Homeಅಂಕಣಗಳುಬಿಕ್ಕಟ್ಟಿನಲ್ಲೂ ಸೆಕ್ಯುಲರ್ ಮೌಲ್ಯಗಳನ್ನು ಬಿಡದ ಎತ್ತರದ ನಾಯಕ ಸಿದ್ದರಾಮಯ್ಯ

ಬಿಕ್ಕಟ್ಟಿನಲ್ಲೂ ಸೆಕ್ಯುಲರ್ ಮೌಲ್ಯಗಳನ್ನು ಬಿಡದ ಎತ್ತರದ ನಾಯಕ ಸಿದ್ದರಾಮಯ್ಯ

- Advertisement -
- Advertisement -

ಕರ್ನಾಟಕದಲ್ಲಿ ನಡೆದ ಕಳೆದ ಎರಡು ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳಲ್ಲಿ ಅತಿ ಹೆಚ್ಚು ಅಟ್ಯಾಕ್ ಆದವರು ಯಾರು ಎಂಬ ಪ್ರಶ್ನೆ ಹಾಕಿಕೊಂಡರೆ ಒಂದು ಹೆಸರು ಸುಲಭವಾಗಿ ಗೋಚರಿಸುತ್ತದೆ. ಆ ದಾಳಿ ಅವರ ಮೇಲೆ ನಡೆದದ್ದು, ಅವರ ಮೇಲೆ ಯಾವುದೋ ಕೇಸು ಇದೆಯೆಂತಲ್ಲ ಅಥವಾ ಅವರ ವಿರುದ್ಧ ಯಾವುದೋ ಭಾರಿ ಭ್ರಷ್ಟಾಚಾರದ ಅರೋಪ ತನಿಖೆಯಾಗುತ್ತಿದೆಯೆಂದೂ ಅಲ್ಲ; ಬದಲಿಗೆ ಅವರ ಸೈದ್ಧಾಂತಿಕ ಸ್ಪಷ್ಟತೆ ಮುಖ್ಯ ಕಾರಣ; ಉಳಿದೆಲ್ಲರಿಗಿಂತಲೂ, ಮತ್ತು ಅವರು ಪ್ರತಿನಿಧಿಸುವ ಪಕ್ಷಕ್ಕಿಂತಲೂ ಆ ಸ್ಪಷ್ಟತೆ ವಿರೋಧಿ ಪಾಳಯಕ್ಕೆ ಅಪಾಯಕಾರಿಯಾಗಿ ತೋರಿತ್ತು. ಹೀಗೆ ವಿರೋಧ ಪಕ್ಷಗಳಿಗೆ ಮತ್ತವರ ಬೆಂಬಲಿಗರಿಗೆ ಸಿಂಹಸ್ವಪ್ನವಾಗಿ ಕಾಡುವ, ತಮ್ಮ ಪಕ್ಷದ ಬಹುಪಾಲು ಬೆಂಬಲಿಗರಿಗೆ ಹೀರೋವಾಗಿ ಕಾಣುವ, ’ಮಾಸ್ ಲೀಡರ್’ ನುಡಿಗಟ್ಟಿಗೆ ಅನ್ವರ್ಥವಾಗಿರುವ ಸಿದ್ದರಾಮಯ್ಯನವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ 20 ಮೇ 2023ರಂದು ಪ್ರಮಾಣ ವಚನ ತೆಗೆದುಕೊಂಡರು. ಪ್ರಮಾಣವಚನದ ದಿನದಂದು ಸಿದ್ದರಾಮಯ್ಯನವರ ಚಿತ್ರವನ್ನು ಹೊತ್ತ ಹಳದಿ ಬಾವುಟಗಳು ಅಸಂಖ್ಯಾತವಾಗಿ ರಾರಾಜಿಸಿದ್ದು, ಒಬಿಸಿ ಕುರುಬ ಸಮುದಾಯಕ್ಕೆ ಸೇರಿದ ಮುಖಂಡನೊಬ್ಬನ ಈ ಜನಪ್ರಿಯತೆಗೆ ಮತ್ತೊಂದು ಸಾಕ್ಷಿಯಾಯಿತು.

