Homeಮುಖಪುಟಎಸ್.ಬಂಗಾರಪ್ಪನವರ 87ನೇ ಜನ್ಮದಿನ: ಆತ್ಮವಿಶ್ವಾಸದ ಪ್ರತೀಕ...

ಎಸ್.ಬಂಗಾರಪ್ಪನವರ 87ನೇ ಜನ್ಮದಿನ: ಆತ್ಮವಿಶ್ವಾಸದ ಪ್ರತೀಕ…

ಇದೆಲ್ಲಾ ನೋಡಿದ ದಾರಿಹೋಕನೊಬ್ಬನ ಬಾಯಿಂದ ಹೊರಬಿದ್ದ ಮಾತೆಂದೆರೆ... "ಬದುಕಿದ್ದಾಗ್ಲೇ ಬಂಗಾರಪ್ಪನ್ನ ಸಮಾಧಿ ಮಾಡಿ ಈಗ ಅವ್ರ ಸ್ಮಾರಕ ಮಾಡೋಕೆ ಕಾಸು ಕೊಟ್ಟವ್ರೆ" ! ಥೂ.....!

- Advertisement -
- Advertisement -

2009 ರ ಲೋಕಸಭಾ ಚುನಾವಣೆಯ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಸ್.ಬಂಗಾರಪ್ಪ ಅವರ ಪಾಲಿಗೆ ಈ ಚುನಾವಣೆ “ಮಾಡು ಇಲ್ಲ ಮಡಿ” ಎಂಬ ವಿರೋಚಿತ ಹೋರಾಟವೇ ಆಗಿತ್ತು.

ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ತಮ್ಮ ಮಗ ಬಿ.ವೈ ರಾಘವೇಂದ್ರ ನನ್ನು ಕಣಕ್ಕಿಳಿಸಿದ್ದರು. ದೈತ ಅಧಿಕಾರ ಬಲ, ಹಣ ಬಲ, ಜಾತಿ ಬಲದ ಉತ್ತುಂಗದಲ್ಲಿದ್ದ ಯಡಿಯೂರಪ್ಪ ಅವರ ವಿರುದ್ಧ ಕುಸಿದ ಆರೋಗ್ಯ, ತಮ್ಮವರದ್ದೇ ವಿದ್ರೋಹಗಳಿಗೆ ಸಿಕ್ಕು ಬರಿಗೈ ಆದ ಬಂಗಾರಪ್ಪ ಅವರ ಬಳಿ ಉಳಿದದ್ದು ಅವರು ಜನರ ಮೇಲಿಟ್ಟಿದ್ದ ಅದಮ್ಯ ವಿಶ್ವಾಸ ಮತ್ತು ತಮ್ಮ ಎಂದಿನಂತೆ ಜನ್ಮಜಾತ ಛಲಗುಣ ಮಾತ್ರ.

ಇಡೀ ರಾಜ್ಯ ಇತರೆ ಲೋಕಸಭಾ ಕ್ಷೇತ್ರಗಳ ಚುನಾವಣೆಯೇ ಒಂದು ತೂಕವಾದರೆ, ಶಿವಮೊಗ್ಗ ಕ್ಷೇತ್ರದ ಚುನಾವಣೆಯೇ ಅವುಗಳಿಗೆ ಸರಿಸಮ ತೂಗುವ ಚುನಾವಣೆ ಆಗಿತ್ತು.

ಮತದಾನಕ್ಕೆ ಇನ್ನೂ ಆರು ದಿನ ಉಳಿದಿತ್ತು. ಶಿವಮೊಗ್ಗದ ಬಾಡಿಗೆ ಮನೆಯೊಂದರಲ್ಲಿ ಸೋಪಾ ಮೇಲೆ ದಿವ್ಯ ಮೌನ ಧರಿಸಿ ಕುಳಿತಿದ್ದರು ಬಂಗಾರಪ್ಪ.

