ಆಲನಹಳ್ಳಿ ಕೃಷ್ಣ ಬಂದ್ರೆ ಬಿರುಗಾಳಿತರ ಬರೋನು. ಒಂದಿನ ಇದ್ದಕಿದ್ದಂಗೆ ಬಂದು ಮಂಡ್ಯಕ್ಕೆ ಹೊರಡಿಸಿದ. ಸುಧಾಕರನೂ ಇವರ ಜೊತೆ ಇದ್ದ. ಇಂತವರ ಜೊತೆ ಇರದೆ ಒಂದು ಖುಷಿ ಆಗ. ಜೊತೆಲಿ ಓತ್ತಾಯಿದ್ದ ಹುಡುಗ್ರು ಊರಿಗೆ ಕರದ್ರೆ, ಆ ಖುಷಿನೆ ಬ್ಯಾರೆ. ಅದೊಂತರ ಕಂಟ್ರಿ ಪ್ರವಾಸದಂಗಿರೋದು. ಆಲನಹಳ್ಳಿ ಕೃಷ್ಣ, ರಾಮಣ್ಣ ಇವುರು ಯಲ್ಲಾರ್‌ನು ಮಾತಲ್ಲಿ ಸೋಲಸೋರು. ಆಗ ಮಂಡ್ಯಕ್ಕೆ ಯಾರೊ ಫಾರಿನ್ ಲೇಡಿ ಬಂದಿದ್ರು. ಅವುರು ಅಮೆರಿಕದೋರು. ಅವುರೆದ್ರಿಗೆ ನಾವು ಓದಿಕಂಡಿರದ ತೋರಿಸಿಕೊಬೇಕಾಗಿತ್ತು. ಇದು ಆಲನಳ್ಳಿಲಿ ಜಾಸ್ತಿ ಕಾಣುಸ್ತು. ಅವುರು ಮಾತಾಡಿಸಕ್ಕೂ ಸರಿ, ತಾನು ಸರಿ ಅನ್ನಂಗೆ ಆಡೋನು. ನಮ್ಮ ಮಾತನ್ಯಲ್ಲ ತುಂಡರಿಸಿ ತಾನೇ ಮಾತಾಡೋನು. ಅವುರಿಗೆ ಪ್ರಿಯವಾಗೊ ವಿಷಯ ತಗಿಯೋನು. ಆಗ ಅಮೆರಿಕ ವಿಯೆಟ್ನಾಂ ಮ್ಯಾಲೆ ಯುದ್ಧ ಮಾಡ್ತಾಯಿತ್ತು. ಆ ಬಗ್ಗೆ ರಾಮಣ್ಣ ಪ್ರಶ್ನೆ ಕೇಳಿದ. ಆಗುವುರು ಉತ್ತರ ಕೊಡಕ್ಕೆ ತತ್ತರಿಸಿದ್ರು. ಅಮೆರಿಕದ ಲೇಡಿನ ಸೋಲಿಸಿದ ಭಾವ ರಾಮಣ್ಣನ ಮುಖದಲ್ಲಿತ್ತು. ಸಡನ್ನಾಗಿ ರಾಮಣ್ಣ ಆಗ ನಮ್ಮ ಲೀಡರಾದ. ಆಗ ಇವುರನ್ಯಲ್ಲ ನಾನು ನಮ್ಮಣ್ಣನ ಮನಿಗೆ ಕರಕಂಡೋಗಿ ಪರಿಚಯ ಮಾಡಿದೆ. ಅಣ್ಣ ಮಂಡ್ಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರಾಗಿದ್ರು. ಆಗಾಗ್ಗೆ ಮೈಸೂರಿಗೂ ಬತ್ತಿದ್ರು. ನಾನು ಓದಕ್ಕೆ ಅಣ್ಣನತ್ರನೆ ದುಡ್ಡೀಸಿಗತ್ತಿದ್ರಿಂದ ಕೊಡಕ್ಕೆ ಅಂತ ಬತ್ತಿದ್ರು. ಆಗ ರಾಮಣ್ಣನಿಗೂ ಪರಿಚಯಾಗಿ ಸಲುಗೆ ಬ್ಯಳದಿತ್ತು. ಅಂಗಾಗಿ ಯಾವ ಸಂಕೋಚನೂ ಇಲ್ದೆ ಅಣ್ಣನ ಮನೆಲಿದ್ದೊ.

ನಾನು ಮೈಸೂರಲ್ಲಿದ್ದಾಗ ಊರಿನ ಕ್ಷೇಮ ಸಮಾಚಾರಕ್ಕೆ ಕಾಗದ ಬರವು. ಆಗಿನ ಕಾಗದ ಗೊತ್ತಲ್ಲ. ಆಡು ಮರಿ ಹಾಕಿದ್ದು, ಯಮ್ಮೆ ಕರ ಈದಿದ್ದು ಯಲ್ಲಾನು ಬರಿಯರು. ಆ ವಿಷಯಗಳೂ ಮುಖ್ಯ, ಅಂತ ಗೊತ್ತಿತ್ತು. ನನ್ನ ತಂಗಿ ಯಾವ ವಿಷಯನೂ ಮುಚ್ಚುಮರೆಯಿಲ್ದೆ ಬರಿಯೋಳು. ಮುಖ್ಯವಾಗಿ ಅಣ್ಣ ತಮ್ಮದೀರ ವಿಷಯನ ಮುಲಾಜಿಲ್ದೆ ಬರಿತಿದ್ಲು. ಆತರದ್ದೊಂದು ಕಾಗದ ಬಂದಾಗ ನಾನಿರಲಿಲ್ಲ. ರಾಮಣ್ಣ ವಡದು ಓದಿದ್ದ. ನಾನು ಬಂದೇಟಿಗೆ ಕಾಗದ ತೋರತ ಲ್ಯೆ ಕಮಲಾಕ್ಷ ಇವುಳಿಗೆ ರೈಟರಾಗೊ ಶಸ್ತಿ ಅದೆಕಲ. ಏನು ಸಾಲಿವು, ಮುಲಾಜಿಲ್ದೆ ಬರದವುಳೆ ಕಲ. ನನಿಗೇನಾರ ಈ ಕಾಗ್ದ ಮದ್ಲೆ ಸಿಕ್ಕಿದ್ರೆ ನಾನಿವುಳ್ನೆ ಮದಿವಾಯ್ತಿದ್ದೆ ಕಲ ಅಂದುಬುಡದೆ. ನಾನಿದೇನಪ್ಪ ಹಿಂಗಂತನಿವುನು ಅಂತ ಯೋಚನೆಗೆ ಬಿದ್ದೆ. ಮದಿವಾದ ಮ್ಯಾಲೂ ಚನ್ನಾಗಿ ಬರಿಯೋಳು. ಚನ್ನಾಗಿ ಮಾತಾಡೋಳು. ಚನ್ನಾಗಿರೋಳ ಕಂಡೇಟಿಗೆ ಅಯ್ಯಯ್ಯೋ ಇವುಳನೆ ಆಗಬೇಕಾಗಿತ್ತು ಕಲ ಅಂದ್ರೆ ಏನರ್ಥ, ತಾನು ಸರಿಯಾದೊಳ ಕಟಿಗಳ್ಳಿಲ್ಲ ಅಂತ ತಿಳಕಳದೊ ಅಥವ ಸುಮ್ಮನೆ ಮಾತಿಗಂತನೆ ಅಂತ ತಿಳಕಳದೊ. “ಇದೇನೂ ಹಿಂಗಂತಿ ನೀನು” ಅಂದೆ. “ಸುಮ್ಮನೆ ಅಂಗಂದೆ ಕಲ ಬೇಜಾರಾಯ್ತಲ. ವಡದುಬುಡ್ಳ ಯರಡೇಟ” ಅಂದ. ರಾಮಣ್ಣ ಮನಿಸಿಗನಿಸಿದ್ದ ಹೇಳಿಬುಡೋನು, ಆಶ್ಚರ್ಯ ಹುಟ್ಟಸೋನು. ಆದ್ರೆ ಅವುನಂದ ಮಾತಿಗೆ ಗಂಟು ಬೀಳಿತಿರಲಿಲ್ಲ. ತಿರಗಿ ನಾವೇನಾರ ಜೋರು ಮಾಡಿದ್ರೆ “ನಿನ್ನ ದಮ್ಮಯ್ಯ ಅಂತಿನಿ ಸುಮ್ಮಕಿರ್ಲ” ಅನ್ನೋನು. ನನ್ನ ತಂಗಿ ವಿಷಯದಲ್ಲಿ ಅಂಗಂದೋನು ನಾನು ಕ್ಯಾತನಗೆರೆ ಪಟೀಲ್ ಸಿದ್ದೇಗೌಡ್ರ ಮಗಳ ಮದಿವಾದಾಗ, ತಿರಗ ಅಂತದೊಂದು ಮಾತ ನನಿಗೇ ಹೇಳಿದ. “ಲೈ ಕಮಲಾಕ್ಷ ನೀನು ಕೆ.