ಸ್ವಾತಂತ್ರ್ಯ ಬಂದ ವರ್ಷವೇ, ಆಗಸ್ಟ್ ತಿಂಗಳಲ್ಲಿಯೇ ಜನಿಸಿದವರು ಸಿದ್ದರಾಮಯ್ಯ; ಭಾರತ ಅಮೃತಮಹೋತ್ಸವನ್ನು ಆಚರಿಸಿಕೊಳ್ಳುತ್ತಿರುವಾಗಲೇ, ಸಿದ್ದರಾಮಯ್ಯನವರಿಗೂ 75 ತುಂಬಿದ ಸಂಭ್ರಮದಲ್ಲಿ ಅವರ ಬೆಂಬಲಿಗ ಬಳಗ ದಾವಣಗೆರೆಯಲ್ಲಿ ’ಸಿದ್ದರಾಮೋತ್ಸವ’ವವನ್ನು ಸೆಪ್ಟಂಬರ್ 2022ರಲ್ಲಿ ಆಯೋಜಿಸಿತ್ತು. ಇದಕ್ಕೆ ನಡೆಯುತ್ತಿದ್ದ ಉತ್ಸಾಹದ ಸಿದ್ಧತೆಗಳನ್ನು ಮತ್ತು ಬೆಂಬಲಿಗರ ಜೋಷ್ ಗಮನಿಸಿದ ಕಾಂಗ್ರೆಸ್ ಪಕ್ಷದ ವರಿಷ್ಠರು ಇದನ್ನು ಪಕ್ಷದ ಕಾರ್ಯಕ್ರಮವನ್ನಾಗಿ ಬದಲಾಯಿಸಿಕೊಂಡರು. ಕಾರ್ಯಕ್ರಮ ಶುರುವಾಗುವ ಮುಂಜಾನೆಯೇ ರಾಜ್ಯದಾದ್ಯಂತ ಮೂಲೆಮೂಲೆಗಳಿಂದ ಜನ ಬಂದು ಸೇರುವುದಕ್ಕೆ ಪ್ರಾರಂಭಿಸಿದಾಗ ಹೆದ್ದಾರಿಯಲ್ಲಿಯೇ ಮೈಲುಗಟ್ಟಲೆ ಟ್ರಾಫಿಕ್ ಜಾಮ್ ಆಯಿತು. ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮುಂದೆ ಹಲವು ದಿನಗಳ ಕಾಲ ಚರ್ಚೆಯಾಗುವಂತಾಯಿತು. ಎಂದಿನಂತೆ ವಿರೋಧ ಪಕ್ಷಗಳು ಹಲುಬಿದವು. ಆದರೆ, ಕಾಂಗ್ರೆಸ್ ಪಕ್ಷದ ಚುನಾವಣಾ ಸಮರಕ್ಕೆ ಇದು ಶುಭಾರಂಭವೆಂದೇ ಬಹುತೇಕ ಪ್ರಚಾರ ಪಡೆದುಕೊಂಡಿತು. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಕ್ಲೇಮ್ ಮಾಡಿಕೊಳ್ಳುವ ಸಾಮರ್ಥ್ಯ ಇದೆಯೇ ಎಂಬ ಪ್ರಶ್ನೆಗೆ ಇದು ಬ್ರೇಕ್ ಹಾಕಿತು.