ಕಾಗೋಡು ತಿಮ್ಮಪ್ಪ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಸೇರಿದಂತೆ ಪ್ರಮುಖ ಮುಖಂಡರು ಬಂಗಾರಪ್ಪ ಅವರ ಮುಂದೆ ಕುಳಿತು  ‘ಸರ್ ಚುನಾವಣೆ ಗೆ ಸ್ವಲ್ಪ ದುಡ್ಡು ಬೇಕು. ಒಂದೆರೆಡು ಕೋಟಿ ಆದರೆ ಗೆಲುವು ನಮ್ಮದೆ’ ಎಂದು ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚುನಾವಣೆಯ “ತಂತ್ರ” ಗಳಿಗೆ ಮತದಾನಕ್ಕೆ ಮುಂಚೆಯೇ ಕಾಂಗ್ರೆಸ್‌ ಧೂಳಿಪಟವಾಗಿತ್ತು. ಮೌನ ಮುರಿದ ಬಂಗಾರಪ್ಪ ” ನೋ…. ನನ್ನತ್ರ ದುಡ್ಡಿಲ್ಲ, ಇಷ್ಟ‌ಇದ್ರೆ ಪಕ್ಷದಿಂದ ಕೆಲ್ಸ ಮಾಡಿ‌ ಇಲ್ಲವಾದರೆ ಬಿಟ್ಟೋಗಿ” ಎಂದು ಗುಡುಗಿಬಿಟ್ಟರು.

ಹಣ ವ್ಯವಸ್ಥೆಗೆ ಕಾಗೋಡು ತಿಮ್ಮಪ್ಪ ಮಾಡಿದ ಪ್ರಯತ್ನಗಳೆಲ್ಲಾ ಬಂಗಾರಪ್ಪನವರ ಮುಂದೆ ಫಲ ಕೊಡಲಿಲ್ಲ.
ಬಂಗಾರಪ್ಪ ಅಕ್ಷರಶಃ ಬರಿಗೈ ಆಗಿ ಕುಳಿತಿದ್ದರು. ಮಗ ಕುಮಾರ ಬಂಗಾರಪ್ಪ ಅವರಿಂದ ಹಣಸಹಾಯ ಪಡೆಯುವ ಕಾಂಗ್ರೆಸ್‌ ಮುಖಂಡರ ಪ್ರಯತ್ನವು ನೆಗೆದುಬಿತ್ತು. ಕಾಗೋಡು ತಿಮ್ಮಪ್ಪಾದಿಯಾಗಿ ದಿಕ್ಕು ತೋಚದೆ ಎಲ್ಲರೂ ಮನೆಯಿಂದ ಹೊರಬಿದ್ದರು.

ಅದುವರೆಗೂ ಮೂಕಪ್ರೇಕ್ಷಕನಂತೆ ಸಂದರ್ಶನಕ್ಕಾಗಿ‌ ಕಾದು ಕುಳಿತಿದ್ದ ನನ್ನ ಕಡೆ ನೋಡಿದ ಬಂಗಾರಪ್ಪನವರು
ಮಾತು ಶುರುವಿಟ್ಟುಕೊಂಡರು.

ಸಂದರ್ಶನದ ಮುಗಿದ ನಂತರದ ಆಫ್ ದಿ ರೆಕಾರ್ಡ್ ನಲ್ಲಿ…

“ಸರ್, ಚುನಾವಣೆಯ ಕೊನೆಯ ಘಳಿಗೆಯಲ್ಲಿ ದುಡ್ಡಿಲ್ಲ ಅಂದ್ರೆ ಚುನಾವಣೆ ನಿಮಗೆ ಕಷ್ಟ ಆಗೋಲ್ವ”? ಎಂದೆ.

