Homeಮುಖಪುಟಇಂದು ವಿಶ್ವ ಪ್ರಥಮ ಚಿಕಿತ್ಸಾ ದಿನ: ಜೀವ ರಕ್ಷಣೆ ತಿಳಿದಿರೋಣ

ಇಂದು ವಿಶ್ವ ಪ್ರಥಮ ಚಿಕಿತ್ಸಾ ದಿನ: ಜೀವ ರಕ್ಷಣೆ ತಿಳಿದಿರೋಣ

ಅಪಘಾತಕ್ಕೀಡಾದವರಿಗೆ ನೀರನ್ನು ಕುಡಿಸಿದ್ದರೆ, ವೈದ್ಯರು ಅನಸ್ತೀಶಿಯಾ ಕೊಟ್ಟಾಗ ರೋಗಿಯು ವಾಂತಿ ಮಾಡಿಕೊಂಡು ಸಾವಿಗೀಡಾಗುವ ಸಾಧ್ಯತೆಗಳಿರುತ್ತವೆ. ಗಾಯಗೊಂಡು ಮಲಗಿರುವ ವ್ಯಕ್ತಿಗೆ ನೀರು ಕುಡಿಸಿದಾಗ ಶ್ವಾಸಕೋಶಕ್ಕೆ ನೀರು ಇಳಿಯುತ್ತದೆ. ಇದರಿಂದಾಗಿಯೇ ಹಲವು ಜನ ಸಾಯುತ್ತಾರೆ. ಇದು ಗೊತ್ತಿರುವವರು ನೀರು ಕುಡಿಸುವುದಿಲ್ಲ. ಗೊತ್ತಿಲ್ಲದೇ ಇರುವವರು ತಕ್ಷಣ ನೀರು ಕುಡಿಸಿ ರೋಗಿ ಸಾಯಲು ಕಾರಣರಾಗುತ್ತಾರೆ ಎಂದು ಎಚ್ಚರಿಸುತ್ತಾರೆ ಡಾ.ಐಶ್ವರ್ಯ.

- Advertisement -
- Advertisement -

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ 2019ರಲ್ಲಿ ಒಟ್ಟು 4,49,002 ರಸ್ತೆ ಅಪಘಾತಗಳು ಸಂಭವಿಸಿವೆ. 1,51,113 ಸಾವನ್ನಪ್ಪಿದ್ದರೆ, 451,361 ಮಂದಿ ಗಾಯಗೊಂಡಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ. 3.86ರಷ್ಟು ಅಪಘಾತ ಪ್ರಕರಣಗಳು 2019ರಲ್ಲಿ ಕಡಿಮೆಯಾಗಿರುವುದು ಸಮಾಧಾನಕರ ಸಂಗತಿ. ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್‌ ಪರಿಣಾಮ ರಸ್ತೆ ಅಪಘಾತಗಳು 2020ರಲ್ಲಿ ಗಣನೀಯವಾಗಿ ಕಡಿಮೆಯಾಗಿವೆ ಎನ್ನುತ್ತವೆ ಇತರ ವರದಿಗಳು. ರಸ್ತೆ ಸುರಕ್ಷತೆ ನಿಯಮಗಳ ಕುರಿತು ಜನರು ಎಚ್ಚೆತ್ತುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾದರೂ ನಿರ್ಲಕ್ಷ್ಯಗಳಿಂದಾಗಿ ಅಮೂಲ್ಯ ಜೀವಗಳನ್ನು ಕಳೆದುಕೊಂಡ ಉದಾಹರಣೆಗಳಿವೆ. ಅಪಘಾತಗಳು ಯಾವಾಗ, ಹೇಗೆ ಸಂಭವಿಸುತ್ತವೆ ಎಂಬುದು ನಮಗೆ ತಿಳಿದಿರುವುದಿಲ್ಲ. ಆದರೆ ಅಪಘಾತ ಸಂಭವಿಸಿದ ತಕ್ಷಣ ಪ್ರಥಮ ಚಿಕಿತ್ಸೆಯನ್ನು ನೀಡಿದರೆ ಸಾವಿನ ಸಾಧ್ಯತೆಯನ್ನು ತಪ್ಪಿಸಬಹುದು. ಹೀಗಾಗಿ ಪ್ರಥಮ ಚಿಕಿತ್ಸೆಯ ಕುರಿತು ಅರಿವು ಬೆಳೆಸಿಕೊಳ್ಳುವುದು ಅಗತ್ಯ ಎನ್ನುತ್ತಾರೆ ವೈದ್ಯರು.

