ಭಾರತ ಸರ್ಕಾರ ತನ್ನ ಬೊಕ್ಕಸವನ್ನು ತೆರೆಯಬೇಕು ಮತ್ತು ನಿರ್ಗತಿಕರಿಗೆ ಸಹಾಯ ಮಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.
ಸ್ಪೀಕ್ ಅಪ್ ಇಂಡಿಯಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿರುವ ಸೋನಿಯಾ ಗಾಂಧಿ, ಕೊರೊನ ವೈರಸ್ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸಾಂಕ್ರಾಮಿಕ ರೋಗ ಮತ್ತು ಕಂಪನಿಗಳ ಮುಚ್ಚುವಿಕೆಯಿಂದ ಕಾರ್ಮಿಕರ ಜೀವನೋಪಾಯಕ್ಕೆ ತೊಂದರೆಯಾಗಿದೆ. ಜೊತೆಗೆ ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಸನ್ನಿವೇಶದಲ್ಲೂ ಕೇಂದ್ರ ಸರ್ಕಾರ ಜನರ ನೋವು ಮತ್ತು ಆಘಾತದ ಕೂಗಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಮುಂದಿನ ಆರು ತಿಂಗಳವರೆಗೆ ಪ್ರತಿ ಕುಟುಂಬದ ಖಾತೆಗೆ ತಿಂಗಳಿಗೆ 7,500 ರೂಗಳನ್ನು ನೇರ ವರ್ಗಾವಣೆ ಮಾಡಬೇಕು. ತಕ್ಷಣಕ್ಕೆ 10 ಸಾವಿರ ರೂಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರ ಸುರಕ್ಷತೆ ಮತ್ತು ಅವರು ಸ್ವಗ್ರಾಮಗಳಿಗೆ ಹಿಂದಿರುಗಲು ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಬೇಕು. ಉದ್ಯೋಗಾವಕಾಶ ಒದಗಿಸಬೇಕು.. ಪಡಿತರ ನೀಡುವ ಜೊತೆಗೆ ಹಳ್ಳಿಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕೊಡಬೇಕು. ಕೆಲಸ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು ಎಂದು ಸೋನಿಯಾ ಒತ್ತಾಯಿಸಿದರು.
ಸಾಲಗಳಿಗೆ ಬದಲಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆರ್ಥಿಕ ಪರಿಹಾರವನ್ನು ನೀಡಬೇಕು. ಇದರಿಂದ ಕೋಟ್ಯಂತರ ಉದ್ಯೋಗಗಳು ಉಳಿಯುತ್ತವೆ ಮತ್ತು ದೇಶದ ಪ್ರಗತಿಯಾಗುತ್ತದೆ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಓದಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧ FIR ದಾಖಲು


