Homeಮುಖಪುಟರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ರಿಗಲ್ ಮತ್ತು ಬೀಟಲ್ ಜ್ಯೂಸ್ ನಕ್ಷತ್ರಗಳನ್ನು ನೀವು ಕಾಣಿರಿ, ನೀವು ಕಾಣಿರಿ

ಒರಿಯಾನ್ ನಕ್ಷತ್ರ ಪುಂಜದ ಚಿತ್ರದಲ್ಲಿ ಗುರುತಿಸಿರುವ ಭಾಗವನ್ನು ಚಂದ್ರನಿಲ್ಲದ ರಾತ್ರಿಯಲ್ಲಿ ಬರಿಗಣ್ಣಿನಲ್ಲಿ ನೋಡಿದರೆ, ನಕ್ಷತ್ರಗಳು ಹುಟ್ಟುವ ಪ್ರದೇಶವಾದ ಸುಂದರವಾದ ನೆಬುಲ್ಲಾ ಕಾಣುತ್ತದೆ.

- Advertisement -
- Advertisement -

(ಆಕಾಶ ಕಾಯಗಳು ವೀಕ್ಷಣೆ ಮತ್ತು ವಿವರಣೆ: ಡಿಸೆಂಬರ್ ೦೧-೦೮)

ಭಾರತದಲ್ಲಿ ಮಳೆಗಾಲದ ನಂತರ ಬರುವ ಚಳಿಗಾಲದಲ್ಲಿ, ಆಕಾಶವು ಮೋಡಗಳಿಲ್ಲದೆ ಸ್ಪಷ್ಟವಾಗಿ ಕಾಣುತ್ತದೆ (ಸೈಕ್ಲೋನ್ ಇಲ್ಲದಿದ್ದರೆ). ಹಾಗಾಗಿ, ಅಕ್ಟೋಬರ್ ತಿಂಗಳಿನಿಂದ ಮುಂದಿನ ಮಾರ್ಚ್ ಮತ್ತು ಏಪ್ರಿಲ್‌ವರೆಗೂ ಆಕಾಶ ವೀಕ್ಷಣೆಗೆ ಸದವಕಾಶ. ಡಿಸೆಂಬರ್‌ನ ಕೊರೆಯುವ ಚಳಿಯಲ್ಲಂತೂ ಬಿಸಿಬಿಸಿ ತಿನಿಸುಗಳನ್ನು ತಿನ್ನುತ್ತ ಆಕಾಶ ವೀಕ್ಷಣೆ ಮಾಡುವುದೇ ಒಂದು ವಿಶಿಷ್ಟವಾದ ಅನುಭವ. ಕಳೆದ ವಾರ, ಆಗಸದಲ್ಲಿ ಕಾಣುವ ಪ್ರಮುಖವಾದ ಗ್ರಹಗಳ ಸ್ಥಾನ ಮತ್ತು ಚಂದ್ರನ ಬಿಂಬಾವಸ್ಥೆಯ ಬಗ್ಗೆ ತಿಳಿದೆವು. ಈ ವಾರ ವೈಶಿಷ್ಟತೆಗಳೇನು?