ವಿ.ಶಂಕರೇಗೌಡ್ರ ಮಗಳನೇ ಮದಿವಾಗಬವುದಿತ್ತು ಕಲ. ಯಂಗಿದ್ರು ನಿಮ್ಮಣ್ಣನೂ ಶಂಕರೇಗೌಡ್ರು ಚನ್ನಾಗಿದ್ರು. ನೀನು ಡಾಕ್ಟರೋದಿದ್ದೆ. ವಳ್ಳೆ ಸಮಂದ ಆಗದು ಕಲ” ಅಂದು ದುರುಗುಟ್ಟಿಗಂಡು ನೋಡಿದ. ಈಗಾಯ್ತಲ್ಲ ಬುಡಯ್ಯ ಅತ್ಲಗೆ. ನಾನು ಕನಸು ಮನಿಸಿನಲ್ಲೂ ಯೋಚನೆ ಮಾಡದ್ದ ನೀನ್ಯಾಕೇಳ್ತಿ. ಬರೀ ಇಂತ ಆಲೋಚನೆಗಳೇ ನಿನಿಗೆ ಹ್ವಳಿಯದು. ಒಂದು ಕಾರ್ಯ ಮುಗುದಮ್ಯಾಲೆ ಏನು ಮಾತಾಡಿದ್ರು ಅಷ್ಟೆಯ. ಎಷ್ಟು ಯೋಚನೆ ಮಾಡಿದ್ರು ಅಷ್ಟೆಯ ಅಂದೆ. “ಮಾತಾಡಕೇನ್ಲ ಮಾತಾಡ್ತಿವಪ್ಪ. ಅದು ನನ್ನಿಷ್ಟ” ಅಂದ. “ನಿನ್ನ ಮಾತುಗಳು ನಿನಿಕ್ಕುಶಿ ಕೊಟ್ರೆ ಆಡಿಕೊ. ನಮಿಗೇಳಿ ತಲೆಕೆಡಸಕ್ಕೆ ಬರಬ್ಯಾಡ” ಅಂದೆ. ಅವನ ಕಿಡಿಗೇಡಿ ಮಾತಿಗೆ ಅವುನೆ ನಗಾಡಿದ.
ರಾಮಣ್ಣನ ವಿಶ್ವಾಸಕ್ಕೆ ನಾವಿಷ್ಟೇ ಜನ ಸಾಲ್ತಿರಲಿಲ್ಲ. ಅವುನು ಸಾಹಿತ್ಯ ಲೋಕದಲ್ಲಿದ್ದೊರ ಜತೆಗೆ ಹೋಗಿ ಮಾತಾಡಿಸಿ ಅವುರ ಜೊತೆ ಕಾಲ ಕಳದು ಬರೋನು. ಆ ಪೈಕಿ ಕಾಳೇಗೌಡ ನಾಗವಾರ ಅವನ ಫ್ರೆಂಡಾಗಿದ್ರು. ಅಮ್ಯಾಲೆ ವೀರಭದ್ರ ಅನ್ನೊ ಕತೆಗಾರರು. ಕ್ಯಾತನಳ್ಳಿ ರಾಮಣ್ಣ, ತಿಪ್ಪೇಸ್ವಾಮಿ ಹಿಂಗೆ ಯಾರ್‌ಯಾರ್‍ನೋ ಹುಡುಕ್ಕಂಡೋಗಿ ಮಾತಾಡಿಸಿಗಂಡು ಬರನು. ನಮ್ಮ ಹಾಸ್ಟಲು ಕಾಲೇಜಿಗಿಂತ ಹೊರಗಿನ ಲೋಕವೆ ದೊಡ್ಡದಾಗಿತ್ತು. ಅವಾಗ್ಲೆ ಅವುನಿಗೆ ಕುವೆಂಪು ಆರಾಧ್ಯ ದೈವರಾಗಿದ್ರು. ರಾಜಕೀಯದಲ್ಲಿ ಶಂಕರೇಗೌಡ್ರ ಅಭಿಮಾನಿ ಅವುನು. ರಾಷ್ಟ್ರ ಮಟ್ಟದಲ್ಲಿ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಇಲ್ಲಿ ಗೋಪಾಲಗೌಡ್ರು ವಿಷಯ ತುಂಬ ಮಾತಾಡೋನು. ಹಿಂಗೆ ಸಾಹಿತ್ಯ ರಾಜಕಾರಣನ ಸಮನಾಗಿ ನಿಭಾಯಿಸ್ತ ಅಂತೂಇಂತೂ ಎಂ.ಬಿ.ಬಿ.ಎಸ್ ಕೋರ್ಸನು ಮಾಡುತಿದ್ದ. ಅವುನ್ನ ನೋಡಿದ್ರೆ ಒಂಥರ ಸುಖ ಪುರುಷನಂಗೆ ಕಾಣತಿದ್ದ. ಹಾಸ್ಟಲಲ್ಲಿ ಓದ್ತ, ಬಾಡುಬಳ್ಳೆ ತಿನ್ನಕಂಡು ಮದುವೆನೂ ಆದ, ಸೋಬನನೂ ಮಾಡಿಕಂಡ. ಕತೆನೂ ಬರಕೊಂಡು, ನಿರಾಳವಾಗಿದ್ದುದು ನೋಡಿ, ನನಿಗೇ ಆಶ್ಚರ್ಯಾಯ್ತು. ಯಾಕಂದ್ರೆ ಹಾಸ್ಟಲೆಲಿದ್ದಾಗ ಓದಿಕಂಡು ಪ್ರಾಕ್ಟಿಕಲ್‌ಗೆ ಹೆಚ್ಚು ಒತ್ತು ಕೊಡಬೇಕು. ಪೇಷಂಟ್ ಹಿಸ್ಟರಿ ರೆಡಿಮಾಡಬೇಕು. ಪ್ರತಿ ಪಾಯಿಂಟನ್ನು ಎಕ್ಸಾಂಮಾಡಿ ಬರದಿಡಬೇಕು. ಪೇಷಂಟ್ ಪಕ್ಕ ನಿಂತು ನೋಡಿ ಮೇಜರ್ ಮೈನರ್‌ಗಳನ್ಯಲ್ಲ ಸರಿಯಾಗೇಳಬೇಕು. ರಿಪೀಟಾಗಿ ನಾವು ಪೇಷಂಟ್ ನೋಡಿರಬೇಕು. ಸೀನಿಯರ್‍ಸ್ ಬಂದು ಹಣೆಗಂಟು ಮಾಡಿಕಂಡು ಕೇಳಿದ್ರೆ, ಇವುನ್ನೆಲ್ಲಾ ಎಕ್ಸಾಂ ಮಾಡಬೇಕು. ಪ್ರಾಕ್ಟಿಕಲ್ ಅಟೆಂಡಾದ್ರೆ ಸರಿಯಾಗಿ ಹೇಳಬಹುದು. ಇಂತ ವಿಷಯವು ಗಂಭೀರವಾಗಿ ಅಧ್ಯಯನ ಮಾಡಿದ್ರೆ, ಒಳ್ಳೆ ಡಾಕ್ಟರಾಗೋದು. ಇದನ್ಯಲ್ಲ ರಾಮಣ್ಣನಿಗೆ ಹೇಳಿದ್ರೆ “ಏ ನಮ್ಮ ಟ್ರೈನಿಂಗೆ ಬ್ಯಾರೆ, ನಮ್ಮ ಜನಗಳು ಹೇಳೊ ಕತೆನೆ ಬ್ಯಾರೆ ಕಲ” ಅಂತ ಹಾಸ್ಯ ಮಾಡೋನು. ಹಾಸ್ಟಲಲ್ಲಿದ್ದೆ ಓದೋನು. ಇಲ್ಲ ಊರಿಗೋಗನು.