ಒಬ್ಬ ಮುಖಂಡ ಹೀಗೆ ಪ್ರಚಂಡ ಜನನಾಯಕನಾಗಿ ಹೇಗೆ ಬೆಳೆಯುತ್ತಾನೆ ಎಂಬುದನ್ನು ವಿವರಿಸುವುದು ಸುಲಭವಲ್ಲ. ವೈಯಕ್ತಿಕ ವರ್ಚಸ್ಸು, ಸುದೀರ್ಘ ಜನಪರ ರಾಜಕಾರಣ, ಮೋಡಿ ಮಾಡುವ ಮಾತುಗಾರಿಕೆ ಇವೆಲ್ಲವೂ ಒಂದು ಮಟ್ಟಿಗೆ ಕಾರಣವಾದರೂ, ನಮ್ಮಂತಹ ದೇಶದಲ್ಲಿ ವಿವಿಧ ಸಮುದಾಯಗಳ, ವಿವಿಧ ವರ್ಗಗಳ ಜನರ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶಗಳನ್ನು ಮತ್ತು ಜನರ ಆಶೋತ್ತರಗಳನ್ನು ಅರ್ಥ ಮಾಡಿಕೊಂಡು, ಅಧಿಕಾರ ನೀತಿ ನಿರೂಪಣೆಗಳನ್ನು ಎಲ್ಲರ ಸಮಷ್ಠಿ ಹಿತಕ್ಕಾಗಿ ರೂಪಿಸುವ ಬದ್ಧತೆ ಮತ್ತು ಕ್ರಿಯಾಶೀಲತೆ ಬಹುಶಃ ಮುಖ್ಯವಾದೀತು. ಈ ಆಯಾಮದಲ್ಲಿ ಬಹುಶಃ ಸಿದ್ದರಾಮಯ್ಯನವರು ಕರ್ನಾಟಕದ ಹಲವು ಮುಂಚೂಣಿ ಮುಖಂಡರ ಸಾಲಿನಲ್ಲಿ ನಿಲ್ಲುತ್ತಾರೆ. ಬಹುಶಃ ಇದೇ ಕಾರಣಕ್ಕೂ ಅವರನ್ನು ದೇವರಾಜ ಅರಸ್ ಅವರ ಜೊತೆಗೆ ಆಗಾಗ ಹೋಲಿಕೆ ಮಾಡಲಾಗುತ್ತದೆ.

2023ರ ಚುನಾವಣಾ ಪೂರ್ವಕ್ಕೆ ಸಿದ್ದರಾಮಯ್ಯನವರು ಸ್ಪರ್ಧಿಸಬೇಕಿದ್ದ ಕ್ಷೇತ್ರದ ಆಯ್ಕೆ ಕಗ್ಗಂಟಾಗಿತ್ತು. ಬಾದಾಮಿ, ಕೋಲಾರ ಹೀಗೆ ಹಲವು ಹೆಸರುಗಳು ಕೇಳಿಬಂದು ಕೊನೆಗೆ ತಮ್ಮ ಮಗ ಯತೀಂದ್ರ 2018ರಲ್ಲಿ ಗೆದ್ದಿದ್ದ ವರುಣಾ (ಹಿಂದೆ ಸಿದ್ದರಾಮಯ್ಯ ಇಲ್ಲಿ ಎರಡು ಬಾರಿ ಗೆದ್ದಿದ್ದರು) ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದರು. ಸಿದ್ದರಾಮಯ್ಯನವರನ್ನು ಕಟ್ಟಿಹಾಕಿದರೆ ಅರ್ಧ ಕೆಲಸ ಮುಗಿದಂತೆ ಎಂದು ನಂಬಿದ್ದ ಬಿಜೆಪಿ ಆ ಕ್ಷೇತ್ರಕ್ಕೆ ಸೋಮಣ್ಣನವರನ್ನು ನಿಲ್ಲಿಸಿತ್ತು. ಈ ಹೈವೋಲ್ಟೇಜ್ ಕ್ಷೇತ್ರದ ಜನಾಭಿಪ್ರಾಯ ಸಮೀಕ್ಷೆ ನಡೆಸಲು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ವರುಣಾವನ್ನು ಒಂದು ದಿನದ ಮಟ್ಟಿಗೆ ಸುತ್ತು ಹಾಕಿದ್ದೆ. ಕಳೆದ ಕೆಲವು ದಶಕಗಳಿಂದ ಸಾಂದರ್ಭಿಕವಾಗಿ ಬಿಜೆಪಿ ಕಡೆಗೆ ವಾಲಿರುವ ಲಿಂಗಾಯತ ಸಮುದಾಯ ಗೊಂದಲದಲ್ಲಿದ್ದುದು (ಅವರಲ್ಲೂ ಸಿದ್ದರಾಮಯ್ಯನವರ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ತಿಳಿಸಿದವರು ಹಲವರಿದ್ದರು) ಬಿಟ್ಟರೆ ಬಹುತೇಕ ಎಲ್ಲ ಸಮುದಾಯಗಳ ಜನರು ಸಿದ್ದರಾಮಯ್ಯನವರ ಪರವಾಗಿದ್ದುದು ನಿಚ್ಚಳವಾಗಿ ಎದ್ದುಕಾಣುತ್ತಿತ್ತು. ಒಂದು ಹಳ್ಳಿಯಲ್ಲಿ ಸಿಕ್ಕ ದಲಿತ ಎಡಗೈ ಸಮುದಾಯದ ಹಿರಿಯ ಜೀವಿಯೊಬ್ಬರು ತಾವು ಜೀತ ಮಾಡುತ್ತಿದ್ದ ಕಾಲದಲ್ಲಿದ್ದ ಪರಿಸ್ಥಿತಿ; ಇಂದಿರಾ ಗಾಂಧೀ-ದೇವರಾಜ ಅರಸ್ ಅದಕ್ಕೆ ಮುಕ್ತಿ ದೊರಕಿಸಿದ್ದು; ಅದರಿಂದ ಘನತೆಯಿಂದ ಬದುಕಲು ಸಾಧ್ಯವಾದದ್ದು- ಈ ಎಲ್ಲವನ್ನೂ ವಿವರಿಸುತ್ತಿದ್ದಂತೆ ಒಮ್ಮೆಗೇ ಸಿದ್ದರಾಮಯ್ಯನವರ ಕಾಲಕ್ಕೆ ಜಂಪ್ ಆಗಿ- ಅವರ ಕಾಲದಲ್ಲಿ ಇನ್ನಷ್ಟು ಘನತೆಯಿಂದ ಬದುಕಲು ಸಾಧ್ಯವಾಯಿತು, ಊಟ ಮಾಡಲು ಅಕ್ಕಿ ದೊರಕಿತು, ಗ್ರಾಮ ಪಂಚಾಯತಿಯಲ್ಲಿ ಒಂದಷ್ಟು ಮನೆಗಳು ಬಂದವು- ಹೀಗೆ ನೆನಪಿಸಿಕೊಂಡರು. ಸಿದ್ದರಾಮಯ್ಯನವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೂಪಿಸಿದ ಕೆಲವು ಯೋಜನೆಗಳು, ಅದರಲ್ಲೂ ಅನ್ನಭಾಗ್ಯ ಎಂಬ 10ಕೆಜಿ ಪಡಿತರ ಅಕ್ಕಿಯ ಯೋಜನೆ ಇಂದು ಜನಜನಿತವಾಗಿದೆ. ಇದು ಉಳ್ಳವರ ನಡುವೆ, ಶೋಷಕ ಸಮುದಾಯಗಳ ನಡುವೆ ಸಿದ್ದರಾಮಯ್ಯ ವಿಲನ್ ಆಗುವುದಕ್ಕೂ ಕಾರಣವಾಗಿದೆ.

ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊದಲ ಸ್ಪೀಕರ್ ಯು.ಟಿ. ಖಾದರ್

ಹೀಗಿದ್ದರೂ ಕೆಲವು ಸಮುದಾಯಗಳು 2018ರಲ್ಲಿ ಸಿದ್ದರಾಮಯ್ಯನವರನ್ನು ಆ ಮಟ್ಟದಲ್ಲಿ ವಿರೋಧಿಸಿದ್ದು ಏಕೆ ಎಂಬ ಪ್ರಶ್ನೆಯನ್ನು ಹತ್ತುಹಲವು ಆಯಾಮಗಳಲ್ಲಿ ಚರ್ಚಿಸಲಾಗುತ್ತದೆ. ದಲಿತ ಸಮುದಾಯಗಳ ಒಂದು ಸೆಕ್ಷನ್ ಸಿದ್ದರಾಮಯ್ಯನವರನ್ನು ವಿರೋಧಿಸುವುದಕ್ಕೆ ತಮ್ಮ ಸಂಪುಟದಿಂದ ಹಿರಿಯ ಮುಖಂಡ ಶ್ರೀನಿವಾಸ ಪ್ರಸಾದ್ ಅವರನ್ನು ತೆಗೆದುಹಾಕಿದ್ದು