1. ಗ್ರಹಗಳು: ಗುರು, ಶನಿ, ಶುಕ್ರ ಮತ್ತು ಮಂಗಳ

ಕಳೆದ ವಾರ ಈ ಗ್ರಹಗಳ ಸ್ಥಾನಗಳನ್ನು ಗಮನಿಸಿದ್ದರೆ, ಈ ವಾರ ಈ ಗ್ರಹಗಳನ್ನು ಆಗಸದಲ್ಲಿ ಹುಡುಕುವುದಕ್ಕೆ ಬಹಳ ಕಷ್ಟವೇನಾಗುವುದಿಲ್ಲ. ಏಕೆಂದರೆ, ಗ್ರಹಗಳ ನೈಜ ಚಲನೆಗಳು ಬಹಳ ನಿಧಾನ. ಹಾಗಾಗಿ ಅದೇ ಸ್ಥಾನದಲ್ಲೆ, ಅಥವಾ ಸ್ವಲ್ಪ ಆಸುಪಾಸಿನಲ್ಲೇ ಈ ಗ್ರಹಗಳನ್ನು ನಾವು ನೋಡಬಹುದು. ಸೂರ್ಯ ಮುಳುಗಿದ ನಂತರ, ದಿಗಂತದಲ್ಲಿ ಕಾಣುವ ಪ್ರಕಾಶಮಾನವಾದ ಜೋಡಿ ಚುಕ್ಕಿಗಳು ಶನಿ ಮತ್ತು ಗುರುಗ್ರಹ ಮತ್ತು ಇವೆರಡರಲ್ಲಿ ಹೆಚ್ಚು ಪ್ರಕಾಶಮಾನವಾಗಿರುವುದು ಗುರುಗ್ರಹ. ಹಿಂದಿನ ವಾರ ಈ ಜೋಡಿ ಗ್ರಹಗಳ ವೀಕ್ಷಣೆ ಮಾಡಿದ್ದರೆ, ಗ್ರಹಗಳ ನಡುವೆ ಇರುವ ಅಂತರ ಕಡಿಮೆಯಾಗುತ್ತಿರುವುದನ್ನು ನೀವು ಗಮನಿಸಬಹುದು. ಈ ಅಂತರ ಹೀಗೆ ಕಡಿಮೆಯಾಗುತ್ತಾ, ಡಿಸೆಂಬರ್ 21ರ ರಾತ್ರಿಯಂದು ಈ ಎರಡೂ ಗ್ರಹಗಳು ಆಗಸದಲ್ಲಿ ಒಂದೇ ಚುಕ್ಕಿಯಂತೆ ಭಾಸವಾಗುವಷ್ಟು ಅಂತರಕ್ಕೆ ಬರಲಿವೆ! ನಿಮ್ಮ ಬಳಿ ಇರುವ ಕ್ಯಾಮರಾ ಮೂಲಕ, ಪ್ರತಿ ದಿನ ಈ ಜೋಡಿ ಗ್ರಹಗಳ ಚಿತ್ರಗಳನ್ನು ತೆಗೆದು ಅಂತರವನ್ನು ದಿನದಿಂದ ದಿನಕ್ಕೆ ಹೋಲಿಕೆ ಮಾಡಬಹುದು. ಗುರು ಮತ್ತು ಶನಿ ಗ್ರಹಗಳು ಸೂರ್ಯನ ಸುತ್ತ ಪ್ರತ್ಯೇಕವಾದ ಕಕ್ಷೆಯಲ್ಲಿ ಸುತ್ತುತ್ತವೆ. ಈ ಕಕ್ಷೆಗಳ ನಡುವಿನ ಅಂತರ ಸುಮಾರು 64 ಕೋಟಿ ಕಿಲೋಮೀಟರ್. ಆದರೂ, ಈ ಗ್ರಹಗಳು ಆಗಸದಲ್ಲಿ ಒಂದೇ ದಿಕ್ಕಿನಲ್ಲಿ ಕಾಣುತ್ತಿರುವದರಿಂದ, ಅಕ್ಕಪಕ್ಕದಲ್ಲಿ ಇರುವಂತೆ ಕಾಣುತ್ತಿವೆ. ವಾಸ್ತವದಲ್ಲಿ ಆ ಎರಡು ಗ್ರಹಗಳು ಊಹೆಗೂ ನಿಲುಕದಷ್ಟು ದೂರದಲ್ಲಿವೆ.

ಸೂರ್ಯ ಮುಳುಗಿದ ನಂತರ ಗುರು ಮತ್ತು ಶನಿ ಗ್ರಹಗಳನ್ನು ನೋಡಿಕೊಂಡು, ನೆತ್ತಿಯ ಆಸುಪಾಸಿನಲ್ಲಿ ಕಣ್ಣಾಯಿಸಿದರೆ, ಕೆಂಪಾಗಿ ಕಾಣುವ ಗ್ರಹವೇ ಮಂಗಳ ಗ್ರಹ. ಇದಲ್ಲದೆ, ಮುಂಜಾನೆ ಸೂರ್ಯ ಉದಯಿಸುವುದಕ್ಕೆ ಮುನ್ನ ಪ್ರಕಾಶಮಾನವಾಗಿ ಕಾಣುವ ಶುಕ್ರಗ್ರಹವನ್ನು ಕೂಡ ನೋಡಬಹುದು. ಈ ಎಲ್ಲಾ ಗ್ರಹಗಳ ಚಲನವಲನವನ್ನು ವಾರದುದ್ದಕ್ಕೂ ಗಮನಿಸಬಹುದಾಗಿದೆ.