ರಾಮಣ್ಣ ಹೆಸರಾಂತ ವೈದ್ಯನಾಗದೆಯಿದ್ರು ಹೆಸರಾಂತ ಕತೆಗಾರಾದ. ಇಂಗ್ಲಿಷ್ ಮಾತಾಡಕ್ಕೆ ಪ್ರಯತ್ನ ಮಾಡದೆ ಕನ್ನಡದಲ್ಲೆ ತಿಳವಳಿಕೆ ಹೇಳೋನು. ಸೈನು ಮಾತ್ರ ಇಂಗ್ಲೀಷಲ್ಲಿ ಮಾಡತಿದ್ದ. ಅವುನು ಒಂದು ಸತಿ ಸಿಡುಬು ರೋಗ ನಿರ್ನಾಮ ಮಾಡೋ ಕಾರ್ಯಕ್ರಮಕ್ಕೆ ಅಂತ ಬಿಹಾರಕ್ಕೋಗಿದ್ದ. ಅಲ್ಲೊಬ್ಬರ ಸವಾಸ ಮಾಡಿ ಅವರ ಜೊತೆ ಉಂಡು ತಿಂದು ಯಲ್ಲಾನು ಮಾಡಿಕಂಡು ಬಂದಿದ್ದ. ಅದ ಯಾರತ್ರಲೂ ಬಾಯಿಬುಡದೆ ನಮ್ಮನೆಲೆ ಕುಂತಗಂಡು ಕತೆ ಮಾಡಿ ಮಯೂರ ಪತ್ರಿಕೆಗೆ ಕಳಿಸಿದ್ದ. ಅದು ಪ್ರಕಟ ಆಯ್ತು.
“ಆ ಕತೆಯ ನಾನೂ ಮಯೂರದಲ್ಲಿ ಓದಿದ್ದೆ ಕಣಣ್ಣ. ರಾಮಣ್ಣನ ಪ್ರಾಮಾಣಿಕತೆ ದಂಗು ಬಡಿಸಿತ್ತು. ಆದ್ರೆ ಸಾಹಿತ್ಯದ ಗಂಭೀರ ವಿಮರ್ಶಕರು ಅದನ್ನ ಟೀಕೆ ಮಾಡಿದ್ರು ಅಂತ ಕಾಳೇಗೌಡ್ರು ಹೇಳಿದ್ರು. ಅಂದ್ರೆ ರಾಮಣ್ಣ. ನಿಮ್ಮ ಭಯಂಕರ ವಿಮರ್ಶಾದಂಡಗಳನ್ನು ನಮ್ಮಮ್ಯಾಲೆ ಬಳಸಬ್ಯಾಡಿ. ನಾವು ಸಾಮಾನ್ಯ ಕತೆಗಾರರು ಅಂದಿದ್ನಂತೆ”
“ಅದೇನೂ ನನಿಗೊಗ್ಗತ್ತಿಲ್ಲ. ಬಿಹಾರಕ್ಕೋದಾಗ ಅವುಳಾತಿಥ್ಯಕ್ಕೆ ಮನಸೋತವುನೆ. ವಾಪಸ್ ಕಳುಹಿಸುವಾಗ ಅವುಳೊಂದು ಗಿಫ್ಟ್ ಕೊಡ್ತಳೆ. ಅದು ಊರಿಗೋಗಿ ನೋಡಿ ಅಂದಿರತಳೆ. ಇಲ್ಲಿಗೆ ಬಂದು ನೋಡಿದಾಗ, ಆ ಗಿಫ್ಟು ರಾಮಣ್ಣನ ಪತ್ನಿಗೆ ಕೊಟ್ಟಿದ್ದಾಗಿರತದೆ. ಅವುಳ ದೊಡ್ಡತನ ಮೆಚ್ಚಿ ಕತೆ ಬರದಿದ್ದ. ಅದು ಭಾಳ ಫೇಮಸ್ಸಾಯ್ತು. ರಾಮಣ್ಣನ ಕತೆಗೆ ಮೆಚ್ಚುಗೆನೆ ಬರವು. ಅವುನ ಕತೆ ಬರಿಯದ್ರಲ್ಲಿ ಪ್ರಾಮಾಣಿಕವಾಗಿರತಿದ್ದ ಅಷ್ಟೆ.”