ಮತ್ತು ಮುಂದೆ ಪ್ರಸಾದ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದು ಒಂದು ಮುಖ್ಯ ಕಾರಣವಾಗಿ ನೀಡುತ್ತಾರೆ. ಆಗ ಅವರ ಜಾಗದಲ್ಲಿ ದಲಿತ ಸಮುದಾಯದವರೇ ಆದ ಪ್ರಿಯಾಂಕ ಖರ್ಗೆ ಸಚಿವರಾದರು. ಈ ಸಂಗತಿ ಯಾಕೋ ದಲಿತ ಸಮುದಾಯವನ್ನು ಅಷ್ಟು ಕನ್ವಿನ್ಸ್ ಮಾಡಲೇ ಇಲ್ಲ. ಆದರೂ, ಈ ಚುನಾವಣೆಯಲ್ಲಿ ಈ ಕೋಪ ತಣ್ಣಗಾದಂತೆ ಕಂಡಿತು. ಇನ್ನು ಒಳಮೀಸಲಾತಿಯ ಬಗ್ಗೆ ತಾವು ಮುಖ್ಯಮಂತ್ರಿಯಾಗಿ ಯಾವುದೇ ನಿರ್ಣಾಯಕ ಕ್ರಮ ತೆಗೆದುಕೊಳ್ಳಲಿಲ್ಲ ಎಂಬ ಅಂಶವೂ ಮಾದಿಗ ಸಮುದಾಯವನ್ನು ಕೆರಳಿಸಿತ್ತು. ಬಿಜೆಪಿಯ ದಲಿತ ವಿರೋಧಿ ಮನೋಧೋರಣೆಯ ಅರಿವಾದಂತೆ ಸಿದ್ದರಾಮಯ್ಯನವರ ಮೇಲಿದ್ದ ಈ ಕೋಪವೂ ತುಸು ಕಡಿಮೆಯಾದಂತೆ ಭಾಸವಾಗುತ್ತಿದೆ. ಹಿಂದಿನ ತಮ್ಮ ಸಂಪುಟದಲ್ಲಿ ಒಳಮೀಸಲಾತಿಗೆ ತಮ್ಮದೇ ಕೆಲವು ಸಚಿವರ ವಿರೋಧವಿತ್ತು ಎಂಬ ಕಾರಣದ ಹೊರತಾಗಿಯೂ, ಸಿದ್ದರಾಮಯ್ಯನವರ ಮುತ್ಸದ್ಧಿತನ ಒಳಮೀಸಲಾತಿ ಅನುಷ್ಠಾನಕ್ಕೆ ಮುಂದಾಗಬೇಕಿತ್ತು ಎಂದು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಕಾಟಾಚಾರಕ್ಕೆ ಶಿಫಾರಸ್ಸು ಮಾಡಿರುವ ಒಳಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದಕ್ಕೆ, ಈ ಅವಧಿಗಾದರೂ ಸಿದ್ದರಾಮಯ್ಯ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆಂಬ ಅಪಾರ ನಿರೀಕ್ಷೆಯಿದೆ. ಇನ್ನು ಅವರು ಕಳೆದ ಅವಧಿಯಲ್ಲಿ ನಡೆಸಿದ ಜಾತಿಗಣತಿಯನ್ನು ಯಾವ ಕಾರಣಕ್ಕೆ ಸಾರ್ವಜನಿಕಗೊಳಿಸಲಿಲ್ಲವೆಂಬುದು ಇಂದಿಗೂ ಮಿಸ್ಟರಿಯಾಗಿಯೇ ಉಳಿದಿದೆ. ಈ ಅವಧಿಯಲ್ಲಿ ಅದನ್ನು ಸಾರ್ವಜನಿಕಗೊಳಿಸುವ ಅಥವಾ ಹೊಸದಾದ ಜಾತಿಗಣತಿಯನ್ನು ನಡೆಸಿ, ಚುನಾವಣೆಯಲ್ಲಿ ಪ್ರಾಮಿಸ್ ಮಾಡಿದಂತೆ ಮೀಸಲಾತಿಯನ್ನು 75%ಗೆ ಹೆಚ್ಚಿಸುವ ಕಡೆಗೆ ಸಿದ್ದರಾಮಯ್ಯನವರ ಹೆಜ್ಜೆಯನ್ನು ರಾಜ್ಯ ನಿರೀಕ್ಷಿಸುತ್ತಿದೆ.

