Homeಬಹುಜನ ಭಾರತಸುಪ್ರೀಂಕೋರ್ಟಿಗೆ ಪತ್ರ ಬರೆದು ಬಿಸಿಮುಟ್ಟಿಸಿದ ಹಿರಿಯ ನ್ಯಾಯವಾದಿಗಳು!

ಸುಪ್ರೀಂಕೋರ್ಟಿಗೆ ಪತ್ರ ಬರೆದು ಬಿಸಿಮುಟ್ಟಿಸಿದ ಹಿರಿಯ ನ್ಯಾಯವಾದಿಗಳು!

- Advertisement -
- Advertisement -

ಆತ್ಮನಿರ್ಭರ ಭಾರತದ ಹೃದಯ ಹಿಂಡುವ ಚಿತ್ರಗಳು ನಾಗರಿಕ ಸಮಾಜದ ಮುಖಕ್ಕೆ ರಾಚುತ್ತಿವೆ. ಭಕ್ತಭಾರತದ ಆತ್ಮಸಾಕ್ಷಿ ಕಡೆಯುಸಿರು ಎಳೆದು ವರ್ಷಗಳೇ ಉರುಳಿವೆ. ದಿನಗಟ್ಟಲೆ ಟ್ರೇನಿನಲ್ಲಿ ಅನ್ನ ನೀರಿಲ್ಲದೆ ಪ್ರಯಾಣ ಮಾಡಿ ಸತ್ತ ತನ್ನ ತಾಯಿಯ ಹೊದಿಕೆಯನ್ನು ಹಿಡಿದೆಳೆದು ಎಚ್ಚರಿಸಲು ಅಮಾಯಕ ಹಸುಳೆ ಪ್ರಯತ್ನಿಸುವ ದೃಶ್ಯಾವಳಿ ಭಕ್ತ ಭಾರತದ ಕಲ್ಲು ಮನಸ್ಸನ್ನು ಕರಗಿಸಲಾರದು. ಅರ್ಥಾತ್ ದೇಶ- ಸಮಾಜ ತೀವ್ರ ಅಪಾಯಕರ ಸ್ಥಿತಿಯಲ್ಲಿವೆ. ಮನಸ್ಸಾಕ್ಷಿಗಳಿಗೆ ಲಕ್ವ ಹೊಡೆದಿದೆ. ಹನ್ನೊಂದರ ಪ್ರಾಯದ ಎಳೆಯ ತನ್ನ ಕುರುಡು ತಾಯಿ ಮತ್ತು ಕುಂಟ ತಂದೆಯನ್ನು ತ್ರಿಚಕ್ರ ಸೈಕಲ್‍ನಲ್ಲಿ ಕೂರಿಸಿ ವಾರಣಾಸಿಯಿಂದ ಬಿಹಾರಕ್ಕೆ ಒಯ್ಯುವ ದೃಶ್ಯವಾಗಲಿ, ಹೆದ್ದಾರಿಯಲ್ಲಿ ಹಸಿದ ವ್ಯಕ್ತಿಯೊಬ್ಬ ವಾಹನಗಳ ಚಕ್ರಗಳಡಿ ಸಿಕ್ಕಿ ನಜ್ಜುಗುಜ್ಜಾಗಿದ್ದ ನಾಯಿಯ ಕಳೇಬರದಿಂದ ಮಾಂಸವನ್ನು ಕಿತ್ತು ತಿನ್ನುವ ನೋಟವಾಗಲಿ, ನಡೆ ನಡೆದು ಎಳೆಯ ಮಕ್ಕಳ ಅಂಗಾಲುಗಳು ಬೊಕ್ಕೆಗಳಾಗಿ ಕಂಗೆಟ್ಟು ಕಣ್ಣುಗಳಲ್ಲಿ ನೀರು ತುಂಬಿಕೊಂಡ ನೋವಾಗಲೀ ಭಕ್ತ ಭಾರತದ ಕಣ್ಣಿಗೆ ಕಾಣುವುದೇ ಇಲ್ಲ. ತನ್ನ ವಿಶ್ವರೂಪವನ್ನು ಕಾಣಲು ಶ್ರೀಕೃಷ್ಣನು ಅರ್ಜುನನಿಗೆ ವಿಶೇಷ ದೃಷ್ಟಿಯನ್ನು ಪ್ರಸಾದಿಸಿದಂತೆ ಭಕ್ತ ಭಾರತಕ್ಕೂ ವಿಶೇಷ ಕಣ್ಣುಗಳನ್ನೂ, ಚಲಿಸುವ ಮನಸ್ಸನ್ನೂ ನೀಡಬೇಕಿದೆ. ಆ ಕಾಲ ಬರುವುದೆಂದೋ ಸದ್ಯಕ್ಕೆ ತಿಳಿಯದು.

