Homeಮುಖಪುಟಹಿಜಾಬ್ ವಿವಾದ ವಿಶೇಷ ವರದಿ: ಬಹುತ್ವ ಸಂಸ್ಕೃತಿಯ ಭಾರತದಲ್ಲಿ ಮತೀಯ ರಾಜಕಾರಣ

ಹಿಜಾಬ್ ವಿವಾದ ವಿಶೇಷ ವರದಿ: ಬಹುತ್ವ ಸಂಸ್ಕೃತಿಯ ಭಾರತದಲ್ಲಿ ಮತೀಯ ರಾಜಕಾರಣ

- Advertisement -
- Advertisement -

ರಾಜ್ಯದ ಉಡುಪಿಯ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಡಿಸೆಂಬರ್ ಕೊನೆಯ ವಾರದಲ್ಲಿ ಆರಂಭವಾದ ಹಿಜಾಬ್ ವಿವಾದ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಿಜಾಬ್ ಧರಿಸಿದ 6 ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದು, ಅವರು ಪ್ರತಿಭಟನೆ ನಡೆಸಿದ್ದು ಸುದ್ದಿಯಾಗಿತ್ತು. ಇಲ್ಲೇ ತಣ್ಣಗಾಗಬೇಕಿದ್ದ ಒಂದು ವಿಷಯ ಮತ್ತೆ ಕುಂದಾಪುರ ಕಾಲೇಜಿನಲ್ಲಿ ಕೋಮುಬಣ್ಣಕ್ಕೆ ತಿರುಗಿತು.

ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಏಕಾಏಕಿ ಪ್ರವೇಶ ನಿರಾಕರಿಸಲಾಯಿತು. ಸ್ವತಃ ಕಾಲೇಜಿನ ಪ್ರಾಂಶುಪಾಲರೇ ಗೇಟ್ ಮುಚ್ಚಿದ್ದರು. ಹಲವು ವರ್ಷಗಳಿಂದ ಹಿಜಾಬ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಒಮ್ಮೆಲೇ ಆತಂಕಕ್ಕೆ ದೂಡಿತ್ತು. ವಿದ್ಯಾರ್ಥಿನಿಯರು ಪರಿಪರಿಯಾಗಿ ಬೇಡಿಕೊಂಡರೂ ಕಾಲೇಜು ಮಂಡಳಿ ಒಪ್ಪಲಿಲ್ಲ. ಬಳಿಕ ಇವರೆಲ್ಲಾ ಗೇಟ್ ಬಳಿಯೇ ಪ್ರತಿಭಟನೆಗೆ ಕುಳಿತುಕೊಂಡರು.

ಮರುದಿನ ಬಂದ ವಿದ್ಯಾರ್ಥಿನಿಯರಿಗೆ ಮತ್ತೆ ಪ್ರವೇಶ ನಿರಾಕರಿಸಲಾಯಿತು. ಆಗ ಬೇರೆ ಕೆಲವು ವಿದ್ಯಾರ್ಥಿಗಳು ಇವರಿಗೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಕುಳಿತಿದ್ದರು. ಇದೇ ದಿನ ಹಿಜಾಬ್ ವಿರೋಧಿಸಿ ಹಲವು ಮಂದಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದು ಪ್ರತಿಭಟನೆ ಆರಂಭಿಸಿದರು. ಕೇಸರಿ ಶಾಲು ಧರಿಸಿ ಬಂದವರಿಗೂ ಪ್ರವೇಶ ನಿರಾಕರಿಸಲಾಯಿತು.

ಬಳಿಕ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದರು. ರಾಜ್ಯದ ಉಡುಪಿ, ಚಿಕ್ಕಮಗಳೂರು, ಮಂಗಳೂರು, ಭದ್ರಾವತಿ, ಕುಂದಾಪುರ, ಬೆಳಗಾವಿ, ಹಾಸನ, ಮಂಡ್ಯ, ಶಿವಮೊಗ್ಗ ಮತ್ತು ಹೊನ್ನಾಳಿಗೂ ಈ ಹಿಜಾಬ್-ಕೇಸರಿ ಶಾಲು ವಿವಾದ ಕಾಡ್ಗಿಚ್ಚಿನಂತೆ ಹಬ್ಬಿದೆ.

ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರು ಈ ಬಗ್ಗೆ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಹಿಜಾಬ್ ಧರಿಸಲು ಅವಕಾಶ ನೀಡಲು ಮನವಿ ಮಾಡಿದ್ದರು. ವಿಚಾರಣೆ ನಡೆಯುತ್ತಿದೆ. ಈ ನಡುವೆ ಶಿಕ್ಷಣ ಇಲಾಖೆಯ ಸುತ್ತೊಲೆಯಲ್ಲಿ ಸಮವಸ್ತ್ರ ಕಡ್ಡಾಯವಲ್ಲ ಎಂಬ ವಿಷಯ ಮತ್ತೆಮತ್ತೆ ಚರ್ಚೆಗೆ ಬಂದಿತ್ತು. ಹೈಕೋರ್ಟ್‌ಲ್ಲಿ ಅರ್ಜಿ ಹಾಕಿದ ಬಳಿಕ ರಾಜ್ಯ ಸರ್ಕಾರ ಸಮವಸ್ತ್ರ ಕಡ್ಡಾಯಗೊಳಿಸಿತ್ತು. ಬಿಜೆಪಿ ನಾಯಕರು ಹಿಜಾಬ್ ವಿರುದ್ಧ ಹಲವು ಹೇಳಿಕೆಗಳನ್ನು ನೀಡಿದ್ದರು. ರಾಜ್ಯದಲ್ಲಿ ಹಿಜಾಬ್ ವಿರುದ್ಧ ಪರ-ವಿರೋಧ ಚರ್ಚೆ ನಡೆಯುತ್ತಿದೆ.

ಅಕ್ಕಮಹಾದೇವಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಸಬಿಹಾ ಭೂಮಿಗೌಡ ‘ನ್ಯಾಯಪಥ’ದ ಜೊತೆಗೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬುರ್ಖಾದಿಂದ ಹಿಜಾಬ್‌ಗೆ ಬರುವುದು ಒಂದು ಬಿಡುಗಡೆಯ ನೆಲೆಯಾಗಿತ್ತು

“ಉಡುಪಿಯೊಂದರಲ್ಲಿ ಆರಂಭಗೊಂಡ ಈ ವಿವಾದ ಇಡೀ ಕರ್ನಾಟಕಕ್ಕೆ ವ್ಯಾಪಿಸಿದೆ. ಕೆಲವು ದಿನಗಳ ಹಿಂದಿನವರೆಗೆ ಹಿಜಾಬ್ ಹಾಕಿಕೊಂಡು ಬರುತ್ತಿದ್ದುದು ಸಮಸ್ಯೆಯಾಗಿರಲಿಲ್ಲ. ಇವತ್ತು ಇದು ಸಮಸ್ಯೆಯಾಗಿದೆ. ಇಡೀ ವಿದ್ಯಮಾನದಲ್ಲಿ ಆಘಾತ ತರುವುದು ಏನಂದರೆ, ಶಿಕ್ಷಣರಂಗದಲ್ಲಿಯೂ ಬಲಪಂಥೀಯ ಚಿಂತನೆಗಳು ಇಷ್ಟು ಆಳವಾಗಿ ಬೇರೂರಿದೆ ಎಂಬ ಕಹಿ ಸತ್ಯವನ್ನು ಈ ಹಿಜಾಬ್ ವಿವಾದ ತಿಳಿಸಿರುವುದು.

“ವಿದ್ಯಾರ್ಥಿನಿಯರಿಗೆ ತರಗತಿಗೆ ಬಾರದಂತೆ ತಡೆದವರು ಆ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಅಥವಾ ಮುಖ್ಯಸ್ಥರಿರಬಹುದು. ಆದರೆ, ಉಳಿದ ಅಧ್ಯಾಪಕರು ಮೌನವಾಗಿರುವುದು ಹೆಚ್ಚು ಕಾಡುತ್ತಿದೆ. ಇವರು ಅಸಹಾಯಕರಾಗಿದ್ದಾರೋ ಅಥವಾ ಈ ವಿಚಾರದಲ್ಲಿ ಅವರದ್ದೂ ಸಮಸ್ಯೆಯಿದೆಯೋ? ಸಮ್ಮತಿಯಿದೆಯೋ? ಅಥವಾ ಅವರಿಗೆ ಏನು ಅನ್ನಿಸುತ್ತಿಲ್ಲವೋ, ಹೇಳಬೇಕು ಅನಿಸಿದರೂ ಸರ್ಕಾರದ ಭಯ ಕಾಡುತ್ತಿದೆಯೋ ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ನಮಗೆ ಊಹೆಗಳಿವೆ. ಈ ಸಮ್ಮತಿ-ಮೌನ ಈ ವಿಚಾರವನ್ನು ಮತ್ತಷ್ಟು ಕರಾಳಗೊಳಿಸುತ್ತಿದೆ” ಎನ್ನುತ್ತಾರೆ.

“ವಿದ್ಯಾರ್ಥಿಗಳ ನೆಲೆಯಿಂದ ನೋಡುವುದಾದರೆ, ಮೊದಲ ದಿನ ಆರು ಜನ ಹಿಜಾಬ್ ಧರಿಸಿ ಬಂದಿದ್ದರು. ವಿರೋಧ ಬಂದ ಬಳಿಕ 20 ಜನರಾದರು. ಹಿಜಾಬ್ ಅನಿವಾರ್ಯ ಅಲ್ಲ ಅಂದುಕೊಂಡಿದ್ದವರು ಕೂಡ ಹಾಕಬೇಕಾದ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಹಿಜಾಬ್ ಹಾಕುವ ಒತ್ತಡ ವೈಯಕ್ತಿಕ, ಕೌಟುಂಬಿಕ, ಧಾರ್ಮಿಕ ಮುಖಂಡರ ನೆಲೆಯಿಂದ ಆಗಿರಬಹುದು. ಆದರೆ, ಬುರ್ಖಾದಿಂದ ಹಿಜಾಬ್‌ಗೆ ಬರುವುದೇ ಒಂದು ಬಿಡುಗಡೆಯ ನೆಲೆಯಾಗಿತ್ತು. ಆ ಬಿಡುಗಡೆಯನ್ನು ಅವರು ಅನುಭವಿಸುತ್ತಿದ್ದ ಹೊತ್ತಿನಲ್ಲಿ, ಈ ಸಮಸ್ಯೆ, ಬಲಪಂಥೀಯರ ನಡೆಯು ಅವರ ಸ್ವಾತಂತ್ರ್ಯ, ಆಯ್ಕೆಯನ್ನ ದಾಟಿ ಮತ್ತೆ ಮೂಲಕ್ಕೆ, ಅಂದರೆ ಹಿಜಾಬ್, ಬುರ್ಖಾದ ವರ್ತುಲಕ್ಕೆ ಕಟ್ಟಿಹಾಕುತ್ತಿದೆ. ಇದು ವಿಶಾದಕರ ಮತ್ತು ಕಳವಳಕಾರಿ ಸಂಗತಿ” ಎನ್ನುತ್ತಾರೆ ಸಬಿಹಾ.

