ಅಮೆರಿಕ ಚುನಾವಣೆ ಆರಂಭವಾಗುತ್ತಿದ್ದಂತೆ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗಾಗಿ ಅವರ ಪೂರ್ವಜರಿದ್ದ ಹಳ್ಳಿಯಲ್ಲಿ ವಿಶೇಷ ಪೂಜೆ-ಪ್ರಾರ್ಥನೆಗಳು ನಡೆದಿವೆ. ಅವರ ಗೆಲುವಿಗಾಗಿ ಹಾರೈಸಿ ಹಳ್ಳಿಯ ರಸ್ತೆಗಳಲ್ಲಿ ಈ ಹಿಂದೆ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಇಂದು ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆದಿದೆ.
ದಕ್ಷಿಣ ಭಾರತದ ತಮಿಳುನಾಡಿನ ತುಲಸೇಂದ್ರಪುರಂ ಗ್ರಾಮಸ್ಥರು ಕಮಲ ಹ್ಯಾರಿಸ್ ಅವರ ಬ್ಯಾನರ್‌ಗಳನ್ನು ಹಾಕಿ, ದೇವಾಲಯಗಳಲ್ಲಿ ಸಾಲುಗಟ್ಟಿ ನಿಂತು ಪೂಜೆ ಮಾಡಿಸಿ ಆಕೆಯ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ.
ಚೆನ್ನೈಯಿಂದ ಸುಮಾರು 320 ಕಿ.ಮೀ ದೂರದಲ್ಲಿರುವ ತುಲಸೇಂದ್ರಪುರಂ, ಕಮಲಾ ಹ್ಯಾರಿಸ್ ಅಜ್ಜ ಪಿ.ವಿ. ಗೋಪಾಲನ್ ಶತಮಾನಕ್ಕೂ ಹಿಂದೆ ಜನಿಸಿದ ಊರು. ದಕ್ಷಿಣ ಏಷ್ಯಾದ ಮೊದಲ ಯುಎಸ್ ಸೆನೆಟರ್ ಎನಿಸಿಕೊಂಡಿರುವ ಕಮಲಾ ಹ್ಯಾರಿಸ್ ಅವರ ಸಾಧನೆ ಬಗ್ಗೆ ತುಲಸೇಂದ್ರಪುರಂ ನಿವಾಸಿಗಳು ಹೆಮ್ಮೆಯಿಂದ ಮಾತನಾಡುತ್ತಾರೆ. ಚುನಾವಣಾ ಫಲಿತಾಂಶಕ್ಕಾಗಿ ಅಮೆರಿಕನ್ನರಂತೆ ಇಲ್ಲಿನ ಜನರು ಕಾಯುತ್ತಿದ್ದಾರೆ.

ತಮ್ಮ ಕುಟುಂಬದೊಂದಿಗೆ ಹಳ್ಳಿಯ ಸಂಬಂಧವನ್ನು ವಿವರಿಸಿದ ಎಂ.ಎಸ್. ಹ್ಯಾರಿಸ್ ಅವರ ಚಿಕ್ಕಮ್ಮ ಡಾ.ಸರಳಾ ಗೋಪಾಲನ್ “ತುಲಸೇಂದ್ರಪುರಂ ಗ್ರಾಮ ದೇವರು ನನ್ನ ತಂದೆಯ ಕುಟುಂಬ ದೇವತೆ. ಕುಟುಂಬದಲ್ಲಿ ಮದುವೆ ಅಥವಾ ವಿಶೇಷ ಸಂದರ್ಭ ಬಂದಾಗಲೆಲ್ಲಾ ನಾವು ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿ: ಅಮೆರಿಕ ಚುನಾವಣೆ: ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ತಮಿಳುನಾಡಿನಿಂದ ಶುಭ ಹಾರೈಕೆ!
ಇಂದು ಗ್ರಾಮದಲ್ಲಿ ನಡೆಯುತ್ತಿರುವ ವಿಶೇಷ ಪೂಜೆ ಪ್ರಾರ್ಥನೆಗಳ ಬಗ್ಗೆ ನನಗೆ ತಿಳಿದಿದೆ ಎಂದು ಡಾ.ಸರಳಾ ಹೇಳಿದರು. “ನಾನು ಪ್ರತಿವರ್ಷ ದೇವಸ್ಥಾನಕ್ಕೆ ಹೋಗಿ ನಮ್ಮ ಕುಟುಂಬದ ಪ್ರತಿಯೊಬ್ಬರಿಗಾಗಿ ಪ್ರಾರ್ಥಿಸುತ್ತೇನೆ. ಈ ವರ್ಷ, ಕೊರೊನಾದಿಂದಾಗಿ ನಾನು ಹೋಗಲು ಸಾಧ್ಯವಾಗಲಿಲ್ಲ” ಎಂದು ತಿಳಿಸಿದರು.
ತುಲಸೇಂದ್ರಪುರಂ ದೇವಾಲಯದ ಫಲಕದಲ್ಲಿ ಇತರ ದಾನಿಗಳ ಜೊತೆಯಲ್ಲಿ, 2014 ರಲ್ಲಿ 5,000 ರೂಪಾಯಿ ದಾನ ನೀಡಿದ್ದ ಕಮಲಾ ಹ್ಯಾರಿಸ್ ಅವರ ಹೆಸರನ್ನು ಕೆತ್ತಲಾಗಿದೆ.
“ಅವರ ಸಾಧನೆಗಳ ಬಗ್ಗೆ ನಮಗೆ ಸಂತೋಷ ಮತ್ತು ಹೆಮ್ಮೆ ಇದೆ. ನಮ್ಮ ಗ್ರಾಮದ ಮೂಲವನ್ನು ಹೊಂದಿರುವ ಕಮಲಾ ಅವರು ಅಮೆರಿಕ ಉಪಾಧ್ಯಕ್ಷರಾಗುವ ಸ್ಪರ್ಧೆಯಲ್ಲಿದ್ದಾರೆ. ಅವರ ಗೆಲುವಿಗಾಗಿ ಪೂಜೆ-ಪ್ರಾರ್ಥನೆ ನಡೆದಿದೆ” ಎಂದು ದೇವಾಲಯದ ಆಡಳಿತಾಧಿಕಾರಿ ರಮಣನ್ ತಿಳಿಸಿದ್ದಾರೆ.
![]()
ಇತ್ತಿಚೆಗೆ ಕಮಲಾ ಹ್ಯಾರಿಸ್ ತನ್ನ ನೆಚ್ಚಿನ ಭಾರತೀಯ ತಿನಿಸುಗಳ ಬಗ್ಗೆ ಹೇಳುವಾಗ, ಇಡ್ಲಿ, ಒಳ್ಳೆಯ ಸಾಂಬಾರ್” ಮತ್ತು “ಯಾವುದೇ ರೀತಿಯ ಟಿಕ್ಕಾ” ಮೇಲಿನ ತನ್ನ ಪ್ರೀತಿಯನ್ನು ಹಂಚಿಕೊಂಡಿದ್ದರು. ಈ ಬಾರಿ ಜೋ ಬಿಡೆನ್ ಆಯ್ಕೆಯಾದರೆ ಕಮಲಾ ಹ್ಯಾರಿಸ್ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷರಾಗಲಿದ್ದಾರೆ.
ಕಮಲಾ ಹ್ಯಾರಿಸ್ ತಮ್ಮ 5ನೇ ವಯಸ್ಸಿನಲ್ಲಿ ತುಲಸೇಂದ್ರಪುರಂಗೆ ಭೇಟಿ ನೀಡಿದರು ಮತ್ತು ಚೆನ್ನೈನ ಕಡಲತೀರಗಳಲ್ಲಿ ತನ್ನ ಅಜ್ಜನೊಂದಿಗೆ ಓಡಾಡಿದ್ದನ್ನ ಇತ್ತಿಚೆಗೆ ನೆನಪಿಸಿಕೊಂಡಿದ್ದರು. ಗ್ರಾಮದಲ್ಲಿ ಗೋಪಾಲನ್ ಅವರ ಮನೆ ಪಾಳು ಬಿದ್ದು ಹೋಗಿದ್ದು, ಅಸ್ತಿತ್ವದಲ್ಲಿಲ್ಲ.
ಹ್ಯಾರಿಸ್ ಅವರ ಅಜ್ಜ ಪಿ.ವಿ. ಗೋಪಾಲನ್ ಮತ್ತು ಅವರ ಕುಟುಂಬ ಸುಮಾರು 90 ವರ್ಷಗಳ ಹಿಂದೆ ತುಲಸೇಂದ್ರಪುರಂನಿಂದ ಚೆನ್ನೈಗೆ ವಲಸೆ ಹೋಗಿದ್ದರು. ಕಮಲಾ ಹ್ಯಾರಿಸ್ ಅವರ ತಾಯಿ ತಮಿಳುನಾಡಿನವರಾದರೇ, ಅವರ ತಂದೆ, ಜಮೈಕಾದವರು. ಈ ಇಬ್ಬರೂ ಅಧ್ಯಯನಕ್ಕಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದರು.


