ತೆಲಂಗಾಣದ ವೈಎಸ್‌ಆರ್ ಪಕ್ಷದ ಸಂಸ್ಥಾಪಕಿ ವೈ.ಎಸ್. ಶರ್ಮಿಳಾ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ದೆಹಲಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ನಾನು ಇಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಉಭಯ ನಾಯಕರೊಂದಿಗೆ ಸಕಾರಾತ್ಮಕ ಚರ್ಚೆ ನಡೆದಿದೆ” ಎಂದು ಹೇಳಿದ್ದಾರೆ.
”ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಕ್ಷಣಗಣನೆ ಆರಂಭವಾಗಿದೆ” ಎಂದು ಶರ್ಮಿಳಾ ವಾಗ್ದಾಳಿ ನಡೆಸಿದರು.
ಶರ್ಮಿಳಾ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಲು ಮತ್ತು ತೆಲಂಗಾಣದಲ್ಲಿ ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ. ಆದರೆ, ರಾಜ್ಯದ ಕಾಂಗ್ರೆಸ್ ಘಟಕವು ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಶರ್ಮಿಳಾ ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೆಲಂಗಾಣದಲ್ಲಿ ಶರ್ಮಿಳಾ ಹೊಂದಿರುವ ರಾಜಕೀಯ ಪ್ರಭಾವದ ಕುರಿತು ಕಾಂಗ್ರೆಸ್‌ನ ಹೈಕಮಾಂಡ್‌ಗೆ ಅನುಮಾನವಿರುವ ಕಾರಣ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿಕೊಳ್ಳುವ ದಿಸೆಯಲ್ಲಿ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸೇರಿ ಪಕ್ಷದ ಹಲವು ಮುಖಂಡರು ಶರ್ಮಿಳಾ ಅವರ ಸೇರ್ಪಡೆಯನ್ನು ವಿರೋಧಿಸಿದ್ದಾರೆ. ಶರ್ಮಿಳಾ ಆಂಧ್ರಪ್ರದೇಶದವರು. ಅವರ ತಂದೆ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ತೆಲಂಗಾಣ ರಾಜ್ಯ ರಚನೆಯನ್ನು ವಿರೋಧಿಸಿದ್ದರು ಎಂದು ನಾಯಕರು ಹೇಳಿದ್ದಾರೆ.
ಇತ್ತೀಚೆಗೆ ಶರ್ಮಿಳಾ ಅವರು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಆನಂತರ ಶರ್ಮಿಳಾ ಅವರ ಪಕ್ಷವು ಕಾಂಗ್ರೆಸ್ ಜೊತೆ ವಿಲೀನವಾಗುವ ಕುರಿತ ಸುದ್ದಿಗಳು ಹರಿದಾಡುತ್ತಿವೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರ ತಂಗಿಯಾಗಿರುವ ಶರ್ಮಿಳಾ ಅವರು ಜಗನ್ ಮುಖ್ಯಸ್ಥರಾಗಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಹೊರಬಂದು, 2021ರಲ್ಲಿ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಸ್ಥಾಪಿಸಿದರು. ಬಳಿಕ, ಶರ್ಮಿಳಾ ತಾಯಿ ವಿಜಯಮ್ಮ ಅವರೂ ಮಗಳ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಅಮೇಥಿಯಿಂದಲೇ ರಾಹುಲ್ ಗಾಂಧಿ ಸ್ಪರ್ಧೆ: ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್