ಚಂದ್ರ

ನವೆಂಬರ್ 23ರಿಂದ 30ರವರೆಗೂ ನೀವು ಚಂದಿರನನ್ನು ಗಮನಿಸಿರಬೇಕು. ಹೇಗೆ, ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶ ಬದಲಾವಣೆಯಾಯಿತು ಎಂಬುದನ್ನು ಕೂಡ. ಕಳೆದ ವಾರ ಕೃಷ್ಣ ಪಕ್ಷದ ಚಂದ್ರನನ್ನು ಅಂದರೆ, ವೃದ್ಧಿಸುತ್ತಿರುವ ಚಂದ್ರನನ್ನು ನೋಡಿದಿರಿ. ಅದಲ್ಲದೆ, ನವೆಂಬರ್ 30ರಂದು ಹುಣ್ಣಿಮೆ ಚಂದ್ರನನ್ನು ನೋಡಿದಿರಿ. ಅಂದು ನಡೆದಿದ್ದ ಭಾಗಶಃ ಚಂದ್ರಗ್ರಹಣ ದಕ್ಷಿಣ ಭಾರತಕ್ಕೆ ಕಾಣಿಸಿರುವುದಿಲ್ಲ. ಅಲ್ಲದೆ ಭಾಗಶಃ ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿ ಗ್ರಹಿಸುವುದು ಕಷ್ಟವಾಗಿರುತ್ತದೆ. ಇರಲಿ, ಈ ವಾರ ಚಂದ್ರನ ಹುಣ್ಣಿಮೆಯ ನಂತರದ ಬಿಂಬಾವಸ್ಥೆಯನ್ನು ನೋಡಬಹುದಾಗಿರುತ್ತದೆ. ಇದನ್ನು ನಾವು ಶುಕ್ಲ ಪಕ್ಷ ಅಥವಾ ಕ್ಷೀಣಿಸುತ್ತಿರುವ ಚಂದ್ರ ಎಂದು ಕರೆಯುತ್ತೇವೆ. ಹುಣ್ಣಿಮೆಯ ದಿನ ಚಂದ್ರ, ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದರೆ, ಪೂರ್ವದಲ್ಲಿ ಹುಟ್ಟುತ್ತಿರುತ್ತಾನೆ, ಮತ್ತು ರಾತ್ರಿ ಪೂರಾ ಕಾಣುತ್ತಾನೆ. ಹುಣ್ಣಿಮೆಯ ನಂತರದ ದಿನಗಳಲ್ಲಿ ಚಂದ್ರ, ಈ ಹಿಂದೆ ಹುಟ್ಟಿದ ಸಮಯಕ್ಕಿಂತಲೂ ಸುಮಾರು 50 ನಿಮಿಷಗಳ ತಡವಾಗಿ ಹುಟ್ಟುತ್ತಾನೆ. ಹೀಗೆ 50 ನಿಮಿಷಗಳ ತಡವಾಗಿ ಹುಟ್ಟುವುದು ಪ್ರತಿ ದಿನವು ನಡೆಯುತ್ತದೆ. ಇದಕ್ಕೆ ಕಾರಣ: ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವ ಕಕ್ಷೆಯಲ್ಲಿ, ಒಂದು ದಿನಕ್ಕೆ ಸುಮಾರು ಒಂದು ಡಿಗ್ರಿ ಚಲಿಸುತ್ತದೆ. ಹಾಗಾಗಿ, ಒಂದು ವರ್ಷಕ್ಕೆ ಸುಮಾರು 360(5) ದಿನ (ಪೂರ್ಣ ವೃತ್ತಕ್ಕೆ 360 ಡಿಗ್ರಿ). ಈ ವಾರ ಚಂದ್ರನು ಹುಟ್ಟುವ ಸಮಯ ಮತ್ತು ಮುಳುಗುವ ಸಮಯವನ್ನು ಮತ್ತು ಚಂದ್ರನು ಕ್ಷೀಣಿಸುತ್ತಿರುವ ಬಿಂಬಾವಸ್ಥೆಯನ್ನು ಗಮನಿಸಬಹುದು.