ಸಬಿಹಾ ಭೂಮಿಗೌಡ

“ಆ ಹೆಣ್ಣು ಮಕ್ಕಳು, ಹೆತ್ತವರ ಮಾತು ಮೀರುವಂತಿಲ್ಲ. ಅವರು ಹಿಜಾಬ್ ಹಾಕಲು ಹೇಳಿರಬಹುದು. ಶಿಕ್ಷಕರು ಹಾಕಿಕೊಂಡು ಬರಬೇಡಿ ಎನ್ನುತ್ತಿದ್ದಾರೆ. ಇನ್ನೊಂದೆಡೆ ಸಾಂಪ್ರದಾಯಿಕ ಧಾರ್ಮಿಕ ಗುಂಪು ನಿರ್ದೇಶನ ನೀಡುತ್ತಿದ್ದಾರೆ. ಈ ಇಕ್ಕಟ್ಟುಗಳ ನಡುವೆ ತಮಗೇನು ಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗದ ಒಂದು ಸ್ಥಿತಿಯನ್ನು ತಲುಪಿದ್ದಾರೆ. ಅವರ ವಯಸ್ಸು ಕೂಡ ಚಿಕ್ಕದು. ತಕ್ಷಣದ ಸ್ಥಿತಿಯಲ್ಲಿ ವ್ಯಾಪಕವಾಗಿ ಯೋಚನೆ ಮಾಡಲು ಸಾಧ್ಯವಾಗುತ್ತಿಲ್ಲ. ಕೇವಲ ಹಿಜಾಬ್ ಧರಿಸಿದ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಕೇಸರಿ ಶಾಲು ಧರಿಸಿದ ಹೆಣ್ಣು ಮಕ್ಕಳ ಬಗ್ಗೆಯೂ ನಾನು ಇದನ್ನೆ ಹೇಳುತ್ತಿದ್ದೇನೆ. ತಮ್ಮಷ್ಟಕ್ಕೆ ತಾವು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗದ ಸ್ಥಿತಿಯೇ ಸಮಸ್ಯೆಯನ್ನು ಶೋಚನೀಯಗೊಳಿಸುತ್ತಿದೆ” ಎನ್ನುತ್ತಾರೆ ಸಬಿಹಾ ಭೂಮಿಗೌಡ.

“ಸದ್ಯ, ಹಿಜಾಬ್ ಹಾಕಿದ ಹೆಣ್ಣು ಮಕ್ಕಳನ್ನೇ ನೋಡಿ. ನಿನ್ನೆವರೆಗೆ ಅವರ ಪ್ರೀತಿಯ ಶಿಕ್ಷಕರಾಗಿದ್ದವರು, ಪ್ರೀತಿಯ ಗೆಳತಿಯರಾಗಿದ್ದವರು, ಅಥವಾ ಕಾಲೇಜಿನಲ್ಲಿ ಒಳ್ಳೆಯ ವಾತಾವರಣವಿದ್ದು, ನಿನ್ನೆವರೆಗೆ ಅವರಿಗೆ ಆಪ್ತರಾದವರು.. ಇಂದು ಇಡೀ ಗುಂಪಿಗೆ ಅನ್ಯರಾಗಿದ್ದಾರೆ. ಈ ಅನ್ಯತೆಯನ್ನ ನೋಡಿ ಆ ವಿದ್ಯಾರ್ಥಿಗಳಿಗೆ ಇವರೆ ನಮ್ಮ ಶಿಕ್ಷಕರಾ.. ಇವರು ನಮ್ಮ ಗೆಳತಿಯರಾ.. ಎಂದು ಅನ್ನಿಸುವುದಿಲ್ಲವೇ? ಇಷ್ಟು ದಿನ ಜೊತೆಯಲ್ಲಿ ಇದ್ದವರು, ಭಾವನೆಗಳನ್ನು ಹಂಚಿಕೊಂಡವರು, ಬುತ್ತಿ ಹಂಚಿಕೊಂಡವರು, ಗೆಳೆಯತಿರಾಗಿದ್ದವರು ದ್ವೇಷ ಕಾರುತ್ತಿದ್ದಾರೆ. ಕೆಲವೊಂದು ವಿಡಿಯೋಗಳಲ್ಲಿ ನೋಡಬಹುದು. ಅವರ ನಕಾರತ್ಮಕತೆ ನೋಡಿದರೆ ನಮಗೇ ಗಾಬರಿಯಾಗುತ್ತದೆ. ಈ ಸಮಸ್ಯೆ ಮುಗಿದ ಮೇಲೆ ಎದುರಾಗಬಹುದಾದ ಕರಾಳ ದಿನಗಳ ಬಗ್ಗೆ ದಿಗಿಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದುವರೆದು “ವೈಯಕ್ತಿಕವಾಗಿ ಹೇಳುವುದಾದರೆ, ಧಾರ್ಮಿಕ ಚಹರೆ ಇಲ್ಲದಿರುವ ಬದುಕು ನನಗೆ ಆದರ್ಶ. ಆದರೆ, ನನ್ನಷ್ಟು ಸೆಕ್ಯುಲರ್ ಆಗಿರುವಂತಹ ವಾತಾವರಣವೋ, ಪ್ರೌಢತೆಯೋ ಎಲ್ಲರಿಗೂ ಇಲ್ಲ. ಹಾಗಾಗಿ ಮತ್ತು ಭಾರತದಂತಹ ಜಾತಿ ವ್ಯವಸ್ಥೆಯ ಮತೀಯ ವಾತಾವರಣದಲ್ಲಿ ಸೆಕ್ಯುಲರ್ ಆಗಿ ಕಾಣಿಸಿಕೊಳ್ಳುವುದು, ಆಶಿಸುವುದು ಕಷ್ಟ ಸಾಧ್ಯ. ನನಗೆ ಸಾಧ್ಯವಿರುವುದು ಬೇರೆ ಕಾರಣಕ್ಕೆ” ಎಂದರು.