“ಸೀ ಮಿಸ್ಟರ್ ರವಿಕುಮಾರ್, (ಅವರು ವಯಸ್ಸಿನಲ್ಲಿ ಚಿಕ್ಕವರನ್ನೂ ಬಹುವಚನದಿಂದಲೆ ಮಾತಾಡಿಸುವ ವಿವೇಕ ಇಟ್ಟುಕೊಂಡವರು) ನಾನು ಮನಸ್ಸು ಮಾಡಿದರೆ ಒಂದೆರಡು ಕೋಟಿ ತರೋದು ಕಷ್ಟ ಅಲ್ಲ, ಆದರೆ ಈ ಯಡಿಯೂರಪನ ಹಡಬೆ ದುಡ್ಡಿನ ಮುಂದೆ ನನ್ನ ದುಡ್ಡು ನಡೆಯೋಲ್ಲ”

ಒಂದು‌ ಲೋಟ ಮಜ್ಜಿಗೆ ಕುಡಿದು ಸಾವಾರಿಸಿಕೊಂಡು ಮಾತು ಮುಂದುವರೆಸಿದರು…

” ರವಿಕುಮಾರ್, ಈ ಚುನಾವಣೆ ದುಡ್ಡಿನ ಮೇಲೆ ನಡೀತಿದೆ. ಯಡಿಯೂರಪ್ಪನತ್ರ ಅಧಿಕಾರ, ಹಣ, ಸಿಸ್ಟಮ್ ಇದೆ. ನಾನು ಒಂದು ಓಟಿಗೆ 500 ಕೊಟ್ರೆ ಈ ಯಡಿಯೂರಪ್ಪ ಸಾವ್ರ ಕೊಡ್ತಾರೆ, ನಾನು ಸಾವ್ರ ಕೊಟ್ರೆ, ಅವ್ರು ಎರಡ್ಸಾವ್ರ ಕೊಡ್ತಾರೆ, ಒಂದು ಬೂತ್ ಗೆ ನಾನು ಐದು ಸಾವ್ರ ಕೊಟ್ರೆ, ಅವ್ರು ಹತ್ತು‌ಕೊಡ್ತಾರೆ. ಯಡಿಯೂರಪ್ಪನ ದುಡ್ಡಿನ ಮುಂದೆ ನನ್ನ ದುಡ್ಡು ಓಡೋಲ್ಲ. ದುಡ್ಡಿನ ಮೂಲಕ ಯಡಿಯೂರಪ್ಪನನ್ನು ಈಗ ಸೋಲಿಸೋಕೆ ಆಗೋಲ್ಲ,

ಅದ್ಕೆ ನಾನು ದುಡ್ಡಿಲ್ಲದೆ ಜನರ ಮುಂದೆ ಹೋಗ್ತಿನಿ. ಜನ ದುಡ್ಡಿಗೆ ಓಟಾಕ್ತಾರೋ, ನಾನು ಜನರ ಮೇಲಿಟ್ಟಿರುವ ನಂಬಿಕೆಗೆ ಕೈ ಹಿಡಿತಾರೋ ನೋಡೇ ಬಿಡ್ತಿನಿ. It’s one experiment in my life… Mr.Ravikumar ” ನಾನು ಇಂತಹ experiment ಗಳನ್ನೆ ಮಾಡ್ಕೊಂಡ್ ಬಂದಿದಿನಿ. ಈ ಬಂಗಾರಪ್ಪ ಸೋತಿದ್ದೇ ಇಲ್ಲ.

ಈ ಜನಕ್ಕೆ ನಾನು ಬೇಕಾ? ಯಡಿಯೂರಪ್ಪನ ಹಡಬೆ ದುಡ್ಡು ಬೇಕಾ? ನೋಡೋಣ”

ಬಂಗಾರಪ್ಪ ಅವರ ಈ ಆತ್ಮವಿಶ್ವಾಸ ಕಂಡು ನನಗೆ ವಿಸ್ಮಯ ಅನಿಸಿತು. !

ಯಡಿಯೂರಪ್ಪನವರ ಅಬ್ಬರದ ಮುಂದೆ ಚುನಾವಣೆಯನ್ನು ಕಾಂಗ್ರೆಸ್‌ ಕೈ ಚೆಲ್ಲಿತ್ತು. ಅನಾರೋಗ್ಯದ ದೈಹಿಕ ನೋವು ನುಂಗಿಕೊಳ್ಳುತ್ತಲೆ ಬಂಗಾರಪ್ಪ ಏಕಾಂಗಿಯಾಗಿ ಹಳ್ಳಿ ಹಳ್ಳಿ ತಿರುಗಿದರು.