ನಕ್ಷತ್ರ ಪುಂಜಗಳು

ಇಲ್ಲಿಯವರೆಗೂ ನಾವು ಆಗಸದಲ್ಲಿ ಪ್ರಕಾಶಮಾನವಾಗಿ ಕಾಣುವ ಗ್ರಹಗಳು ಮತ್ತು ಚಂದಿರನ ಬಗ್ಗೆ ಸ್ವಲ್ಪಮಟ್ಟಿಗೆ ತಿಳಿದೆವು. ಸೌರ ಮಂಡಲದ ಕಾಯಗಳಲ್ಲದೆ, ಆಗಸದಲ್ಲಿ ಸಹಸ್ರಾರು ನಕ್ಷತ್ರಗಳು ಕಾಣುತ್ತವೆ. ನಕ್ಷತ್ರಗಳು ನಮ್ಮ ಸೌರಮಂಡಲದ ಕಾಯಗಳಿಗಿಂತಲೂ ಕೋಟ್ಯಾನುಕೋಟಿ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವುದರಿಂದ, ಈ ನಕ್ಷತ್ರಗಳ ಸ್ಥಾನಗಳು ನೂರಾರು ವರ್ಷಗಳಾದರೂ ಬದಲಾವಣೆಯಾಗುವುದಿಲ್ಲ. ಅಂದರೆ, ನಕ್ಷತ್ರಗಳ ನೈಜ ಸ್ಥಾನದ ಬದಲಾವಣೆ ಇರುವುದಿಲ್ಲ. ಹಾಗಾಗಿ, ಹಲವಾರು ನಾಗರಿಕತೆಗಳು, ಭೂಮಿಯಿಂದ ಕಾಣುವ ನಕ್ಷತ್ರಗಳನ್ನು ಒಂದೊಂದು ಗುಂಪುಗಳಾಗಿ ಮಾಡಿ, ಅವುಗಳಿಗೆ ಕೆಲವೊಂದು ಆಕಾರಗಳನ್ನು ಕೊಟ್ಟು, ದಿಕ್ಕುಗಳನ್ನು ಕಂಡುಹಿಡಿಯಲು, ಸಮುದ್ರಯಾನ ಮಾಡಲು ಮತ್ತು ಕಾಲಗಳನ್ನು ಗುರುತಿಸಲು ಬಳಸಿಕೊಂಡವು. ಇಂತಹ ನಕ್ಷತ್ರಗಳ ಗುಂಪುಗಳನ್ನು ನಕ್ಷತ್ರ ಪುಂಜ ಎಂದು ಕರೆಯಲಾಯಿತು. ಬೇರೆ ಬೇರೆ ನಾಗರಿಕತೆಗಳು ತಮಗೆ ಕಾಣುವ ನಕ್ಷತ್ರಗಳನ್ನು ತಮ್ಮ ದೈವಗಳಿಗೆ ಮತ್ತು ತಮ್ಮ ಸಂಸ್ಕೃತಿಗಳಿಗೆ ಅನುಗುಣವಾಗಿ ಗುಂಪುಗಳನ್ನಾಗಿ ವಿಂಗಡಿಸಿ ಕಥೆಗಳನ್ನು ಕಟ್ಟಿದರು.

