ನವದೆಹಲಿ: ಲಡಾಖ್‌ನಲ್ಲಿ ಸೈನಿಕರು ಪ್ರಯಾಣಿಸುತ್ತಿದ್ದ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ನದಿಗೆ ಬಿದ್ದ ಪರಿಣಾಮ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಮತ್ತು ಎಂಟು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
ಲೇಹ್‌ನಿಂದ 150 ಕಿಮೀ ದೂರದಲ್ಲಿರುವ ಕಿಯಾರಿಯಲ್ಲಿ ಸಂಜೆ 4.45ಕ್ಕೆ ಅಪಘಾತ ಸಂಭವಿಸಿದೆ ಎಂದು ಲೇಹ್‌ನಲ್ಲಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪಿಡಿ ನಿತ್ಯಾ ಪಿಟಿಐಗೆ ತಿಳಿಸಿದ್ದಾರೆ.
ಟ್ರಕ್ ನಲ್ಲಿ ಒಟ್ಟು 10 ಮಂದಿ ಸೈನಿಕರಿದ್ದರು. ಘಟನೆಯಲ್ಲಿ ಓರ್ವ ಸೈನಿಕ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ಸೇನೆಯ ವಿಭಾಗೀಯ ಪ್ರಧಾನ ಕಛೇರಿಯು ಪೂರ್ವ ಲಡಾಖ್‌ನ ಕಿಯಾರಿಯಲ್ಲಿ ನೆಲೆಗೊಂಡಿದೆ.
ಟ್ರಕ್‌ನಲ್ಲಿ 10 ಸೈನಿಕರು ಪ್ರಯಾಣಿಸುತ್ತಿದ್ದರು ಮತ್ತು ಬೆಂಗಾವಲು ಪಡೆಯಲ್ಲಿ ಐದು ವಾಹನಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ನಂತರ, ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಎಲ್ಲಾ ಗಾಯಗೊಂಡ ಸೈನಿಕರನ್ನು ಸೇನಾ ವೈದ್ಯಕೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಸ್ಪತ್ರೆಯಲ್ಲಿ ಮೊದಲು ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಇದಾದ ನಂತರ ಮತ್ತೋರ್ವ ಯೋಧ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದೀಗ ಓರ್ವ ಯೋಧ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ: ಉತ್ತರಪ್ರದೇಶ: ಸಚಿವರ ಕಾರಿಗೆ ಗೋವುಗಳಿಂದ ಮುತ್ತಿಗೆ ಹಾಕಿಸಿದ ಗ್ರಾಮಸ್ಥರು