ಪ್ರತಿವರ್ಷ ಸೆಪ್ಟೆಂಬರ್ ಎರಡನೇ ಶನಿವಾರದಂದು ಪ್ರಥಮ ಚಿಕಿತ್ಸಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಇಂದು (ಸೆ.11) ಪ್ರಥಮ ಚಿಕಿತ್ಸಾ ದಿನವಾಗಿದ್ದು, ‘ಪ್ರಥಮ ಚಿಕಿತ್ಸೆ ಮತ್ತು ರಸ್ತೆ ಸುರಕ್ಷತೆ’ ಈ ವರ್ಷದ ಘೋಷವಾಕ್ಯವಾಗಿದೆ. ಇಂಟರ್ ನ್ಯಾಷನಲ್ ಫೆಡರೇಷನ್ ಆಫ್‌ ರೆಡ್ ಕ್ರಾಸ್‌ ಅಂಡ್ ರೆಡ್ ಕ್ರೆಸೆನ್ಟ್ ಸೊಸೈಟೀಸ್ (ಐಎಫ್‌ಆರ್‌ಸಿ) ವತಿಯಿಂದ ಈ ಆಚರಣೆಯನ್ನು 2020ರಲ್ಲಿ ಆಚರಣೆಗೆ ತರಲಾಯಿತು. ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಹೇಗೆ ಜೀವ ಉಳಿಸುವುದು ಎಂದು ಅರಿವು ಮೂಡಿಸುತ್ತಾ ಜನರಿಗೆ ಪ್ರಥಮ ಚಿಕಿತ್ಸೆ ಕುರಿತು ತರಬೇತಿಯನ್ನು ನೀಡುತ್ತಾ ಬಂದಿದೆ ರೆಡ್ ಕ್ರಾಸ್.

ಗಾಯಗೊಂಡ ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಶೇ. 27ರಷ್ಟು ಸಾವುಗಳು ಸಂಭವಿಸುತ್ತಿವೆ ಎನ್ನುವ ರೆಡ್ ಕ್ರಾಸ್ ಸಂಸ್ಥೆ, ಪ್ರಥಮ ಚಿಕಿತ್ಸೆ  ಕುರಿತು ತಿಳಿವಳಿಕೆ ಇದ್ದರೆ, ವೃತ್ತಿಪರರು ಚಿಕಿತ್ಸೆ ನೀಡುವುದು ತಡವಾದರೂ ರೋಗಿಯನ್ನು ಉಳಿಸುವ ಸಾಧ್ಯತೆ ಹೆಚ್ಚಿದೆ ಎನ್ನುತ್ತದೆ.

‘ನಾನು ಗೌರಿ’ ವೆಬ್ ಸೈಟ್ ನೊಂದಿಗೆ ಮಾತನಾಡಿದ ಕರ್ನಾಟಕ ರೆಡ್ ಕ್ರಾಸ್ ಘಟಕದ ಚೇರ್‍ಮನ್ ಹಾಗೂ ತುಮಕೂರಿನ ‘ಪ್ರಜಾಪ್ರಗತಿ’ ಪತ್ರಿಕೆಯ ಸಂಪಾದಕರೂ ಆದ ಎಸ್.ನಾಗಣ್ಣ, “ಪ್ರಥಮ ಚಿಕಿತ್ಸೆಯ ಕುರಿತು ಎಂಟರಿಂದ ಹತ್ತನೇ ತರಗತಿ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ರೆಡ್‌ ಕ್ರಾಸ್ ನಡೆಸುತ್ತಿದೆ. ಪಿಯುಸಿ ಹಂತದ ಮಕ್ಕಳಿಗೆ ಜಾಗೃತಿ ಮೂಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಘಟನೆಯಾದ ಒಂದು ಗಂಟೆಯ ಅವಧಿಯಲ್ಲಿ ಪ್ರಥಮ ಚಿಕಿತ್ಸೆ ಮಹತ್ವದ್ದಾಗಿರುತ್ತದೆ. ಅಪಘಾತ, ಹಾವು ಕಚ್ಚಿದ ಸಂದರ್ಭ, ಹೃದಯಾಘಾತ ಹಾಗೂ ಪಾರ್ಶ್ವವಾಯು ಸಂಭವಿಸಿದ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಮುಖ್ಯ” ಎನ್ನುತ್ತಾರೆ.

