ಸೆಪ್ಟೆಂಬರ್ 19 ವಿಶ್ವ ಹಾವು ಕಡಿತದ ಬಗೆಗಿನ ಜಾಗೃತಿ ದಿನ (International Snake bite awareness day) ಎಂದು ಆಚರಿಸಲಾಗುತ್ತದೆ. ಹಾವು ಕಡಿತದ ಬಗ್ಗೆ ಜಾಗೃತಿ ಮೂಡಿಸಲು ಹಲವು ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸಿವೆ. 2018ರಲ್ಲಿ ಮೊದಲ ಅಂತಾರಾಷ್ಟ್ರೀಯ ಸ್ನೇಕ್‌ಬೈಟ್ ಜಾಗೃತಿ ದಿನವನ್ನು ಆಚರಿಸಲಾಯಿತು.
ಇತ್ತೀಚಿನ ಒಂದು ಅಧ್ಯಯನ ಪ್ರಕಾರ ನಮ್ಮ ದೇಶದಲ್ಲಿ ಪ್ರತಿವರ್ಷ ಹಾವಿನ ಕಡಿತದಿಂದ ಸುಮಾರು 58 ಸಾವಿರ ಜನ ಸಾವನ್ನಪ್ಪುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸಾವನ್ನಪ್ಪುತ್ತಿದ್ದಾರೆ ಎಂದರೆ ಹಾವುಕಡಿತದ ಬಗ್ಗೆ ನಾವು ಗಂಭೀರವಾಗಿ ವಿಚಾರ ಮಾಡಬೇಕಿದೆ. ಹಾವಿನ ಕಡಿತಕ್ಕೆ ಗ್ರಾಮೀಣ ಪ್ರದೇಶದ ಕೃಷಿ ವಲಯದ ಬಡ ಜನರೇ ಹೆಚ್ಚು ಬಲಿಯಾಗುತ್ತಿರುವುದು ಗಮನಿಸಬೇಕಾದ ಅಂಶ.
ಭಾರತದಲ್ಲಿ 300 ವಿಧದ ಹಾವುಗಳಿದ್ದು, ಅವುಗಳೆಲ್ಲವೂ ಅಪಾಯಕಾರಿಯಲ್ಲ ಎನ್ನಲಾಗಿದೆ. ದೇಶದಲ್ಲಿ ಹಾವು ಕಡಿತದಿಂದ ಮೃತಪಡುವವರಲ್ಲಿ 90% ಗೂ ಅಧಿಕ ಜನರು, ನಮ್ಮಲ್ಲಿನ ಕೇವಲ 4 ಜಾತಿಯ ಹಾವುಗಳ ಕಡಿತದಿಂದ ಮಾತ್ರ ಸಾವನ್ನಪ್ಪುತ್ತಾರೆ. ಹೀಗಾಗಿ ಆ ನಾಲ್ಕು ವಿಷಕಾರಿ ಹಾವುಗಳನ್ನು ಭಾರತದ ದೊಡ್ಡ ವಿಷಕಾರಿ ಹಾವುಗಳು (Big four venomous Snake of India) ಎಂದು ವಿಭಾಗಿಸಲಾಗಿದೆ.
ಇದನ್ನೂ ಓದಿ: ಇಂದು ವಿಶ್ವ ಪ್ರಥಮ ಚಿಕಿತ್ಸಾ ದಿನ: ಜೀವ ರಕ್ಷಣೆ ತಿಳಿದಿರೋಣ
೧. ನಾಗರಹಾವು (Spectical cobra)
೨. ಕೊಳಕು ಮಂಡಲ(Russell viper)
೩. ಕಟ್ಟುಹಾವು(Krait)
೪. ಉರಿ ಮಂಡಲ(Saw scaled viper)
ಈ ಹಾವುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮತ್ತು ಸೂಕ್ತ ಜಾಗೃತ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಜೀವ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದು ನಾಲ್ಕು ವಿಷಕಾರಿ ಹಾವುಗಳ ಬಗ್ಗೆ ಮದ್ರಾಸ್ ಕ್ರೋಕಡೈಲ್ ಬ್ಯಾಂಕ್ ಟ್ರಸ್ಟ್ ವಿಡಿಯೋವೊಂದನ್ನು ಪ್ರಸಾರ ಮಾಡಿದೆ.

ಈ ಹಾವುಗಳು ಗ್ರಾಮೀಣ, ನಗರ ಪ್ರದೇಶದ ಜನವಸತಿ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ ಹಾಗೂ
ಇವುಗಳ ಕಡಿತದಿಂದಲೇ ಗರಿಷ್ಠ ಸಂಖ್ಯೆಯ ಜನ ಸಾವನಪ್ಪುತ್ತಿದ್ದಾರೆ. ಆದ ಕಾರಣ ನಾವು ಈ ನಾಲ್ಕು ಹಾವುಗಳ ಚಲನ ವಲನ, ಆಹಾರ ಪದ್ದತಿ ಇತ್ಯಾದಿ ವಿಷಯಗಳ ಬಗ್ಗೆ, ಮತ್ತೆ ಅವುಗಳ ಕಡಿತದಿಂದ ಪಾರಾಗಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿತರೆ ಹಾವುಗಳ ಕಡಿತದಿಂದ ಸುಲಭವಾಗಿ ಪಾರಾಗಬಹುದು ಎಂದು ಉರಗ ಅಧ್ಯಯನ ಕೇಂದ್ರ ಮಾಹಿತಿ ನೀಡಿದೆ.
ದೇಶದ ಪ್ರಮುಖ ಉರಗ ಅಧ್ಯಯನ ಕೇಂದ್ರಗಳಲ್ಲಿ ಒಂದಾದ ಚೆನೈನ ಕ್ರೊಕಡೈಲ್ ಪಾರ್ಕ್‌ನ ಪರಿಣಿತ ಹಾವುಗಳ ತಜ್ಞರು ನಿರ್ಮಿಸಿರುವ ಹಾವುಗಳ ಕಡಿತ ಬಗೆಗಿನ ಜಾಗೃತಿಯ ಸಾಕ್ಷ್ಯಚಿತ್ರದ ಕನ್ನಡ ಅವತರಣಿಕೆ ತುಂಬಾ ಉಪಯುಕ್ತವಾಗಿದೆ. ವಿಡಿಯೊ ಲಿಂಕ್ ಇಲ್ಲಿದೆ.
ಮಾಹಿತಿ: ಸಂಜಯ್ ಹೊಯ್ಸಳ, ಅರಣ್ಯ ರಕ್ಷಕ
ಇದನ್ನೂ ಓದಿ: ನಾಗರ ಪಂಚಮಿ: ಸಾವು ಸಂಭವಿಸಬಹುದಾದ ಆಚರಣೆ- ಹಾವುಗಳ ಕುರಿತು ಇರುವ ಮಿಥ್ಯೆಗಳು