ಶ್ರೀನಿವಾಸ ಪ್ರಸಾದ್

2013ರಲ್ಲಿ ಒಕ್ಕಲಿಗ-ಲಿಂಗಾಯತ-ಬ್ರಾಹ್ಮಣರ (ಜಿಲೇಬಿ) ಕನ್ಸಾಲಿಡೇಷನ್ ಸಿದ್ದರಾಮಯ್ಯನವರ ವಿರುದ್ಧ ಒಂದು ಅನೈತಿಕ ಅಲೆಯನ್ನೇ ಸೃಷ್ಟಿಸಿತ್ತು. ಜೆಡಿಎಸ್‌ನಿಂದ ಉಚ್ಚಾಟನೆಗೊಂಡ ನಂತರ ಇನ್ನೂ ದೊಡ್ಡ ನಾಯಕನಾಗಿ ಹೊರಹೊಮ್ಮಿದ್ದನ್ನು ಒಕ್ಕಲಿಗ ಸಮುದಾಯದ ಕೆಲವು ಮುಖಂಡರು ಸಹಿಸಿಕೊಳ್ಳದೇ ಹೋದರು; ಸಿದ್ದರಾಮಯ್ಯನವರನ್ನು ಒಕ್ಕಲಿಗ ಸಮುದಾಯದ ವಿರೋಧಿ ಎಂಬಂತೆ ಚಿತ್ರಿಸತೊಡಗಿದರು. ಹಳೇ ಮೈಸೂರು ಭಾಗದಲ್ಲಿ ಸಾಂಪ್ರದಾಯಿಕವಾಗಿ ಜೆಡಿಎಸ್ ಮತದಾರರಾಗಿರುವ ಒಕ್ಕಲಿಗ ಸಮುದಾಯದ ದೊಡ್ಡ ಸಂಖ್ಯೆಯ ಮತದಾರರು ಇದರಿಂದ ಪ್ರಭಾವಿತರಾಗಿದ್ದರೇನೋ ಎಂದೆನಿಸುವಂತಹ ಫಲಿತಾಂಶವಂತೂ ಹೊರಬಿದ್ದಿತ್ತು. ಆದರೆ 2023ರಲ್ಲಿ ಬಿಜೆಪಿ ಸೃಷ್ಟಿಸುತ್ತಿರುವ ಅವಾಂತರಗಳನ್ನು ಅರಿತ ಸಮುದಾಯ ಸಿದ್ದರಾಮಯ್ಯನವರ ವಿರುದ್ಧದ ಪೂರ್ವಾಗ್ರಹಗಳನ್ನು ಕಳಚಿಕೊಂಡಿದೆಯೋ ಇಲ್ಲವೋ, ಆ ಸಮುದಾಯದ ಬಹಳಷ್ಟು ಮತಗಳು ಕಾಂಗ್ರೆಸ್‌ಗೆ ಹೊರಳಿರುವ ಸಾಧ್ಯತೆಯಂತೂ ಇದೆ. ಲಿಂಗಾಯತ ಧರ್ಮದ ಮಾನ್ಯತೆಯ ಪ್ರತಿಪಾದನೆಯನ್ನು ಮಾಡಿದ್ದಕ್ಕೆ ಮತ್ತೆ ಲಿಂಗಾಯತ ಸಮುದಾಯದ ನಡುವೆ ಸಿದ್ದರಾಮಯ್ಯನವರನ್ನು ಖಳನಾಯಕನಂತೆ ಬಿಂಬಿಸಲಾಗಿತ್ತು. ಸ್ವಪಕ್ಷದವರೇ ಈ ನಡೆಯ ಉದಾತ್ತತೆಯನ್ನು ಅರಿತು ಸಮರ್ಥಿಸಿಕೊಳ್ಳಲು ಹಿಂಜರಿದರು. ಇದರಿಂದ ಉನ್ನತ ಮಟ್ಟದ ಆಶಯವುಳ್ಳ ಸಾಮಾಜಿಕ ಇಂಜಿನಿಯರಿಂಗ್ ನಡೆಯೊಂದಕ್ಕೆ ಸೋಲಾಯಿತು. ಇನ್ನು ಮೌಢ್ಯ ವಿರೋಧಿ ಕಾಯ್ದೆಯನ್ನು ತರಲು ಪ್ರಯತ್ನಿಸಿದ್ದು, ಸದಾ ಸೆಕ್ಯುಲರ್ ಆಶಯಗಳನ್ನು ಪ್ರತಿಪಾದಿಸುತ್ತಿದ್ದುದು ’ವೈದಿಕ ಮತದಾರರ ಮತ್ತು ಮೀಡಿಯಾ’ಗಳ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂತು. ಸಿದ್ದರಾಮಯ್ಯನವರ ಬಗ್ಗೆ ಅಪಪ್ರಚಾರ ಮಾಡಲು ಅವು ಶತಾಯಗತಾಯ ನಿಂತವು.