ಆಗ ಮೈಸೂರಲ್ಲಿ ಗಾಯತ್ರಿ ಗಣೇಶ ಟಾಕೀಸಿಗೆ ಇಂಗ್ಲಿಷ ಸಿನುಮ ಬರವು. ಹೊಸ ಸಿನುಮ ಬಂದಾಗ ರಾಮಣ್ಣ ಲುಂಗಿಲೆ ನಿಂತ ನಿಲಿಲೆ ಹೊಂಟು “ಬತ್ತಿಲ ಇಂಗ್ಲಿಷ್ ಸಿನುಮ ನೋಡಮು” ಅಂತಿದ್ದ. “ಅಪ್ಪಾ ನನಿಗೆ ನ್ಯಟ್ಟಗೆ ಕನಡನೆ ಬರಲ್ಲ, ಇನ್ನ ಇಂಗ್ಲಿಷ್ ಸಿನುಮ ಯಾಕ್ ನೋಡ್ಲಿ ಹೋಗು” ಅಂದ್ರೇ, “ಲೈ ಇಂಗ್ಲಿಷ್ ಬರಲ್ಲ ಅಂತ ಸುಮ್ಮನಿದ್ರೆ ಬಂದತ್ಲ, ನೋಡ್ತ ನೋಡ್ತ ಬತ್ತದೆ ಕಲ. ಅದರಲ್ಲೂ ಇಂಗ್ಲಿಷ್ ಸಿನಮ ನೋಡಕ್ಕೆ ಬರೊ ಸೂಟು ಬೂಟಿನ ನನ ಮಕ್ಕಳಿಗೆ, ಆಂಗಿ ಚಡ್ಡಿಲ್ಲಿರೋರಿಗೂ ಇಂಗ್ಲಿಷ್ ಬತ್ತದೆ ಅಂತ ವಟ್ಟೆಉರಿ ಬರಬೇಕು. ಅದ್ಕೆ ಲುಂಗಿಲೆ ನಡಿಲ ಹೋಗಮು” ಅಂದ. ನನಿಗೆ ಇವುನು ಲುಂಗಿಲ್ಯಾಕೆ ಹೋಯ್ತನೆ ಅಂತ ಆಗ ಗೊತ್ತಾಯ್ತು. ಸಿನುಮಾ ನೋಡಿದ ಮ್ಯಾಲೆ ಅದೇ ಫಾಸಿಲಿದ್ದೊನಿಗೆ ನಾನ್ ವೆಜ್ ಮೆಸ್ ನೆನಪಾಗದು. ನಡಿಲ ಮಟನ್ನೂಟ ಮಾಡಿಕಂಡು ಬರಮು ಅನ್ನೋನು.
ಒಂದು ಸತಿ ಮೆಸ್ಸಲ್ಲಿ ಬೂದುಗುಂಬಳ ಕಾಯಿ ಸಾರು ಮಾಡಿದ್ದ. ನನಿಗೆ ಸಿಟ್ಟು ಬಂದು “ಲೈ ಯಾವನ್ಲ ಅವುನು ಕರಿಲ ಇಲ್ಲಿ. ಬೂದುಗುಂಬಳಕಾಯಿ ಸಾರು ಮಾಡ್ಯವುನೆ. ಯಂಗ್ಲ ಉಣ್ಣದು” ಅಂದೆ. ಆಗ ರಾಮಣ್ಣ “ಲೋ ನಿನಿಗೇನುಗೊತ್ಲ ಬೂದುಗುಂಬಳಕಾಯಿ ಸತ್ವ. ಅದರಲ್ಲಿ ಬುದ್ದಿ ಬೆಳೆಯೋ ಕಂಟೆಂಟ್ಸ್ ಅವೆಕಲ, ಅದ್ಕೆ ಬ್ರಾಮಣರು ನಾವು ತಿಂದಂಗೆ ಮಾಡ್ಯವುರೆ. ಅವುರು ದಾನ ಕೇಳುವಾಗ ಕುಂಬಳಕಾಯಿ ಇರಬೇಕು. ಪುಣ್ಯ ಮಾಡುವಾಗ ಕುಂಬಳಕಾಯಿ ಇರ್ಲೆಬೇಕು. ಶೂದ್ರರಿಗೆ ಕುಂಬಳಕಾಯಿ ಸಿಕ್ಕಿದ್ರೆ, ಬ್ರಾಂಬ್ರು ಮನಿಗೆ ಕೊಟ್ಟು ಹೋಗಂಗೆ ಮಾಡಿದ್ರು ಕಲ. ಯಾಕೇಳು ನಮ್ಮ ಬುದ್ದಿ ಬ್ಯಳಿಬಾರ್ದು, ಅವುರ ಬುದ್ದಿ ಬ್ಯಳಿಬೇಕು ಅಂತ. ಕುಂಬಳಕಾಯಿ ತೊಟ್ಟ ತೆಗದು ದ್ವಾಸೆ ಹುಯ್ಯಕ್ಕೆ ತ್ಯವೆ ಮ್ಯಾಲೆ ಯಣ್ಣೆ ಸವುರತ್ತರೆ ನೋಡು ಅದ ಮಾಡಿಕತ್ತರೆ. ಇನ್ನ ಸಿಪ್ಪೆಯರದು ವಣಗಿಸಿ ಸಂಡಿಗೆ ಮಾಡ್ತರೆ. ತರ ತರ ಹುಳಿ ಮಾಡಿಕಂಡು ಚಪ್ಪರಸ್ತರೆ ಗೊತ್ತ ನಿನಿಗೆ. ದಡ್ಡ ಬಡ್ಡಿ ಮಗ ಇವ್ಯಲ್ಲ ಎಲ್ಲಿ ಗೊತ್ತಾದವುಲ ನಿನಿಗೆ” ಅಂದ. ನಾನು ಅವುನ ಕಡೆ ನೋಡಿದೆ, ಅವುನು ಊಟನೂ ಬುಟ್ಟು ಉಪನ್ಯಾಸಕೆ ನಿಂತಗಂಡ. “ಊಟದ ವಿಷಯದಲ್ಲಿ ನಾವು ಬ್ರಾಂಬ್ರ ನೋಡಿ ಕಲ್ತಬೇಕು ಕಲ. ಅವುರ್‍ನ ಯಾವತ್ತಾರ ಆಸುಪತ್ರಿ ಬಾಗಲಲ್ಲಿ ನೋಡಿದ್ದಿಲ. ಅದೇ ನಮ್ಮವು ಹಬ್ಬಾದ ಮಾರ್‌ನೆ ದಿನವೆ ಆಸುಪತ್ರೆ ಹುಡುಕ್ಕಂಡು ಹೋಯ್ತವೆ ಏನನ್ನ ಎಷ್ಟು ತಿನಬೇಕು ಅನ್ನದು ಗೊತ್ತಿಲ್ಲ ಇವುಕೆ. ನೀರು ಕುಡಿಯಾಕ್ಕೂ ಜಾಗಿಲ್ದಂಗೆ ತಿಂದುಬುಡದು. ಅಜೀರ್ಣ ಮಾಡಿಕಳದು, ಏನೇನೊ ತಿಂದುಬುಡದು, ವದ್ದಾಡದು. ಇಂತವ ಬ್ರಾಮಣ್ರು ಮಾಡ್ತರ್ಲ? ಅವರ ಪ್ರಯಾಣನೆ ನೋಡು, ಊಟದ ಮುಖಾಂತ್ರ ಫಿಕ್ಸಾಯ್ತವೆ. ಎಲ್ಲಿ ತಿಂಡಿ ತಿನ್ನದು, ಯಾವ ಛತ್ರದಲ್ಲಿ ಊಟ ಮಾಡದು, ಯಾವು ದೇವುಸ್ಥಾನದಲ್ಲಿ ಉಂಡು ಮನಿಕಳ್ಳದು.. ಅನ್ನದ್ರು ಮ್ಯಾಲೆ ಅವುರ ಪ್ರಯಾಣ.
ಅದೇ ನಮ್ಮವು ನೋಡು, ಅದ್ಯಂಗೂ ಆಯ್ತದೆ ನಡಿರಿ ಅಂತ ವಂಟಬುಡದೆ. ಬ್ಯಾರೆ ಶಿಸ್ತೇನು ಬ್ಯಾಡ ನಮಿಗೆ. ಅಟಲೀಸ್ಟು ಊಟದ ವಿಷಯದಲ್ಲಾದ್ರು ಬ್ರಾಮಣರ ಪಾಲೊ ಮಾಡಬೇಕು ಕಲ. ಇನ್ನ ಒಂದು ವಿಷಯ ತಿಳಕ. ಈ ಪುರೋಹಿತ್ರು ಗೋದಾನ ಕೇಳ್ತರೆ. ಕರಾವಿನ ಹಸವೇ ಆಗಬೇಕು. ಯಾಕೆ ಅಂದ್ರೆ ಹಾಲು, ಮೊಸರು, ಬ್ಯಣ್ಣೆ, ತುಪ್ಪ ಸಿಗತದೆ. ಅದೆ ಕಡಸು ಅಥವ ಗೊಡ್ಡಸ ಕೊಡ್ತಿನಿ ಅನ್ನು, ಈಸ್ಕಳದಿಲ್ಲ. ಅವೇನು ಗೋವಲವೆ. ಇದೇ ನಮ್ಮ ಜನಗಳ ತಲಿಗ್ವಳ್ಯದಿಲ್ಲ. ಈಗ ಅವುರು ಬದ್ಲಾಗ್ಯವುರೆ. ಇವುರೂ ಬದ್ಲಾಗವುರೆ. ಪುರೋಹಿತ್ರೀಗ ಸಿಟಿಗೆ ಬಂದುಬುಟ್ಟವುರೆ. ಇಲ್ಲಿ ಹಸ ಕಟಿಗಳಕ್ಕೆ ಜಾಗಿಲ್ಲ. ಅದ್ಕೆ ಬೆಳ್ಳಿ ಹಸ ಕೇಳ್ತರೆ. ಇವು ಮಾಡಿಸಿಕೊಡ್ತವೆ. ನವಧಾನ್ಯ ಕೇಳ್ತರೆ. ಹೊಸ ವಸ್ತ್ರ ಕೇಳ್ತರೆ. ಅಂತೂ ನಮ್ಮ ಮಡ್ಡತಲೆಗಳ ಚನ್ನಾಗಿ ಬಳಿಗಂಡ್ರು ಕಲ” ಅಂದ. ಆಗ ನಮ್ಮೆದುರಿಗಿರೊ ರಾಮಣ್ಣನೆ ಬ್ಯಾರೆ, ವಳಗಿರ ರಾಮಣ್ಣನೆ ಬ್ಯಾರೆ ಅನ್ನಸ್ತು. ಅವುನಾಗ್ಲೆ ಕುವೆಂಪು ವಿಚಾರಗಳನ್ನ ಅಳವಡಿಸಿಗಂಡಿದ್ದ. ಅಂಗೆ ಬದುಕೋನು. ಅದ್ನೆ ನಮಿಗೂ ಹೇಳೋನು. ಕುಂಬಳಕಾಯಿ ಬಗ್ಗೆ ಆಟ್ಯಲ್ಲ ಹೇಳಿದೋನು. ಬರಿ ಅದ್ನೆ ತಿನ್ನಕೋಯ್ತಿರಲಿಲ್ಲ, ಬಾಡೂಟ ಜಾಸ್ತಿ ಮಾಡನು. ಯಾವಾಗ್ಲೋ ಒಂದು ಸತಿ ಸಿಗರೇಟ್ ಸೇದೋನು. ಯಾರಾರ ಏನಾದ ಅಂದ್ರೇ ತಿರಗ ಮಾತಾಡದಂಗೆ ತಿರಗಿ ಬಂದು ಬುಡೋನು. ವಡದಾಟಕ್ಕೆ ಬಂದರಂತೂ ಪರಾರಿಯಾಗಿಬುಡೋನು. ಗಲಾಟೆನೆ ಆಯ್ತಿರಲಿಲ್ಲ. ಹಾಸ್ಟಲಲ್ಲಿ ನಮ್ಮ ಮಂಡ್ಯದುಡುಗ್ರು ಕಂಡ್ರೆ ಹೆದರೋರು. ಕಾಲೇಜುಗಳಲ್ಲೂ ಘರ್ಷಣೆಗಳಿದ್ದೊ. ಲಿಂಗಾಯಿತ್ರು ಒಕ್ಕಲಿಗರ ಹುಡುಗರ ನಡುವೆ ಜಗಳ ನ್ಯಡಿತಿದ್ದೊ. ಇವುರ್‍ಯಲ್ಲ ಸೇರಿ ದಲಿತ್ರ ಹುಡುಗರ ಮ್ಯಾಲೆ ಬೀಳುವು. ಓದಕ್ಕೆ ಅಂತ ಬಂದು ಹುಡುಗ್ರು ಯಂಗೊ ಅಂಜಿಕಂಡು ತಲೆ ಮರಿಸಿಗಂಡು ಓದವು. ಓದದ್ರಲ್ಲಿ ಅಷ್ಟೇನು ಚುರುಕಾಗಿಲ್ದ ಮಾಡ್ಡಗಳು ವಡದಾಟಕ್ಕೆ ನುಗ್ಗುವು. ಮುಂದಲೊರ್ಸವೊ, ಆಚೆವರ್ಸವೊ, ಈ ಆವರಣದಿಂದ್ಲೆ ಚುಕ್ತಾ ಆಯ್ತಿವಿ ಅಂತ ಗೊತ್ತೇಯಿರಲಿಲ್ಲ ಅವುಕೆ.
ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ
ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-6; “ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ…