ಈ ನಡುವೆ ವಿಶೇಷವೊಂದು ಜರುಗಿದೆ. ವಲಸೆ ಕಾರ್ಮಿಕ ಕೋಟಿಯ ಕಷ್ಟ ಪರಂಪರೆಯನ್ನು ಕಡೆಗಣಿಸಿದ್ದ ಸುಪ್ರೀಮ್ ಕೋರ್ಟಿಗೆ ಬಿಸಿ ಮುಟ್ಟಿಸುವ ಪತ್ರವೊಂದನ್ನು ದೇಶದ ಹಿರಿಯ ನ್ಯಾಯವಾದಿಗಳು ಬರೆದಿದ್ದಾರೆ. ಅದನ್ನೊಮ್ಮೆ ಓದಿಕೊಳ್ಳೋಣ.

ಪ್ರಿಯ ನ್ಯಾಯಮೂರ್ತಿಗಳೇ,

ಭಾರತೀಯ ನಾಗರಿಕರಾಗಿ ಮತ್ತು ಹಿರಿಯ ನ್ಯಾಯವಾದಿಗಳಾಗಿ ಅತೀವ ವ್ಯಥೆ ಮತ್ತು ದಿಗಿಲಿನಿಂದ ನಿಮಗೆ ಈ ಪತ್ರ ಬರೆಯುತ್ತಿದ್ದೇವೆ.

ಈ ದೇಶದ ನಾಗರಿಕರ ಅದರಲ್ಲೂ ವಿಶೇಷವಾಗಿ ಬಡತನದ ರೇಖೆಯ ಮತ್ತು ಅದರ ಕೆಳಗೆ ಕನಿಷ್ಠ ಕೂಲಿ ಪಡೆದು ಹೊಟ್ಟೆ ಹೊರೆಯುವ ಮತ್ತು ಹೀಗೆ ಹೊಟ್ಟೆ ಹೊರೆಯುವುದೂ ಕಷ್ಟಕರವಾಗಿ ಪರಿಣಮಿಸಿರುವ ಅಸಂಖ್ಯಾತ ಜನಸಮೂಹಗಳ ಮೂಲಭೂತ ಹಕ್ಕುಗಳ ರಕ್ಷಣೆಯಲ್ಲಿ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪಾತ್ರ ಅತ್ಯಂತ ಪ್ರಮುಖ.

ಸರ್ಕಾರಿ ಆದೇಶದ ಮೇರೆಗೆ ಕಳೆದ ಮಾರ್ಚ್ 24ರಿಂದ ಇಡೀ ದೇಶ ಮತ್ತು ಅದರ ಆರ್ಥಿಕ ವ್ಯವಸ್ಥೆಗೆ ಬೀಗ ಬಿದ್ದಿರುವ ಇಂದಿನ ಬಿಕ್ಕಟ್ಟಿನ ಸ್ಥಿತಿಯಲ್ಲಿ ಸುಪ್ರೀಂಕೋರ್ಟ್ ಪಾತ್ರ ಮತ್ತು ಕರ್ತವ್ಯ ಅಪಾರ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತದೆ. ದೇಶದ ಶೇ.75ಕ್ಕೂ ಹೆಚ್ಚು ಶ್ರಮಜೀವಿಗಳು ಅಸಂಘಟಿತ ವಲಯದಲ್ಲಿರುವವರು. ಆರ್ಥಿಕ ಚಟುವಟಿಕೆಯ ಸ್ಥಗಿತವು ಅವರ ಹೊಟ್ಟೆಪಾಡುಗಳ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ.

