ಉತ್ತರಪ್ರದೇಶದ ಮಥುರಾ ಬಳಿಯ ಶ್ರೀ ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿರುವ ಕಟ್ಟಡಗಳನ್ನು ತೆಗೆದುಹಾಕಲು ರೈಲ್ವೆ ಅಧಿಕಾರಿಗಳು ನಡೆಸುತ್ತಿರುವ ತೆರವು ಕಾರ್ಯಾಚರಣೆ ಕುರಿತು ಸುಪ್ರೀಂಕೋರ್ಟ್ ಬುಧವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಮಥುರಾದಲ್ಲಿ ಕೃಷ್ಣ ಜನ್ಮಭೂಮಿ ಬಳಿಯ ರೈಲ್ವೇ ಭೂಮಿಯಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆಗೆ ಸಂಬಂಧಿಸಿ 10 ದಿನಗಳ ಕಾಲ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.
ಜಸ್ಟಿಸ್ ಅನಿರುದ್ಧ್ ಬೋಸ್, ಸಂಜಯ್ ಕುಮಾರ್, ಎಸ್ ವಿಎನ್ ಭಟ್ಟಿ 10 ದಿನಗಳ ಕಾಲ ತೆರವು ಕಾರ್ಯಾಚರಣೆಗೆ ತಡೆ ನೀಡಿ ಆದೇಶಿಸಿದ್ದಾರೆ.
ಅರ್ಜಿದಾರ ಯಾಕೂಬ್ ಶಾ ಅವರ ಪರ ವಕೀಲರಾದ ಹಿರಿಯ ವಕೀಲ ಪಿಸಿ ಸೇನ್ ಈ ಕುರಿತು ಪ್ರತಿಕ್ರಿಯಿಸಿದ್ದು,ಕೃಷ್ಣ ಜನ್ಮ ಭೂಮಿ ಬಳಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಹಲವು ಮನೆಗಳನ್ನು ಧ್ವಂಸ ಮಾಡಲಾಗಿದೆ. ಈ ಕುರಿತು ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ.
ಮಥುರಾದ ಕೃಷ್ಣ ಜನ್ಮಭೂಮಿ ಬಳಿಯ ಮನೆಗಳನ್ನು ರೈಲ್ವೇ ಅಧಿಕಾರಿಗಳು ಕೆಡವುವ ಕಾರ್ಯಾಚರಣೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ನೂರಾರು ವರ್ಷಗಳಿಂದ ಅಲ್ಲೇ ವಾಸಿಸುತ್ತಿದ್ದ 3000ಕ್ಕೂ ಅಧಿಕ ಕಟುಂಬಗಳ ಮೇಲೆ ತೆರವು ಕಾರ್ಯಾಚರಣೆ ಪ್ರಭಾವ ಬೀರಲಿದೆ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಮತ್ತು ರೈಲ್ವೇ ಇಲಾಖೆಗೆ ಸುಪ್ರೀಂಕೋರ್ಟ್ ನೊಟೀಸ್ ನೀಡಿದೆ.
ಉತ್ತರ ಪ್ರದೇಶದ ಮಥುರಾದಲ್ಲಿ ಕೃಷ್ಣ ಜನ್ಮಭೂಮಿ ಬಳಿಯ ರೈಲ್ವೇ ಭೂಮಿಯಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆಗೆ ಸಂಬಂಧಿಸಿ 10 ದಿನಗಳ ಕಾಲ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ.
ಅಸ್ತಿತ್ವದಲ್ಲಿರುವ ಮೀಟರ್ ಗೇಜ್ ರೈಲ್ವೆ ಹಳಿಯನ್ನು ಬ್ರಾಡ್ ಗೇಜ್ ಟ್ರ್ಯಾಕ್ ಆಗಿ ಪರಿವರ್ತಿಸುವ ಪ್ರಯತ್ನಗಳ ಭಾಗವಾಗಿ, ದೇವಾಲಯದ ಸಂಕೀರ್ಣದ ಬಳಿಯ ವಸತಿಗಳನ್ನು ತೆರವುಗೊಳಿಸಲು ರೈಲ್ವೆ ಸೂಚಿಸಿದೆ ಎನ್ನಲಾಗಿದೆ.
ಮಥುರಾ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಯಾಕೂಬ್ ಶಾ ಮತ್ತು ಇತರರು ಮನೆಗಳ ಧ್ವಂಸ ಕಾರ್ಯಾಚರಣೆ ಕಾನೂನುಬಾಹಿರ ಮತ್ತು ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಇದನ್ನು ಓದಿ: ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರು ಬದಲಾವಣೆ: ಕಾಂಗ್ರೆಸ್ ಆಕ್ಷೇಪ