ಉದಾಹರಣೆಗೆ, ಉತ್ತರ ದಿಕ್ಕಿನಲ್ಲಿ ಕಾಣುವ ಏಳು ಪ್ರಕಾಶಮಾನವಾದ ನಕ್ಷತ್ರ ಪುಂಜವನ್ನು ಭಾರತದಲ್ಲಿ ಸಪ್ತಋಷಿಮಂಡಲ (ಏಳು ಋಷಿಗಳ ತಪಸ್ಸು ಮಾಡುತ್ತಿರುವುದು) ಎಂದು ಗ್ರಹಿಸಿದರೆ, ಗ್ರೀಕರು ಇದೇ ನಕ್ಷತ್ರ ಪುಂಜವನ್ನು ದೊಡ್ಡಕರಡಿ ಎಂದು ಕರೆದರು. ಹೀಗೆ, ಹಲವಾರು ನಕ್ಷತ್ರಪುಂಜಗಳನ್ನು ವಿವಿಧ ದೇಶಗಳ ನಾಗರಿಕತೆಗಳು ವಿವಿಧ ರೀತಿಯಲ್ಲಿ ಕರೆದರಾದರೂ, ಕಥೆಗಳನ್ನೂ ಕಟ್ಟಿದರಾದರೂ, ಎಲ್ಲರಿಗೂ ನಕ್ಷತ್ರಪುಂಜಗಳ ವೀಕ್ಷಣೆಯಿಂದ ಪಡೆಯುತ್ತಿದ್ದ ಮಾಹಿತಿ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಆದರೆ, ಪ್ರಸ್ತುತ ಇರುವ International Astronomical Union (IAU) ಸಂಸ್ಥೆಯು, ನಕ್ಷತ್ರಪುಂಜಗಳ ವಿವಿಧ ಹೆಸರುಗಳ ಬದಲಾಗಿ, ಎಲ್ಲರೂ ಒಂದೇ ಹೆಸರನ್ನು ಬಳಸಲು ಅನುಕೂಲವಾಗುವಂತೆ, ಇಡೀ ಆಗಸವನ್ನು 88 ಗುಂಪುಗಳಾಗಿ ವಿಂಗಡಿಸಿ, 88 ನಕ್ಷತ್ರ ಪುಂಜಗಳನ್ನು ಹೆಸರಿಸಿದೆ. ಇದನ್ನು ಜಗತ್ತಿನಾದ್ಯಂತ ಒಪ್ಪಲಾಗಿದೆ. 88 ನಕ್ಷತ್ರಪುಂಜಗಳ ಪೈಕಿ, ಕೆಲವು ಪ್ರಕಾಶಮಾನವಾಗಿದ್ದರೆ, ಇನ್ನು ಕೆಲವು ಅಷ್ಟು ಬೆಳಗುವುದಿಲ್ಲ. ಆದರೂ, ಚಂದ್ರನಿಲ್ಲದ ರಾತ್ರಿಯಲ್ಲಿ ನಕ್ಷತ್ರಪುಂಜಗಳನ್ನು ಬರಿಗಣ್ಣಿನಲ್ಲಿಯೇ ನೋಡಿ ಸವಿಯಬಹುದು. ಈ ವಾರ ಚಳಿಗಾಲದ ಅತ್ಯಂತ ಪ್ರಕಾಶಮಾನವಾದ ನಕ್ಷತ್ರಪುಂಜವನ್ನು ನೋಡೋಣ.

ಚಳಿಗಾಲದ ಆಗಸದಲ್ಲಿ ಬಹಳ ಪ್ರಕಾಶಮಾನವಾಗಿ ಮತ್ತು ಸುಲಭವಾಗಿ ಗುರುತಿಸಬಲ್ಲ ಪ್ರಥಮ ನಕ್ಷತ್ರಪುಂಜ ಎಂದರೆ ಅದು ಒರಿಯಾನ್. ಸುಮಾರು ರಾತ್ರಿ ಒಂಭತ್ತು ಗಂಟೆಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತರೆ ಈ ಕೆಳಗಿನ ಚಿತ್ರದಂತೆ ಪ್ರಕಾಶಮಾನವಾದ ನಕ್ಷತ್ರಗಳನ್ನು ಕಾಣಬಹುದು. ಈ ನಕ್ಷತ್ರಪುಂಜದಲ್ಲಿ ಹೆಚ್ಚು ಪ್ರಕಾಶಮಾನವಾದ ಬಿಳಿ ಬಣ್ಣದ ನಕ್ಷತ್ರವನ್ನು ರಿಗಲ್ ಮತ್ತು ಅದರ ವಿರುದ್ಧ ದಿಕ್ಕಿನ ನಸು ಹಳದಿ ಬಣ್ಣದ ನಕ್ಷತ್ರವನ್ನು ಬೀಟಲ್‌ಜೂಸ್ ಎಂದು ಹೆಸರಿಸಲಾಗಿದೆ.