ಇವೆಲ್ಲಾ ಸಂಗತಿಗಳನ್ನೂ ಮತ್ತೆ 2023ರ ಚುನಾವಣೆಯಲ್ಲಿಯೂ ಸಿದ್ದರಾಮಯ್ಯನವರ ವಿರುದ್ಧ ಮೊಳಗಿಸಲು ವಿರೋಧ ಪಕ್ಷಗಳು ಪ್ರಯತ್ನಿಸಿದವು; ಅದರೆ ಅವು ಮತದಾರರನ್ನು ಪ್ರಭಾವಿಸಲಿಲ್ಲ. ಬಹುಮತ ಬಂದಮೇಲೆ, ಮುಖ್ಯಮಂತ್ರಿ ಯಾರಾಗಬೇಕು ಎಂಬ ಹಗ್ಗಜಗ್ಗಾಟದಲ್ಲಿ ಸಿದ್ದರಾಮಯ್ಯನವರ ಎಲ್ಲಾ ಸಾಂಪ್ರದಾಯಿಕ ವಿರೋಧಿಗಳು (ಬಹುತೇಕ ಜಿಲೇಬಿ ಬಣದವರು) ಅವರ ವಿರುದ್ಧ ನಿಂತರು. ಇವೆಲ್ಲವನ್ನೂ ಸೆಣಸಿ, ಕಾಂಗ್ರೆಸ್‌ನ ಹೆಚ್ಚಿನ ಶಾಸಕರ ಬೆಂಬಲವನ್ನು ಪಡೆದುಕೊಂಡಿರುವ ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಹಂಬಲ್ ಹಿನ್ನೆಲೆಯಿಂದ ಬಂದು ಅಧಿಕಾರದ ವಿವಿಧ ಹಂತಗಳಲ್ಲಿ ಛಾಪು ಮೂಡಿಸಿ ಇಲ್ಲಿಯವರೆಗೂ 13 ಬಜೆಟ್ಟುಗಳನ್ನು ಮಂಡಿಸಿ, ಸಾಮಾನ್ಯನಿಗೂ ಅರ್ಥಶಾಸ್ತ್ರದ ಪಾಠ ಹೇಳಬಲ್ಲ ಸಿದ್ದರಾಮಯ್ಯನವರ ಮೇಲೆ ಅಪಾರ ನಿರೀಕ್ಷೆಗಳಿವೆ. ಅಹಿಂದ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರು ಕೋಮುವಾದದ ವಿರುದ್ಧ ದೇಶದಾದ್ಯಂತ ಇಂತಹ ಸೆಕ್ಯುಲರ್ ನೆಲೆಯನ್ನು ಹುಟ್ಟುಹಾಕಬಲ್ಲರೇ ಎಂಬ ನಿರೀಕ್ಷೆಯೂ ಇದೆ. ಕರ್ನಾಟಕದಲ್ಲಿ ಸಮಾನತೆಯನ್ನು ತರಬಲ್ಲ ಇನ್ನಷ್ಟು ಜನಪರ ನೀತಿಗಳನ್ನು ಸಿದ್ದರಾಮಯ್ಯನವರ ಮುಂದಾಳತ್ವದ ಈ ಸರ್ಕಾರದಿಂದ ನಿರೀಕ್ಷಿಸಬಹುದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...