ಬಿ ವೈ ರಾಘವೇಂದ್ರ ಪರ ನಿಂತ ಮಠಗಳ ಜನ್ಮ‌ಜಾಲಾಡಿದರು. ನಾಕು ಗೊಡ್ಡೆಮ್ಮೆ ಸಾಕಿದ ಮಾತ್ರಕ್ಕೆ ಗೋ ರಕ್ಷಕನಾಗೋಲ್ಲ. ನಮ್ಮಂಗೆ ಸಗಣಿ, ಗಂಜಲ ಬಾಚಿ ಬಳಿ ಬೇಕು ಎಂದು ಈ ಭಾಗದ ಸ್ವಾಮಿಯನ್ನು ಬಹಿರಂಗವಾಗಿ ಈಡಾಡಿದರು.

ಮತದಾನದ ದಿನ ಶೇ.90 ರಷ್ಟು ಬೂತ್ ಗಳಲ್ಲಿ ಬಂಗಾರಪ್ಪ ಪರ ಹ್ಯಾಂಡ್ ಬಿಲ್ ಹಿಡಿಯಲು ಒಬ್ಬ ಕಾರ್ಯಕರ್ತ ಕಾಣಲಿಲ್ಲ. ಅವರೇ ಸೃಷ್ಟಿದ ಹಾಲಪ್ಪ, ಗೋಪಾಲಕೃಷ್ಣ ಅವರೆಲ್ಲಾ ಬೆನ್ನಿಗೆ ಇರಿದಿದ್ದರು.

ಯಡಿಯೂರಪ್ಪ ಅವರ “ಪ್ರಭಾವ” ಕ್ಕೆ ಮರುಳಾದ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ತನ್ನ ಬೆಂಬಲಿಗರಿಂದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ದಾಂಧಲೆ ನಡೆಸಿದರು. ಬೀಸಿ ಬಂದ ಕಲ್ಲಿಗೆ ಎದ್ದು ನಿಂತು ಎದೆ ಕೊಟ್ಟ ಬಂಗಾರಪ್ಪ ಅವರು ತೋಳೇರಿಸಿ ಅಬ್ಬರಿಸಿದರು.

ಫಲಿತಾಂಶ ಹೊರಬಿದ್ದಾಗ ಯಡಿಯೂರಪ್ಪ ಅವರ ಪುತ್ರರತ್ನ ರಾಘವೇಂದ್ರ ಕೇವಲ 52.893 ಮತಗಳಿಂದ ಗೆಲುವು ಸಾಧಿಸಿದರು.

ಬಂಗಾರಪ್ಪ ಅವರನ್ನು ಠೇವಣಿ ಕಳೆದು ಹೀನಾಯ ಸೋಲಿಗೆ ದೂಡಬೇಕೆಂದು ಸಕಲ ಸಂಪತ್ತು, ದಂಡು- ದಳ, ತಂತ್ರ, ಮಂತ್ರಗಳೊಂದಿಗೆ ಹಠಕ್ಕಿಳಿದಿದ್ದ ಯಡಿಯೂರಪ್ಪ ಫಲಿತಾಂಶದ ಲೀಡ್ ಕೇಳಿ ಕೆರಳಿ‌ ಕೆಂಡವಾದರು. ತಮ್ಮದೇ ಸಂಪುಟ ಸಚಿವ ಈಶ್ವರಪ್ಪ ನವರ ಮೇಲೆ ಹರಿಹಾಯ್ದರು ಕೂಡ. ಮಗನ ವಿಜಯೋತ್ಸವ ಅವರಿಗೆ ಅಪಥ್ಯವಾಗಿತ್ತು.