ಕರ್ನಾಟಕ ರೆಡ್ ಕ್ರಾಸ್ ಘಟಕದ ಚೇರ್‍ಮನ್ ಎಸ್.ನಾಗಣ್ಣ

“ಕೈಗಾರಿಕೆ ಅಥವಾ ಉತ್ಪಾದನಾ ಪ್ರದೇಶಗಳಲ್ಲಿ ಮೂವತ್ತು ಜನರಲ್ಲಿ ಒಬ್ಬರಿಗೆ ತರಬೇತಿಯನ್ನು ನೀಡುತ್ತಿದ್ದೇವೆ. ಒಂದು ಕೈಗಾರಿಕೆಯಲ್ಲಿ ಕನಿಷ್ಠ ಎರಡು ದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ತರಬೇತಿ ನೀಡಿದ ಬಳಿಕ, ಸರಿಯಾಗಿ ಕಲಿತ್ತಿದ್ದಾರೋ ಇಲ್ಲವೋ ಎಂಬುದನ್ನು ಮೌಲ್ಯಮಾಪನ ಮಾಡುತ್ತೇವೆ. ನಂತರ ದೆಹಲಿಯಲ್ಲಿರುವ ರೆಡ್ ಕ್ರಾಸ್ ಮುಖ್ಯ ಕಚೇರಿಯಿಂದ ಅರ್ಹತಾ ಪತ್ರವನ್ನು ಕೊಡಿಸಲಾಗುತ್ತದೆ. ತರಬೇತಿ ಪಡೆದವರಿಂದ ಮತ್ತಷ್ಟು ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸೆಂಟ್ ಜಾನ್ಸ್ ಅಂಬ್ಯುಲೆನ್ಸ್ ಸಂಸ್ಥೆಯು ರೆಡ್ ಕ್ರಾಸ್ ಜೊತೆಗೆ ಕೈಜೋಡಿಸಿದೆ” ಎನ್ನುತ್ತಾರೆ ನಾಗಣ್ಣ.

“ಯಾರಾದರೂ ಅಪಘಾತಕ್ಕೆ ತುತ್ತಾದಾಗ ಬಹಳಷ್ಟು ಜನ ಫೋಟೋ ತೆಗೆದುಕೊಳ್ಳುವ ಉತ್ಸಾಹದಲ್ಲಿರುತ್ತಾರೆ. ಅದಕ್ಕಿಂತ ಮುಖ್ಯವಾಗಿ ಒಂದು ಜೀವವನ್ನು ಉಳಿಸುವುದು ಆದ್ಯತೆಯಾಗಬೇಕು. ಮೊದಲು ಜೀವ ಮುಖ್ಯ ಎಂಬ ಮನಸ್ಥಿತಿಯನ್ನು ಪ್ರಥಮ ಚಿಕಿತ್ಸಾ ತರಬೇತಿ ಪಡೆಯುವವರಲ್ಲಿ ಬೆಳೆಸುತ್ತಿದ್ದೇವೆ” ಎನ್ನುವ ಎಸ್.ನಾಗಣ್ಣ, “ರೆಡ್ ಕ್ರಾಸ್‌ ಎಂದಿಗೂ ತಟಸ್ಥ ನೀತಿಯನ್ನು ಅನುಸರಿಸುತ್ತಿದೆ. ಇದಕ್ಕೆ ಶತ್ರು, ಮಿತ್ರ ಎಂಬ ವಿಗಂಡಣೆಗಳಿಲ್ಲ. ಉದಾಹರಣೆಗೆ ಅಫಘಾನಿಸ್ತಾನದಲ್ಲಿ ಸಂಘರ್ಷ ಏರ್ಪಟ್ಟಿದೆ. ಅಲ್ಲಿ ಸಾವು ನೋವುಗಳು ಆಗುತ್ತಿದ್ದಾಗ, ರೆಡ್ ಕ್ರಾಸ್ ಸದಸ್ಯರು ತಮ್ಮ ಚಿಹ್ನೆಗಳನ್ನು ಧರಿಸಿ ಹೊರಟರೆಂದರೆ ಯಾರೂ ಅವರಿಗೆ ತೊಂದರೆ ಕೊಡುವುದಿಲ್ಲ. ವಿಪತ್ತಿನ ಸಂದರ್ಭದಲ್ಲಿ ಶತ್ರು, ಮಿತ್ರ ಎನ್ನದೆ ಗಾಯಾಳುಗಳನ್ನು ರಕ್ಷಿಸುವುದಷ್ಟೇ ರೆಡ್ ಕ್ರಾಸ್ ಸಂಸ್ಥೆಯ ಗುರಿಯಾಗಿರುತ್ತದೆ” ಎನ್ನುತ್ತಾರೆ ಅವರು.