“ಈ ವಿದ್ಯಮಾನದಲ್ಲಿ ಆ ಹೆಣ್ಣು ಮಕ್ಕಳಿಗೆ ಓದು ಬಿಡಬೇಡಿ ಎಂದು ಹೇಳಬೇಕು. ಈ ಸಮಯದ ದಾಳಗಳಾಗಬೇಡಿ ಎನ್ನುವ ಸಲಹೆ ನೀಡಲು ಬಯಸುತ್ತೇನೆ. ಅದು ಹೆತ್ತವರಾಗಿರಬಹುದು, ಧಾರ್ಮಿಕ ಮುಖಂಡರಾಗಿರಬಹುದು ಅಥವಾ ರಾಜಕಾರಣಿಗಳಾಗಿರಬಹುದು. ಇನ್ನಷ್ಟು ವಿಷಮಭಾವ ಬೆಳೆಯುವ ಮುಂಚೆ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಮುಂದಾಗಿ ಎನ್ನುತ್ತೇನೆ. ತುಂಬಾ ಆಕಸ್ಮಿಕವಾಗಿ, ಅದೃಷ್ಟದಿಂದ ಅವರಿಗೆ ಶಿಕ್ಷಣದ ಅವಕಾಶ ಸಿಕ್ಕಿದೆ. ಇದನ್ನು ಕಳೆದುಕೊಳ್ಳಬೇಡಿ ಎಂದು ಹೇಳುತ್ತೇನೆ. ಇದು ಸೋಲಲ್ಲ. ತಾತ್ಕಾಲಿಕ ವಿರಾಮ ಎಂದುಕೊಳ್ಳಿ. ನಿಮ್ಮ ಈ ಪ್ರಯತ್ನದಿಂದ ನಮ್ಮ ನಡುವಿನ ಬಲಪಂಥೀಯಯರ ವ್ಯಾಘ್ರ ಮುಖ ಅನಾವರಣ ಮಾಡಿದ್ದಿರಿ. ಅದಕ್ಕೆ ಅಭಿನಂದನೆ ಹೇಳುತ್ತೇನೆ. ಆದರೆ, ಅಷ್ಟೇ ನೋವು ನಿಮ್ಮ ಗೆಳೆತಿಯರ ಬಗ್ಗೆ, ಪರಿಸರದ ಬಗ್ಗೆ ಆಗಿದೆ. ಅದಕ್ಕೆ ವಿಶಾದವಿದೆ. ಆದರೆ, ಶಿಕ್ಷಣ ಬಿಡಬೇಡಿ. ಈ ಪ್ರತಿಭಟನೆ, ಮೆರವಣಿಗೆ ಬಿಟ್ಟು ತರಗತಿಗೆ ಹೋಗಿ ಎನ್ನುತ್ತೇನೆ” ಎಂದು ಕಳಕಳಿ ವ್ಯಕ್ತಪಡಿಸುತ್ತಾರೆ.

ಬಹುಸಂಖ್ಯಾತರಿಗೆ ಅಲ್ಪ ಸಂಖ್ಯಾತರನ್ನು ರಕ್ಷಿಸುವ ಜವಾಬ್ದಾರಿಯಿರುತ್ತದೆ

ಘಟನೆಯ ಬಗ್ಗೆ ಹೈಕೋರ್ಟ್ ವಕೀಲರು, ಸಾಮಾಜಿಕ ಕಾರ್ಯಕರ್ತರು ಆಗಿರುವ ರಾಜಲಕ್ಷ್ಮಿ ಅಂಕಲಗಿ ಹೇಳುವಂತೆ, “ನಮ್ಮ ದೇಶದಲ್ಲಿ ಮೈನಾರಿಟಿ ಸಮುದಾಯ ಹೆಚ್ಚು ಇನ್ಸೆಕ್ಯೂರಿಟಿ ಫೀಲ್ ಆದಾಗ ಹುಟ್ಟುಕೊಂಡಿದ್ದು ಹಿಜಾಬ್. ಇದು ತುಂಬ ಹಳೆಯದು ಅಲ್ಲ, ಹೊಸದು ಅಲ್ಲ. ಇಂತಹದ್ದು ರಾಜಮಹಾರಾಜರ ಕಾಲದಿಂದಲೂ ಬಂದಿದೆ. ಆಗ ಹೆಣ್ಣು ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಿಂದೂ ಧರ್ಮದಲ್ಲಿ ಪರದ ಪದ್ಧತಿ ಬಂದಿತ್ತು. ಈಗ ಈ ಪ್ರಜಾಪ್ರಭುತ್ವದಲ್ಲಿಯೂ ನಾವು ನಮ್ಮ ದೇಶದಲ್ಲಿ ಅಸುರಕ್ಷತೆ ಹೆಚ್ಚಾಗಿರುವ ಕಾರಣಕ್ಕೆ ಈ ಹಿಜಾಬ್, ಬುರ್ಖಾ ಜಾಸ್ತಿಯಾಗುತ್ತಿದೆ” ಎಂದಿದ್ದಾರೆ.

“ಬಹುಸಂಖ್ಯಾತರಿಗೆ ಅಲ್ಪ ಸಂಖ್ಯಾತರನ್ನು ರಕ್ಷಿಸುವ ಜವಾಬ್ದಾರಿಯಿರುತ್ತದೆ. ಸಂವಿಧಾನ ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕು ನೀಡಿದೆ. ಮೂಲಭೂತ ಹಕ್ಕುಗಳಲ್ಲಿ ಶಿಕ್ಷಣದ ಹಕ್ಕಿದೆ. ನೀನು ಹೀಗಿದ್ದೀಯ ಎಂಬ ಕಾರಣಕ್ಕೆ ಯಾರು ಕೂಡ ಶಿಕ್ಷಣ ನಿರಾಕರಿಸುವಂತಿಲ್ಲ” ಎನ್ನುತ್ತಾರೆ.

ರಾಜಲಕ್ಷ್ಮಿ ಅಂಕಲಗಿ

“ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಅದು ಶಿಕ್ಷಣದ ಹಕ್ಕು, ಧಾರ್ಮಿಕ ಹಕ್ಕು, ನಿಮ್ಮ ಜೀವನ ಸಂಗಾತಿಯ ಆಯ್ಕೆಯ ಹಕ್ಕು ಹೀಗೆ. ಇದರ ಜೊತೆಗೆ ಶತಮಾನಗಳಿಂದ ಹಿಂದುಳಿದವರು, ಸೌಲಭ್ಯಗಳಿಂದ ವಂಚಿತರಾದವರನ್ನು ಮುನ್ನಲೆಗೆ ತರುವ ಉದ್ದೇಶದಿಂದ ಕೆಲವೊಂದು ಜನರಿಗೆ ವಿಶೇಷ ಸೌಲಭ್ಯಗಳನ್ನು ನೀಡಿದೆ. ಇದು ಬಿಟ್ಟರೆ ದೇಶದಲ್ಲಿ ಎಲ್ಲರು ಸಮಾನರು. ಹಿಜಾಬ್ ಹಾಕುವುದು ಅವರ ಆಯ್ಕೆಯ ಸ್ವಾತಂತ್ರ್ಯ. ಇಷ್ಟು ದಿನ ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದಾರೆ. ಈಗಲೂ ಬರುತ್ತಿದ್ದಾರೆ. ಆದರೆ, ಹಿಜಾಬ್ ಧರಿಸಬಾರದು ಎಂಬ ಹೇರಿಕೆ ಮಾಡುತ್ತಿರುವುದು ಪಟ್ಟ ಭದ್ರ ಹಿತಾಸಕ್ತಿಗಳಿಂದ” ಎಂದಿದ್ದಾರೆ ರಾಜಲಕ್ಷ್ಮಿ ಅಂಕಲಗಿ.

ಮುಂದುವರೆದು, “ಹಿಂದು ಮುಸ್ಲಿಂ, ಕ್ರಿಶ್ಚಿಯನ್ ಅಲ್ಲದೇ ಬೇರೆ ಯಾವುದೇ ಧರ್ಮವಿರಲಿ ಈ ಕಟ್ಟುಪಾಡುಗಳು ಹೆಣ್ಣುಮಕ್ಕಳ ಮೇಲೇಯೇ ಇದೆ. ತಮ್ಮ ಸಮುದಾಯದ ಗಂಡು ಮಕ್ಕಳಿಗೆ ಗೌರವ ಕೊಡುವುದನ್ನು ಕಲಿಸದೇ, ಸುಲಭವಾಗಿ ಗುರಿಯಾಗುವ ಹೆಣ್ಣಿನ ಮೇಲೆ ಕಟ್ಟಳೆಗಳನ್ನು ಹೇರಲಾಗಿದೆ. ಸದ್ಯ ಹಿಜಾಬ್ ಕೂಡ ಆ ಧರ್ಮದ ಹೆಣ್ಣು ಮಕ್ಕಳು ಮನೆಯ ಹೊಸ್ತಿಲು ಬಿಟ್ಟು ಹೊರ ಬರಲು ಕಾರಣವಾಗಿದೆ” ಎಂದಿದ್ದಾರೆ.

ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಮುಚ್ಚಲು ಹಿಜಾಬ್ ವಿವಾದ ತಂದಿದ್ದಾರೆ

ಈ ಸಮಸ್ಯೆ ಕುರಿತು ಮಾತನಾಡಿರುವ ಶಿಕ್ಷಣ ತಜ್ಞರಾದ ಡಾ. ವಿ ಪಿ ನಿರಂಜನಾರಾಧ್ಯ ಅವರು, “ಇದೊಂದು ಸೃಷ್ಟಿ ಮಾಡಿರುವ ವಿವಾದ. ಎರಡು ಎರಡೂವರೆ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಹಲವು ಜ್ವಂತ ಸಮಸ್ಯೆಗಳಿವೆ. ಈ ಸಾಂಕ್ರಾಮಿಕದ ಬಳಿಕ ಗ್ರಾಮೀಣ ಭಾಗದಲ್ಲಿನ ಶಾಲಾ-ಕಾಲೇಜುಗಳು ಸಾಕಷ್ಟು ಹಿಂದೆ ಉಳಿದಿವೆ. ಜೊತೆಗೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲ ಸೌಲಭ್ಯಗಳು, ಉಪನ್ಯಾಸಕರ ಸೌಲಭ್ಯಗಳಿಲ್ಲ. ಈ ಎಲ್ಲ ಸಮಸ್ಯೆಗಳು ಮುನ್ನೆಲೆಗೆ ಬಂದರೆ ಸಮಸ್ಯೆಯಾಗುತ್ತೆ ಎಂದು ಇಂತಹ ಭಾವನಾತ್ಮಕ, ಅಗತ್ಯವಿಲ್ಲದಂತಹ ಸಮಸ್ಯೆಗಳನ್ನು ಸೃಷ್ಟಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರನ್ನು ದಿಕ್ಕುತಪ್ಪಿಸುವುದು ಇದರ ಉದ್ದೇಶ” ಎಂದಿದ್ದಾರೆ.

“ಈ ಹಿಜಾಬ್ ಎನ್ನುವುದು ಇವತ್ತಿನದಲ್ಲ. ಈ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಸುಮಾರು ದಶಕಗಳಿಂದ ಇದನ್ನು ಧರಿಸುತ್ತಿದ್ದಾರೆ. ಕರ್ನಾಟಕವೊಂದೆ ಅಲ್ಲ, ಎಲ್ಲಾ ರಾಜ್ಯಗಳಲ್ಲಿ ಹಿಜಾಬ್ ಇದೆ. ನಿರ್ದಿಷ್ಠ ಸಮವಸ್ತ್ರದ ಮೇಲೆ ಒಂದು ಬಟ್ಟೆಯನ್ನು ಧರಿಸುತ್ತಾರೆ. ಇದು ತಪ್ಪಲ್ಲ. ಇದಿರಿಂದ ತನ್ನ ಘನತೆಯನ್ನು ಕಾಪಾಡಿಕೊಳ್ಳುತ್ತೇನೆ ಎಂದು ಅವರು ಅಂದುಕೊಂಡರೆ, ಅದನ್ನು ನಾವು ಗೌರವಿಸಬೇಕು. ನಾನು ಹೀಗೆ ಬದುಕಬೇಕು ಎನ್ನುವುದು ಆಕೆಯ ಮೂಲಭೂತ ಹಕ್ಕು. ಅದನ್ನು ವಿರೋಧಿಸಿ ನಾನು ಕೂಡ ಶಾಲು ಹಾಕಿಕೊಂಡು ಬರುತ್ತೇವೆ ಎಂದರ ಹೇಗೆ?” ಎಂದು ಪ್ರಶ್ನಿಸಿದ್ದಾರೆ.

“ರಾಜ್ಯದಲ್ಲಿ ಎಷ್ಟು ವರ್ಷಗಳಿಂದ ಕೇಸರಿ ಶಾಲು ಮತ್ತು ಎಷ್ಟು ವರ್ಷಗಳಿಂದ ಹಿಜಾಬ್ ಧರಿಸಲಾಗುತ್ತಿದೆ ಎಂಬ ಡೇಟಾ ಇದ್ದರೆ ಕೊಡಲಿ ಆಗ ಅವರ ನಿಜವಾದ ಮುಖ ತಿಳಿಯುತ್ತದೆ. ಇದು ದ್ವೇಷವನ್ನು ಬಿತ್ತುವ, ವಿಶೇಷವಾಗಿ ಶಾಲಾ ಕಾಲೇಜು ಹಂತಗಳಲ್ಲಿ ಮಕ್ಕಳಲ್ಲಿ ವಿಷ ಬೀಜ ಬಿತ್ತಿ, ಅಲ್ಪಸಂಖ್ಯಾತರನ್ನು ಅನ್ಯರನ್ನಾಗಿಸುವ ದ್ವೇಷದ ದಳ್ಳುರಿ ಇದು” ಎನ್ನುತ್ತಾರೆ.