ಕೋಟಿಗಳ ಸಂಖ್ಯೆಗಳಲ್ಲಿರುವ ಈ ಶ್ರಮಿಕ ವರ್ಗ ಮುಖ್ಯವಾಗಿ ವಲಸೆ ಕಾರ್ಮಿಕ ಸ್ವರೂಪದ್ದು. ಮಾರ್ಚ್ 24ರಂದು ಲಾಕ್‍ಡೌನ್ ಘೋಷಿಸಿದಾಗ ಇವರ ಪಡಿಪಾಟಲನ್ನು ಲೆಕ್ಕಕ್ಕೇ ಇಟ್ಟುಕೊಳ್ಳಲಿಲ್ಲ. ಕೇವಲ ನಾಲ್ಕು ತಾಸುಗಳ ಕಾಲಾವಧಿಯಲ್ಲಿ ಲಾಕ್‍ಡೌನ್ ಸಾರಲಾಯಿತು. ಈ ಕೋಟ್ಯಂತರ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳುವ ಅವಕಾಶವನ್ನೇ ನೀಡಲಿಲ್ಲ. ಬೇರೆ ದಾರಿಯೇ ಇಲ್ಲದೆ ಹಸಿವು ಹತಾಶೆಗಳಿಂದ ನಡೆಯತೊಡಗಿದ ಇವರನ್ನು ಸರ್ಕಾರಗಳು ತಡೆಯುವ ಪ್ರಯತ್ನ ಮಾಡಿದವು.

ಕಳೆದ ಮಾರ್ಚ್ ತಿಂಗಳಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ವಿಫಲವಾದ ಕಾರಣ ಲಕ್ಷೋಪಲಕ್ಷ ಕಾರ್ಮಿಕರು ತಮ್ಮ ಸಣ್ಣಪುಟ್ಟ ಇಕ್ಕಟ್ಟಿನ ಖೋಲಿಗಳಲ್ಲೋ, ರಸ್ತೆಬದಿಯ ಕಾಲುದಾರಿಗಳಲ್ಲೋ ಉದ್ಯೋಗವಿಲ್ಲದೆ, ಒಪ್ಪೊತ್ತಿನ ಊಟಕ್ಕೂ ದಾರಿಯಲ್ಲದೆ ದಿನ ದೂಡುವಂತಾಯಿತು. ಆಗ ಕೋವಿಡ್ ಕೇಸುಗಳ ಸಂಖ್ಯೆ ಕೆಲವೇ ನೂರರಷ್ಟಿತ್ತು. ಅವರನ್ನು ಮರಳಲು ಬಿಡದೆ ಕಟ್ಟಿ ಹಾಕಿದ ಈ ಬಲಾತ್ಕಾರವು ಈ ಬಡಪಾಯಿಗಳನ್ನು ಕೋವಿಡ್ ಮಹಾಮಾರಿಯ ಸೋಂಕಿನ ಅಪಾಯಕ್ಕೆ ನೇರವಾಗಿ ನೂಕಿದಂತಾಗಿತ್ತು.

ಸರ್ಕಾರದ ಹೇಳಿಕೆಯು ವಾಸ್ತವ ಸ್ಥಿತಿಗತಿಗಳಿಗೆ ವ್ಯತಿರಿಕ್ತವಾಗಿತ್ತು. ಶೇ.90ರಷ್ಟು ವಲಸೆ ಕೆಲಸಗಾರರಿಗೆ ಸರ್ಕಾರಿ ಪಡಿತರ ಸಿಗಲಿಲ್ಲವೆಂದೂ, ಆಹಾರದ ತೀವ್ರ ಕೊರತೆಗೆ ತುತ್ತಾಗಿದ್ದಾರೆಂದೂ ಹಲವು ವರದಿಗಳು ಹೇಳಿದವು.

ಮಾರ್ಚ್ ತಿಂಗಳಿನಲ್ಲಿ ಸುಪ್ರೀಂಕೋರ್ಟು ಮಧ್ಯಪ್ರವೇಶಿಸಲು ವಿಫಲವಾದ ನಂತರ ಲಕ್ಷೋಪಲಕ್ಷ ಕಾರ್ಮಿಕರ ಮಹಾವಲಸೆ ಮೊದಲಾಯಿತು. ಆ ಹೊತ್ತಿಗೆ ಕೋವಿಡ್ ಸೋಂಕಿತರ ಸಂಖ್ಯೆ 50 ಸಾವಿರ ದಾಟಿತ್ತು. ಈ ಕಾರ್ಮಿಕರೂ ಸೋಂಕಿಗೆ ತುತ್ತಾದರು. ಈ ಹಂತದಲ್ಲೂ ಇವರ ಸಂಚಾರವನ್ನು ಸರ್ಕಾರ ಪ್ರತಿಬಂಧಿಸಿತ್ತು. ನಡೆದು ಹೋಗುವ ಬಡಪಾಯಿಗಳನ್ನೂ ತಡೆದು ಥಳಿಸಿದವು ಪೊಲೀಸರ ಲಾಠಿಗಳು. ಬೀದಿಗೆ ಬಿದ್ದಿದ್ದವರನ್ನು ಬಗೆ ಬಗೆಯಾಗಿ ಅವಮಾನಿಸಲಾಯಿತು. ತರುವಾಯ ಬಸ್ಸುಗಳು ಮತ್ತು ಟ್ರೇನುಗಳಲ್ಲಿ ಅವರ ಸಂಚಾರಕ್ಕೆ ಅನುಮತಿ ನೀಡಲಾಯಿತು. ವೈದ್ಯಕೀಯ ಪ್ರಮಾಣಪತ್ರ ತರಬೇಕೆಂಬ ಅಸಾಧ್ಯ ಷರತ್ತನ್ನು ಈ ಬಡಪಾಯಿಗಳಿಗೆ ವಿಧಿಸಲಾಯಿತು. ರಸ್ತೆ ಮಾರ್ಗವಾಗಿ ಸಾಗಾಟದ ಏರ್ಪಾಡು ಮಾಡಿದಾಗಲೂ ಅವರವರ ರಾಜ್ಯಗಳ ಸರಹದ್ದುಗಳಲ್ಲೇ ಅವರನ್ನು ಇಳಿಸಲಾಯಿತು. ರಾಜ್ಯ ಸರ್ಕಾರಗಳು ಇವರನ್ನು ಬರಮಾಡಿಕೊಳ್ಳಲು ತಯಾರಿರಲಿಲ್ಲ. ಈ ಬಡಪಾಯಿಗಳ ಹಕ್ಕುಗಳಿಗೆ ಅರ್ಥವೇ ಇಲ್ಲವಾಯಿತು.

ಲಾಕ್‍ಡೌನ್- 2ರಲ್ಲೂ ಈ ಲಕ್ಷ ಲಕ್ಷ ನಿರ್ಗತಿಕರ ಇರವನ್ನೇ ಗುರುತಿಸಲಿಲ್ಲ ಕೇಂದ್ರ ಸರ್ಕಾರ. ಇನ್ನು ಅವರ ಬವಣೆಯನ್ನು ನಿವಾರಿಸುವುದು ದೂರವೇ ಉಳಿಯಿತು.

ವಲಸೆ ಕಾರ್ಮಿಕರ ಕಣ್ಣೀರು ಒರೆಸುವ ಅವಕಾಶವನ್ನು 2020ರ ಮೇ 15ರಂದು ಇನ್ನೊಮ್ಮೆ ಕಳೆದುಕೊಂಡಿತು. ಹೆದ್ದಾರಿಗಳು, ರೈಲುದಾರಿಗಳಲ್ಲಿ ಸಾವಿರಾರು ಕಿ.ಮೀ. ಉದ್ದಕ್ಕೆ ದುಃಖ ಹಸಿವು ವ್ಯಥೆ ವಿಷಾದ ಹಾಗೂ ತಬ್ಬಲಿ ಭಾವಗಳ ನದಿಗಳಂತೆ ಹರಿಯತೊಡಗಿದ್ದರು ವಲಸೆ ಕಾರ್ಮಿಕರು. ಅವರನ್ನು ಗುರುತಿಸಿ ಅನ್ನ- ನೀರು-ನೆರಳು ಹಾಗೂ ಉಚಿತ ಪಯಣವನ್ನು ಏರ್ಪಡಿಸುವಂತೆ ದೇಶದ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕೆಂಬ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತು. ಅರ್ಜಿಯ ಗುಣಗಳನ್ನು ಪರಿಗಣಿಸಲೂ ಇಲ್ಲ.

