ಗೋಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತಾ ಕಾಯಿದೆ (NSA) ಅಡಿಯಲ್ಲಿ ಮೂವರನ್ನು ಬಂಧಿಸಿರುವುದನ್ನು ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್, ಒಬ್ಬರ ಮನೆಯೊಳಗೆ ಗೋಹತ್ಯೆ ಮಾಡುವುದು ಸಾರ್ವಜನಿಕ ಆದೇಶದ ಉಲ್ಲಂಘನೆ ಎಂದು ಪರಿಗಣಿಸಲಾಗದು ಎಂದು ಎಂದು ಹೇಳಿದೆ.
ಕಳೆದ ವರ್ಷದ ಜುಲೈನಲ್ಲಿ ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಗೋಹತ್ಯೆ ಆರೋಪದಡಿ ಬಂಧಿತರಾದ ಇರ್ಫಾನ್, ರಹತ್‌ಉಲ್ಲಾ ಮತ್ತು ಪರ್ವೇಜ್ ಅವರ ಕುಟುಂಬಗಳು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಸರೋಜ್ ಯಾದವ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
” ಒಬ್ಬರ ಸ್ವಂತ ಮನೆಯಲ್ಲಿ ಮುಂಜಾನೆ ಗೋವನ್ನು ರಹಸ್ಯವಾಗಿ ಕೊಂದಿರುವ ಆರೋಪದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಇದು ಬಡತನ ಅಥವಾ ಉದ್ಯೋಗದ ಕೊರತೆ ಅಥವಾ ಹಸಿವಿನ ಕಾರಣದಿಂದಾಗಿ ನಡೆದಿರಬಹುದು ಎನಿಸುತ್ತದೆ. ಬಹುಶಃ ಇದು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಒಳಗೊಂಡಿದೆ. ಸಾರ್ವಜನಿಕ ಸುವ್ಯವಸ್ಥೆ ಆದೇಶಗಳ ಉಲ್ಲಂಘನೆಗಳನ್ನು ಒಳಗೊಂಡಿಲ್ಲ” ಎಂದು ಹೇಳಿದೆ.
ಇದನ್ನೂ ಓದಿ: ಗೋಹತ್ಯೆ ತಡೆ ಕಾನೂನಿನ ದುರ್ಬಳಕೆ: ಪೊಲೀಸರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಗರಂ
ಮೂವರ ಬಿಡುಗಡೆಗೆ ಆದೇಶಿಸಿರುವ ನ್ಯಾಯಾಲಯ “ಅರ್ಜಿದಾರರು ಭವಿಷ್ಯದಲ್ಲಿ ಇಂತಹ ಚಟುವಟಿಕೆಯನ್ನು ಪುನರಾವರ್ತಿಸುತ್ತಾರೆ ಎಂದು ಪೊಲೀಸರು ಆರೋಪಿಸಬಹುದು. ಆದರೆ ಪುನರಾವರ್ತನೆ ಮಾಡುತ್ತಾರೆ ಎಂಬ ತೀರ್ಮಾನಕ್ಕೆ ಯಾವುದೇ ವಸ್ತು, ಸನ್ನಿವೇಶವಿಲ್ಲ” ಎಂದಿದೆ.
NSA ಅಡಿಯಲ್ಲಿ ಬಂಧಿತರಾಗಿರುವ ಮೂವರ ವಿರುದ್ಧ 1955 ರ ಯುಪಿ ಗೋಹತ್ಯೆ ತಡೆ ಕಾಯಿದೆ ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ, 2013 ರ ಸೆಕ್ಷನ್ 7 ರ ಅಡಿಯಲ್ಲಿ ವಿವಿಧ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಜೊತೆಗೆ 1986 ರ ಯುಪಿ ದರೋಡೆಕೋರರ ಕಾಯ್ದೆ ಮತ್ತು ಸಾಮಾಜಿಕ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ನ್ಯಾಯಾಲಯದ ದಾಖಲೆಯ ಪ್ರಕಾರ, ಇರ್ಫಾನ್, ರಹತ್‌ಉಲ್ಲಾ ಮತ್ತು ಪರ್ವೇಜ್ ಮತ್ತು ಬಿಸ್ವಾನ್ ಗ್ರಾಮದ ಇಬ್ಬರು ಮಾರಾಟ ಮಾಡಲು ಗೋಮಾಂಸವನ್ನು ಕತ್ತರಿಸುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ನಂತರ ತಲಗಾಂವ್ ಪೊಲೀಸ್ ಅಧಿಕಾರಿಗಳು ಆರೋಪಿಗಳ ಮನೆಯ ಮೇಲೆ ಮುಂಜಾನೆ 5.30 ಕ್ಕೆ ದಾಳಿ ನಡೆಸಿ, ಪರ್ವೇಜ್ ಮತ್ತು ಇರ್ಫಾನ್ ಅವರನ್ನು ಗೋಮಾಂಸದೊಂದಿಗೆ ಸ್ಥಳದಲ್ಲೇ ಬಂಧಿಸಲಾಗಿತ್ತು.
ಇದನ್ನೂ ಓದಿ: ಅಸ್ಸಾಂನಲ್ಲಿ ಗೋಹತ್ಯೆ, ಸಾಗಾಣಿಕೆಗೆ ತಡೆ: ಮಸೂದೆ ಮಂಡಿಸಿದ ಸಿಎಂ ಹಿಮಂತ ಬಿಸ್ವಾ