“ಈ ಸಮುದಾಯದಲ್ಲಿ ಈಗಷ್ಟೇ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಆರಂಭಿಸಿದ್ದಾರೆ. ಅದು ಕೂಡ ಇವರಿಗೆ ಇಷ್ಟವಿಲ್ಲ. ಶಿಕ್ಷಣದಿಂದ ವಂಚಿಲಸಲು ಹೊಸಹೊಸ ಮಾರ್ಗ ಹುಡುಕುತ್ತಿದ್ದಾರೆ. ಸಂವಿಧಾನದ ಮೌಲ್ಯಗಳಾದ, ಬಹುತ್ವ, ಬಹು ಸಂಸ್ಕೃತಿ, ಬಹುಭಾಷೆ, ವೈವಿಧ್ಯತೆ ಬಿಟ್ಟು, ಇದನ್ನು ಹಿಂದೂ ರಾಷ್ಟ್ರ ಮಾಡುವ ಬೇರೆಬೇರೆ ಮಾರ್ಗ ಹುಡುಕುತ್ತಿದ್ದಾರೆ. ಇದಕ್ಕೆ ಹಿಜಾಬ್ ಕೂಡ ಸೇರಿದೆ. ಯಾರಿಗೂ ಸಮಸ್ಯೆಯಾಗದ ಅಂಶ ಹಿಜಾಬ್‌ಅನ್ನು ತೊಂದರೆ ಎಂದು ಬಿಂಬಿಸಿ ಕೋಮು ದಳ್ಳುರಿ ಬಿತ್ತುತ್ತಿದ್ದಾರೆ. ಇದು ಸ್ಪಷ್ಟವಾದ ರಾಜಕೀಯ ಅಜೆಂಡ”

“ಇವರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆಯಿಲ್ಲ. ಇದ್ದಿದ್ದರೆ ಕಾಲೇಜುಗಳಲ್ಲಿ ಉಪನ್ಯಾಸಕರ ಭರ್ತಿ, ಶೌಚಾಲಯ, ಕುಡಿಯುವ ನೀರು, ಪ್ರಯೋಗಾಲಯದ ವ್ಯವಸ್ಥೆ ಮಾಡುತ್ತಿದ್ದರು. ಪ್ರಧಾನಿ ಬೇಟಿ ಪಡಾವೋ ಬೇಟಿ ಬಚಾವೋ ಎನ್ನುತ್ತಾರೆ. ಅವರದ್ದೇ ಸರ್ಕಾರ ಇರುವ ಇಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದು ವ್ಯವಸ್ಥಿತವಾಗಿ ಮಾಡುತ್ತಿರುವ ರಾಜಕೀಯ ಪಿತೂರಿ. ವಿಶೇಷವಾಗಿ ಆ ವರ್ಗದ ಜನರ ಮೇಲೆ ದ್ವೇಷ ಬಿತ್ತುವ, ವ್ಯವಸ್ಥಿತವಾಗಿ ಅವರನ್ನು ಟಾರ್ಗೆಟ್ ಮಾಡುವ ಕೆಲಸಗಳು ನಡೆಯುತ್ತಿವೆ ಎಂದು ಈ ಸರಣಿ ಘಟನೆಗಳನ್ನು ವಿಶ್ಲೇಷಿಸುತ್ತಾರೆ”

ಡಾ. ವಿ ಪಿ ನಿರಂಜನಾರಾಧ್ಯ

“ಮೂಲಭೂತವಾದವನ್ನು ವಿರೋಧಿಸಬೇಕು. ಆದರೆ, ಇದಕ್ಕೂ ಮೂಲಭೂತವಾದಕ್ಕೂ ಸಂಬಂಧವಿಲ್ಲ. ಅವರು ಸಮವಸ್ತ್ರ ಧರಿಸುವುದಿಲ್ಲ ಎಂದು ಹೇಳಿಲ್ಲ. ಸಮವಸ್ತ್ರ ಹಾಕಿಲ್ಲ ಎಂದರೆ, ಅದು ನಿಯಮ ಉಲ್ಲಂಘನೆ. ಆದರೆ, ಅವರು ನಿಯಮ ಉಲ್ಲಂಘನೆ ಮಾಡಿಲ್ಲ, ಅವರು ಅದೇ ಕಲರ್ ಹಿಜಾಬ್ ಧರಿಸುತ್ತೇವೆ ಎಂದಿದ್ದಾರೆ”

