ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ವಿರುದ್ಧದ 2018 ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ(ನವೆಂಬರ್.11) ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
2018ರ ಪ್ರಕರಣದಲ್ಲಿ ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಗೋಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯನ್ನು, ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರ ರಜಾ ನ್ಯಾಯಪೀಠ ವಿಚಾರಣೆ ನಡೆಸಿ ಜಾಮಿನು ನೀಡಿದೆ.
“ನವೆಂಬರ್ 7 ರಂದು ಅರ್ನಾಬ್ ಮಧ್ಯಂತರ ಜಾಮೀನು ನಿರಾಕರಿಸುವಲ್ಲಿ ಬಾಂಬೆ ಹೈಕೋರ್ಟ್ ತಪ್ಪೆಸಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಇತರ ಇಬ್ಬರು ಸಹ-ಆರೋಪಿಗಳನ್ನು 50,000 ರೂಪಾಯಿಗಳ ಬಾಂಡ್ ಮೇಲೆ ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ. ಜೊತೆಗೆ ಆದೇಶವನ್ನು ತಕ್ಷಣವೇ ಪಾಲಿಸುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಲಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ: ಬಿಹಾರ: ಈ ಗೆಲುವು ಮೋದಿಯವರದ್ದು; ನಿತೀಶ್‌ಗೆ ಒಳ ಏಟು ನೀಡಿದ ಚಿರಾಗ್ ಪಾಸ್ವಾನ್?
ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಪರಿಗಣಿಸಿದ ನಂತರ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಅಪರಾಧವನ್ನು ವಾಣಿಜ್ಯ ವಿವಾದದಲ್ಲಿ ಹೇಗೆ ಮಾಡಬಹುದು ಎಂದು ನೋಡುವುದು ಕಷ್ಟ ನ್ಯಾಯಪೀಠ ಹೇಳಿತು.
ಗೋಸ್ವಾಮಿಯವರ ಪ್ರಕರಣವು “ವೈಯಕ್ತಿಕ ಸ್ವಾತಂತ್ರ್ಯ”ಕ್ಕೆ ಸಂಬಂಧಿಸಿರುವುದರಿಂದ ಅವರನ್ನು ಕಸ್ಟಡಿ ವಿಚಾರಣೆ ಮಾಡುವ ಅಗತ್ಯವಿದೆಯೇ ಎಂದು ಮಹಾರಾಷ್ಟ್ರ ಸರ್ಕಾರವನ್ನು ನ್ಯಾಯಪೀಠ ಪ್ರಶ್ನಿಸಿತು ಮತ್ತು ಈ ಪ್ರಕರಣದಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ
“ಅವರ ಸಿದ್ಧಾಂತ ಏನೇ ಇರಲಿ. ನಾನು ಕನಿಷ್ಠ ಅವರ ಚಾನೆಲ್ ಅನ್ನು ಸಹ ವೀಕ್ಷಿಸುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಸಾಂವಿಧಾನಿಕ ನ್ಯಾಯಾಲಯವು ಇಂದು ಹಸ್ತಕ್ಷೇಪ ಮಾಡದಿದ್ದರೆ, ನಾವು ನಿರ್ವಿವಾದವಾಗಿ ವಿನಾಶದ ಹಾದಿಯಲ್ಲಿ ಪ್ರಯಾಣಿಸುತ್ತಿದ್ದೇವೆ ಎಂದಾಗುತ್ತದೆ. ನೀವು ಅವರನ್ನು ನಿರಾಕರಿಸಬಹುದು. ಈ ಆರೋಪಗಳು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನದ್ದಾಗಿದೆ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
ಇನ್ನು, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆ ಮಾಡುತ್ತಿರುವ ಕುರಿತು ಹಿರಿಯ ವಕೀಲ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ (ಎಸ್‌ಸಿಬಿಎ) ಅಧ್ಯಕ್ಷ ದುಶ್ಯಂತ್ ದಾವೆ ಅವರು ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
“ಉನ್ನತ ನ್ಯಾಯಾಲಯದ ಮುಂದೆ ಗೋಸ್ವಾಮಿ ಅವರ ಅರ್ಜಿಗಳನ್ನು ತುರ್ತಾಗಿ ಪಟ್ಟಿ ಮಾಡಲಾಗುತ್ತಿದೆ. ಇದೇ ರೀತಿ ಇತರರ ಅರ್ಜಿಗಳು ಏಕೆ ತುರ್ತಾಗಿ ಸುಪ್ರೀಂಕೋರ್ಟ್ ಪರಿಗಣಿಸುವುದಿಲ್ಲ. ಅವುಗಳು ಏಕೆ ಹಾಗೆ ಉಳಿದುಕೊಂಡಿವೆ?” ಎಂದು ಪ್ರಶ್ನಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಕಟುವಾಗಿ ಉಲ್ಲೇಖಿಸಿದ್ದಾರೆ.