PC: esafety.com

ಎರಡು ವಿಧದ ಪ್ರಥಮ ಚಿಕಿತ್ಸೆ

ಅಪಘಾತದಿಂದ ಗಾಯಗೊಂಡ ಸಂದರ್ಭದಲ್ಲಿನ ಪ್ರಥಮ ಚಿಕಿತ್ಸೆ ಹಾಗೂ ಹೃದಯಾಘಾತ, ಪಾರ್ಶ್ವವಾಯು ಥರದ ಸಮಸ್ಯೆಗಳು ಎದುರಾದಾಗ ಕೈಗೊಳ್ಳುವ ವೈದ್ಯಕೀಯ ತುರ್ತು ಪ್ರಥಮ ಚಿಕಿತ್ಸೆ ಎಂಬ ಎರಡು ವಿಧದ ಪ್ರಥಮ ಚಿಕಿತ್ಸೆಗಳಿವೆ ಎನ್ನುತ್ತಾರೆ ತುರ್ತು ಚಿಕಿತ್ಸಕರಾದ ಡಾ.ಐಶ್ವರ್ಯ ಎಸ್.ಮೂರ್ತಿ.

“ಗಾಯಗೊಂಡು ರಕ್ತಸ್ರಾವ ಹೆಚ್ಚಾಗಿದ್ದ ಸಂದರ್ಭದಲ್ಲಿ ಮೊದಲ ವಿಧದ ಪ್ರಥಮ ಚಿಕಿತ್ಸೆಯು ಬಹಳ ಉಪಕಾರಿಯಾಗಿರುತ್ತದೆ. ಗಾಯಗೊಂಡು ರಕ್ತಸ್ರಾವವಾಗುತ್ತಿದ್ದಾಗ ಗಾಯಗೊಂಡ ಭಾಗದಲ್ಲಿ ಒತ್ತಿ ಹಿಡಿದರೆ ಸಾಕು, ರಕ್ತ ಸ್ರಾವ ನಿಲ್ಲುತ್ತದೆ. ಆದರೆ ನಾವು ಗಾಯಗೊಂಡ ಭಾಗದಲ್ಲಿ ಬಿಗಿಯಾಗಿ ದಾರದಿಂದಲೋ ಬಟ್ಟೆಯಿಂದಲೋ ಕಟ್ಟಿದರೆ ಮುಂದಿನ ಭಾಗಕ್ಕೆ ರಕ್ತ ಚಲನೆಯೇ ನಿಂತುಹೋಗುವ ಅಪಾಯವಿರುತ್ತದೆ. ಹಾವು ಕಡಿದಾಗಲೂ ಬಟ್ಟೆ ಕಟ್ಟಿ ಎಂದು ಹೇಳುವವರಿದ್ದಾರೆ. ಉದಾಹರಣೆಗೆ ಕಾಲಿನ ಭಾಗಕ್ಕೆ ಹಾವು ಕಚ್ಚಿದ್ದರೆ ನಾವು ಬಟ್ಟೆ ಕಟ್ಟಿದಾಗ ಪಾದಕ್ಕೆ ರಕ್ತ ಚಲನೆ ಆಗುವುದಿಲ್ಲ. ಇಂತಹ ಸಂದರ್ಭಗಳಲ್ಲೂ ಸಾವಾಗುವ ಸಾಧ್ಯತೆಗಳಿವೆ” ಎಂದು ಎಚ್ಚರಿಸುತ್ತಾರೆ ಅವರು.