“ಹಿಜಾಬ್ ವಿರೋಧದ ಬಗ್ಗೆ ಎಲ್ಲ ಪ್ರಜ್ಞಾವಂತರು ವಿರೋಧಿಸಬೇಕು. ಇದು ಮುಸ್ಲಿಮರ ಸಮಸ್ಯೆಯಲ್ಲ. ನಾಳೆ ನಮ್ಮ ಧರ್ಮದ ಹೆಣ್ಣು ಮಕ್ಕಳು ಜೀನ್ಸ್, ಶರ್ಟ್ ಹಾಕಿಕೊಂಡು ಹೋದಾಗ ಅದಕ್ಕೂ ವಿರೋಧ ಬರಬಹುದು. ಇವರು ನಿಜವಾದ ಸಮಸ್ಯೆಗಳನ್ನು ಬಗೆಹರಿಸುವುದರ ಬದಲು ಮತ್ತೊಂದು ಸಮಸ್ಯೆ ಸೃಷ್ಟಿಸಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ಈ ಕೋಮುವಾದಿಗಳು, ದೇಶ ವಿಭಜಕರ ವಿರುದ್ಧ ಹೋರಾಡಬೇಕಿದೆ” ಎಂದು ಕರೆ ನೀಡಿತ್ತಾರೆ.

ವಿವಾದದಲ್ಲಿ ಉಪನ್ಯಾಸಕರ ಮೌನದ ಕುರಿತು ಮಾತನಾಡಿರುವ ನಿರಂಜನಾರಾಧ್ಯ, “ಅವರು ಮೂಲಭೂತವಾಗಿ ನೈತಿಕ ಮೌಲ್ಯ ಕಳೆದುಕೊಂಡಿದ್ದಾರೆ. ನ್ಯಾಯದ ಪರವಾಗಿ, ವಿದ್ಯಾವಂತನಾಗಿ ಈ ದೇಶದ ಸಂವಿಧಾನದ ಪರವಾಗಿ, ಅದರ ಮೌಲ್ಯವನ್ನು ಎತ್ತಿಡಿಯಬೇಕೆಂಬ ಕನಿಷ್ಠ ಪ್ರಜ್ಞೆ ಅವರಿಗಿಲ್ಲ. ಸತ್ಯ ಹೇಳಿದರೆ ನನ್ನನ್ನು ಒಂದು ಗುಂಪಿಗೆ ಸೇರಿಸಬಹುದು. ಇದರಿಂದ ನನ್ನ ಕೆಲಸಕ್ಕೆ ತೊಂದರೆಯಾಗಬಹುದು ಎಂಬ ಸಂಕುಚಿತ ಮಟ್ಟಕ್ಕೆ ಇಳಿದಿದ್ದಾರೆ. ಒಬ್ಬ ವಿದ್ಯಾವಂತ ತನ್ನ ಪರಿಸರದಲ್ಲಿ ಏನಾದರೂ ನಡೆಯುತ್ತಿದ್ದರೆ, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿದು ತಪ್ಪಿನ ವಿರುದ್ಧ ದ್ವನಿ ಎತ್ತದಿದ್ದರೇ ನಾವು ಬದುಕಿದ್ದು ಪ್ರಯೋಜನವಿಲ್ಲ. ಅಂತಹವರನ್ನು ಪ್ರಜ್ಞಾವಂತರು ಎನ್ನಲು ಸಾಧ್ಯವಿಲ್ಲ. ಎಲ್ಲ ಶಿಕ್ಷಕರು ಪ್ರಗತಿಪರರು, ಸರಿ ತಪ್ಪುಗಳ ಬಗ್ಗೆ ಯೋಚಿಸುತ್ತಾರೆ ಎನ್ನಲಾಗದು. ಅವರಿಗೆ ಈ ಮೌಲ್ಯಗಳು ಸರಿಯೋ ತಪ್ಪೋ ಎಂದು ವಸ್ತುನಿಷ್ಠವಾಗಿ ಯೋಚಿಸುವ ಶಕ್ತಿ ಇಲ್ಲದಿದ್ದರೇ ಅವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?” ಎಂದು ಪ್ರಶ್ನಿಸುತ್ತಾರೆ.

ಒಟ್ಟಾರೆ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಕಾಲ  ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಹಾರಿಸುವ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಲಾಗಿದೆ. ಕ್ಲಲು ತೂರಾಟ ನಡೆದು ಮೂವರು ಗಾಯಗೊಂಡಿದ್ದಾರೆ. ಮತ್ತೊಂದೆಡೆ ವಿದ್ಯಾರ್ಥಿಗಳ ನಡುವೆ ಚಾಕು ಇರಿತ ನಡೆದಿದೆ. ಒಬ್ಬಂಟಿ ಮುಸ್ಲಿಂ ಹೆಣ್ಣು ಮಕ್ಕಳನ್ನು ಗುರಿಯಾಗಿಸಿ ಜೈ ಶ್ರೀರಾಮ್ ಘೋಷಣೆ ಕೂಗಲಾಗುತ್ತಿದೆ. ರಾಜ್ಯದ ಮುಂದಿನ ಭವಿಷ್ಯ ಎನ್ನಲಾಗುವ ಯುವಜನತೆ ಇಂದು ಕೋಮುವಾದದ ಕಂದರಕ್ಕೆ ಸಿಲುಕಿರುವುದು ನಿಜಕ್ಕೂ ದುರಂತವೇ ಸರಿ.


ಇದನ್ನೂ ಓದಿ: ಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...