ಅಕ್ಷರಶಃ ಬರಿಗೈ ನಿರ್ಗತಿಕನಾಗಿ ನಿಂತಿದ್ದ ಬಂಗಾರಪ್ಪ ಅವರು ಕೇವಲ 52 ಸಾವಿರ ಮತಗಳ ಅಂತರದಲ್ಲಿ ತಾಂತ್ರಿಕವಾಗಿ ಸೋತಿದ್ದರು. ಆದರೆ ಜನರ ಮೇಲಿಟ್ಟಿದ್ದ ಅವರ ವಿಶ್ವಾಸ ಯಾವ ಖರೀದಿಗೂ ಒಳಗಾಗದೆ ಅವರನ್ನು ನೈತಿಕವಾಗಿ ಗೆಲ್ಲಿಸಿತ್ತು.

ಈ ಸೋಲು, ತಮ್ಮವರೇ ಎಸಗಿದ ವಿದ್ರೋಹಗಳು ಬಂಗಾರಪ್ಪ ಅವರನ್ನು ಇನ್ನಿಲ್ಲದೆ ಬಾಧಿಸಿಬಿಟ್ಟಿತು…

ಈ ನೋವನ್ನು ನುಂಗಿಕೊಂಡೆ ಅವರು ವಿರೋಚಿತವಾಗಿ ನಿರ್ಗಮಿಸಿದರು.

ಇವತ್ತು ಸೊರಬದಲ್ಲಿ ಬಂಗಾರಪ್ಪ ಅವರ 87 ನೇ ಜನ್ಮದಿನೋತ್ಸವ ಸಮಾರಂಭವನ್ನು ಪುತ್ರ ‌ಕುಮಾರ್ ಬಂಗಾರಪ್ಪ ಆಯೋಜಿಸಿದ್ದು ಇದನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ನವರು ಬಂಗಾರಪ್ಪ ಅವರನ್ನು ಕೊಂಡಾಡಿದರು. ಅವರ ಸ್ಮಾರಕ ನಿರ್ಮಾಣಕ್ಕೆ 1 ಕೋಟಿ ರೂ ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ಬದುಕಿದ್ದಾಗ ತನಗೆ ರಾಜಕೀಯ ಅಸ್ತಿತ್ವ ಕೊಟ್ಟ ತನ್ನ ಅಪ್ಪನನ್ನು ಕೌಟುಂಬಿಕವಾಗಿ, ರಾಜಕೀಯವಾಗಿ ಕಾಡಿದ ಕುಮಾರ ಬಂಗಾರಪ್ಪ ಇದ್ದಕ್ಕಿದ್ದಂತೆ ಅಪ್ಪನ ಜನ್ಮದಿನವನ್ನು ಅದ್ಧೂರಿಯಾಗಿ ನಡೆಸಿದರು. ಅದನ್ನು ಯಡಿಯೂರಪ್ಪ ಉದ್ಘಾಟಿಸಿದರು. ಎಂತಹ ವೈರುಧ್ಯ ನೋಡಿ!

ಇದೆಲ್ಲಾ ನೋಡಿದ ದಾರಿಹೋಕನೊಬ್ಬನ ಬಾಯಿಂದ ಹೊರಬಿದ್ದ ಮಾತೆಂದೆರೆ…

“ಬದುಕಿದ್ದಾಗ್ಲೇ ಬಂಗಾರಪ್ಪನ್ನ ಸಮಾಧಿ ಮಾಡಿ ಈಗ ಅವ್ರ ಸ್ಮಾರಕ ಮಾಡೋಕೆ ಕಾಸು ಕೊಟ್ಟವ್ರೆ” ! ಥೂ…..!

ಅದೇನೆ ಇರಲಿ, ಬಂಗಾರಪ್ಪ ಸರ್ ನಿಮಗೆ‌ ಜನ್ಮದಿನದ ಶುಭಾಶಯಗಳು.

  • ಎನ್.ರವಿಕುಮಾರ್ ಟೆಲೆಕ್ಸ್

(ರವಿಕುಮಾರ್ ಪತ್ರಕರ್ತರು ಮತ್ತು ಯುವ ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...