ಸರ್ಕಾರದ ಪರವಾಗಿ ಮಂಡಿಸಲಾಗುವ ಹೇಳಿಕೆಗಳಿಗೆ ನ್ಯಾಯಾಲಯ ನೀಡುತ್ತಿರುವ ಸಾಂಸ್ಥಿಕ ಗೌರವ- ಮಾನ್ಯತೆ-ಮನ್ನಣೆ ಮತ್ತು ಈ ಅಗಾಧ ಮಾನವೀಯ ಬಿಕ್ಕಟ್ಟಿನ ಕುರಿತು ನ್ಯಾಯಾಲಯ ತೋರಿರುವ ನಿರ್ಲಕ್ಷ್ಯವನ್ನು ತಕ್ಷಣವೇ ಸರಿಪಡಿಸಬೇಕು. ಇಲ್ಲದೆ ಹೋದರೆ ಲಕ್ಷೋಪಲಕ್ಷ ಹಸಿದ ನಿರ್ಗತಿಕ ವಲಸಿಗರ ಸಂಬಂಧ ತಾನು ವಹಿಸಬೇಕಿರುವ ಸಾಂವಿಧಾನಿಕ ಪಾತ್ರ ಮತ್ತು ಕರ್ತವ್ಯಗಳಿಂದ ನ್ಯಾಯಾಲಯ ಕೈ ತೊಳೆದುಕೊಂಡಂತೆಯೇ ಸರಿ.

ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಪ್ರಸಕ್ತ ಸನ್ನಿವೇಶದಲ್ಲಿ ಭಾರತೀಯ ಜನತಂತ್ರದ ಉಳಿವು ಮತ್ತು ಕಾನೂನಿನ ಪಾರಮ್ಯವು ಸುಪ್ರೀಂಕೋರ್ಟನ್ನೇ ಅವಲಂಬಿಸಿದೆ. ಪ್ರಭುತ್ವದ ಕ್ರಿಯೆಯ ನಾಗರಿಕರ ಮೂಲಭೂತ ಹಕ್ಕುಗಳನ್ನು ಆಪೋಶನ ತೆಗೆದುಕೊಳ್ಳದಂತೆ ಕಾವಲು ನಿಲ್ಲುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಅದು ಸಕ್ರಿಯವಾಗಿ ನಿಭಾಯಿಸಬೇಕಿದೆ.

ಇಂದಿಗೂ ಈ ಹೊತ್ತಿಗೂ ವಲಸೆ ಕಾರ್ಮಿಕರ ಸಂಕಟ ಮುಂದುವರೆದಿದೆ. ಲಕ್ಷಾಂತರ ಜನ ರೇಲ್ವೆ ನಿಲ್ದಾಣಗಳು ಮತ್ತು ರಾಜ್ಯಗಳ ಸರಹದ್ದುಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರಿಗೆ ಅನ್ನ ನೀರು ನೆರಳು ಹಾಗೂ ಪ್ರಯಾಣ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ನಾವು ಸುಪ್ರೀಂಕೋರ್ಟನ್ನು ಆಗ್ರಹಪಡಿಸುತ್ತೇವೆ. ಅನ್ಯಾಯ ಎಲ್ಲಿಯೇ ಜರುಗಿದರೂ ಅದು ನ್ಯಾಯಕ್ಕೆ ಎಲ್ಲೆಡೆಯೂ ಗಂಡಾಂತರವೇ ಎಂಬ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಮಾತನ್ನು ಇಲ್ಲಿ ನೆನಪಿಸಬಯಸುತ್ತೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...