ಡಾ.ಐಶ್ವರ್ಯ ಎಸ್.ಮೂರ್ತಿ

ನೀರು ಕುಡಿಸದಿರಿ

ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ವೈದ್ಯರು ಅನಸ್ತೀಶಿಯಾ ಕೊಡಬೇಕಿರುತ್ತದೆ. ಅಪಘಾತಕ್ಕೀಡಾದವರಿಗೆ ನೀರನ್ನು ಕುಡಿಸಿದ್ದರೆ, ವೈದ್ಯರು ಅನಸ್ತೀಶಿಯಾ ಕೊಟ್ಟಾಗ ರೋಗಿಯು ವಾಂತಿ ಮಾಡಿಕೊಂಡು ಸಾವಿಗೀಡಾಗುವ ಸಾಧ್ಯತೆಗಳಿರುತ್ತವೆ. ಗಾಯಗೊಂಡು ಮಲಗಿರುವ ವ್ಯಕ್ತಿಗೆ ನೀರು ಕುಡಿಸಿದಾಗ ಶ್ವಾಸಕೋಶಕ್ಕೆ ನೀರು ಇಳಿಯುತ್ತದೆ. ಇದರಿಂದಾಗಿಯೇ ಹಲವು ಜನ ಸಾಯುತ್ತಾರೆ. ಗೊತ್ತಿರುವವರು ನೀರು ಕುಡಿಸುವುದಿಲ್ಲ. ಗೊತ್ತಿಲ್ಲದೇ ಇರುವವರು ತಕ್ಷಣ ನೀರು ಕುಡಿಸಿ ರೋಗಿ ಸಾಯಲು ಕಾರಣರಾಗುತ್ತಾರೆ ಡಾ.ಐಶ್ವರ್ಯ.

Aishwarya S Murthy

ಪಾರ್ಶ್ವವಾಯು ಸಂದರ್ಭಗಳಲ್ಲಿ ರೋಗದ ಗುಣಲಕ್ಷಣಗಳನ್ನು ಗುರುತಿಸುವುದು ಅಗತ್ಯ. ಮಾತು ತೊದಲುತ್ತಿರುವುದು, ಬಾಯಿ ತಿರುಚುತ್ತಿರುವುದು, ಹಲ್ಲುಗಳು ಕ್ರಮಬದ್ಧವಾಗಿ ಇರದೇ ಇರುವುದು, ಕೈಗಳು ಸ್ವಾಧೀನ ಕಳೆದುಕೊಂಡಿರುವುದು- ಈ ಗುಣಲಕ್ಷಣಗಳಿದ್ದಲ್ಲಿ ವ್ಯಕ್ತಿ ಪಾರ್ಶ್ವವಾಯುಗೆ ತುತ್ತಾಗಿರುವ ಸಾಧ್ಯತೆಗಳಿರುತ್ತವೆ. ಪಾರ್ಶ್ವವಾಯು ಸಂಭವಿಸಿದ ಮೂರ್ನಾಲ್ಕು ಗಂಟೆಗಳಲ್ಲಿ ವ್ಯಕ್ತಿಯನ್ನು ಕರೆದುಕೊಂಡು ಬಂದಲ್ಲಿ ರಕ್ತ ಹೆಪ್ಪುಗಟ್ಟಿರುವಿಕೆಯನ್ನು ಕರಗಿಸಿ ರೋಗಿಯನ್ನು ಅಪಾಯದಿಂದ ಪಾರು ಮಾಡಬಹುದು. ಹಾಗೆಯೇ ಹೃದಯಾಘಾತದ ಲಕ್ಷಣಗಳ ಕುರಿತು ಎಚ್ಚರಿಕೆ ವಹಿಸಿದರೆ ವ್ಯಕ್ತಿಯನ್ನು ಉಳಿಸಬಹುದು ಎನ್ನುತ್ತಾರೆ ಅವರು.

ಪ್ರಥಮ ಚಿಕಿತ್ಸೆಯು ಇಂದು ಬಹಳ ಅಗತ್ಯವಾಗಿದ್ದು,  ಪ್ರಾಥಮಿಕ ಶಾಲಾ ಹಂತದಲ್ಲೇ ಪರಿಣಾಮಕಾರಿಯಾಗಿ ಪಠ್ಯದಲ್ಲಿ ಅಳವಡಿಸಿ ಪ್ರಥಮ ಚಿಕಿತ್ಸೆ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು ಎಂಬುದು ತಜ್ಞರೆಲ್ಲರ ಅಭಿಪ್ರಾಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...