ಚಿತ್ರದಲ್ಲಿ ನಕ್ಷತ್ರಗಳ ಪುಂಜವನ್ನು ಗುರುತಿಸಲು ಸಹಾಯವಾಗುವಂತೆ ಗೆರೆಯನ್ನು ಬಳಸಲಾಗಿದೆ. ಈ ಕಾಲ್ಪನಿಕ ಗೆರೆಗಳನ್ನು ಕಲ್ಪಿಸಿಕೊಂಡು ಆಗಸದಲ್ಲಿ ಈ ನಕ್ಷತ್ರ ಪುಂಜವನ್ನು ಗುರುತಿಸಬಹುದು. ಈ ನಕ್ಷತ್ರಪುಂಜವನ್ನು ಗ್ರೀಕ್ ಪುರಾಣ ಕಥೆಯಲ್ಲಿ ಬರುವ ’ದಿ ಗ್ರೇಟ್ ಹಂಟರ್ – ಬೇಟೆಗಾರನಾದ ಒರಿಯಾನ್ ಎಂದು ಹೆಸರಿಸಲಾಗಿದೆ. ಭಾರತದಲ್ಲಿ ಈ ನಕ್ಷತ್ರ ಪುಂಜವನ್ನು ಮಹಾವ್ಯಾಧ ಎಂದು ಹೆಸರಿಸಿದ್ದು, ಈ ಮಹಾವ್ಯಾಧ ತನ್ನ ಮುಂದಿರುವ ವೃಷಭ-ಗೂಳಿ (ಟಾರಸ್ ಎಂದು ಕರೆಯುತ್ತಾರೆ)ವನ್ನು ಅಟ್ಟುತ್ತಿದ್ದಾನೆ ಎನ್ನುವುದು ಪುರಾಣ ಕಥೆ. ಆಗಸದಲ್ಲೂ, ಮಹಾವ್ಯಾಧ ನಕ್ಷತ್ರಪುಂಜದ ಮುಂದೆ ವೃಷಭ ನಕ್ಷತ್ರ ಪುಂಜ ಇದೆ.

ಅಂದಹಾಗೆ, ಈ ಕೆಳಗೆ ನೀಡಿರುವ ಒರಿಯಾನ್ ನಕ್ಷತ್ರ ಪುಂಜದ ಚಿತ್ರದಲ್ಲಿ ಗುರುತಿಸಿರುವ ಭಾಗವನ್ನು ಚಂದ್ರನಿಲ್ಲದ ರಾತ್ರಿಯಲ್ಲಿ ಬರಿಗಣ್ಣಿನಲ್ಲಿ ನೋಡಿದರೆ, ನಕ್ಷತ್ರಗಳು ಹುಟ್ಟುವ ಪ್ರದೇಶವಾದ ಸುಂದರವಾದ ನೆಬುಲ್ಲಾ ಕಾಣುತ್ತದೆ. ಇದನ್ನು ಬೈನಾಕ್ಯೂಲರ್ ಅಥವಾ ದೂರದರ್ಶಕದಲ್ಲಿ ನೋಡಿದರೆ, ಬಹಳ ಸುಂದರವಾಗಿ ಕಾಣುತ್ತದೆ. ಆಗಸದ ಚಿತ್ರಗಳನ್ನು ತೆಗೆಯುವ ಹವ್ಯಾಸಿ ಛಾಯಾಗ್ರಾಹಕರ ನೆಚ್ಚಿನ ವಸ್ತು ಒರಿಯಾನ್ ನೆಬುಲ್ಲಾ. ಅತ್ಯಂತ ಸುಂದರವಾದ ಹೈಡ್ರೋಜನ್ ಮೋಡಗಳು ಮತ್ತು ಎಳೆ ನಕ್ಷತ್ರಗಳು ಹುಟ್ಟುವ ಜಾಗವನ್ನು ಸೆರೆಹಿಡಿಯಬಹುದು. ನಕ್ಷತ್ರದ ಹುಟ್ಟು ಸಾವು ಅಧ್ಯಯನ ಮಾಡಲು ಅತ್ಯಂತ ಉಪಯೋಗವಾದ ನೆಬುಲ್ಲಾ ಇದಾಗಿದೆ.

  • ವಿಶ್ವ ಕೀರ್ತಿ ಎಸ್

ಚಿತ್ರ ಕೃಪೆ: Stellarium, Hubblesite

ಚಿತ್ರ ಕೃಪೆ: www.moongiant.com
(ಮುಂದಿನ ವಾರ ಡಿಸೆಂಬರ್‌ನ ವಿಶೇಷ ಖಗೋಳೀಯ ಘಟನೆಯಾದ ಮತ್ತು ಪ್ರತಿ ವರ್ಷದ ಪ್ರಕಾಶಮಾನ ಜಮಿನೈಡ್ಸ್ ಉಲ್ಕಾಪಾತದ ಬಗ್ಗೆ ವಿವರಗಳನ್ನು ನಿರೀಕ್ಷಿಸಿ.)

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಆಕಾಶ ವೀಕ್ಷಣೆ ಮಾರ್ಗದರ್ಶಿ: ಅನಂತದಿಂ.. ದಿಗಂತದಿಂ.. ನೋಡೆ ನೋಡೆ ಮೂಡಿತೊಂದು..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...