಿಂಗಾಯತ ವಿರೋಧಿ ಎಂದಬ ಹಣೆಪಟ್ಟಿ ಕಟ್ಟುವ ಕೆಲಸ ಹಿಂದುಳಿದವರ ಮೇಲೆ ಸವಾರಿ ಮಾಡುತ್ತ ಬಂದಿದ್ದ ‘ಶಿಷ್ಠ’ರೆನಿಸಿಕೊಂಡವರಿಂದ ನಡೆಯಿತೆನ್ನಲಾಗುತ್ತಿದೆ. ಪ್ರಾತಿನಿಧ್ಯದ ಕಾರಣಕ್ಕಾಗಿ ಬಂಗಾರಪ್ಪ ಹಿಂದುಳಿದವರ ಬಗ್ಗೆ ಕಳಕಳಿ ವ್ಯಕ್ತ ಪಡಿಸಿದರಷ್ಟೇ; ಆದರೆ ಎಂದಿಗೂ ಜಾತಿ ಆಧಾರದಲ್ಲಿ ಎಂದೂ ಅಸಾಯಕರು-ಅರ್ಹರನ್ನು ದಮನಿಸಿದ ಉದಾಹರಣೆಗಳಿಲ್ಲ. ಕಷ್ಟ ಹೇಳಿಕೊಂಡು ಬರುತ್ತಿದ್ದವರಿಗೆ ಸ್ಪಂದಿಸಿ ಹೋಗುವಾಗ ಬಸ್ ಚಾರ್ಜ್ ಕೊಟ್ಟು ಕಳಿಸುತ್ತಿದ್ದರು. ಬಂಗಾರಪ್ಪರಿಂದ ಮೇಲುವರ್ಗದವರೂ ರಾಜಕೀಯ ಸ್ಥಾನ-ಮಾನ ಪಡೆದ ಸಾಕಷ್ಟು ನಿದರ್ಶನಗಳಿವೆ.
ಬಂಗಾರಪ್ಪ ಜಾತಿ-ಧರ್ಮ ನೋಡದೆ ನೊಂದವರಿಗೆ ನೆರವಾಗುತ್ತಿದ್ದರು ಎಂಬುದಕ್ಕೆ ಇಲ್ಲೊಂದು ಕತೆಯಿದೆ. ಕೇಶ ಮುಂಡನ ಮಾಡಿಸಿಕೊಂಡಿದ್ದ ಕೆಂಪು ಸೀರೆಯುಟ್ಟ ಬ್ರಾಹ್ಮಣ ವಯೋವೃದ್ಧೆಯಬ್ಬರು ಬಂಗಾರಪ್ಪ ಮುಖ್ಯ ಮಂತ್ರಿಯಗಿದ್ದಾಗ ಜನತಾ ದರ್ಶನಕ್ಕೆಂದು ಬೆಂಗಳೂರಿಗೆ ಹೋಗಿದ್ದರು. ಹೊನ್ನಾವರದ ಹಳದಿಪುರದಿಂದ ಹೋಗಿದ್ದ ಈ ಹವ್ಯಕರ ಅಜ್ಜಿಯ ಮೊಮ್ಮೊಗ ತಾಯಿನ್ನು ಕಳೆದುಕೊಂಡು ತಬ್ಬಲಿಯಾಗಿದ್ದ; ತಂದೆ ಮರು ಮದುವೆಯಾಗಿದ್ದ. ಟಿಸಿಎಚ್ ಮುಗಿಸಿದ್ದ ಮೊಮ್ಮಗನಿಗೆ ಎಲ್ಲಾದರೂ ಮಾಸ್ತರಿಕೆ ಸಿಕ್ಕರೆ ಬದುಕಿಕೊಳ್ಳುತ್ತಾನೆಂಬ ಆಸೆ ಅಜ್ಜಿಯದು; ಬಂಗಾರಪ್ಪನವರಲ್ಲಿ ತನ್ನ ಮೊಮ್ಮಗನಿಗೆ ನೌಕರಿ ಕೊಡಿಸುವಂತೆ ಅಜ್ಜಿ ಕೇಳಿಕೊಳ್ಳುತ್ತಾಳೆ; ಬಂಗಾರಪ್ಪ ತಕ್ಷಣ ಸಂಬಂಧಿಸಿದ ಅಧಿಕಾರಿಗಳ ಕರೆಸಿ ಆ ಮೊಮ್ಮಗನಿಗೆ ಉದ್ಯೋಗ ಬೇಗ ಸಿಗುವಂತೆ ಮಾಡುತ್ತಾರೆ. ಅಜ್ಜಿಯ ಕೈಗೆ ಬಸ್ ಚಾರ್ಜ್ ಹಣ ಕೊಟ್ಟು ಅಧಿಕಾರಿಗಳಿಗೆ ಹೊನ್ನಾವರ ಬಸ್ ಹತ್ತಿಸಿ ಕಳಿಸುವಂತೆ ಹೇಳುತ್ತಾರೆ! ಅಜ್ಜಿ ಊರು ತಲುಪಿದ ಒಂದೇ ವಾರದಲ್ಲಿ ಮೊಮ್ಮಗ ಮಾಸ್ತರ್ ಆಗುತ್ತಾನೆ. ಇದು ಬಂಗಾರಪ್ಪನವರ ಅಸಲಿ ವ್ಯಕ್ತಿತ್ವವಾಗಿತ್ತು.
ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸೂರಿಲ್ಲದವರಿಗೆ ನೆರಳು ನೀಡುವ, ಆಶ್ರಯ ಇಲ್ಲದವರಿಗೆ ಅನ್ನ ನೀಡುವ ಅಕ್ಷಯ, ಗ್ರಾಮೀಣ ಪ್ರದೇಶದ ಶಿಕ್ಷಣಾರ್ಥಿ-ಉದ್ಯೋಗಾರ್ಥಿಗಳಿಗೆ ಕೃಪಾಂಕ ಕೊಟ್ಟು ಮೇಲೆತ್ತುವ ಮೀಸಲಾತಿ, ಧಾರ್ಮಿಕ ಸ್ಥಳಗಳ ಅಭಿವೃದ್ದಿಗೆ ಅನುದಾನ ನೀಡುವ ಆರಾಧನಾ, ಗುಡಿ ಕೈಗಾರಿಕೆಗೆ ಪ್ರೋತ್ಸಾಹ ನೀಡುವ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದರು; ಆ ಬಳಿಕ ಅಧಿಕಾರಕ್ಕೆ ಬಂದವರಾರೂ ಈ ಯೋಜನೆಗಳ ತಂಟೆಗೆ ಹೋಗದೆ ಮುಂದುವರಿಸಿಕೊಂಡು ಹೋಗುವಂತಾಗಿರುವುದು ಬಂಗಾರಪ್ಪನವರ ದೂರದೃಷ್ಟಿಗೆ ನಿದರ್ಶನದಂತಿದೆ ಎನ್ನಲಾಗಿದೆ. ಸಾತ್ವಿಕ ಸಿಟ್ಟಿನ ರಾಜಕಾರಣದಲ್ಲಿ ಬಂಗಾರಪ್ಪ ಎಡವಿರಬಹುದು. ಆದರೆ ದೇವರಾಜ ಅರಸರ ನಂತರ ಬಂಗಾರಪ್ಪ ಹಿಂದುಳಿದ ವರ್ಗದ ಧೀಮಂತ ನಾಯಕರೆಂಬುದರಲ್ಲಿ ಎರಡು ಮಾತೇ ಇಲ್ಲ ಎಂಬುದು ಇತಿಹಾಸ ಪುಟದಲ್ಲಿ ದಾಖಲಾಗಿಹೋಗಿದೆ.
ಇದನ್ನೂ ಓದಿ: ಎಸ್.ಬಂಗಾರಪ್ಪನವರ 87ನೇ ಜನ್ಮದಿನ: ಆತ್ಮವಿಶ್ವಾಸದ ಪ್ರತೀಕ…


