ಹಿಂಸಾಚಾರ ಪೀಡಿತ ಹರಿಯಾಣದ ನೂಹ್‌ನಲ್ಲಿ ಇಂದು (ಸೋಮವಾರ) ಸರ್ವ ಜಾತಿಯ ಹಿಂದೂ ಮಹಾ ಪಂಚಾಯಿತಿ ಶೋಭಾ ಯಾತ್ರೆಗೆ ಕರೆ ನೀಡಿದ್ದು, ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಬಿಎಚ್‌ಪಿ ಹಮ್ಮಿಕೊಂಡಿರುವ ಶೋಭಾ ಯಾತ್ರೆಗೆ ಜಿಲ್ಲಾಡಳಿತವು ಅನುಮತಿ ನಿರಾಕರಿಸಿದೆ. ಆದರೂ ಯಾತ್ರೆ ನಡೆಸಲು ಆಯೋಜಕರು ಮುಂದಾಗಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಿಮಿಸಿದೆ. ಯಾತ್ರೆಯ ಆಯೋಜಕರು ಮೆರವಣಿಗೆ ನಡೆಸಲು ಕೋರಿ ಸಲ್ಲಿಸಿದ ಮನವಿಯನ್ನು ಜುಲೈ 23ರಂದು ನೂಹ್ ಜಿಲ್ಲಾಡಳಿತವು ತಿರಸ್ಕರಿಸಿದೆ.
ಈ ಬಗ್ಗೆ ಮಾತನಾಡಿರುವ ಹರಿಯಾಣದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಧರಂಬೀರ್ ಸಿಂಗ್, ”ನೂಹ್-ಗುರುಗ್ರಾಮ ಗಡಿಯಲ್ಲಿ ಚೆಕ್‌ಪೋಸ್‌ಗಳನ್ನು ಸ್ಥಾಪಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳಿಗೆ ಪ್ರವೇಶ ನೀಡುವ ಮುನ್ನ ತಪಾಸಣೆ ನಡೆಸುತ್ತಿದ್ದೇವೆ. ಗುರುತಿನ ಚೀಟಿ ಹೊಂದಿರುವ ಜನರಿಗೆ ಮಾತ್ರ ನೂಹ್ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಜುಲೈನಲ್ಲಿ ನೂಹ್ ಜಿಲ್ಲೆಯಾದ್ಯಂತ ಕೋಮು ಹಿಂಸಾಚಾರದಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಹಾಗಾಗಿ ಜಿಲ್ಲಾಡಳಿತವು ಶೋಭಾ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿದೆ. ನೂಹ್ ಜಿಲ್ಲೆಯಷ್ಟೇ ಅಲ್ಲದೇ ಅಂತರ ಜಿಲ್ಲಾ ಗಡಿಗಳು ಮತ್ತು ಅಂತರರಾಜ್ಯ ಗಡಿಗಳಲ್ಲೂ ಭದ್ರತೆ ಬಿಗಿಗೊಳಿಸಲಾಗಿದೆ.
ನೂಹ್ ಜಿಲ್ಲೆ ಪ್ರವೇಶಿಸುವ ಎಲ್ಲ ದಾರಿಗಳನ್ನು ಬಂದ್ ಮಾಡಲಾಗಿದೆ. ಮಲ್ಕಾ ದೇವಸ್ಥಾನಕ್ಕೆ ಹೋಗುವ ಮಾರ್ಗವನ್ನು ಸಹ ಮುಚ್ಚಲಾಗಿದೆ. ಆದರೆ, ಕೆಎಂಪಿ ಎಕ್ಸ್‌ಪ್ರೆಸ್‌ವೆ ಮತ್ತು ದೆಹಲಿ ಮುಂಬೈ ಎಕ್ಸ್‌ಪ್ರೆಸ್ ವೇನಲ್ಲಿ ಸಂಚಾರ ಮುಂದುವರಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.


